ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ್ಯು ಮಹಾರಾಜ್ ಸಾವು: ಎಲ್ಲಾ ಕೋನಗಳಿಂದ ತನಿಖೆ

Last Updated 13 ಜೂನ್ 2018, 20:00 IST
ಅಕ್ಷರ ಗಾತ್ರ

ಇಂದೋರ್‌, ಮಧ್ಯಪ್ರದೇಶ (ಪಿಟಿಐ): ಅಧ್ಯಾತ್ಮ ಗುರು ಭಯ್ಯು ಮಹಾರಾಜ್‌ ಅವರ ಆತ್ಮಹತ್ಯೆಯ ಬಗ್ಗೆ ಎಲ್ಲ ಕೋನಗಳಿಂದ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

‘ಕೌಟುಂಬಿಕ ಸಮಸ್ಯೆಗಳಿಂದ ಭಯ್ಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೂ, ಸಮಗ್ರವಾಗಿ ತನಿಖೆ ನಡೆಸಲಾಗುವುದು’ ಎಂದು ಇಂದೋರ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಜಯ್ ಶರ್ಮ ಹೇಳಿದರು.

ಸಿಸಿಟಿವಿ ದೃಶ್ಯಗಳು, ಅವರ ಮೊಬೈಲ್ ಫೋನ್, ಆತ್ಮಹತ್ಯೆಗೆ ಬಳಸಿದ ರಿವಾಲ್ವರ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಕೊಠಡಿಯಲ್ಲಿ ಸಿಕ್ಕಿರುವ ನೋಟ್‌ಪ್ಯಾಡ್‌ನಲ್ಲಿ ಬರೆದಿರುವ ಕೈಬರಹ ಭಯ್ಯು ಅವರದ್ದೇ ಎಂದು ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ. ಆದರೂ, ಈ ಬಗ್ಗೆ ತಜ್ಞರ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.

ಭಯ್ಯು ಅವರ ಮೊದಲ ಪತ್ನಿ 2015ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಂದ ಭಯ್ಯು ಅವರಿಗೆ ಒಬ್ಬ ಮಗಳಿದ್ದಾಳೆ. 2017ರಲ್ಲಿ ಡಾ. ಆಯುಷಿ ಶರ್ಮಾ ಎಂಬುವವರನ್ನು ಭಯ್ಯು ಎರಡನೇ ಮದುವೆಯಾಗಿದ್ದರು. ಆದರೆ, ಭಯ್ಯು ಅವರ ಮಗಳು ಮತ್ತು ಆಯುಷಿ ಅವರ ನಡುವೆ ಸೌಹಾರ್ದದ ಕೊರತೆ ಇದ್ದುದು, ಹಲವಾರು ಬಾರಿ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು; ಇದರಿಂದ ಭಯ್ಯು ಆಗಾಗ್ಗೆ ಒತ್ತಡಕ್ಕೆ ಒಳಗಾಗುತ್ತಿದ್ದರು ಎಂದು ಅವರ ಆಶ್ರಮಕ್ಕೆ ನಿಕಟರಾಗಿರುವ ಕೆಲವರು ಹೇಳಿದ್ದಾರೆ.

ಸಿಬಿಐ ತನಿಖೆಗೆ ಒತ್ತಾಯ:‌ ಭಕ್ತರು ಅಂತಿಮ ನಮನ ಸಲ್ಲಿಸಲು ಅನುವಾಗುವಂತೆ, ಪಾರ್ಥಿವ ಶರೀರವನ್ನು ಭಯ್ಯು ಅವರ ‘ಸೂರ್ಯೋದಯ’ ಆಶ್ರಮದಲ್ಲಿ ಇರಿಸಲಾಗಿತ್ತು. ಆಶ್ರಮದ ಹೊರಗೆ ಸೇರಿದ್ದ ನೂರಾರು ಶಿಷ್ಯರು ಆಘಾತಕ್ಕೆ ಒಳಗಾಗಿದ್ದರು. ತಮ್ಮ ಗುರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಶಿಷ್ಯವೃಂದ ನಂಬುತ್ತಿಲ್ಲ.

‘ಗುರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಾಗಿರಲಿಲ್ಲ. ಇದರ ಹಿಂದೆ ಕೆಲವರ ಪಿತೂರಿ ಇರುವ ಶಂಕೆ ಇದ್ದು, ಸಿಬಿಐ ತನಿಖೆ ನಡೆಸಬೇಕು’ ಎಂದು ಮಹಾರಾಷ್ಟ್ರದ ಅವರ ಶಿಷ್ಯ ಸಂಭಾಜಿ ದೇಶಮುಖ್ ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ರಾಮದಾಸ ಆಠವಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪರವಾಗಿ ಅವರ ವಿಶೇಷ ಕರ್ತವ್ಯಾಧಿಕಾರಿ ಶ್ರೀಕಾಂತ್ ಭಾರ್ತಿಯಾ ಮೊದಲಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

* ಭಯ್ಯು ಅವರದು ಎನ್ನಲಾದ ಮರಣಪತ್ರದಲ್ಲಿನ ಕೆಲ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್‌ ಆಗಿದ್ದವು. ‘ನನ್ನ ಎಲ್ಲ ಹಣಕಾಸು, ಆಸ್ತಿಪಾಸ್ತಿ, ಬ್ಯಾಂಕ್‌ ಖಾತೆಗಳು, ಸಹಿ ಹಾಕುವ ಎಲ್ಲ ಅಧಿಕಾರವೂ ವಿನಾಯಕನಿಗೆ ವರ್ಗಾವಣೆಯಾಗುತ್ತದೆ. ಏಕೆಂದರೆ ಆತನ ಬಗ್ಗೆ ನನಗೆ ನಂಬಿಕೆ ಇದೆ. ಯಾವುದೇ ಒತ್ತಡವಿಲ್ಲದೇ ನಾನು ಇದನ್ನು ಬರೆಯುತ್ತಿದ್ದೇನೆ’ ಎಂಬ ಮಾಹಿತಿ ಅದರಲ್ಲಿತ್ತು.

‘ತಮ್ಮೊಂದಿಗೆ ಕಳೆದ 15 ವರ್ಷಗಳಿಂದಲೂ ಇದ್ದ ನಂಬಿಕಸ್ತ ಅನುಯಾಯಿಗೆ ತಮ್ಮ ಆಸ್ತಿಪಾಸ್ತಿಯ ಹೊಣೆ ವಹಿಸಬೇಕೆಂಬ ಇಚ್ಛೆಯನ್ನು ಭಯ್ಯು ವ್ಯಕ್ತಪಡಿಸಿದ್ದಾರೆ’ ಎಂದು ಈ ಕುರಿತು ಪೊಲೀಸ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಜೂನ್‌ 11ರಂದು ಭಯ್ಯು ಸ್ಥಳೀಯ ರೆಸ್ಟೋರೆಂಟ್‌ ಒಂದರಲ್ಲಿ ಮಹಿಳೆಯೊಬ್ಬರೊಂದಿಗೆ ಕುಳಿತಿದ್ದ ಸಿಸಿಟಿವಿ ದೃಶ್ಯ ವೈರಲ್‌ ಆಗಿದೆ. ಆದರೆ, ಆಕೆ ಶಿಕ್ಷಣಕ್ಕೆ ನೆರವು ಕೋರಿ ಬಂದವಳಾಗಿದ್ದು, ಆತ್ಮಹತ್ಯೆಗೂ ಈ ದೃಶ್ಯಕ್ಕೂ ಸಂಬಂಧವಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT