ಬಾಲಿವುಡ್‌ಗೆ ಜೆಕೆ ಸವಾರಿ

7

ಬಾಲಿವುಡ್‌ಗೆ ಜೆಕೆ ಸವಾರಿ

Published:
Updated:
ಬಾಲಿವುಡ್‌ಗೆ ಜೆಕೆ ಸವಾರಿ

‘ಜೀ ವನದಲ್ಲಿ ತಾಳ್ಮೆ ಇದ್ದಿದ್ದರಿಂದಲೇ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಾಯಿತು’ –‌ಹೀಗೆಂದು ಸ್ಪಷ್ಟವಾಗಿ ಹೇಳಿದರು ನಟ ಜಯರಾಂ ಕಾರ್ತಿಕ್‌. ಒಂದು ದಶಕದ ಅವಧಿಯ ವೃತ್ತಿಬದುಕನ್ನು ಹಿಂತಿರುಗಿ ನೋಡಿದರೆ ನಿಮಗೆ ಏನನಿಸುತ್ತದೆ? ಎನ್ನುವ ಪ್ರಶ್ನೆಗೆ ಅವರು ಉತ್ತರವಾಗಿದ್ದು ಹೀಗೆ. ಸಣ್ಣಪುಟ್ಟ ಪಾತ್ರಗಳ ಮೂಲಕ ಕಿರುತೆರೆ, ಬೆಳ್ಳಿತೆರೆಯಲ್ಲಿ ಛಾಪು ಮೂಡಿಸಿದ ಹಿರಿಮೆ ಅವರದು. ಈಗ ‘ಆ ಕರಾಳ ರಾತ್ರಿ’ ಚಿತ್ರದ ಮೂಲಕ ಚಂದನವನದಲ್ಲಿ ಉತ್ತಮ ನಟನಾಗಿ ಹೊಸ ಮೆಟ್ಟಿಲು ಏರುವ ಉತ್ಸಾಹದಲ್ಲಿದ್ದಾರೆ. ಜೊತೆಗೆ, ‘ಪುಷ್ಪ ಐ ಹೇಟ್‌ ಟಿಯರ್ಸ್‌’ ಚಿತ್ರದ ಮೂಲಕ ಬಾಲಿವುಡ್‌ಗೂ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದು, ಅಲ್ಲಿಯೂ ಭವಿಷ್ಯದ ಹುಡುಕಾಟದಲ್ಲಿದ್ದಾರೆ.

‘ಪುಷ್ಪ ಐ ಹೇಟ್‌ ಟಿಯರ್ಸ್‌’– ಎಪ್ಪತ್ತರ ದಶಕದಲ್ಲಿ ತೆರೆಕಂಡ ಸೂಪರ್‌ ಹಿಟ್‌ ಆದ ‘ಅಮರ್‌ ಪ್ರೇಮ’ ಹಿಂದಿ ಚಿತ್ರದ ಡೈಲಾಗ್. ನಾಯಕಿ ಶರ್ಮಿಳಾ ಟ್ಯಾಗೋರ್‌ಗೆ ಈ ಡೈಲಾಗ್‌ ಹೇಳುವ ಮೂಲಕ ಖ್ಯಾತರಾಗಿದ್ದು ನಟ ರಾಜೇಶ್‌ ಖನ್ನಾ. ಈ ಪ್ರಸಿದ್ಧ ಡೈಲಾಗ್‌ ಅನ್ನು ತಮ್ಮ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿದ್ದಾರೆ ನಿರ್ದೇಶಕ ದಿನಕರ್ ಕಪೂರ್‌. ಈ ಸಿನಿಮಾದ ಮುಖ್ಯಭೂಮಿಕೆಯ ಪಾತ್ರದಲ್ಲಿ ಹಾಸ್ಯನಟ ಕೃಷ್ಣ ಅಭಿಷೇಕ್‌ ಅವರೊಂದಿಗೆ ಜೆ.ಕೆ ತೆರೆಹಂಚಿಕೊಂಡಿದ್ದಾರೆ. ಅಳುವ ಮೀನಿನ ಕಣ್ಣೀರು ಯಾರಿಗೂ ಕಾಣದು ಎಂಬ ಮಾತಿದೆ. ಅಂತೆಯೇ ಕಣ್ಣೀರು ಕಂಡರೆ ದ್ವೇಷ ಏಕೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ ನಿರ್ದೇಶಕರು.  

‘ಮುಂಬೈನಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮುಂದಿನ ತಿಂಗಳು ಅಸ್ಸಾಂ, ಡಾರ್ಜಿಲಿಂಗ್‌ನಲ್ಲಿ ಎರಡನೇ ಹಂತದ ಶೂಟಿಂಗ್‌ ಆರಂಭವಾಗಲಿದೆ. ಚಿತ್ರದಲ್ಲಿ ನಾನು ಉದ್ಯಮಿ. ಸಾಂಸಾರಿಕ ಬಿಕ್ಕಟ್ಟು ಎದುರಾದಾಗ ಹೇಗೆ ನಿಭಾಯಿಸುತ್ತೇನೆ ಎನ್ನುವುದೇ ನನ್ನ ಪಾತ್ರ. ದಕ್ಷಿಣ ಭಾರತದ ಕಲಾವಿದರು ಬಾಲಿವುಡ್‌ನ ಭಾಷೆ, ರಿವಾಜುಗಳಿಗೆ ಹೊಂದಿಕೊಳ್ಳುವುದು ತುಸು ಕಷ್ಟಕರ. ಮೊದಲಿಗೆ ನಾನು ಹೆಣಗಾಡಿದ್ದು ಇದೆ. ಕೃಷ್ಣ ಅಭಿಷೇಕ್‌ ಅವರಂತಹ ನಟನೊಂದಿಗೆ ನಟಿಸುವುದು ಸುಲಭವಲ್ಲ’ ಎನ್ನುವುದು ಅವರ ಅನುಭವದ ಮಾತು.

ಜೆ.ಕೆ ಅವರಿಗೆ ಹಿಂದಿಯಲ್ಲಿ ನಟನೆ ಹೊಸದೇನಲ್ಲ. ಮೂರು ವರ್ಷದ ಹಿಂದೆ ಸ್ಟಾರ್‌ಪ್ಲಸ್‌ನಲ್ಲಿ ‘ಸಿಯಾ ಕೆ ರಾಮ್‌’ ಧಾರಾವಾಹಿ ಪ್ರಸಾರ ಕಂಡಿತ್ತು. ಇದರಲ್ಲಿ ರಾವಣನ ಪಾತ್ರದ ಮೂಲಕ ಅವರು ಮಿಂಚಿದ್ದರು. ಇದು ಅವರ ಬಾಲಿವುಡ್‌ನಲ್ಲಿ ನಟನಾಪಯಣಕ್ಕೆ ಹೊಸಶಕ್ತಿ ನೀಡಿದೆ ಎಂದರೆ ಅತಿಶಯೋಕ್ತಿಯಲ್ಲ.

ದಯಾಳ್‌ ಪದ್ಮನಾಭನ್‌ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರದಲ್ಲಿ ಜಯರಾಂ ಕಾರ್ತಿಕ್‌ ಅವರೇ ನಾಯಕ ನಟ. ಈ ಸಿನಿಮಾವೂ ಬಿಡುಗಡೆಗೆ ಸಿದ್ಧವಾಗಿದೆ. ಎಂಬತ್ತರ ದಶಕದಲ್ಲಿ ನಡೆಯುವ ಕಥೆ ಇದು. ‘ಇದೊಂದು ಹಳ್ಳಿಯ ಕಥನ. ಇಲ್ಲಿಯವರೆಗೂ ಇಂತಹ ಪಾತ್ರ ಮಾಡಿರಲಿಲ್ಲ. ನಟನೆ ಕೂಡ ಸವಾಲಾಗಿತ್ತು. ಪಾತ್ರ ಮುಗಿದ ಮೇಲೆ ಅದರಿಂದ ಹೊರಬರುವುದು ಕಷ್ಟವಾಗಿತ್ತು. ಒಳ್ಳೆಯ ಕಲಾವಿದರೊಟ್ಟಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಅವರು.

‘ಮೂಡಿಗೆರೆಯ ಮನೆಯೊಂದರಲ್ಲಿ ಹಗಲು–ರಾತ್ರಿ ಶೂಟಿಂಗ್‌ ನಡೆಯಿತು. ಚಿತ್ರದಲ್ಲಿ ನಾನು ಊರಿಂದ ಊರಿಗೆ ಅಲೆಯುವ ಅಲೆಮಾರಿ. ಕವನ ಬರೆದುಕೊಂಡು ಓಡಾಡುತ್ತಿರುತ್ತೇನೆ. ಒಮ್ಮೆ ಒಂದು ಮನೆಗೆ ಹೋಗುತ್ತೇನೆ. ಅಲ್ಲಿ ರಾತ್ರಿ ನಡೆಯುವ ಘಟನೆ ಸುತ್ತ ಕಥೆ ಹೊಸೆಯಲಾಗಿದೆ. ಆ ಕಾಲದ ವ್ಯಕ್ತಿಯಂತೆ ಕಾಣಬೇಕಿತ್ತು. ಅದಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡೆ. ಹೇರ್‌ಸ್ಟೈಲ್‌ ಕೂಡ ಬದಲಾಯಿತು. ದಯಾಳ್‌ ಸರ್‌ ಸಾಕಷ್ಟು ಹೋಂವರ್ಕ್ಸ್‌ ನೀಡಿದ್ದು ನಟನೆಗೆ ಸಹಕಾರಿಯಾಯ್ತು. ಅವರಿಂದ ಸಾಕಷ್ಟು ಕಲಿತೆ’ ಎಂದು ವಿವರಿಸುತ್ತಾರೆ.

ದಯಾಳ್‌ ನಿರ್ದೇಶನದ ‘ಪುಟ 109’ ಚಿತ್ರದ ಪುಟಗಳನ್ನೂ ಜೆ.ಕೆ ತೆರೆದಿದ್ದಾರೆ. ಇದರಲ್ಲಿಯೂ ಅವರೇ ನಾಯಕ ನಟ. ಈಗಾಗಲೇ, ಇದರ ಚಿತ್ರೀಕರಣ ಮುಗಿದಿದ್ದು ಮಾತಿನ ಮರುಲೇಪನ ನಡೆಯುತ್ತಿದೆ. ‘ಕ್ರೈಮ್‌ ಥ್ರಿಲ್ಲರ್‌ ಚಿತ್ರ ಇದು. ಇದರಲ್ಲಿ ನಟ ನವೀನ್‌ ಕೃಷ್ಣ ಬರಹಗಾರ. ನನ್ನದು ತನಿಖಾಧಿಕಾರಿಯ ಪಾತ್ರ. ಸಿನಿಮಾಟೋಗ್ರಫಿ ಮತ್ತು ಚಿತ್ರಕಥೆಯೇ ಇದರ ಜೀವಾಳ’ ಎನ್ನುತ್ತಾರೆ ಅವರು.

ಕನ್ನಡ ಕಿರುತೆರೆಯಲ್ಲಿ ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟ ಧಾರಾವಾಹಿ ‘ಅಶ್ವಿನಿ ನಕ್ಷತ್ರ’. ಇದರಲ್ಲಿ ‘ಹೆಣ್ತಿ ಹೆಣ್ತಿ...’ ಎಂದು ಡೈಲಾಗ್‌ ಹೇಳಿ ಮನೆಮಾತಾದರು. ‘ಕೆಂಪೇಗೌಡ’, ‘ವಿಷ್ಣುವರ್ಧನ’, ‘ವರದನಾಯಕ’, ‘ವಿಸ್ಮಯ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ ಅವರು, ಬಿಗ್‌ಬಾಸ್‌ ಮನೆಗೂ ಕಾಲಿಟ್ಟರು.

ಅವರು ನಟಿಸಿರುವ ‘ಮೇ ಫಸ್ಟ್‌’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ‘ವಾರೆಂಟ್‌’ ಸಿನಿಮಾದ ಚಿತ್ರೀಕರಣದಲ್ಲಿಯೂ ಅವರು ಬ್ಯುಸಿ. ‘ವೃತ್ತಿಜೀವನವನ್ನು ಹಿಂತಿರುಗಿ ನೋಡಿದಾಗ ಬೆರಗಾಗುತ್ತದೆ. ಬದುಕು ಸಾಕಷ್ಟು ಪಾಠ ಕಲಿಸಿದೆ. ಚಿತ್ರರಂಗದಲ್ಲಿ ಸಾಕಷ್ಟು ಕಷ್ಟ ಎದುರಾದರೂ ಎದೆಗುಂದಲಿಲ್ಲ. ಕಷ್ಟಪಟ್ಟಿದ್ದಕ್ಕೂ ಪ್ರತಿಫಲ ಸಿಗುತ್ತಿರುವ ಖುಷಿಯಿದೆ’ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry