7

ಕಾರ್ತಿ ವಿರುದ್ಧ ಆರೋಪಪಟ್ಟಿ

Published:
Updated:
ಕಾರ್ತಿ ವಿರುದ್ಧ ಆರೋಪಪಟ್ಟಿ

ನವದೆಹಲಿ: ಏರ್‌ಸೆಲ್‌ ಮ್ಯಾಕ್ಸಿಸ್ ಹಗರಣದ ಸಂಬಂಧ, ಕಾರ್ತಿ ಚಿದಂಬರಂ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

ಜತೆಗೆ ಅಡ್ವಾನ್ಸ್ಡ್ ಸ್ಟ್ರಾಟೆಜಿಕ್‌ ಕನ್ಸಲ್ಟೆನ್ಸಿ ಪ್ರೈವೇಟ್‌ ಲಿಮಿಟೆಡ್‌ (ಎಎಸ್‌ಸಿಪಿಎಲ್), ಚೆಸ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ‍ಪ್ರೈವೇಟ್ ಲಿಮಿಟೆಡ್ (ಸಿಎಂಎಸ್‌ಪಿಎಲ್‌) ಸಂಸ್ಥೆಗಳು, ಕೆಲವು ವ್ಯಕ್ತಿಗಳನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೆಸರನ್ನು ಆರೋಪಪಟ್ಟಿಯಲ್ಲಿ ಹಲವೆಡೆ ಉಲ್ಲೇಖಿಸಲಾಗಿದೆ. ಆದರೆ, ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ರೂಬಿ ಅಲ್ಕಾ ಗುಪ್ತಾ ಎದುರು ಸಲ್ಲಿಸಿರುವ ತನಿಖಾ ವರದಿಯಲ್ಲಿ ಚಿದಂಬರಂ ಆರೋಪಿ ಎಂದು ಉಲ್ಲೇಖಿಸಿಲ್ಲ.

ಕಾರ್ತಿ ಅವರಿಗೆ ಸೇರಿದ್ದು ಎನ್ನಲಾದ ₹1.16 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಪರ ವಕೀಲರಾದ ನಿತೇಶ್ ರಾಣಾ ಹಾಗೂ ಎನ್‌.ಕೆ. ಮಟ್ಟಾ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಇ.ಡಿ ಹೇಳಿದೆ. ಈ ಸಂಬಂಧ ವಿಚಾರಣೆಯನ್ನು ನ್ಯಾಯಾಲಯ ಜುಲೈ 4ಕ್ಕೆ ನಿಗದಿಪಡಿಸಿದೆ.

ಈ ತನಕ ನಡೆಸಲಾದ ತನಿಖೆಯ ವಿವರ, ಸಂಬಂಧಪಟ್ಟ ದಾಖಲೆಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಿಯಂತ್ರಣದಲ್ಲಿತ್ತು ಸಂಸ್ಥೆ’

‘ಹಗರಣದಲ್ಲಿ ₹26 ಲಕ್ಷ ಲಂಚ ಸ್ವೀಕರಿಸಿದ್ದ ಎಎಸ್‌ಸಿಪಿಎಲ್ ಹಾಗೂ ₹90 ಲಕ್ಷ ಲಂಚ ಪಡೆದಿದ್ದ ಸಿಎಂಎಸ್‌ಪಿಎಲ್‌ ಮೇಲೆ ಕಾರ್ತಿ ಸಂಪೂರ್ಣ ನಿಯಂತ್ರಣ ಹೊಂದಿದ್ದರು’ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಂಸ್ಥೆಯ ಪ್ರತಿ ವ್ಯವಹಾರದಲ್ಲೂ ಕಾರ್ತಿ ನಿಯಂತ್ರಣ ಹೊಂದಿದ್ದರು ಎನ್ನುವುದು ಇ–ಮೇಲ್‌ನಿಂದ ತಿಳಿಯುತ್ತದೆ. ಸಂಸ್ಥೆ ಸ್ಥಾಪಿಸಲು ಹಣ ಹೂಡಿಕೆಗೂ ಕಾರ್ತಿ ನೆರವು ನೀಡಿದ್ದರು’ ಎಂದು ಇ.ಡಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry