‘ಒಳ್ಳೆಯ ಅಧಿಕಾರಿಗಳ ರಕ್ಷಣೆಗೆ ಸಿದ್ಧ’

7
ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ

‘ಒಳ್ಳೆಯ ಅಧಿಕಾರಿಗಳ ರಕ್ಷಣೆಗೆ ಸಿದ್ಧ’

Published:
Updated:
‘ಒಳ್ಳೆಯ ಅಧಿಕಾರಿಗಳ ರಕ್ಷಣೆಗೆ ಸಿದ್ಧ’

ಬೆಂಗಳೂರು: ‘ನಾವು ಒಂದು ಕುಟುಂಬದ ರೀತಿಯಲ್ಲಿ ಕೆಲಸ ಮಾಡೋಣ. ಎಷ್ಟೇ ಒತ್ತಡ ಬಂದರೂ ಒಳ್ಳೆಯ ಅಧಿಕಾರಿಗಳಿಗೆ ರಕ್ಷಣೆ ನೀಡಲು ನಾನು ಸದಾ ಸಿದ್ಧ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜನತೆಯ ದೈನಂದಿನ ಸಂಕಷ್ಟಗಳಿಗೆ ಸ್ಪಂದಿಸಲು ಮತ್ತು ಜನಪರ ಯೋಜನೆಗಳ ಜಾರಿಗೆ ನಿಮ್ಮ ಸಹಕಾರ ಅತಿ ಮುಖ್ಯ’ ಎಂದರು.

ಹೊಸ ಸರ್ಕಾರಗಳು ಬಂದಾಗ ಮುಖ್ಯಮಂತ್ರಿ ಆದವರು ತಮ್ಮ ಚೊಚ್ಚಲ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ, ಕುಮಾರಸ್ವಾಮಿ ಸಕಾರಾತ್ಮಕವಾಗಿ ಮಾತನಾಡಿ ಅಧಿಕಾರಿಗಳ ಸಹಕಾರ ಕೋರಿದರು. ಹೆಗಲಿಗೆ–ಹೆಗಲು ಕೊಟ್ಟು ಕೆಲಸ ಮಾಡೋಣ ಎಂಬ ಸಲಹೆ ನೀಡಿದರು.

‘ಹೊಸ ಸರ್ಕಾರದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿ ಆಗಬೇಕು. ಅವುಗಳನ್ನು ಜನರಿಗೆ ತಲುಪಿಸಲು ನಿಮ್ಮ ಸಹಕಾರ ಅಗತ್ಯ. ಯಾವುದೇ ಕಾರ್ಯಕ್ರಮ ಸಫಲ ಅಥವಾ ವಿಫಲ ಆಗುವಲ್ಲಿ ನಿಮ್ಮ ಪಾತ್ರ ಅತಿ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

‘ಕಾರ್ಪೊರೇಟ್‌ ವಲಯದ ಮಾದರಿಯಲ್ಲಿ ನಾವು ಕೆಲಸ ಮಾಡಬೇಕು. ಹಿಂದೆ ಸರ್ಕಾರಗಳಲ್ಲಿ ಏನಾಗಿತ್ತು ಎಂಬುದನ್ನು ಈಗ ಮೆಲುಕು ಹಾಕಬೇಕಾಗಿಲ್ಲ. ಮುಂದೆ ಯಾವ ದಾರಿಯಲ್ಲಿ ನಡೆಯಬೇಕು ಎಂಬುದು ಮುಖ್ಯ. ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿಮ್ಮ ನೆರವು ಬಯಸುತ್ತೇನೆ’ ಎಂದರು.

‘ಜನರಿಗೆ ದೊಡ್ಡ ಮಟ್ಟದ ಬಯಕೆಗಳಿಲ್ಲ. ನೀರು, ವಸತಿ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಅನುಕೂಲ ಮಾಡಿಕೊಡಬೇಕು. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಉದ್ಯೋಗ ಸೃಷ್ಟಿಗಾಗಿ ಒತ್ತು ನೀಡಬೇಕು. ಮುಖ್ಯಮಂತ್ರಿಯಾಗಿ 21 ದಿನಗಳು ಆಗಿವೆ. ಅಧಿಕೃತವಾಗಿ ಜನತಾದರ್ಶನ ಕಾರ್ಯ

ಕ್ರಮ ಘೋಷಿಸಿಲ್ಲ. ಆದರೂ, ಮನೆ ಬಳಿ ಸಾವಿರಾರರು ಜನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ ಎಂದರು.

* ನಾವು ಹೇಳಿದ ಹಾಗೇ ಕೇಳಬೇಕು ಎನ್ನುವ ಭಾವನೆ ಬೇಡ. ನಿಮ್ಮ ಮೇಲೆ ಸವಾರಿ ಮಾಡುವುದೂ ಇಲ್ಲ. 

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry