ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ: ಶಿಫಾರಸು ವಾಪಸ್‌ ಬಂದಿಲ್ಲ- ಸಿದ್ಧರಾಮ ಸ್ವಾಮೀಜಿ

‘ಸುಳ್ಳು ಸುದ್ದಿ ನಂಬಿ ಪಂಚ ಪೀಠಾಧೀಶರ ಸಂಭ್ರಮ’
Last Updated 15 ಜೂನ್ 2018, 7:16 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿರುವ ಶಿಫಾರಸು ವಾಪಸ್‌ ಬಂದಿಲ್ಲ’ ಎಂದು ಇಲ್ಲಿನ ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳ ವತಿಯಿಂದ ಇಲ್ಲಿನ ಮಹಾಂತ ಭವನದಲ್ಲಿ ಬುಧವಾರ ನಡೆದ ಸಮಾಜದ ಸಭೆಯಲ್ಲಿ ಶ್ರೀಗಳು ಮಾಡಿದ ಭಾಷಣ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

‘ಲಿಂಗಾಯತ ಧರ್ಮ ಇಂದು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಕಷ್ಟದ ದಿನಗಳನ್ನು ಕಳೆಯುತ್ತಿದೆ. ಸ್ವತಂತ್ರ ಧರ್ಮದ ಮಾನ್ಯತೆ ಪಡೆದುಕೊಳ್ಳಬೇಕು ಎಂದು ತೀವ್ರ ಹೋರಾಟ ನಡೆಸಿದ್ದೇವೆ. ನಮ್ಮ ದನಿಯನ್ನು ಸರ್ಕಾರಕ್ಕೆ ಮುಟ್ಟಿಸಿದ್ದೇವೆ. ಅದರ ಪರಿಣಾಮವಾಗಿ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ನೇಮಿಸಿ ವರದಿ ತರಿಸಿಕೊಂಡಿತ್ತು. ಅದನ್ನು ಯಥಾವತ್ತಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದೆ. ಆದರೆ, ಒಂದೇ ಒಂದು ದಿನಪತ್ರಿಕೆಯಲ್ಲಿ, ರಾಜ್ಯ ಸಲ್ಲಿಸಿದ್ದ ವರದಿ ವಾಪಸ್‌ ಬಂದಿದೆ ಎಂದು ಬರೆಯಲಾಗಿದೆ. ಇದನ್ನು ಬಹಳ ಮಂದಿ ನಂಬಿಕೊಂಡಿದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿ ಕೇಳಿದಾಗ, ಆ ಕಡತ ವಾಪಸ್‌ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಲ್ಪಸಂಖ್ಯಾತರ ಇಲಾಖೆಯ ಆಯುಕ್ತರೂ ಇದನ್ನು ಖಚಿತಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಅವರಿಗೆ ಸಮಾಜದ ಹಿತ ಬೇಕಾಗಿಲ್ಲ
‘ಈ ಸುಳ್ಳು ಸುದ್ದಿ ನಂಬಿಕೊಂಡು ಲಿಂಗಾಯತ ಚಳವಳಿಯ ವಿರೋಧಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ. ವಿಶೇಷವಾಗಿ ಪಂಚ ಪೀಠಾಧೀಶರು ತಮ್ಮ ಸಂಭ್ರಮವನ್ನು ಹೊರ ಹಾಕಿದ್ದಾರೆ. ಒಂದು ಸುಳ್ಳು ಸುದ್ದಿ ನಂಬಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು. ಪಂಚ ಪೀಠಾಧೀಶರಿಗೆ ಸಮಸ್ತ ಸಮುದಾಯದ ಹಿತ ಬೇಕಾಗಿಲ್ಲ. ನಮ್ಮ ಧರ್ಮಕ್ಕೆ ವಿಶೇಷವಾದ ಘನತೆ, ಗೌರವ ಹಾಗೂ ಮಾನ್ಯತೆ ಅವರಿಗೆ ಬೇಕಾಗಿಲ್ಲ’ ಎಂದು ಟೀಕಿಸಿದ್ದಾರೆ.

‘ಈಗ ನಾವು (ಲಿಂಗಾಯತರು) ಬಹಳ ಎಚ್ಚರವಾಗಿರಬೇಕು. ಮೈಮರೆತರೆ ಏನೂ ಉಪಯೋಗವಿಲ್ಲ. ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಲೇಬೇಕು. ನಮ್ಮ ದನಿಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕು. ಎಚ್ಚರ ತಪ್ಪಿದರೆ, ಈವರೆಗೂ ನಡೆಸಿದ ಹೋರಾಟ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ನಿರರ್ಥಕವಾಗುತ್ತದೆ. ನಿದ್ರಿಸುವ ಸಂದರ್ಭವಿದಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ಮುಂದುವರಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT