ಬಜೆಟ್‌ಗೆ ಕೊಕ್ಕೆ; ಹೊಸ ಯೋಜನೆಗೆ ಬ್ರೇಕ್‌

7

ಬಜೆಟ್‌ಗೆ ಕೊಕ್ಕೆ; ಹೊಸ ಯೋಜನೆಗೆ ಬ್ರೇಕ್‌

Published:
Updated:
ಬಜೆಟ್‌ಗೆ ಕೊಕ್ಕೆ; ಹೊಸ ಯೋಜನೆಗೆ ಬ್ರೇಕ್‌

‌ಬೆಂಗಳೂರು: ಬಿಬಿಎಂಪಿಯ 2018–19ನೇ ಸಾಲಿನ ಬಜೆಟ್‌ ಮಂಡನೆಯಾಗಿ ಮೂರೂವರೆ ತಿಂಗಳು ಕಳೆದರೂ ನಗರಾಭಿವೃದ್ಧಿ ಇಲಾಖೆ ಅದಕ್ಕೆ ಅನುಮೋದನೆ ನೀಡಿಲ್ಲ. ಇದರಿಂದಾಗಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಭಾರೀ ಹಿನ್ನಡೆಯಾಗಿದೆ.

₹9,325 ಕೋಟಿ ಮೊತ್ತದ ಬಜೆಟ್‌ ಅನ್ನು ಫೆಬ್ರುವರಿ 28ರಂದು ಮಂಡಿಸಲಾಗಿತ್ತು. ಕಲ್ಯಾಣ ಕಾರ್ಯಕ್ರಮಗಳಿಗೆ ಇನ್ನಷ್ಟು ಅನುದಾನ ನೀಡುವಂತೆ ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದರು. ಮಾರ್ಚ್‌ 12ರ ವೇಳೆಗೆ ಅದರ ಗಾತ್ರ ₹10,208 ಕೋಟಿಗೆ ಹಿಗ್ಗಿತ್ತು.

ಬಳಿಕ ಅದನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು. ಬಿಬಿಎಂಪಿಯ ಸ್ಥಿತಿಗತಿಯ ಬಗ್ಗೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ವಾಸ್ತವಿಕ ಸ್ಥಿತಿ ಬಿಚ್ಚಿಟ್ಟಿದ್ದರು. ‘ವಾಸ್ತವಿಕ ಆದಾಯ ಸ್ವೀಕೃತಿಗಳನ್ನು ಪರಿಗಣಿಸದೇ, ಬಜೆಟ್‌ ಅನುಮೋದನೆಯಾಗುತ್ತಿರುವುದರಿಂದ ಹಣಕಾಸು ನಿರ್ವಹಣೆಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ರಾಜ್ಯ ಸರ್ಕಾರದ ಬಜೆಟ್‌ ಶಿಸ್ತನ್ನು ಪಾಲಿಕೆಯಲ್ಲೂ ಅಳವಡಿಸಿಕೊಳ್ಳಬೇಕು. ವಾಸ್ತವಿಕ ಸ್ವೀಕೃತಿಗೆ ಅನುಗುಣವಾಗಿ ವೆಚ್ಚ ಮಾಡಬೇಕು’ ಎಂದು ಅವರು ತಿಳಿಸಿದ್ದರು.

‘ನಿರೀಕ್ಷಿತ ಆದಾಯ ಬಾರದಿದ್ದರೂ ವೆಚ್ಚಗಳಿಗೆ ಒದಗಿಸಿರುವ ಅನುದಾನಕ್ಕೆ ಅನುಗುಣವಾಗಿ ಜಾಬ್ ಸಂಖ್ಯೆಯನ್ನು ಪಡೆದು, ಕಾಮಗಾರಿಗಳನ್ನು

ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಪ್ರತಿವರ್ಷ ಗುತ್ತಿಗೆದಾರ‌ರ ಬಾಕಿ ಬಿಲ್‌ಗಳ ಅಂತರ ಹೆಚ್ಚಾಗುತ್ತಿದ್ದು, ಹೆಚ್ಚು ಆರ್ಥಿಕ ಹೊರೆ ಉಂಟಾಗುತ್ತಿದೆ. ಗುತ್ತಿಗೆದಾರರಿಗೆ ₹20 ಸಾವಿರ ಕೋಟಿಯಷ್ಟು ಪಾವತಿಸಬೇಕಿದೆ’ ಎಂದೂ ಅವರು ಹೇಳಿದ್ದರು. ಆ ನಂತರ ನಗರಾಭಿವೃದ್ಧಿ ಇಲಾಖೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿತ್ತು. ಇದಕ್ಕೆ ಪಾಲಿಕೆಯ ಆಯುಕ್ತರು ಮೇ 23ರಂದು ಉತ್ತರ ನೀಡಿದ್ದಾರೆ.

‘ಪಾಲಿಕೆಯ ವರಮಾನಕ್ಕೂ ಬಜೆಟ್‌ ಗಾತ್ರಕ್ಕೂ ಅಜಗಜಾಂತರ ಇದೆ. ಇದಕ್ಕೆ ಅನುಮೋದನೆ ನೀಡಲು ಸಾಧ್ಯವಿಲ್ಲ. ಮೊತ್ತವನ್ನು ಪರಿಷ್ಕರಿಸಿ ಮತ್ತೆ ಪ್ರಸ್ತಾವ ಕಳುಹಿಸಿ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ತಾಕೀತು ಮಾಡಿದ್ದಾರೆ. ‘ನಗರಾಭಿವೃದ್ಧಿ ಇಲಾಖೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿ ಬಜೆಟ್‌ ವಾಪಸ್‌ ಕಳುಹಿಸಿದೆ. ಅದಕ್ಕೆ ಉತ್ತರ ನೀಡಿದ್ದೇವೆ. ವಾರದೊಳಗೆ ಅನುಮೋದನೆ ಸಿಗಲಿದೆ’ ಎಂದು ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ಮಹದೇವ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ಸರ್ಕಾರದ ಮೇಲೆ ಬಿಬಿಎಂಪಿ ಅವಲಂಬನೆ ವಿಪರೀತವಾಗಿದೆ. ಪಾಲಿಕೆಯ ಆಡಳಿತವನ್ನು ರಾಜ್ಯ ಸರ್ಕಾರವೇ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮೂರೂವರೆ ತಿಂಗಳು ಕಳೆದರೂ ಬಜೆಟ್‌ಗೆ ಅನುಮೋದನೆ ಸಿಕ್ಕಿಲ್ಲ ಎಂದರೆ ಏನರ್ಥ. ಪಾಲಿಕೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೇ‘ ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂ ಅಧ್ಯಕ್ಷ ಡಿ.ಎಸ್‌. ರಾಜಶೇಖರ್ ಪ್ರಶ್ನಿಸಿದರು.

‘ಆರಂಭದಲ್ಲಿ ಚುನಾವಣಾ ನೀತಿಸಂಹಿತೆಯ ನೆಪ ಹೇಳಿದರು. ಹೊಸ ಸರ್ಕಾರ ಬಂದು ಒಂದು ತಿಂಗಳು ಕಳೆದಿದೆ. ಈ ಅವಧಿಯಲ್ಲಾದರೂ ಒಪ್ಪಿಗೆ ಪಡೆಯಬೇಕಿತ್ತು. ಆ ಕೆಲಸವೂ ಆಗಿಲ್ಲ. ಬೇಸಿಗೆಯಲ್ಲೇ ಗುಂಡಿ ಮುಚ್ಚುವ, ರಾಜಕಾಲುವೆಗಳ ದುರಸ್ತಿ, ಹೂಳೆತ್ತುವ ಕಾಮಗಾರಿ ಮಾಡಬೇಕಿತ್ತು. ಬಜೆಟ್‌ಗೆ ಅನುಮೋದನೆ ಸಿಕ್ಕಿಲ್ಲ ಎಂಬ ಕಾರಣ ಹೇಳಿ ಗುತ್ತಿಗೆದಾರರು ಕಾಲಹರಣ ಮಾಡಿದರು. ಮಳೆಗಾಲದಲ್ಲಿ ಕಾಮಗಾರಿಯ ನಾಟಕ ಮಾಡುತ್ತಾರೆ. ಕೊನೆಗೆ ಸಂಕಷ್ಟ ಅನುಭವಿಸುವುದು ನಾಗರಿಕರು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ವರ್ಷ ಮಳೆಗಾಲದಲ್ಲಿ ಕಾಣಿಸಿಕೊಂಡ ಸಾಲುಸಾಲು ಪ್ರವಾಹಗಳು ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡಿತ್ತು. ಹೀಗಾಗಿ, ಮಳೆ ನೀರಿನ ನಿರ್ವ

ಹಣೆಯ ಬಗ್ಗೆ ಈ ಸಲ ಲಕ್ಷ್ಯ ವಹಿಸಲಾಗಿದೆ. ಚರಂಡಿ ಅಭಿವೃದ್ಧಿಪಡಿಸುವಾಗ ಯೋಜನೆಯ ಶೇ 10ರಷ್ಟು ಮೊತ್ತವನ್ನು ಇಂಗುಗುಂಡಿ ನಿರ್ಮಾಣಕ್ಕೆ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತರ್ಜಲ ವೃದ್ಧಿ ಸಲುವಾಗಿ ಸಾರ್ವಜನಿಕರು ಮನೆ ಮುಂದಿನ ಚರಂಡಿಯಲ್ಲಿ ಇಂಗು ಗುಂಡಿ ನಿರ್ಮಿಸಿ ಮನೆಯ ಮಳೆ ನೀರು ಭೂಮಿಗೆ ಇಂಗಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುವ ಒಟ್ಟು ಅನುದಾನಗಳಲ್ಲಿ ಕನಿಷ್ಠ ₹ 30 ಲಕ್ಷವನ್ನು ಮಳೆ ನೀರು ಸಂಗ್ರಹದ ಉದ್ದೇಶಕ್ಕೆ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಪಾಲಿಕೆ ಕಟ್ಟಡಗಳು, ಶಾಲಾ ಕಾಲೇಜುಗಳ ಆವರಣ ಹಾಗೂ ಲಭ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹಿಸಲು ₹ 5 ಕೋಟಿ, ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹಿಸಲು ಹಾಗೂ ಇಂಗುಗುಂಡಿ ನಿರ್ಮಾಣಕ್ಕೆ ₹ 5 ಕೋಟಿ ಮೀಸಲಿಡಲಾಗಿದೆ. 150 ಕಿ.ಮೀ ಉದ್ದ ಮಳೆ ನೀರು ಕಾಲುವೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಯಾವ ಕಾಮಗಾರಿಗೂ ಚಾಲನೆ ಸಿಕ್ಕಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry