ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರ್‌ ಹೇಳಿಕೆ ಸರಿಯಲ್ಲ

Last Updated 13 ಜೂನ್ 2018, 20:14 IST
ಅಕ್ಷರ ಗಾತ್ರ

ಜಗದೀಶ ಶೆಟ್ಟರ್ ಅವರು ಅನುಭವಿ ರಾಜಕಾರಣಿ. ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಗಾಂಭೀರ್ಯವನ್ನು ಉಳಿಸಿಕೊಂಡು ಬಂದಿರುವಂಥವರು. ಕರ್ನಾಟಕ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಜಿ.ಟಿ .ದೇವೇಗೌಡರು ಉನ್ನತ ಶಿಕ್ಷಣದ ಸಚಿವರಾಗಿದ್ದಕ್ಕೆ ‘ದೇವೇಗೌಡರು ಕೇವಲ ಎಂಟನೇ ತರಗತಿ ಓದಿರುವುದು. ಇಂತಹವರು ಉನ್ನತ ಶಿಕ್ಷಣದ ಸಚಿವರಾಗಲು ಯಾವ ಅರ್ಹತೆ ಇದೆ, ಅಂತಹವರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಡಬಲ್ ಡಿಗ್ರಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಏನು ತಾನೇ ಮಾತನಾಡುತ್ತಾರೆ’ ಎಂದು ಇತ್ತೀಚೆಗೆ ಅವರು ಪ್ರಶ್ನಿಸಿರುವುದನ್ನು ಪತ್ರಿಕೆಗಳಲ್ಲಿ ಓದಿ ಗಾಬರಿಯಾಯಿತು.

ವಿಶ್ವವಿದ್ಯಾಲಯಗಳಲ್ಲಿ ಡಬಲ್ ಡಿಗ್ರಿ ಪಡೆದವರೆಲ್ಲ ಪ್ರಜ್ಞಾವಂತರೇನೂ ಆಗಿರುವುದಿಲ್ಲ. ನೂರಾರು ವರ್ಷಗಳಿಂದ ಈ ಸಮಾಜದ ಬಹುದೊಡ್ಡ ಚಿಂತಕರೆಲ್ಲ ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಆದರೆ ಅವರ ಧ್ಯಾನದ ಕೊಡುಗೆ ಇಂದಿಗೂ ಹರಿದು ಬರುತ್ತಿದೆ.

ಸ್ವಾತಂತ್ರ್ಯದ ನಂತರ ಈ ರಾಷ್ಟ್ರದಲ್ಲಿ ಕಾಮರಾಜ್ ನಾಡಾರ್ ಅವರಂತಹ ನೂರಾರು ನಾಯಕರು ನಮಗೆ ಸಿಗುತ್ತಾರೆ. ಕಾಮರಾಜ್ ಅವರು ನಾನಾ ಘಟಿಕೋತ್ಸವಗಳಲ್ಲಿ ಭಾಷಣ ಮಾಡಿದ್ದಾರೆ. ಎಲ್ಲರೂ ಗಂಭೀರವಾಗಿ ಕೇಳುವಂತಹ, ಚಿಂತಿಸುವಂತಹ ವಿಷಯವನ್ನು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ನೆಹರೂ ಅವರಂತಹ ಮೇಧಾವಿ ಪ್ರಧಾನ ಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಕಾಮರಾಜ್ ನಿರ್ವಹಿಸಿದ ಪಾತ್ರ ಮಹತ್ವಪೂರ್ಣವಾದದ್ದು.

ಇಂದು ಈ ಸಮಾಜದಲ್ಲಿ ವಿಶ್ವವಿದ್ಯಾಲಯಗಳ ಪದವಿಗಳನ್ನು ಸಮಾಜದ ಚಲನಶೀಲತೆಗೆ ಮಾನದಂಡಗಳು ಎಂದು ಯಾರೂ ತಿಳಿದಿಲ್ಲ. ಆದ್ದರಿಂದ ಶೆಟ್ಟರ್ ಅಂತಹವರು ರಾಜಕೀಯ ಉತ್ಸಾಹದಲ್ಲಿ ಜಿ.ಟಿ. ದೇವೇಗೌಡರಂಥವರನ್ನು ಅವಮಾನಿಸುವ ರೀತಿಯಲ್ಲಿ ಮಾತಾಡುವುದು ಸರಿಯಾದದ್ದಲ್ಲ. ಕೊನೆಗೂ ಈ ಸಮಾಜವೇ ಬಹುದೊಡ್ಡ ವಿಶ್ವವಿದ್ಯಾಲಯ. ಅಲ್ಲವೇ?

–ಶೂದ್ರ ಶ್ರೀನಿವಾಸ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT