ಪಂಚುಗಳ ಮಿಂಚು ‘ಕಾಮಿಡಿ ಜಂಕ್ಷನ್’

7

ಪಂಚುಗಳ ಮಿಂಚು ‘ಕಾಮಿಡಿ ಜಂಕ್ಷನ್’

Published:
Updated:

‘ಕಾಮಿಡಿ ರಿಯಾಲಿಟಿ ಶೋಗಳನ್ನು ಜನ ಮುಗಿಬಿದ್ದು ನೋಡುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಟ್ರೆಂಡ್‌. ಹಾಸ್ಯವು ಎಲ್ಲ ವರ್ಗಗಳ, ಎಲ್ಲ ವಯೋಮಾನಗಳ ವೀಕ್ಷಕರಿಗೂ ಖುಷಿ ಕೊಡುತ್ತದೆ. ರಿಯಾಲಿಟಿ ಶೋಗಳ ಪೈಕಿ ಮೊದಲ ಸ್ಥಾನ ಕಾಮಿಡಿ ಕಾರ್ಯಕ್ರಮಗಳಿಗೆ.’ ಇದು ಉದಯ ಕಾಮಿಡಿ ವಾಹಿನಿ ಕಂಡುಕೊಂಡಿರುವ ವಿಚಾರ. ಹಾಗಾಗಿ, ಈ ವಾಹಿನಿ ಈಗ ಮತ್ತೊಂದು ಹಾಸ್ಯ ಕಾರ್ಯಕ್ರಮವನ್ನು ವೀಕ್ಷಕರಿಗೆ ನೀಡಲು ಮುಂದಾಗಿದೆ. ಆ ಕಾರ್ಯಕ್ರಮಕ್ಕೆ ವಾಹಿನಿ ‘ಕಾಮಿಡಿ ಜಂಕ್ಷನ್’ ಎಂದು ಹೆಸರಿಟ್ಟಿದೆ.

ನಗೆ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಅವರು ಈ ಕಾರ್ಯಕ್ರಮಕ್ಕೆ ಬರವಣಿಗೆಯನ್ನು ಸಿದ್ಧಪಡಿಸಿಕೊಡುವ ಹೊಣೆ ಹೊತ್ತಿದ್ದಾರೆ. ಜೊತೆಗೆ ಸ್ಟ್ಯಾಂಡಪ್ ಕಾಮಿಡಿಯನ್ನು ನೀಡಿ, ವೀಕ್ಷಕರನ್ನು ರಂಜಿಸುವ ಜವಾಬ್ದಾರಿಯನ್ನೂ ಅವರು ವಹಿಸಿಕೊಂಡಿದ್ದಾರೆ.

ವೈವಿಧ್ಯಮಯ ಹಾಸ್ಯ ಇರುವ ಅರ್ಧ ಗಂಟೆಯ ಈ ಕಾರ್ಯಕ್ರಮವು ‘ಪಂಚುಗಳ ಮಿಂಚು’ ಎಂದು ವಾಹಿನಿ ಹೇಳಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ, ಹಾಡು, ಆಟಗಳು, ಪ್ರಹಸನ ಕೂಡ ಇರಲಿವೆಯಂತೆ.

ಈ ಕಾರ್ಯಕ್ರಮದಲ್ಲಿ ಒಂದು ವಿಶೇಷ ಇದೆ. ಅದನ್ನು ಇಲ್ಲಿ ಉಲ್ಲೇಖಿಸಲೇಬೇಕು. ‘ನಮಸ್ಕಾರ ಕಣಣ್ಣೋ’ ಎನ್ನುವ ಮೂಲಕ ಕನ್ನಡ ಸಿನಿಮಾ ಲೋಕದಲ್ಲೇ ತಮ್ಮದೇ ಆದ ಸ್ಥಾನ ಸೃಷ್ಟಿಸಿಕೊಂಡ ಹಾಸ್ಯನಟ ಟೆನ್ನಿಸ್ ಕೃಷ್ಣ ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು ಎಂದು ವಾಹಿನಿ ಹೇಳಿದೆ. ಮನೆಯ ಯಜಮಾನ ‘ವಿಶ್ವ’ನ ಪಾತ್ರಕ್ಕೆ ಟೆನ್ನಿಸ್ ಕೃಷ್ಣ ಜೀವ ತುಂಬಿದ್ದಾರಂತೆ.

ವಿಶ್ವನಿಗೆ ಈ ಕಾರ್ಯಕ್ರಮದಲ್ಲಿ ವಿಶಾಲೂ ಪತ್ನಿಯಾಗಿರುತ್ತಾಳೆ. ಈ ದಂ‍ಪತಿ ತಾವು ಕಂಡ ಕನಸುಗಳನ್ನು ತಮ್ಮ ಮಗಳ ಮೂಲಕ ಸಾಕಾರ ಮಾಡಿಕೊಳ್ಳುವ ಉದ್ದೇಶದಿಂದ ಸಿನಿಮಾ ಅಥವಾ ಕ್ರೀಡಾ ಕ್ಷೇತ್ರದವರನ್ನು ತಮ್ಮ ಅಳಿಯನನ್ನಾಗಿ ತಂದುಕೊಳ್ಳುವ ಯತ್ನದಲ್ಲಿ ಇರುತ್ತಾರಂತೆ.

ಚಿತ್ರನಟ ಹಾಗೂ ಹಾಸ್ಯಪಟು ಮಿಮಿಕ್ರಿ ಗೋಪಿ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೊಸ ಬಗೆಯ ವ್ಯಾಖ್ಯಾನ ನೀಡಲಿದ್ದಾರಂತೆ. ‘ಉದಯ ಕಾಮಿಡಿ’ ವಾಹಿನಿಯ ಹಾಸ್ಯ ಕಲಾವಿದರಾದ ಕೆಂಪೇಗೌಡ, ಶ್ರೀಕಂಠ, ಸ್ಮೈಲ್ ಶಶಿ, ಹರೀಶ್ ಮತ್ತು ಕೃಷ್ಣ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನಾವು ವೀಕ್ಷಕರಿಗೆ ನೀಡಿರುವ ಅನೇಕ ಹೊಸ ಹಾಸ್ಯ ಕಾರ್ಯಕ್ರಮಗಳ ಪೈಕಿ ಈ ಕಾರ್ಯಕ್ರಮವು ಭಿನ್ನವಾಗಿರುತ್ತದೆ. ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತದೆ’ ಎಂದು ವಾಹಿನಿಯ ಮುಖ್ಯಸ್ಥ ಭುವನ್‍ ಶಾಸ್ತ್ರಿ ಹೇಳಿದ್ದಾರೆ. ಅಂದಹಾಗೆ, ‘ಕಾಮಿಡಿ ಜಂಕ್ಷನ್’ ಕಾರ್ಯಕ್ರಮವು ಜೂನ್ 16ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 8.30ಕ್ಕೆ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry