ಗೌರಿ ಹತ್ಯೆ: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

7

ಗೌರಿ ಹತ್ಯೆ: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

Published:
Updated:
ಗೌರಿ ಹತ್ಯೆ: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ನಾಲ್ವರು ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಗಳಾದ ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್ ದೇಗ್ವೇಕರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಹಾಗೂ ವಿಜಯಪುರದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್‌ನನ್ನು ವಿಚಾರಣೆಗಾಗಿ ಎಸ್ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದರು. ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಆರೋಪಿಗಳನ್ನು ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಎಸಿಎಂಎಂ ನ್ಯಾಯಾಲಯ (3ನೇ ಎಸಿಎಂಎಂ ನ್ಯಾಯಾಧೀಶರು ರಜೆಯಲ್ಲಿದ್ದಾರೆ), ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಆರೋಪಿಗಳ ಪರ ವಾದಿಸಿದ ವಕೀಲ ಎನ್.ಪಿ‌.ಅಮೃತೇಶ್, ‘ಎಸ್‌ಐಟಿಯವರು ಆರೋಪಿಗಳನ್ನು ಅಮಾನುಷವಾಗಿ ನಡೆಸಿಕೊಂಡು, ಮನಬಂದಂತೆ ಥಳಿಸಿದ್ದಾರೆ. ಆರೋಪಿ ಅಮಿತ್‌ ಕಣ್ಣಿಗೆ ಗಾಯವಾಗಿದೆ’ ಎಂದರು.

‘ಬಂಧಿತರಲ್ಲಿ ಇಬ್ಬರು ಮಹಾರಾಷ್ಟ್ರದವರಾಗಿದ್ದು, ಅವರಿಗೆ ಕನ್ನಡ ಬರುವುದಿಲ್ಲ. ಅವರನ್ನು ದೈಹಿಕವಾಗಿ ಹಿಂಸಿಸಲಾಗಿದೆ. ತಮ್ಮಿಷ್ಟದಂತೆ ತನಿಖಾಧಿಕಾರಿಯು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಎಸ್ಐ‌ಟಿ ಪೊಲೀಸರ ವರ್ತನೆ ಕಾನೂನು ಬಾಹಿರ. ಆರೋಪಿಗಳ ಮೈ ಮೇಲಿನ ಗಾಯಗಳನ್ನು ನೀವೇ ಪರಿಶೀಲಿಸಬೇಕು’ ಎಂದು ನ್ಯಾಯಾಧೀಶರನ್ನು ಕೋರಿದರು.

‘ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಅದರ ವರದಿ ಆಧರಿಸಿ, ಎಸ್‌ಐಟಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ವಾದಿಸಿದರು.

ಅದನ್ನು ಆಲಿಸಿದ ನ್ಯಾಯಾಧೀಶ ಜಗದೀಶ್, ‘ವೈದ್ಯಕೀಯ ಪರೀಕ್ಷೆ ಬಗ್ಗೆ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿದರು.

ಜಾಮೀನು ಅರ್ಜಿ ವಿಚಾರಣೆ ಜೂನ್ 18ಕ್ಕೆ: ಪ್ರಕರಣದ ಆರೋಪಿ ಕೆ.ಟಿ.ನವೀನ್‌ ಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು 70ನೇ ಸೆಷನ್ಸ್‌ ನ್ಯಾಯಾಲಯವು ಜೂನ್‌ 18ಕ್ಕೆ ಮುಂದೂಡಿದೆ.

ನಾಲ್ವರ ಮಂಪರು ಪರೀಕ್ಷೆಗೆ ಸಿದ್ಧತೆ: ಆರೋಪಿಗಳಾದ ಪರಶುರಾಮ್ ವಾಘ್ಮೋರೆ, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಹಾಗೂ ಮನೋಹರ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry