ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಋಣ’ಭಾರಕ್ಕೆ ಕುಸಿಯುತ್ತಲೇ ಇದೆ ಅನ್ನದಾತನ ಬದುಕು

ಎರಡೂವರೆ ತಿಂಗಳಲ್ಲಿ 69 ರೈತರು ಸಾವಿಗೆ ಶರಣು; ಸಾಲದ ಸಂಕಷ್ಟ ದೃಢಪಟ್ಟ ಐದು ಮಂದಿಗೆ ಮಾತ್ರ ಪರಿಹಾರ ವಿತರಣೆ
Last Updated 13 ಜೂನ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಸಾಲದ ಶೂಲಕ್ಕೆ ಸಿಲುಕಿ, ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ರಾಜ್ಯದಾದ್ಯಂತ 69 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ರೈತರ ₹ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿರುವ ಮಧ್ಯೆಯೂ ಅನ್ನದಾತರ ಸರಣಿ ಆತ್ಮಹತ್ಯೆ ಪ್ರಕರಣಗಳು ಎಗ್ಗಿಲ್ಲದೇ ಮುಂದುವರಿದಿವೆ.

ಈ 69 ಮಂದಿ ರೈತರ ಕುರಿತು ಕೃಷಿ ಇಲಾಖೆಗೆ ಮಾಹಿತಿ ಬಂದಿದ್ದರೂ, ಆಯಾ ಪ್ರದೇಶದ ಉಪ ಆಯುಕ್ತರು ಖಚಿತಪಡಿಸಿದ ಬಳಿಕವಷ್ಟೇ ಇಲಾಖೆ ಅಂತಹ ರೈತನ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ವಿತರಿಸುತ್ತದೆ. ಈವರೆಗೆ ಐದು ಮಂದಿ ಬಗ್ಗೆ ಮಾತ್ರ ‘ಸಾಲ ಬಾಧೆಯಿಂದ ಸಾವಿಗೆ ಶರಣಾಗಿದ್ದಾರೆ’ ಎಂದು ಆಯುಕ್ತರು ವರದಿ ನೀಡಿದ್ದು, ಅವರ ಕುಟುಂಬಗಳಿಗೆ ಪರಿಹಾರಧನ ವಿತರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬೆಳೆ ನಷ್ಟದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟರೆ ಮಾತ್ರ ಕುಟುಂಬಕ್ಕೆ ಪರಿಹಾರ, ವಿಧವಾ ಪತ್ನಿಯರಿಗೆ ಸಾಮಾಜಿಕ ಭದ್ರತೆ ಮತ್ತು ನಿರ್ದೇಶನಾಲಯದ ಮೂಲಕ ಪಿಂಚಣಿ ವಿತರಿಸಲಾಗುತ್ತದೆ. ಕೃಷಿ ಇಲಾಖೆ ನೀಡಿದ ಮಾಹಿತಿ ಆಧರಿಸಿ, 2016ರ ಮೇ ತಿಂಗಳಿನಿಂದ 2018ರ ಮೇ ತಿಂಗಳವರೆಗೆ 3,231 ಸಂತ್ರಸ್ತ ರೈತರ ಕುಟುಂಬಗಳಿಗೆ ನಿರ್ದೇಶನಾಲಯ ಪಿಂಚಣಿ ನೀಡುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ 2017ರ ಜೂನ್‌ 21ರಂದು ಆದೇಶ ಹೊರಡಿಸಿ, ಸಹಕಾರಿ ರಂಗದ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಗರಿಷ್ಠ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದೆ. ಇದರಿಂದ 22.27 ಲಕ್ಷ ರೈತ ಕುಟುಂಬಗಳಿಗೆ ಅನುಕೂಲವಾಗುತ್ತಿದ್ದು, ಬೊಕ್ಕಸಕ್ಕೆ ಒಟ್ಟು ₹ 8,165 ಕೋಟಿ ಹೊರೆ ಬಿದ್ದಿದೆ. ಆದರೆ, ಈ ಸಾಲ ಮನ್ನಾ ಯೋಜನೆ ಕೂಡ ರೈತರ ಆತ್ಮಹತ್ಯೆ ತಡೆಯವ ನಿಟ್ಟಿನಲ್ಲಿ ವಿಫಲವಾಗಿದೆ ಎನ್ನುತ್ತವೆ ಕೃಷಿ ಇಲಾಖೆ ಅಂಕಿ ಅಂಶಗಳು.

2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ ಅಂತ್ಯದ ಅವಧಿಯಲ್ಲಿ 1,157 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕೊರಳೊಡ್ಡಿದ ವ್ಯಕ್ತಿ, ಸಾಲದ ಸಂಕಷ್ಟಕ್ಕೆ ಸಿಲುಕಿ ನೊಂದ ‘ರೈತ’ ಎಂಬ ಬಗ್ಗೆ ದಾಖಲೆಗಳನ್ನು ಉಪ ಆಯುಕ್ತರು ಪರಿಶೀಲಿಸಿ ದೃಢೀಕರಿಸಬೇಕು. ಹೀಗೆ ದೃಢೀಕರಿಸಿದ 673 ರೈತರಿಗೆ ಮಾತ್ರ ಸರ್ಕಾರ ಪರಿಹಾರ ಮೊತ್ತ ವಿತರಿಸಿದೆ. ಆದರೆ, ಪರಿಹಾರ ವಿತರಿಸಲು ನಿಗದಿ‍ಪಡಿಸಿದ ಮಾನದಂಡಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ 188 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ.

ರಾಜ್ಯದಲ್ಲಿ 2016–17ರಲ್ಲಿ 1,185 ರೈತರು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ. ಅದರಲ್ಲೂ 270 ಪ್ರಕರಣಗಳನ್ನು ‘ರೈತ’ ಎಂದು ಸಾಬೀತುಪಡಿಸುವ ಸೂಕ್ತ ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ತಿರಸ್ಕರಿಸಲಾಗಿದ್ದು, ಆ ಕುಟುಂಬಗಳಿಗೆ ಕೃಷಿ ಇಲಾಖೆ ಪರಿಹಾರಧನ ನೀಡಿಲ್ಲ. 914 ರೈತರ ವಾರಸುದಾರರಿಗೆ ಮಾತ್ರ ಪರಿಹಾರದ ಮೊತ್ತ ತಲುಪಿಸಲಾಗಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

3,231 ರೈತರ ಪತ್ನಿಯರಿಗೆ ಪಿಂಚಣಿ

ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ, ಕೃಷಿ ಇಲಾಖೆಯಿಂದ ಪರಿಹಾರಧನ ಪಡೆದುಕೊಂಡ ರೈತರ ಪತ್ನಿಗೆ ಮಾತ್ರ ವಿಧವಾ ವೇತನ (ಪಿಂಚಣಿ) ನೀಡಲಾಗುತ್ತಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರ 2016ರ ಮೇ ತಿಂಗಳಿನಿಂದ ಆರಂಭಿಸಿದೆ. ಈವರೆಗೆ 3,398 ಅರ್ಜಿಗಳು ಬಂದಿದ್ದು, 3,231 ಕುಟುಂಬಗಳಿಗೆ ಸದ್ಯ ಪಿಂಚಣಿ ವಿತರಿಸಲಾಗುತ್ತದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ತಿಳಿಸಿದೆ.

2016ರ ಮೇ ಅಂತ್ಯಕ್ಕೆ 232 ಕುಟುಂಬಗಳಿಗೆ ಪಿಂಚಣಿ ನೀಡಲಾಗುತ್ತಿತ್ತು. 2017ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 2,201, 2018ರ ಮಾರ್ಚ್ ಅಂತ್ಯಕ್ಕೆ 3,197 ಆಗಿತ್ತು. ಆದರೆ, ಇದೇ ಮೇ ಅಂತ್ಯಕ್ಕೆ ಈ ಸಂಖ್ಯೆ 3,231ಕ್ಕೆ ಏರಿಕೆಯಾಗಿದೆ. ಇನ್ನೂ 37 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಎಂದೂ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರೈತರ ಆತ್ಮಹತ್ಯೆ ಅಂಕಿಅಂಶ

1,185

2016–2017ರಲ್ಲಿ

1,157

2017–2018ರಲ್ಲಿ

69

2018ರ ಏಪ್ರಿಲ್‌ನಿಂದ ಈವರೆಗೆ

ಫಲಿಸದ ‘ಸಾಲ ಮನ್ನಾ’ ಯೋಜನೆ

ನಿಲ್ಲದ ಅನ್ನದಾತರ ಸಾವಿನ ಸರಣಿ

ಕಳೆದ ವರ್ಷ 1,157 ರೈತರ ಆತ್ಮಹತ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT