7

ತಾಯಂದಿರ ಮರಣ ತಡೆ ನಿರ್ವಹಣೆ: ನಿರ್ಲಕ್ಷ್ಯ ಸಲ್ಲದು

Published:
Updated:
ತಾಯಂದಿರ ಮರಣ ತಡೆ ನಿರ್ವಹಣೆ: ನಿರ್ಲಕ್ಷ್ಯ ಸಲ್ಲದು

ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ಕೊನೆಯ ಸ್ಥಾನದಲ್ಲಿದೆ ಎಂಬುದು ಗಂಭೀರವಾದ ಸಂಗತಿ. ಒಂದು ಲಕ್ಷ ಹೆರಿಗೆಗಳಲ್ಲಿ ತಾಯಂದಿರ ಮರಣ ಪ್ರಮಾಣ (ಎಂಎಂಆರ್) ರಾಜ್ಯದಲ್ಲಿ 108 ಇದೆ. ಎರಡು ವರ್ಷಗಳ ಹಿಂದೆ ಈ ಪ್ರಮಾಣ 133 ಇತ್ತು. ಹೀಗಾಗಿ ಸ್ವಲ್ಪಮಟ್ಟಿಗಿನ ಸುಧಾರಣೆ ಇದೆ ಎಂದು ನಾವು ಸಮಾಧಾನಪಟ್ಟುಕೊಳ್ಳುವಂತೆ ಏನೂ ಇಲ್ಲ.

ನೆರೆಯ ಕೇರಳವನ್ನೇ ನೋಡಿ. ಅಲ್ಲಿ ಮಾದರಿ ಎನಿಸುವ ಸಾಧನೆ ಸಾಧ್ಯವಾಗಿದೆ. ಕೇರಳದಲ್ಲಿ ಒಂದು ಲಕ್ಷ ಹೆರಿಗೆಗಳಲ್ಲಿ ತಾಯಂದಿರ ಮರಣ ಪ್ರಮಾಣ 46ಕ್ಕೆ ಇಳಿದಿದೆ. ಎರಡು ವರ್ಷಗಳ ಹಿಂದೆ ಇದು 61 ಇತ್ತು. ಇನ್ನು ತಮಿಳುನಾಡಿನ ಸಾಧನೆಯೂ ಕಡಿಮೆ ಇಲ್ಲ. ತಮಿಳುನಾಡಿನ ಎಂಎಂಆರ್ 66. ಎರಡು ವರ್ಷಗಳ ಹಿಂದಿದ್ದ ಪ್ರಮಾಣ 79. ತಮಿಳುನಾಡು ಮತ್ತು ಕೇರಳ ರಾಜ್ಯಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಗಡುವಿಗಿಂತ 12 ವರ್ಷ ಮೊದಲೇ ಸಾಧಿಸಿವೆ. ಹಾಗೆಯೇ ತಾಯಂದಿರ ಮರಣ ಪ್ರಮಾಣ ತಗ್ಗಿಸುವಲ್ಲಿ ಆಂಧ್ರಪ್ರದೇಶ ಮೂರನೆಯ ಸ್ಥಾನ ಗಳಿಸಿದೆ.

ಒಟ್ಟು ಭಾರತದಲ್ಲಿ 2011- 13ರ ಅವಧಿಯಲ್ಲಿ 167ರಷ್ಟಿದ್ದ ಎಂಎಂಆರ್  2014- 16ರ ಅವಧಿಯಲ್ಲಿ 130ಕ್ಕೆ ಇಳಿದಿರುವುದು ದೊಡ್ಡ ಸಾಧನೆ ಎಂಬುದೂ ನಿಜ. ಅಭಿವೃದ್ಧಿ ಸೂಚ್ಯಂಕಗಳಲ್ಲಿ  ಹೆಚ್ಚೇನೂ ಪ್ರಗತಿ ಸಾಧಿಸದ ಸಂದರ್ಭದಲ್ಲಿ ಈ ಬೆಳವಣಿಗೆ ನಿಜಕ್ಕೂ ಸಕಾರಾತ್ಮಕ. ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ಹಾಗೂ ಒಡಿಶಾದಂತಹ ಹಿಂದುಳಿದ ರಾಜ್ಯಗಳೂ ಗಮನಾರ್ಹ ಸಾಧನೆ ಮಾಡಿರುವುದು ಇಲ್ಲಿ ವಿಶೇಷ. ಹೀಗಿದ್ದೂ, ತಾಯಂದಿರ ಮರಣ ಪ್ರಮಾಣದಲ್ಲಿ ಒಟ್ಟು 184 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 129ರಲ್ಲಿದೆ ಎಂಬುದು ನಾವಿನ್ನೂ ಸಾಗಬೇಕಿರುವ ಹಾದಿಗೆ ಸೂಚಕ.

ತಾಯಂದಿರ ಮರಣ ಪ್ರಮಾಣ ತಗ್ಗಿಸುವಲ್ಲಿ  ಕರ್ನಾಟಕವಿನ್ನೂ ಏಕೆ ಹೆಚ್ಚಿನ ಪ್ರಗತಿ ಸಾಧಿಸುವುದು ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಅವಲೋಕನಗಳಾಗಬೇಕು. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಈ ಬಗ್ಗೆ ಆದ್ಯತೆಯ ಗಮನ ಹರಿಸಬೇಕು. ಮನೆಗಳ ಬದಲು ಆಸ್ಪತ್ರೆಗಳಲ್ಲಿ ಹೆರಿಗೆಯ ಅನುಕೂಲಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯ.

ಆದರೆ, ರಾಜ್ಯದಲ್ಲಿ ಈಗಲೂ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ ಎಂಬುದು ಕಹಿ ವಾಸ್ತವ. ಆರೋಗ್ಯ ಕೇಂದ್ರಗಳಿರುವ ಕಡೆ ಸಿಬ್ಬಂದಿ ಕೊರತೆ ಇದೆ. ಜೊತೆಗೆ ಅಗತ್ಯ ಔಷಧ, ವೈದ್ಯಕೀಯ ಸಲಕರಣೆಗಳು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಂತೂ ಮಾಮೂಲಾಗಿಹೋಗಿದೆ. ಆರೋಗ್ಯ ಪಾಲನೆಯ ಗುಣಮಟ್ಟ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಅಷ್ಟೇ ಅಲ್ಲ, ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಲಭ್ಯವಾಗಬೇಕು ಎಂಬುದಕ್ಕೆ ಗಮನ ನೀಡುವುದು ಅತ್ಯವಶ್ಯ. ಈಗಾಗಲೇ ತಾಯ್ತನದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸರ್ಕಾರಿ ಯೋಜನೆಗಳು ಚಾಲ್ತಿಯಲ್ಲಿವೆ.

ಹಾಗೆಯೇ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯೂ ಇದೆ. ಈ ಯೋಜನೆಗಳು ಜನರನ್ನು ತಲುಪುವುದು ಮುಖ್ಯ. ರಾಜ್ಯದ ಎಲ್ಲಾ ಭಾಗಗಳಲ್ಲಿ ಅಭಿವೃದ್ಧಿಯ ಸಾಧನೆ ಸಮಾನವಾಗಿಲ್ಲ ಎಂಬುದು ಗೊತ್ತಿರುವ ಸಂಗತಿ. ಸಹಜವಾಗಿಯೇ ರಾಜ್ಯದ ಜಿಲ್ಲೆಗಳ ನಡುವೆ ಎಂಎಂಆರ್‌ನಲ್ಲಿ ಭಾರಿ ವ್ಯತ್ಯಾಸವಿದೆ ಎಂಬುದನ್ನು ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯ ಜೊತೆಯಾಗಿ ನಡೆಸಿದ ಅಧ್ಯಯನದಲ್ಲೂ ವ್ಯಕ್ತವಾಗಿದೆ.

ಹೀಗಾಗಿ, ಉತ್ತರ ಕರ್ನಾಟಕ ಸೇರಿದಂತೆ ಈ ವಿಚಾರದಲ್ಲಿ ಹಿಂದುಳಿರುವ ಜಿಲ್ಲೆಗಳಲ್ಲಿ ವಿಶೇಷ ಗಮನ ಅಗತ್ಯ. ತಾಯಿ ಮರಣ ತಗ್ಗಿಸಲು ವೈದ್ಯಕೀಯ ಕ್ರಮವಷ್ಟೇ ಸಾಲದು. ಮಹಿಳೆ ಕುರಿತಾದ ಸಾಮಾಜಿಕ ಮನೋಭಾವಗಳೂ ಬದಲಾಗಬೇಕಾದುದು ಅಗತ್ಯ.

ಗರ್ಭಿಣಿಯರಲ್ಲಿ ರಕ್ತಹೀನತೆ ಮಾತೃಮರಣಕ್ಕೆ ಮುಖ್ಯ ಕಾರಣ ಎಂಬುದನ್ನು ಮರೆಯುವುದು ಹೇಗೆ ಸಾಧ್ಯ? ಅಪೌಷ್ಟಿಕತೆ, ಬಾಲ್ಯವಿವಾಹ, ನಂತರ ಹದಿಹರೆಯದ ಗರ್ಭಾವಸ್ಥೆ- ಇವೆಲ್ಲವೂ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತಿವೆ. ಹೀಗಾಗಿ ಹೆಣ್ಣುಮಗುವಿನ ಕುರಿತಂತೆ ಸಮಾಜದ ದೃಷ್ಟಿಕೋನಗಳನ್ನು ಬದಲಿಸುವಂತಹ ನೀತಿ ಹಾಗೂ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಜರೂರಿನ ಸಂಗತಿ.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry