ಬಂಡಾಯ ಶಮನಕ್ಕೆ ‘ಸೂತ್ರ’

7
ಸಮನ್ವಯ ಸಮಿತಿ ಮೊದಲ ಸಭೆ: ವಾರದಲ್ಲಿ 30 ನಿಗಮ ಮಂಡಳಿಗೆ ನೇಮಕ

ಬಂಡಾಯ ಶಮನಕ್ಕೆ ‘ಸೂತ್ರ’

Published:
Updated:
ಬಂಡಾಯ ಶಮನಕ್ಕೆ ‘ಸೂತ್ರ’

ಬೆಂಗಳೂರು: ‘ಕೈ’ ಪಾಳಯದ ಬಿಕ್ಕಟ್ಟು ಶಮನಗೊಳಿಸಲು ಹಾಗೂ ಅತೃಪ್ತ ಬಣಗಳ ಒಗ್ಗಟ್ಟು ಮುರಿಯುವ ಸಲುವಾಗಿ ನಿಗಮ ಮಂಡಳಿಗಳಲ್ಲಿ ಶಾಸಕರಿಗೇ ಮೊದಲ ಪ್ರಾತಿನಿಧ್ಯ ನೀಡಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ‘ಸಮನ್ವಯ ಸಮಿತಿ’ ಸಭೆಯಲ್ಲಿ ನಿರ್ಧರಿಸಿದೆ.

ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಗರದಲ್ಲಿ ಗುರುವಾರ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಸುಮಾರು ಒಂದೂವರೆ ಗಂಟೆ ಚರ್ಚಿಸಿದರು. ಕಾಂಗ್ರೆಸ್‌ ಪಾಳಯದ ಭಿನ್ನಮತ ಚಟುವಟಿಕೆಯೇ ಚರ್ಚೆಯ ಪ್ರಧಾನ ವಿಷಯವಾಗಿತ್ತು. ಇದಕ್ಕೂ ಮುನ್ನ, ವೇಣುಗೋಪಾಲ್‌ ಅವರು ದಿನವಿಡೀ ಅತೃಪ್ತ ಶಾಸಕರ ಅಹವಾಲು ಆಲಿಸಿದ್ದರು.

‘ಎಂ.ಬಿ.ಪಾಟೀಲ ಹಾಗೂ ಸತೀಶ ಜಾರಕಿಹೊಳಿ ನೇತೃತ್ವದ ಅತೃಪ್ತರ ಗುಂಪಿನಲ್ಲಿ ಸುಮಾರು 20 ಶಾಸಕರು ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ನಿತ್ಯವೂ ಪಕ್ಷಕ್ಕೆ ಮುಜುಗರ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ದೋಸ್ತಿ ಸರ್ಕಾರ ರಚನೆಯಾಗಿ 25 ದಿನ ಕಳೆದರೂ ಟೇಕಾಫ್‌ ಆಗಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಆದಷ್ಟು ಬೇಗ ಬಿಕ್ಕಟ್ಟು ಬಗೆಹರಿಸಬೇಕು. ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕರ ಒಗ್ಗಟ್ಟು ಮುರಿದು ನೇತೃತ್ವ ವಹಿಸಿಕೊಂಡವರನ್ನು ಏಕಾಂಗಿಗಳನ್ನಾಗಿ ಮಾಡಬೇಕು. ಇದಕ್ಕೆ ನಿಗಮ ಮಂಡಳಿಗಳಲ್ಲಿ ಶಾಸಕರಿಗೆ ಪ್ರಾತಿನಿಧ್ಯ ನೀಡುವುದೇ ಮಾರ್ಗ’ ಎಂಬ ತೀರ್ಮಾನಕ್ಕೆ ಸಭೆ ಬಂದಿತು.

ನಿಗಮ– ಮಂಡಳಿಗಳ ಸ್ಥಾನಗಳಲ್ಲಿ ಮೂರನೇ ಎರಡು ಭಾಗ ಕಾಂಗ್ರೆಸ್‌ ಹಾಗೂ ಮೂರನೇ ಒಂದು ಭಾಗ ಜೆಡಿಎಸ್‌ ಪಾಲಾಗಲಿದೆ. 2016ರಲ್ಲಿ 21ನಿಗಮ–ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಕ್ಷದಲ್ಲಿನ ಅಸಮಾಧಾನವನ್ನು ಶಮನಗೊಳಿಸಿತ್ತು.

‘ವಾರದೊಳಗೆ 30 ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುತ್ತಿದೆ. ಅದರಲ್ಲಿ ಶಾಸಕರಿಗೆ ಆದ್ಯತೆ ನೀಡುತ್ತೇವೆ. ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಕುಮಾರಸ್ವಾಮಿ ಹಾಗೂ ಪರಮೇಶ್ವರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಣಾಳಿಕೆಯಲ್ಲಿರುವ ಘೋಷಣೆಗಳ ಅನುಷ್ಠಾನಕ್ಕಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ.

‘ನಮ್ಮ ಪಕ್ಷದ ಪ್ರಣಾಳಿಕೆ ಯಲ್ಲಿ ಜನಪ್ರಿಯ ಕಾರ್ಯಕ್ರಮಗಳ ಘೋಷಣೆಗಳನ್ನು ಮಾಡಿದ್ದೇವೆ. ಜೆಡಿಎಸ್‌ ಪ್ರಣಾಳಿಕೆಯಲ್ಲೂ ಅನೇಕ ಘೋಷಣೆಗಳಿವೆ. ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಎಲ್ಲ ಭರವಸೆಗಳ ಅನುಷ್ಠಾನ ಕಷ್ಟ. ಹೀಗಾಗಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಬೇಕಿದೆ. ಅದಕ್ಕಾಗಿ ಒಂದು ಕರಡನ್ನು ಸಿದ್ಧಪಡಿಸುತ್ತೇವೆ. ಇದನ್ನು ಸಿದ್ಧಪಡಿಸುವ ಸಮಿತಿಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರು ಇರಲಿದ್ದಾರೆ. ಅವರ ಹೆಸರನ್ನು ಶುಕ್ರವಾರ ಪ್ರಕಟಿಸುತ್ತೇವೆ. ಸಮಿತಿ 10 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಬಳಿಕ ಅದಕ್ಕೆ ಸಮನ್ವಯ ಸಮಿತಿ ಸಭೆಯಲ್ಲಿ ಅಂತಿಮ ರೂಪ ನೀಡಲಾಗುತ್ತದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿದ ಬಳಿಕ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುತ್ತದೆ. ರೈತರ ಸಾಲ ಮನ್ನಾ ವಿಷಯವೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲೇ ಇರಲಿದೆ’ ಎಂದೂ ಸ್ಪಷ್ಟಪಡಿಸಿದರು.

ಜಿ.ಪರಮೇಶ್ವರ ಮಾತನಾಡಿ, ‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಬಳಿಕ ಹೈಕಮಾಂಡ್‌ ಗಮನಕ್ಕೆ ತಂದು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಕಚ್ಚಾಟಕ್ಕೆ ಕುಮಾರ ಕಳವಳ

‘ಕಾಂಗ್ರೆಸ್‌ನಲ್ಲಿನ ಅತೃಪ್ತಿ ಇನ್ನೂ ಶಮನ ಆಗದೆ ಇರುವುದು ಸರ್ಕಾರದ ವರ್ಚಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಕುಮಾರಸ್ವಾಮಿ ಅವರು ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.

‘ಸಮಸ್ಯೆಯನ್ನು ಇಷ್ಟರಲ್ಲೇ ಪರಿಹರಿಸಬೇಕಿತ್ತು. ಹಾದಿ ಬೀದಿಯಲ್ಲಿ ನಿತ್ಯ ರಾದ್ಧಾಂತ ನಡೆಯುತ್ತಿದೆ’ ಎಂದೂ ಅವರು ಹೇಳಿದರು. ವೇಣುಗೋಪಾಲ್‌ ಪ್ರತಿಕ್ರಿಯಿಸಿ, ‘ಈ ಬಗ್ಗೆ ಚಿಂತೆ ಮಾಡಬೇಡಿ. ನಮ್ಮ ಶಾಸಕರನ್ನು ಸಮಾಧಾನಪಡಿಸುತ್ತೇವೆ. ಉತ್ತಮ ಆಡಳಿತ ನೀಡುವತ್ತ ನೀವು ಗಮನ ಹರಿಸಿ’ ಎಂದು ಕಿವಿಮಾತು ಹೇಳಿದರು.

‘ವರ್ಗಾವಣೆ ಕಿತ್ತಾಟ ಬೇಡ’

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ–ಐಜಿಪಿ ನೇಮಕ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ವರ್ಗಾವಣೆ, ಇಲಾಖೆಗಳ ಮುಖ್ಯಸ್ಥರ ವರ್ಗದಂತಹ ಸಂದರ್ಭದಲ್ಲಿ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಇಲ್ಲವೇ, ಸಂಬಂಧಪಟ್ಟ ಸಚಿವರ ಜತೆಗೆ ಚರ್ಚಿಸಿ’ ಎಂದು ಕಾಂಗ್ರೆಸ್‌ ನಾಯಕರು ಸಭೆಯಲ್ಲಿ ಸಲಹೆ ನೀಡಿದರು.

‘ಜಲಸಂಪನ್ಮೂಲ ಇಲಾಖೆಯಲ್ಲಿನ ವರ್ಗಾವಣೆ ವಿಷಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಮೈತ್ರಿ ಸರ್ಕಾರದಲ್ಲಿ ಸಮನ್ವಯ ಇಲ್ಲ ಎಂಬ ಭಾವನೆ ಮೂಡಲು ಕಾರಣವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು’ ಎಂದೂ ಹೇಳಿದರು.

ಬಸ್‌ ಪಾಸ್‌ ಗೊಂದಲ: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ ವಿಷಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ‘ಸಾರಿಗೆ ಸಚಿವರ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುತ್ತೇವೆ ಎಂದು ನಾವು ಹೇಳಿದ್ದೆವು. ಈಗ ಅದಕ್ಕೆ ಜೆಡಿಎಸ್‌ ಅಡ್ಡಗಾಲು ಹಾಕುತ್ತಿದೆ ಎಂಬ ಭಾವನೆ ಮೂಡಿದೆ.

ಸೂಕ್ಷ್ಮ ವಿಷಯಗಳ ಬಗ್ಗೆ ಹೇಳಿಕೆ ನೀಡುವ ಮುನ್ನ ಉಭಯ ಪಕ್ಷಗಳ ಮುಖಂಡರ ಜತೆಗೆ ಚರ್ಚಿಸುವುದು ಉತ್ತಮ’ ಎಂದು ಕಾಂಗ್ರೆಸ್‌ ಮುಖಂಡರು ಕಿವಿಮಾತು ಹೇಳಿದರು.

* ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಅತೃಪ್ತ ಶಾಸಕರು ತೃಪ್ತರಾಗಲು ಎಂ.ಬಿ.ಪಾಟೀಲರ ಮನೆಯಲ್ಲಿ ಊಟಕ್ಕೆ ಸೇರುತ್ತಿರಬಹುದು.

- ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry