ಉತ್ತರಾಖಂಡದಲ್ಲಿ ಚಿರತೆ ದಾಳಿ: ಅರಣ್ಯಕ್ಕೆ ಬೆಂಕಿ ಹಚ್ಚಿ ಆಕ್ರೋಶ

7

ಉತ್ತರಾಖಂಡದಲ್ಲಿ ಚಿರತೆ ದಾಳಿ: ಅರಣ್ಯಕ್ಕೆ ಬೆಂಕಿ ಹಚ್ಚಿ ಆಕ್ರೋಶ

Published:
Updated:

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ಬಗೇಶ್ವರ್ ಜಿಲ್ಲೆಯಲ್ಲಿ ಚಿರತೆ ದಾಳಿಗೆ ಏಳು ವರ್ಷದ ಬಾಲಕ ಬಲಿಯಾಗಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು 8 ಎಕರೆಯಷ್ಟು ದಟ್ಟ ಅರಣ್ಯಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದರೂ, ಗ್ರಾಮಸ್ಥರು ಅವರನ್ನು ತಡೆದು ನಿಲ್ಲಿಸಿದರು.

ಹರಿಣಾಗ್ರಿ ಎಂಬ ಹಳ್ಳಿಯಲ್ಲಿ ಸೋಮವಾರ ಬಹಿರ್ದೆಸೆಗೆಂದು ಮನೆಯಿಂದ ಆಚೆ ಹೋಗಿದ್ದ ಬಾಲಕನನ್ನು ಚಿರತೆ ಎಳೆದೊಯ್ದಿತ್ತು. ಅದು ಅರ್ಧಂಬರ್ಧ ತಿಂದು ಉಳಿಸಿದ್ದ ಮೃತದೇಹ ಮರುದಿನ ಬೆಳಿಗ್ಗೆ ಹಳ್ಳಿಯಿಂದ 250 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಮಾರ್ಚ್‌ ತಿಂಗಳಲ್ಲಿ ಇದೇ ‍ಪ್ರದೇಶದ ನಾಲ್ಕು ವರ್ಷದ ಬಾಲಕ ಸಹ ಚಿರತೆ ದಾಳಿಯಿಂದ ಮೃತಪಟ್ಟಿದ್ದ.

‘ಮನುಷ್ಯ ಭಕ್ಷಕ’ ಎಂದು ಘೋಷಿಸಲಾಗಿರುವ ಈ ಚಿರತೆಯನ್ನು ಕೊಲ್ಲಲು ಆದೇಶಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಸ್ಥನ ಮೇಲೆ ಹಲ್ಲೆ

ಜೈಪುರ (ಪಿಟಿಐ): ಗ್ರಾಮದ ರಸ್ತೆ ಸಮಸ್ಯೆಗಳನ್ನು ವಿವರಿಸಲು ಹೋದ ಗ್ರಾಮಸ್ಥನ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ್ದು, ಬಳಿಕ ಅನುಚಿತ ವರ್ತನೆ ಆರೋಪದಲ್ಲಿ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

‘ನ್ಯಾಯ್‌ ಆಪ್‌ಕೆ ದ್ವಾರ್‌’ ಶಿಬಿರದಲ್ಲಿ ಕಮಲ್‌ಪುರ ಗ್ರಾಮದ ಪ್ರಕಾಶ್ ಎಂಬುವವರು ತೋಡಾಭೀಮ್‌ ಉಪವಿಭಾಗಾಧಿಕಾರಿ ಜಗದೀಶ್ ಆರ್ಯ ಅವರೊಂದಿಗೆ ತಮ್ಮೂರಿನ ರಸ್ತೆ ಸಮಸ್ಯೆ ಕುರಿತು ವಾಗ್ವಾದ ನಡೆಸಿದರು. ಇಬ್ಬರ ನಡುವಿನ ಮಾತಿನ ಚಕಮಕಿ ತಾರಕಕ್ಕೆ ಏರಿದಾಗ, ಅಧಿಕಾರಿಗಳು ಗ್ರಾಮಸ್ಥನನ್ನು ಎಳೆದಾಡಿ, ಹೊಡೆದು ಹೊರಗೆ ತಳ್ಳಿದ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

‘ಉಪವಿಭಾಗಾಧಿಕಾರಿಯೊಂದಿಗೆ ಪ್ರಕಾಶ್‌ ಅನುಚಿತವಾಗಿ ನಡೆದುಕೊಂಡಿದ್ದು, ಘಟನೆಯ ತನಿಖೆಗೆ ಆದೇಶಿಸಲಾಗಿದೆ’ ಎಂದು ಕರೌಲಿ ಜಿಲ್ಲಾಧಿಕಾರಿ ಅಭಿಮನ್ಯು ಕುಮಾರ್‌ ತಿಳಿಸಿದ್ದಾರೆ.

ವರುಣನ ಆರ್ಭಟ

ಅಗರ್ತಲ (ಪಿಟಿಐ): ತ್ರಿಪುರಾದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದ 3,500 ಕುಟುಂಬಗಳು ನಿರಾಶ್ರಿತವಾಗಿವೆ.

ಉನಕೋಟಿ, ದಕ್ಷಿಣ ತ್ರಿಪುರಾ, ಗೋಮತಿ ಹಾಗೂ ಖೌವಾಯಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಅಪಾಯಕ್ಕೆ ಸಿಲುಕಿರುವ ಕುಟುಂಬಗಳನ್ನು 89 ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry