ನೀರಲ್ಲಿ ಅಡಗಿ ಕೂತ ದುರ್ಯೋಧನನಂತೆ...

7

ನೀರಲ್ಲಿ ಅಡಗಿ ಕೂತ ದುರ್ಯೋಧನನಂತೆ...

ನಾಗೇಶ ಹೆಗಡೆ
Published:
Updated:
ನೀರಲ್ಲಿ ಅಡಗಿ ಕೂತ ದುರ್ಯೋಧನನಂತೆ...

ಈ ಬಾರಿ ಜೂನ್ 5ರ ‘ವಿಶ್ವ ಪರಿಸರ ದಿನ’ದಂದು ಕನ್ನಡದ ಅನೇಕ ದಿನಪತ್ರಿಕೆಗಳ ಮೊದಲ ಪುಟದಲ್ಲಿ ಹಸುರು ಚಿಮ್ಮಿತು. ಶಿರೋನಾಮೆಗಳು ಹಸುರು ಬಣ್ಣದಲ್ಲಿದ್ದವು. ಅಂದು ಸುದ್ದಿ ಚಾನೆಲ್‍ಗಳಲ್ಲೂ ಲಂಗರು ಲಲನೆಯರು (ಆಂಕರ್‌ಗಳು) ಹಸುರು ಡ್ರೆಸ್ ತೊಟ್ಟು, ಹಸುರು ಬಿಂದಿ ಧರಿಸಿ ಪರಿಸರ ದಿನದ ಹೊಳಪನ್ನು ಹೆಚ್ಚಿಸಿದರು.

ಇದೇ ಉಮೇದು ಜೂನ್ 8ರ ‘ವಿಶ್ವ ಸಾಗರ ದಿನ’ ದಂದೂ ಇದ್ದಿದ್ದರೆ ಶಿರೋನಾಮೆಗಳೂ ಸೀರೆಗಳೂ ನೀಲಿ ಬಣ್ಣದ್ದೇ ಆಗಿರುತ್ತಿದ್ದವು. ಆದರೆ ನಮ್ಮೆಲ್ಲರಿಗೆ ಸಮುದ್ರ ಈಗಲೂ ದೂರದ ಸಂಗತಿಯಾಗಿದೆ. ಗಿಡಮರಗಳ ಹಸುರು ನಮ್ಮನ್ನು ತಟ್ಟಿದಷ್ಟು ಗಾಢವಾಗಿ, ನೇರವಾಗಿ ಸಮುದ್ರದ ನೀಲಿ ತಟ್ಟುತ್ತಿಲ್ಲ. ಈ ಬಾರಿಯಂತೂ ‘ವಿಶ್ವ ಸಾಗರ ದಿನ’ವೇ ನಮ್ಮ ಸಮುದ್ರ ತೀರಾ ಕೋಪಿಸಿಕೊಂಡಂತೆ ಪಶ್ಚಿಮ ಕರಾವಳಿಗುಂಟ ಚಂಡಮಾರುತ, ಜಡಿಮಳೆಯನ್ನು ಜಪ್ಪೆನ್ನುತ್ತಿತ್ತು. ಸಾಗರದ ಕರಾಮತ್ತು ಈ ಬಾರಿ ಉಗ್ರವಾಗಿದೆ. ಸಿಡಿಲಿನ ಅಬ್ಬರಕ್ಕೆ ಒಳನಾಡಿನ ಅದಾಗಲೇ 94 ಜನರು ಬಲಿಯಾಗಿದ್ದು ವರದಿಯಾಗಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ನಿಗದಿತ ಸರಾಸರಿಗಿಂತ ದುಪ್ಪಟ್ಟು ಮಳೆ ಬಿದ್ದಿದೆ. ಕೆರೆಕಟ್ಟೆಗಳು ಆಗಲೇ ತುಂಬಿ ತುಳುಕುತ್ತಿರುವ ವರದಿಗಳು ಬರತೊಡಗಿವೆ.

ಸಂಭ್ರಮಿಸಬೇಕೆ? ರಸ್ತೆ, ರೈಲುಮಾರ್ಗಗಳ ಮೇಲೆ ಬೆಟ್ಟಗಳು ಕುಸಿದಿವೆ. ದೇಗುಲಗಳು ಮುಳುಗಿವೆ. ಕಟಾವಿಗೆ ಬಂದ ಪೈರು ಮಲಗಿವೆ. ಲಕ್ಷಾಂತರ ಟನ್ ಧಾನ್ಯ ನೀರಲ್ಲಿ ನೆನೆದಿದೆ. ಇತ್ತ ಬೆಂಗಳೂರಿನಲ್ಲಿ ಜಡಿಮಳೆಯ ನಂತರ ರಾಜಾ ಕಾಲುವೆಗಳನ್ನು ನೋಡಿದರೆ ಚಿತ್ತ ಕೆಣಕುವ ಚಿತ್ರಣವೇ ಸಿಗುತ್ತದೆ. ಸಿಂಬೆಸಿಂಬೆಯಾಗಿ ಪ್ಲಾಸ್ಟಿಕ್ ರದ್ದಿಗಳು, ಚಿಂದಿಬಟ್ಟೆಗಳು ಸಿಕ್ಕಸಿಕ್ಕ ಕಲ್ಲು ಕಡ್ಡಿಗಳಿಗೆ ಸುತ್ತಿಕೊಂಡು ಅಕರಾಳ ವಿಕರಾಳ ಭಂಗಿಯಲ್ಲಿ 15ನೇ ದಿನದ ಕುರುಕ್ಷೇತ್ರವನ್ನು ನೆನಪಿಸುತ್ತವೆ. ಜಡಿಮಳೆಯೆಂದರೆ ನಮ್ಮೆಲ್ಲರ ಕೊಳಕು ಕಚಡಾಗಳನ್ನು, ತೈಲದ ಜಿಡ್ಡು, ಕೆಮಿಕಲ್ ತ್ಯಾಜ್ಯಗಳನ್ನು ಹಳ್ಳಕೆರೆಗಳಿಗೆ ಸೇರಿಸುವ ಜಾಡಮಾಲಿ ಇದ್ದಹಾಗೆ. ಅಲ್ಲಿ ಇಲ್ಲಿ ಸಂದುಗೊಂದಲ್ಲಿ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್ ಕಚಡಾಗಳು ಆಷಾಢದ ಮುಂಚಿನ ಬಿರುಗಾಳಿಗೆ ಸಡಿಲಗೊಂಡು ಮೇಲೆದ್ದು ಹಾರುತ್ತ ಜಾರುತ್ತ ಮಳೆ ನೀರಿಗೆ ಸೇರಿ ಕೆರೆಗಳಿಗೆ ಹೋಗುತ್ತವೆ. ಇನ್ನೆರಡು ಮಳೆ ಬಿದ್ದರೆ 18ನೇ ದಿನ ವೈಶಂಪಾಯನ ಸರೋವರಕ್ಕೆ ನುಸುಳುವ ದುರ್ಯೋಧನನ ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲ ಭೈರಮಂಗಲದ ಕೆರೆಗೋ ಅಗರಕ್ಕೋ ಹೋಗಿ ತಳ ಸೇರುತ್ತವೆ. ಕೇವಲ ನಾಲ್ಕಾರು ಮಳೆಗೇ ಈ ಬಾರಿ ನಮ್ಮ ಕೆರೆ ಕಟ್ಟೆಗಳು ತುಂಬುತ್ತಿವೆ ಎಂದರೆ ಅಲ್ಲಿ ನೀರಿಗಿಂತ ಹೂಳು, ಕೊಳಕು ಮತ್ತು ಪ್ಲಾಸ್ಟಿಕ್ ಕಚಡಾಗಳೇ ಹೆಚ್ಚಿದ್ದೀತು. ನಾಳಿನ ಪೀಳಿಗೆಗೆ ನಾವು ಕೊಡುವ ದುರ್ದಾನ ಅದು.

ಇಂದು ಕೆರೆಗೆ ಸೇರಿದ್ದು ನಾಳೆ ಮತ್ತೆ ಹೊಳೆ-ಹಳ್ಳ, ನದಿಗುಂಟ ಸಮುದ್ರ ಸೇರುತ್ತದೆ. ಸಮುದ್ರರಾಜ ತನ್ನಲ್ಲಿ ಶೇಖರವಾದ ನೀರನ್ನಷ್ಟೇ ಆವಿಯಾಗಿಸಿ ಮೋಡಗಳನ್ನು ಸೃಷ್ಟಿ ಮಾಡಿ ಭೂಮಿಯತ್ತ ರವಾನಿಸುತ್ತಾನೆ ವಿನಾ ತನ್ನ ಒಡಲಿಗೆ ಬಂದ ಪ್ಲಾಸ್ಟಿಕ್ಕನ್ನು ಎತ್ತಿ ನಮ್ಮತ್ತ ಬಿಸಾಕಲಾರ. ನಮ್ಮ ತಪ್ಪನ್ನೆಲ್ಲ ಅವನೇ ಹೊಟ್ಟೆಗೆ ಹಾಕಿಕೊಂಡಿರಬೇಕು. ಸಮುದ್ರದಲ್ಲಿ ವಾಸಿಸುವ ಎಲ್ಲ ಚಿಕ್ಕದೊಡ್ಡ ಜೀವಿಗಳು ಪ್ಲಾಸ್ಟಿಕ್ಕನ್ನು ಅನಿವಾರ್ಯವಾಗಿ ನುಂಗಬೇಕಾದ ಸ್ಥಿತಿ ಬಂದಿದೆ. ಕಳೆದ ವಾರ ಥಾಯ್ಲೆಂಡಿನ ಸಮುದ್ರತೀರದ ಸೋಂಖ್ಲಾ ಕಾಲುವೆಯ ದಡದಲ್ಲಿ 30 ಅಡಿ ಉದ್ದದ ಪೈಲಟ್ ತಿಮಿಂಗಿಲ ಬಂದು ನರಳುತ್ತ ಪ್ಲಾಸ್ಟಿಕ್ ಚಿಂದಿಗಳನ್ನು ವಾಂತಿ ಮಾಡಿಕೊಂಡಿತು. ನಾಲ್ಕಾರು ದಿನಗಳ ಕಾಲ ಅಲ್ಲಿನ ಪಶುವೈದ್ಯರು ಏನೆಲ್ಲ ಚಿಕಿತ್ಸೆ ನಡೆಸಿದರೂ ಬದುಕುಳಿಯಲಿಲ್ಲ. ಶವದ ಹೊಟ್ಟೆ ಸೀಳಿ ಸುಮಾರು 80 ಪ್ಲಾಸ್ಟಿಕ್ ಚೀಲಗಳನ್ನು ಎಳೆದು ಹೊರತೆಗೆದರು. ಕಳೆದ ವರ್ಷ ನಾರ್ವೆಯಲ್ಲೂ ದಡ ಸೇರಿ ಸತ್ತಿದ್ದ ತಿಮಿಂಗಿಲವೊಂದರ ಹೊಟ್ಟೆಯಲ್ಲಿ ಆಹಾರವಿರಲಿಲ್ಲ, ಬದಲಿಗೆ ಬರೀ ಪ್ಲಾಸ್ಟಿಕ್ ಚೀಲಗಳಿದ್ದವು. ಒಂದು ಚೀಲದ ಮೇಲೆ ಚಿಕನ್ ಪ್ಯಾಕ್ ಮಾಡಿದ್ದ ಕಂಪನಿಯ ಹೆಸರಿತ್ತು. ಚಿಕನ್ ಮನುಷ್ಯರಿಗೆ; ಖಾಲಿ ಪ್ಯಾಕೆಟ್ಟು ತಿಮಿಂಗಿಲಿಗೆ.

ನಾರ್ವೆಯಂಥ ಸುಧಾರಿತ ದೇಶಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮುದ್ರಕ್ಕೆ ಸುರಿಯುತ್ತಾರೆಯೆ? ಇರಲಿಕ್ಕಿಲ್ಲ. ಅಲ್ಲಿನ ಕಾನೂನುಗಳು ತುಂಬ ಬಿಗಿಯಾಗಿವೆ. ಜನರೂ ಸುಶಿಕ್ಷಿತರಿದ್ದಾರೆ. ಈ ನತದೃಷ್ಟ ತಿಮಿಂಗಿಲ ನಾರ್ವೆಗೆ ಬರುವ ಮುನ್ನ ಎಲ್ಲೆಲ್ಲಿ ಈಜಿತ್ತೊ ಯಾರಿಗೆ ಗೊತ್ತು? ಯಾವುದೋ ಚಕ್ರ
ಮಡುವಿನ ಒಳಹೊಕ್ಕು ಹೊರಬಂದಿತ್ತೇನೊ. ಪ್ರಪಂಚದ ಮಹಾಸಾಗರಗಳಲ್ಲಿ ಐದು ಪ್ರಮುಖ ಚಕ್ರಮಡುಗಳಿದ್ದು ಭೂಮಿಯ ಪರಿಭ್ರಮಣದಿಂದಾಗಿ ಅವೂ ಮೆಲ್ಲಗೆ ಸುತ್ತುತ್ತಿರುತ್ತವೆ. ಅವುಗಳಲ್ಲಿ ಕೋಟಿಗಟ್ಟಲೆ ಟನ್ ಪ್ಲಾಸ್ಟಿಕ್ ತಿಪ್ಪೆಗಳು ಸುತ್ತುತ್ತಿವೆ. ಯೂಟ್ಯೂಬ್‍ನಲ್ಲಿ ಜಾಯರ್ ಗಾರ್ಬೇಜ್ (gyre garbage) ಎಂಬ ಶೋಧ ಪದ ಕೊಟ್ಟರೆ ನರಕವಾಗಿರುವ ಚಕ್ರಮಡುಗಳ ಅದೆಷ್ಟೊ ವಿಡಿಯೊ ನೋಡಬಹುದು. ಅವುಗಳ ಪೈಕಿ ಶಾಂತಸಾಗರದ ತಿಪ್ಪೆಮಡುವನ್ನು ಸಾಕಷ್ಟು ವಿವರವಾಗಿ ಅಧ್ಯಯನ ಮಾಡಲಾಗಿದ್ದು, ಅದೊಂದರಲ್ಲೇ ಸುಮಾರು 80 ಸಾವಿರ ಟನ್ ಪ್ಲಾಸ್ಟಿಕ್ ತಿಪ್ಪೆ ಇದೆಯೆನ್ನಲಾಗಿದೆ. ತೂಕದ ಬದಲು ಸಂಖ್ಯೆಯಲ್ಲಿ ಹೇಳುವುದಾದರೆ 1.8 ಟ್ರಿಲಿಯನ್ (ಅಂದರೆ 180 ಸಾವಿರ ಕೋಟಿ) ತುಣುಕುಗಳು ಅಲ್ಲಿವೆಯೆಂದು ಅಂದಾಜು ಮಾಡಲಾಗಿದೆ. ಪಾಲಿಯೆಸ್ಟರ್ ಪ್ಲಾಸ್ಟಿಕ್ ಬಾಟಲಿಗಳು ತಳಕ್ಕೆ ಸೇರಿದರೆ ಅದರ ಮುಚ್ಚಳ, ಅದಕ್ಕೆ ಅಂಟಿಕೊಂಡಿದ್ದ ಬಿಗಿಯುಂಗುರ, ಮುರಿದ ಪೆನ್ನು, ಬಾಚಣಿಗೆ ತುಂಡು, ರೇಝರ್ ಹಿಡಿಕೆ, ವಿವಿಧ ಬಗೆಯ ಜಾಳಿಗೆ ತುಣುಕು ಮತ್ತಿತರ ಚೂರುಗಳು ತೇಲುತ್ತ ಜಲಚರಗಳ ಹೊಟ್ಟೆಗೆ ಹೋಗುತ್ತವೆ.

ಶಾಂತಸಾಗರದ ಮಧ್ಯೆ ಮಿಡ್‍ವೇ ಐಲ್ಯಾಂಡ್ ಎಂಬ ನಿರ್ಜನ ದ್ವೀಪವಿದೆ. ಅದು ಅಮೆರಿಕ ಮತ್ತು ಜಪಾನ್ ಎರಡೂ ದೇಶಗಳಿಂದ ಸುಮಾರು 2200 ಕಿಲೊಮೀಟರ್ ದೂರದಲ್ಲಿದೆ. ಅಲ್ಲಿ ವಾಸಿಸುವ ಅಲ್ಬಟ್ರಾಸ್ ಪಕ್ಷಿಗಳು ಗಣನೀಯ ಸಂಖ್ಯೆಯಲ್ಲಿ ಸಾಯುತ್ತಿವೆ ಎಂಬ ಸುದ್ದಿ ಕೇಳಿ ಛಾಯಾಗ್ರಾಹಕ ಕ್ರಿಸ್ ಜೋರ್ಡನ್ ಅಲ್ಲಿಗೆ ಹೋಗುತ್ತಾನೆ. ಮೀನು ಹಿಡಿಯಲೆಂದು ತಾಯಿ ಹಕ್ಕಿ ನೀರಿಗೆ ಧುಮುಕಿದಾಗ ಸಿಗುವ ಪ್ಲಾಸ್ಟಿಕ್ ತುಣುಕುಗಳನ್ನೇ ಮರಿ
ಗಳಿಗೂ ತಿನ್ನಿಸುತ್ತದೆ. ಸಂಕಟದಿಂದ ಅಸುನೀಗಿದ ಪಕ್ಷಿಗಳ ಹೊಟ್ಟೆ ಸೀಳಿದಾಗ ತರಾವರಿ ಪ್ಲಾಸ್ಟಿಕ್ ರದ್ದಿಗಳು ಸಿಕ್ಕಿದ್ದನ್ನು ದಾಖಲಿಸುತ್ತಾನೆ (ಆ ವಿಡಿಯೊವನ್ನು chrisjordan.com ನಲ್ಲಿ ನೋಡಬಹುದು).

ಅವು ಕಣ್ಣಿಗೆ ಕಾಣುವ ವಸ್ತುಗಳು. ಇನ್ನೂ ಚಿಕ್ಕದಾದ ಮೈಕ್ರೊಬೀಡ್ಸ್ ಎಂಬ ಅತಿಸೂಕ್ಷ್ಮ ಪ್ಲಾಸ್ಟಿಕ್ ಕಣಗಳತ್ತ ಈಗ ಸಾಗರವಿಜ್ಞಾನಿಗಳ ಗಮನ ಹರಿಯುತ್ತಿದೆ. ನಾವು ನಿತ್ಯ ಬಳಸುವ ಕೆಲವು ಬಗೆಯ ಟೂಥ್‍ಪೇಸ್ಟ್, ಸಾಬೂನು ಮತ್ತು ಬಹುತೇಕ ಸೌಂದರ್ಯ ಪ್ರಸಾಧನಗಳು ತುಸು ತರಿತರಿ ಇರಲೆಂದು ಮೈಕ್ರೊಬೀಡ್ಸ್ ಎಂಬ ಪ್ಲಾಸ್ಟಿಕ್ ಕಣಗಳನ್ನು ಸೇರಿಸಿರುತ್ತಾರೆ. ವಿಶೇಷವಾಗಿ ತ್ವಚೆಯನ್ನು ಬಿಳುಪು ಮಾಡುವ ಕ್ರೀಮ್‍ಗಳಲ್ಲಿ ಹಾಗೂ ಮೇಕಪ್ ಒರೆಸುವ ಪ್ಯಾಡ್‍ಗಳಲ್ಲಿ ಇವು ಜಾಸ್ತಿ ಪ್ರಮಾಣದಲ್ಲಿ ಇರುತ್ತವೆ. ನಮ್ಮಿಂದ ಹೊರಟು ಇವು ಚರಂಡಿಯ ಮೂಲಕ ಸಾಗುತ್ತವೆ. ನೀರಿನ ಶುದ್ಧೀಕರಣ ಯಂತ್ರಗಳಿಗೂ ಸಿಗದೆ, ಪಿಸಿಬಿ, ಡಿಡಿಟಿಯಂಥ ಇತರ ವಿಷ ಕಣಗಳನ್ನೂ ಹೀರಿಕೊಳ್ಳುತ್ತ ಹಳ್ಳಕೊಳ್ಳಗಳ ಮೂಲಕ ಸಮುದ್ರಕ್ಕೂ ಸೇರುತ್ತವೆ. ನೀರಿನಲ್ಲಿರುವ ಆಲ್ಗೆ ಮತ್ತು ಪಾಚಿಗಳನ್ನೊ ಸೂಕ್ಷ್ಮಜೀವಿಗಳನ್ನೊ ತಿಂದು ಬದುಕಬೇಕಾದ ಸಿಂಪಿ, ಸೀಗಡಿಯಂಥ ಪುಟ್ಟ ಜಲಚರಗಳು ಈ ಪ್ಲಾಸ್ಟಿಕ್ ಕಣಗಳನ್ನೇ ತಮ್ಮ ಶರೀರದಲ್ಲಿ ಸೇರಿಸಿಕೊಳ್ಳುತ್ತವೆ. ಪುಟ್ಟ ಜಲಚರಗಳನ್ನು ತಿಂದು ಬದುಕಬೇಕಾದ ಕಪ್ಪೆ, ಮೀನು, ಆಮೆ, ಏಡಿಗಳಲ್ಲಿ ಈ ಕಣಗಳು ಜಾಸ್ತಿ ಶೇಖರವಾಗು
ತ್ತವೆ. ಜಲಚರಗಳನ್ನು ಆಹಾರವಾಗಿ ಬಳಸುವವರ ದೇಹಕ್ಕೆ ಅವು ಪ್ರವೇಶಿಸುತ್ತವೆ. ಹಳ್ಳ, ಕೆರೆ, ಬಾವಿಗಳ ನೀರನ್ನು ಕುಡಿಯುವವರ ದೇಹಕ್ಕೂ ಈ ಕಿರುಮಣಿಗಳು ತೂರಿಕೊಳ್ಳುತ್ತವೆ. ಆಧುನಿಕ ವೈದ್ಯವಿಜ್ಞಾನ ದೇಹದೊಳಗಿನ ರೋಗಾಣುಗಳನ್ನು ಕೊಲ್ಲಲೆಂದು ಮೈಕ್ರೊಬಾಟ್‍ಗಳನ್ನು ರೂಪಿಸುತ್ತಿದೆ. ಇಲ್ಲಿ ರೋಗಕ್ಕೆ ಕಾರಣವಾಗುವ ಮೈಕ್ರೊಬೀಡ್‍ಗಳ ಹಾವಳಿ ಹೆಚ್ಚುತ್ತಿದೆ. ಈ ಸಂಗತಿಗಳೆಲ್ಲ ಗೊತ್ತಾದ ನಂತರ ಸೌಂದರ್ಯ ಪ್ರಸಾಧನಗಳಲ್ಲಿ ಮೈಕ್ರೊಬೀಡ್‍ಗಳನ್ನು ಸೇರಿಸಕೂಡದು ಎಂದು ಉತ್ತರದ ದೇಶಗಳು ನಿಷೇಧಿಸಿವೆ. ಕೆನಡಾ ಮತ್ತು ಫ್ರಾನ್ಸ್‌ಗಳು ಇದೀಗ ನಿಷೇಧ ಹಾಕುತ್ತಿವೆ. ಸ್ವೀಡನ್ ಮತ್ತು ಇಟಲಿ ದೇಶಗಳು ಇನ್ನೆರಡು ವರ್ಷಗಳಲ್ಲಿ ನಿಷೇಧ ಹಾಕುವುದಾಗಿ ಹೇಳಿವೆ.

ಅನುಕೂಲಸ್ಥ ದೇಶಗಳು ಅವನ್ನೆಲ್ಲ ಮಾಡುತ್ತವೆ. ತಮ್ಮ ದೇಶದ ಕೊಳಕು ಪ್ಲಾಸ್ಟಿಕ್ಕನ್ನೂ ಕೊಳಕು ತಂತ್ರಜ್ಞಾನವನ್ನೂ ಇನ್ನುಳಿದ ದೇಶಗಳಿಗೆ ಸಾಗಿಸಿ ತಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳುತ್ತವೆ. ಭಾರತಕ್ಕೆ ಅಮೆರಿಕ, ಬೆಲ್ಜಿಯಂ, ಇಂಗ್ಲಂಡ್, ನೆದರ್ಲೆಂಡ್ಸ್, ಪೋಲಂಡ್, ಸ್ಲೊವೇನಿಯಾ, ಕೆನಡಾ, ಸ್ಪೇನ್, ಪೋರ್ಚುಗಲ್ ಹೀಗೆ ಸುಮಾರು 50 ರಾಷ್ಟ್ರಗಳಿಂದ ಕಚಡಾ ಪ್ಲಾಸ್ಟಿಕ್ ಬರುತ್ತಿವೆ ಎಂದು ಕೇಂದ್ರ ವಾಣಿಜ್ಯ ಇಲಾಖೆ (ಡಿಜಿಸಿಐಎಸ್) ತನ್ನ 2017-18ರ ವರದಿಯಲ್ಲಿ ಹೇಳಿದೆ. ಇಲ್ಲಿ ಅಂಥ ಪ್ಲಾಸ್ಟಿಕ್‍ಗಳು ತಮ್ಮ ಕೊಳೆಯನ್ನೆಲ್ಲ ಗಾಳಿಗೆ, ನೀರಿಗೆ ತಳ್ಳಿ ಶುದ್ಧವಾಗಿ, ಕ್ಯಾಡ್ಮಿಯಂ ಮತ್ತು ಥಾಲೇಟ್‍ಗಳಂಥ ಕ್ರೂರ ಕೆಮಿಕಲ್‍ಗಳನ್ನು ಸೇರಿಸಿಕೊಂಡು ಮೆತ್ತಗಾಗಿ, ಕಳಪೆ ದರ್ಜೆಯ ‘ಹೊಸ’ ಪ್ಲಾಸ್ಟಿಕ್ ವಸ್ತುಗಳಾಗಿ ನಮ್ಮ ಮನೆಗಳಿಗೆ ಬರುತ್ತವೆ. ಕೆಲವನ್ನು ನಾವು ಬಳಸಿ ಚಿಂದಿ ಮಾಡಿ ಬಿಸಾಕುತ್ತೇವೆ, ರಾಶಿಹಾಕಿ ಬೆಂಕಿ ಕೊಡುತ್ತೇವೆ. ಅಂತೂ ಅದರಲ್ಲಿನ ಕೆಮಿಕಲ್‍ಗಳು ನಾನಾ ದಾರಿಗಳ ಮೂಲಕ ನಮ್ಮ ಶರೀರ ಪ್ರವೇಶಿಸಿ ಹಾರ್ಮೋನ್‍ಗಳ ಸಮತೋಲ ತಪ್ಪಿಸಿ, ಮಧುಮೇಹ, ಬೊಜ್ಜು, ಮುಟ್ಟಿನ ಏರುಪೇರು, ವೀರ್ಯ ದೌರ್ಬಲ್ಯ, ಹೃದ್ರೋಗ ಇತ್ಯಾದಿಗಳಿಗೂ ಕಾರಣವಾಗಬಹುದು. ಕೇಂದ್ರ ಪರಿಸರ ಸಚಿವ ಅನಿಲ್ ದವೆ ಕೊಟ್ಟ ವಿವರಗಳ ಪ್ರಕಾರ ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಕಚಡಾಗಳನ್ನು ಪರಿವರ್ತಿಸುವ 2004 ಅಧಿಕೃತ ಉತ್ಪಾದಕರಿದ್ದು, ಲೈಸೆನ್ಸ್ ಇಲ್ಲದ 853 ಘಟಕಗಳು ಕಾರ್ಯಾಚರಣೆ ಮಾಡುತ್ತಿವೆ. ಹನ್ನೆರಡು ರಾಜ್ಯಗಳು ಮಾಹಿತಿಯನ್ನೇ ಕೇಂದ್ರಕ್ಕೆ ಒದಗಿಸಿಲ್ಲವಂತೆ. ಅಂತೂ ವಿದೇಶದ ಪ್ಲಾಸ್ಟಿಕ್ ಜೊತೆ ನಮ್ಮ ದೇಶದ್ದನ್ನೂ ಕರಗಿಸಿ ಪ್ರತಿದಿನ ನಾವು ಸುಮಾರು 26 ಸಾವಿರ ಟನ್ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತ, ಬಳಸಿ ನಗರಗಳ ಒಳಹೊರಗೆ ಗುಡ್ಡೆ ಹಾಕುತ್ತ ಹಾಯಾಗಿದ್ದೇವೆ.

ಚೀನಾ ಕೂಡ ನಮ್ಮಂತೆ ಇತರ ದೇಶಗಳಿಂದ ಪ್ಲಾಸ್ಟಿಕ್ ಕಚಡಾಗಳನ್ನು ತಂದು ಪರಿವರ್ತನೆ ಮಾಡುತ್ತಿತ್ತು. ಕಳೆದ ಜನವರಿಯಲ್ಲಿ ಅಂಥ ಎಲ್ಲ ಘಟಕಗಳನ್ನೂ ಮುಚ್ಚಿಸಿ ಧನಿಕ ದೇಶಗಳಿಗೆ ಅದು ಶಾಕ್ ಕೊಟ್ಟಿದೆ. ಇದರಿಂದಾಗಿ ಕೆನಡಾ, ಜರ್ಮನಿ, ಇಂಗ್ಲೆಂಡ್, ಐರ್ಲೆಂಡ್ ಮುಂತಾದ ದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಬೆಳೆಯುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು. ಚೀನಾಕ್ಕೆ ಹೋಗಬೇಕಿದ್ದ ತ್ಯಾಜ್ಯ ಪೆಟ್ಟಿಗೆಗಳು ಅಮೆರಿಕ, ಹಾಂಗ್‍ಕಾಂಗ್, ವಿಯೆಟ್ನಾಂ ಬಂದರುಗಳಲ್ಲಿ ದಿಕ್ಕೆಟ್ಟು ಕೂತಿದ್ದವು. ‘ನಾವದನ್ನು ಭಾರತಕ್ಕೊ, ಮಲೇಶ್ಯ, ಇಂಡೋನೇಶ್ಯ, ವಿಯೆಟ್ನಾಮಿಗೊ ಕಳಿಸಿದರೂ ಮಿಗುವಷ್ಟು ಪ್ಲಾಸ್ಟಿಕ್ ನಮ್ಮಲ್ಲಿದೆ’ ಎಂದು ಅಮೆರಿಕದ ಒರೆಗನ್ ಪ್ರಾಂತದ ರಫ್ತು ಉದ್ಯಮಿ ಸ್ಟೀವ್ ಫ್ರಾಂಕ್ ಹೇಳಿದ್ದನ್ನೂ ನ್ಯೂಯಾರ್ಕ್ ಟೈಮ್ಸ್ ದಾಖಲಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅತ್ತಿಂದಿತ್ತ, ಇತ್ತಿಂದತ್ತ ತಳ್ಳಬಹುದು; ಸುಟ್ಟು ಗಾಳಿಗೆ ತೂರಬಹುದು. ಕೆಲಮಟ್ಟಿಗೆ ಡಾಂಬರಿನೊಂದಿಗೆ ಸೇರಿಸಿ ರಸ್ತೆಯ ತಳದಲ್ಲಿ ದಫನ ಮಾಡಬಹುದು. ಆದರೆ ದಮನ ಮಾಡುವ ಉಪಾಯ ಮಾತ್ರ ಹೊಳೆಯುತ್ತಿಲ್ಲ. ನದಿಕೆರೆಗಳಿಗೆ ಸೇರುವ ಪ್ಲಾಸ್ಟಿಕ್ ಕಚಡಾಗಳನ್ನು ವೈಶಂಪಾಯನ ಸರೋವರಕ್ಕೆ ನುಗ್ಗಿದ ದುರ್ಯೋಧನನಿಗೆ ತುಸು ಮುಂಚೆ ಹೋಲಿಸಿದೆಯಷ್ಟೆ? ಆ ದುರುಳನನ್ನು ತುಳಿಯಬಲ್ಲ ಭೀಮಶಕ್ತಿ ಮಾತ್ರ ಎಲ್ಲಿದೆಯೊ? ನೀರಲ್ಲಿ ಮುಳುಗಿ ಕೂತ ಕೌರವನನ್ನು ಹೊರಕ್ಕೆಳೆಯಲೆಂದು ಪಾಂಡವರು ಆತನನ್ನು ಹಂಗಿಸುತ್ತ, ಛೇಡಿಸುತ್ತ, ಛೀಮಾರಿ ಹಾಕುತ್ತಾರೆ. ನಾವೂ ಇದುವರೆಗೆ ಪ್ಲಾಸ್ಟಿಕ್ ರಕ್ಕಸನ ದುರ್ಗುಣಗಳನ್ನು ಆಡಿಕೊಳ್ಳುತ್ತ ಅದರ ಹುಟ್ಟಡಗಿಸುವ ಮಾತಾಡುತ್ತಿದ್ದೇವೆ ಅಷ್ಟೆ. ಹುಟ್ಟಡಗಿಸುವ ತಾಕತ್ತು ಯಾರಿಗಿದೆ?

 

Tags: 

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !