ಬಜೆಟ್‌ನಲ್ಲಿ ಸಾಲ ಮನ್ನಾ

7

ಬಜೆಟ್‌ನಲ್ಲಿ ಸಾಲ ಮನ್ನಾ

Published:
Updated:
ಬಜೆಟ್‌ನಲ್ಲಿ ಸಾಲ ಮನ್ನಾ

ಬೆಂಗಳೂರು/ ನಾಗಮಂಗಲ: ಹದಿನೈದು ದಿನಗಳಲ್ಲಿ ರೈತರ ಸಾಲ ಮನ್ನಾ  ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಇದೀಗ ಆ ತೀರ್ಮಾನವನ್ನು ಬಜೆಟ್‌ವರೆಗೆ ಮುಂದೂಡಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ರೈತರ ಎಷ್ಟು ಪ್ರಮಾಣದ ಸಾಲ ಮನ್ನಾ ಮಾಡಲಾಗುವುದು ಎಂಬ ನಿರ್ಧಾರವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗುವುದು‌’ ಎಂದು ತಿಳಿಸಿದರು.

‘ಬೇರೆ ಪಕ್ಷಗಳ ಮುಖಂಡರಂತೆ ನಾನು ಪಲಾಯನವಾದಿಯಲ್ಲ. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಬದ್ಧನಾಗಿದ್ದೇನೆ’ ಎಂದರು.

‘ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದು, ಯಾವ ಬ್ಯಾಂಕ್‌ಗಳಲ್ಲಿ ರೈತರ ಎಷ್ಟು ಸಾಲವಿದೆ ಎಂಬ ಮಾಹಿತಿ ಪಡೆಯುತ್ತಿದ್ದೇನೆ. ರೈತರು ಭಯ ಪಡಬೇಕಾಗಿಲ್ಲ. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳ

ಬಾರದು. ಆತ್ಮಹತ್ಯೆಗೆ ಶರಣಾದರೆ ಕೆಲಸ ಮಾಡುವ ನನ್ನ ಹುಮ್ಮಸ್ಸು ಕುಸಿಯುತ್ತದೆ. ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ತಾಳ್ಮೆಯಿಂದ ಇರಬೇಕು’ ಎಂದೂ ಮನವಿ ಮಾಡಿದರು.

‘ಅಧಿಕಾರಕ್ಕಾಗಿ ಪೂಜೆ ಮಾಡುತ್ತಿಲ್ಲ, ರಾಜ್ಯದ ಜನರ ನೆಮ್ಮದಿಗಾಗಿ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ ಎಂಬ ಅರಿವು ನನಗಿದೆ’ ಎಂದರು.

ರೈತರ ₹ 53,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ಭರವಸೆ ನೀಡಿತ್ತು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ ಎಂಬ ಕಾರಣ ಹೇಳಿ ಸಾಲ ಮನ್ನಾ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದರು. ಮೇ 30ರಂದು ರಾಜ್ಯದ ವಿವಿಧ ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ್ದರು.

‘ಸಾಲಮನ್ನಾಕ್ಕೆ ನಮ್ಮ ವಿರೋಧ ಇಲ್ಲ’

‘ರೈತರ ಸಾಲಮನ್ನಾಕ್ಕೆ ನಮ್ಮ ವಿರೋಧವಿಲ್ಲ. ಅವರ ಕಲ್ಯಾಣಕ್ಕೆ ಕಾಂಗ್ರೆಸ್‌ ಬದ್ಧವಾಗಿದೆ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.

‘ರಾಜ್ಯದ ಹಣಕಾಸು ಸ್ಥಿತಿ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ಬಳಿಯೇ ಹಣಕಾಸು ಖಾತೆ ಇದೆ’ ಎಂದರು.

3,231 ರೈತರ ಪತ್ನಿಯರಿಗೆ ಪಿಂಚಣಿ

ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ, ಕೃಷಿ ಇಲಾಖೆಯಿಂದ ಪರಿಹಾರಧನ ಪಡೆದುಕೊಂಡ ರೈತರ ಪತ್ನಿಗೆ ಮಾತ್ರ ವಿಧವಾ ವೇತನ (ಪಿಂಚಣಿ) ನೀಡಲಾಗುತ್ತಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರ 2016ರ ಮೇ ತಿಂಗಳಿನಿಂದ ಆರಂಭಿಸಿದೆ. ಈವರೆಗೆ 3,398 ಅರ್ಜಿಗಳು ಬಂದಿದ್ದು, 3,231 ಕುಟುಂಬಗಳಿಗೆ ಸದ್ಯ ಪಿಂಚಣಿ ವಿತರಿಸಲಾಗುತ್ತದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry