ಮಂದಗತಿಯಲ್ಲಿ ಸಾಗಿದ ಕಸ ತೆರವು ಕಾರ್ಯ

7
ಪ್ರಮುಖ ರಸ್ತೆಗಳಲ್ಲೇ ತ್ಯಾಜ್ಯ ರಾಶಿ

ಮಂದಗತಿಯಲ್ಲಿ ಸಾಗಿದ ಕಸ ತೆರವು ಕಾರ್ಯ

Published:
Updated:
ಮಂದಗತಿಯಲ್ಲಿ ಸಾಗಿದ ಕಸ ತೆರವು ಕಾರ್ಯ

ಬೆಂಗಳೂರು: ನಗರದಲ್ಲಿ ಕಸ ಎತ್ತುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ.

ಬಿಬಿಎಂಪಿ ಬಾಕಿ ಬಿಲ್‌ ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಮುಷ್ಕರದ ದಾರಿ ಹಿಡಿಯಬೇಕಾಯಿತು ಎಂದು ಪೌರ ಕಾರ್ಮಿಕರು ಹೇಳಿದರು.

‘ರಾಜ್ಯ ಮಹಾನಗರ ಪಾಲಿಕೆ ಮತ್ತು ನಗರಸಭೆಗಳ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹಂತ ಹಂತವಾಗಿ ಪ್ರತಿಭಟನೆ ನಡೆಸಿದ್ದೇವೆ. ಬಯೋಮೆಟ್ರಿಕ್‌ ವ್ಯವಸ್ಥೆಯೊಳಗೆ ಇರುವವರಿಗೆ ವೇತನ ಪಾವತಿ ಭರವಸೆ ಸಿಕ್ಕಿದೆ. ಇತ್ತೀಚೆಗೆ ಬಂದವರಿಗೆ ಸೌಲಭ್ಯ ಮರೀಚಿಕೆಯಾಗಿದೆ. ಒಂದೇ ರೀತಿ ಕೆಲಸ ಮಾಡುವಾಗ ಈ ತಾರತಮ್ಯ ಏಕೆ’ ಎಂದು ಕಗ್ಗದಾಸಪುರ ಸಮೀಪದ ಪೌರಕಾರ್ಮಿಕ ಮಹಿಳೆ ಪ್ರಶ್ನಿಸಿದರು.

ಕಸದ ರಾಶಿ ಬಿದ್ದಿರುವ ದೃಶ್ಯಗಳು ಬ್ರಿಗೇಡ್‌ ರಸ್ತೆ, ರಿಚ್‌ಮಂಡ್‌ ವೃತ್ತದ ಆಸುಪಾಸಿನಲ್ಲೇ ಕಾಣಸಿಗುತ್ತವೆ. ಶಿವಾಜಿನಗರ, ಕೆ.ಆರ್‌. ಮಾರುಕಟ್ಟೆ ಪ್ರದೇಶ, ಚಿಕ್ಕಪೇಟೆಯ ಕಿರಿದಾದ ಓಣಿಗಳಲ್ಲಿ ಸಮಸ್ಯೆ ಬಗ್ಗೆ ಪ್ರತ್ಯೇಕ ವಿವರಣೆ ಬೇಡ ಎಂದು ಇಲ್ಲಿನ ಹಿರಿಯ ನಾಗರಿಕರು ಬೇಸರದಿಂದ ನುಡಿದರು.

ಕಸ ಸಾಗಿಸುವ ವಾಹನಗಳ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಅವರು ಜೂನ್‌ 11ರಂದು ಮುಷ್ಕರ ನಡೆಸಿದ್ದರು. ಒಂದೇ ದಿನದ ಮುಷ್ಕರಕ್ಕೆ ಮಣಿದ ಪಾಲಿಕೆ ಅಧಿಕಾರಿಗಳು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಮಾತುಕತೆ ನಡೆಸಿ ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಪೌರಕಾರ್ಮಿಕರು ಪ್ರತಿದಿನ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಎಲ್ಲ ಕಾರ್ಮಿಕರನ್ನೂ ಒಂದೇ ರೀತಿ ನೋಡಬೇಕು ಎಂದು ಪೌರ ಕಾರ್ಮಿಕರ ಸಂಘದ ಮುಖಂಡರು ಒತ್ತಾಯಿಸಿದರು.

ವಿಜಯನಗರ, ಮಾಗಡಿ ರಸ್ತೆಗಳಲ್ಲಿ ಕಸದ ಗಾಡಿಗಳು ಖಾಲಿ ಓಡಾಡುತ್ತಿವೆ. ಕಸವನ್ನು ರಾಶಿ ಮಾಡದಿದ್ದರೆ ಎತ್ತಿಕೊಂಡು ಹೋಗುವುದು ಹೇಗೆ ಎಂದು ವಾಹನಗಳ ಚಾಲಕರು ಪ್ರಶ್ನಿಸಿದರು.

‘ಮುಖಂಡರ ಸಲಹೆ ಮೇಲೆ ಕೆಲಸ ಸ್ಥಗಿತಗೊಳಿಸುತ್ತೇವೆ. ಬೆಳಿಗ್ಗೆ ಒಂದಿಷ್ಟು ಹೊತ್ತು ಕಸಗುಡಿಸುತ್ತೇವೆ. ಬಳಿಕ ಬೇರೆ ಕೂಲಿ ಕೆಲಸ ಸಿಕ್ಕರೆ ಹುಡುಕುತ್ತೇವೆ. ದಿನದ ಖರ್ಚಿಗಾಗುವಷ್ಟು ಸಂಪಾದಿಸಲು ಬೇರೆ ಕಡೆ ಕೆಲಸ ಮಾಡುವುದು ಅನಿವಾರ್ಯ. ಛತ್ರಗಳು, ಕಚೇರಿಗಳಲ್ಲಿ ಸ್ವಚ್ಛತೆ ಕೆಲಸ ಮಾಡುತ್ತೇವೆ’ ಎಂದು ಟೋಲ್‌ಗೇಟ್‌ ಸಮೀಪ ಇತ್ತೀಚೆಗೆ ಕೆಲಸಕ್ಕೆ ಸೇರಿದ ಪೌರಕಾರ್ಮಿಕರು ಹೇಳಿದರು.

ಮೇಯರ್‌ ಸ್ಪಷ್ಟನೆ

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯೊಳಗೆ ಬರುವ ಎಲ್ಲ ಕಾರ್ಮಿಕರಿಗೂ ವೇತನ ಬಿಡುಗಡೆ ಮಾಡಿದ್ದೇವೆ. ಘನತ್ಯಾಜ್ಯ ವಿಲೇವಾರಿ ಕೆಲಸವನ್ನು ಲಘುವಾಗಿ ಪರಿಗಣಿಸಲಾಗದು. ಅದಕ್ಕಾಗಿ ಅವರ ಬೇಡಿಕೆಗಳಿಗೆ ಸ್ಪಂದಿಸಿದ್ದೇವೆ. ಇಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry