ಬೆಳ್ಳಂದೂರು, ವರ್ತೂರು ಕೆರೆ ಸ್ಥಿತಿ ಗಂಭೀರ

7

ಬೆಳ್ಳಂದೂರು, ವರ್ತೂರು ಕೆರೆ ಸ್ಥಿತಿ ಗಂಭೀರ

Published:
Updated:
ಬೆಳ್ಳಂದೂರು, ವರ್ತೂರು ಕೆರೆ ಸ್ಥಿತಿ ಗಂಭೀರ

ಬೆಂಗಳೂರು: ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಪರಿಸರ ತುರ್ತು ಪರಿಸ್ಥಿತಿಯಲ್ಲಿವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠದ ಆಯೋಗ ಆತಂಕ ವ್ಯಕ್ತಪಡಿಸಿದೆ.

ಎರಡೂ ಕೆರೆಗಳ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ ಆಯೋಗ 329 ಪುಟಗಳ ಸುದೀರ್ಘ ವರದಿಯನ್ನು ಮೇ 31ರಂದು ನ್ಯಾಯಪೀಠಕ್ಕೆ ಸಲ್ಲಿಸಿದೆ. ಕೆರೆಗಳನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ಮೇಲೆ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

‘ಬೆಳ್ಳಂದೂರು ಕೆರೆಯಲ್ಲಿ ಒಂದು ಹನಿಯೂ ಸ್ವಚ್ಛ ನೀರು ಇಲ್ಲ. ಏನಿದ್ದರೂ ಚರಂಡಿ, ಕೈಗಾರಿಕೆಗಳಿಂದ ಹೊರಸೂಸಿದ ರಾಸಾಯನಿಕಗಳು, ಘನತ್ಯಾಜ್ಯ, ಕಳೆಗಿಡಗಳು ಮತ್ತು ಕಟ್ಟಡ ತ್ಯಾಜ್ಯಗಳು ಇವೆ. ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸಮರೋಪಾದಿಯಲ್ಲಿ ನಿರ್ಮಿಸಬೇಕು. ಆಡಳಿತ ವ್ಯವಸ್ಥೆಗಳೊಳಗಿನ ಭಿನ್ನಾಭಿಪ್ರಾಯಗಳಿಂದಾಗಿ ಕೆರೆಯು ಕೊಚ್ಚೆ ತೊಟ್ಟಿಯಂತಾಗಿದೆ’ ಎಂದು ವರದಿ ಹೇಳಿದೆ.    

ಆಯೋಗವು ಏ. 16 ಮತ್ತು 16ರಂದು ಕೆರೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಅಲ್ಲಿ ಸ್ಥಳೀಯರು ಮತ್ತು ಕೆರೆಗೆ ಸಂಬಂಧಪಟ್ಟವರ ಜತೆಗೆ ಸಭೆ ನಡೆಸಿ ವರದಿ ಸಿದ್ಧಪಡಿಸಿತ್ತು. ಆಯೋಗದ ಅಧ್ಯಕ್ಷ ರಾಜ್‌ ಪಂಜವಾನಿ, ಸದಸ್ಯ ರಾಹುಲ್‌ ಚೌಧರಿ, ಸುಮೀರ್‌ ಸೋಧಿ ತಂಡದಲ್ಲಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಪೂರಕ ಮಾಹಿತಿ ಒದಗಿಸಿದ್ದರು.

‘ಕೆರೆ ಸುತ್ತಮುತ್ತಲಿನ ಪರಿಸರದ ದೋಷಗಳನ್ನು ಸರಿಪಡಿಸಬೇಕು. ಬೆಳ್ಳಂದೂರು ಕೆರೆಯಲ್ಲಂತೂ ನೊರೆಯ ಜತೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯೂ ಇದೆ. ಕೆರೆಯ ದಂಡೆಯಲ್ಲಿ ಸಣ್ಣ ನೀರಾವರಿ ಇಲಾಖೆಯು ಅನಧಿಕೃತವಾಗಿ ರಸ್ತೆ ನಿರ್ಮಿಸಿದೆ. ಒತ್ತುವರಿದಾರರು ಕೆರೆಯ ಮೀಸಲು ಪ್ರದೇಶವನ್ನೇ ಕಬಳಿಸಿದ್ದಾರೆ. ಆಯೋಗದ ಭೇಟಿಯ ನಂತರವೂ ಸುಮಾರು 100 ಕುಟುಂಬಗಳು ಕೆರೆಯ ಸಮೀಪದಲ್ಲೇ ಅನಧಿಕೃತ ನಿರ್ಮಾಣ ಕಾಮಗಾರಿಯನ್ನು ಭರದಿಂದ ನಡೆಸಿವೆ. ಇದಕ್ಕೆ ಸ್ಥಳೀಯ ರಾಜಕಾರಣಿಗಳು, ಪುಡಾರಿಗಳು ಮತ್ತು ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ’ ಎಂದು ವರದಿ ಹೇಳಿದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಪ್ರತಿಕ್ರಿಯಿಸಿ, ‘ಎರಡು ದಿನಗಳ ಹಿಂದಷ್ಟೇ ವರದಿ ನನಗೆ ಸಿಕ್ಕಿದೆ. ಅದನ್ನು ಪರಿಶೀಲಿಸುತ್ತೇನೆ. ಆಯೋಗ ನೀಡಿದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಆದರೆ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ವಿಸ್ತರಿಸುವುದು ಸದ್ಯಕ್ಕೆ ಅಸಾಧ್ಯ. ಗಾತ್ರ ಮತ್ತು ಆರ್ಥಿಕ ಹೊರೆಯ ದೃಷ್ಟಿಯಿಂದ ಇದನ್ನು ನಿರ್ಮಿಸುವುದು ಕಷ್ಟವಾಗಲಿದೆ’ ಎಂದು ಹೇಳಿದರು.

ಕೆರೆಯಲ್ಲಿ ನೊರೆ ಹಾವಳಿ

ಬೆಳ್ಳಂದೂರು ಮತ್ತು ವರ್ತೂರು ಕೆರೆ ನೀರಿನಿಂದ ಉತ್ಪತ್ತಿಯಾದ ನೊರೆ ಸುತ್ತಮುತ್ತಲೂ ಹಾರಾಡುತ್ತಿದ್ದು, ಕೆರೆ ದಂಡೆಯ ಪರಿಸರದವರಿಗೆ ತೊಂದರೆಯಾಗಿದೆ.

ವರ್ತೂರು ಕೆರೆಯ ನೀರನ್ನು ಸುತ್ತಮುತ್ತ ನಡೆಯುತ್ತಿರುವ ತೂಬು, ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.

‘ನೊರೆ ನಿಯಂತ್ರಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ಮಾನ್ಸೂನ್‌ ಗಾಳಿಯ ಪರಿಣಾಮ ಎಂಬುದು ಬಿಡಿಎ ಅಧಿಕಾರಿಗಳ ವಿವರಣೆ’ ಎಂದು ಸಮೀಪದ ನಿವಾಸಿಗಳು ಹೇಳಿದರು.

‘ಬಿಡಿಎ ಅಧಿಕಾರಿಗಳು ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ವಿಳಂಬ ಮಾಡುತ್ತಿದೆ’ ಎಂದು ಅವರು ಹೇಳಿದರು.

ಬಿಡಿಎ ಸದಸ್ಯ, ಎಂಜಿನಿಯರ್‌ ಬಿ.ಎಲ್‌.ರವೀಂದ್ರಬಾಬು ಪ್ರತಿಕ್ರಿಯಿಸಿ, ‘ಗಾಳಿಯಲ್ಲಿ ನೊರೆ ತೇಲಿ ಬರುತ್ತಿದೆ. ಇದು ತಾತ್ಕಾಲಿಕ. ನಾವು ಈಗ ನೀರು ಹರಿದುಹೋಗುವ ತೂಬುಗಳನ್ನು ನಿರ್ಮಿಸುತ್ತಿದ್ದೇವೆ. ಅದು ಪ್ರವಾಹ ನೀರನ್ನು ನಿಯಂತ್ರಿಸಲು ಮತ್ತು ಸಂಸ್ಕರಿಸದ ನೀರು ಹರಿದು ಹೋಗಲು ಅನುಕೂಲಕರವಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry