ಭಾಗಮಂಡಲ ಜಲಾವೃತ: ಸಂಪರ್ಕ ಕಡಿತ

7

ಭಾಗಮಂಡಲ ಜಲಾವೃತ: ಸಂಪರ್ಕ ಕಡಿತ

Published:
Updated:
ಭಾಗಮಂಡಲ ಜಲಾವೃತ: ಸಂಪರ್ಕ ಕಡಿತ

ಮಡಿಕೇರಿ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಭಾಗಮಂಡಲ ಜಲಾವೃತಗೊಂಡಿದೆ. ಭಗಂಡೇಶ್ವರ ದೇವಸ್ಥಾನದ ಮೆಟ್ಟಿಲು ತನಕವೂ ನೀರು ನಿಂತಿದ್ದು ತಲಕಾವೇರಿ, ನಾಪೋಕ್ಲು, ಐಯ್ಯಂಗೇರಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.

ಬ್ರಹ್ಮಗಿರಿ ವ್ಯಾಪ್ತಿಯ ತಲಕಾವೇರಿ ಕ್ಷೇತ್ರದಲ್ಲಿ ಗಾಳಿ ಸಹಿತ ಮಳೆ ಬೀಳುತ್ತಿರುವ ಪರಿಣಾಮ ಪ್ರವಾಸಿಗರು ಅಲ್ಲಿಗೆ ತೆರಳದಂತೆ ಸೂಚಿಸಲಾಗಿದೆ. ಸ್ಥಳೀಯರು ಹಾಗೂ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಬೋಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮಾಕುಟ್ಟದ ಬಳಿ ಮತ್ತೆ ಭೂಕುಸಿತ ಉಂಟಾಗಿದೆ. ಮಂಗಳವಾರ ರಾತ್ರಿ ಸುರಿದ ಮಳೆಗೆ 25 ಕಡೆ ಭೂಕುಸಿತವಾಗಿತ್ತು. ಮಣ್ಣು ಹಾಗೂ ಬಿದ್ದ ಮರಗಳ ತೆರವು ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ಹಳ್ಳದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಅಲ್ಲಲ್ಲಿ ರಸ್ತೆ ಕುಸಿಯುವ ಆತಂಕವಿದೆ.

ರಸ್ತೆ ದುರಸ್ತಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಜುಲೈ 12ರ ತನಕ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶಿಸಿದ್ದಾರೆ. ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಮಾರ್ಗವಾಗಿ ವಾಹನಗಳು ಕೇರಳಕ್ಕೆ ತೆರಳುತ್ತಿವೆ.

ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ಸಮೀಪ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ನದಿಯಂಚಿನ ಕರಡಿಗೋಡು ಗ್ರಾಮದ ಜನರು ಆತಂಕದಲ್ಲಿದ್ದಾರೆ. ನದಿ ಅಂಚಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಕೋರಿದೆ. ಮಡಿಕೇರಿಯ ದೇಚೂರು, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರದಲ್ಲಿ ಗುಡ್ಡ ಕುಸಿದಿದೆ. ಕೊಡಗು ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ಗುರುವಾರ ರಜೆ ನೀಡಲಾಗಿತ್ತು.

ಕೊಪ್ಪಳ ನಗರದಲ್ಲಿ ಗುರುವಾರ ಸಂಜೆ ಒಂದು ಗಂಟೆ ಸುರಿದ ಬಿರುಸಿನ ಮಳೆಯಿಂದ ವಾತಾವರಣ ತಂಪಾಯಿತು.

ಕೊಪ್ಪಳ ಹಾಗೂ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಆಗಿದೆ. ಈಗಾಗಲೇ ರೈತರು ಬಹುತೇಕ ಕಡೆ ಬಿತ್ತನೆ ಮಾಡಿದ್ದು, ನೀರಾವರಿ ಜಮೀನುಗಳಲ್ಲಿ ಭತ್ತ ನಾಟಿಗೆ ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕಿರು ಸೇತುವೆ ತಡೆಗೋಡೆ ಕುಸಿತ: ಸಾಗರ ತಾಲ್ಲೂಕಿನ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದರಿಂದ ಗುರುವಾರ ಕಿರು ಸೇತುವೆಯ ತಡೆಗೋಡೆ ಕೊಚ್ಚಿ ಹೋಗಿದೆ. ಇದರಿಂದಾಗಿ ಬೇರಾಳ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ.

ಹೊಸನಗರ ತಾಲ್ಲೂಕಿನ ಅಂಡಗದೋದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡಗದೋದೂರು, ಯಾರ್ವೆ, ಬೇಳೂರು, ಕಬಳೆ ಗ್ರಾಮದ ಹಳ್ಳಗಳು ಉಕ್ಕಿ ಹರಿದ ಪರಿಣಾಮ ಅಡಿಕೆ ತೋಟ, ಶುಂಠಿ, ಭತ್ತದ ಸಸಿ ಮಡುಗಳು ಕೊಚ್ಚಿಹೋಗಿವೆ.

ಮರ ಬಿದ್ದು ಒಬ್ಬ ಸಾವು– (ಗಜೇಂದ್ರಗಡ ವರದಿ): ಇಲ್ಲಿಗೆ ಸಮೀಪದ ಹಿರೇಕೊಪ್ಪ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆ ಗಾಳಿಗೆ ಹೊಲದಲ್ಲಿದ್ದ ತಗಡಿನ ಶೆಡ್‌ ಮೇಲೆ ಬೃಹತ್‌ ಜಾಲಿ ಮರ ಬಿದ್ದು ವೀರನಗೌಡ ಕಳಕನಗೌಡ ಗೌಡ್ರ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೆಡ್‌ನಲ್ಲಿ ಇದ್ದ ಎಮ್ಮೆಗೆ ಗಂಭೀರ ಗಾಯವಾಗಿದೆ.

ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಒಂದು ಗಂಟೆ ಕಾಲ ಭಾರಿ ಮಳೆಯಾಗಿದೆ.

**

ಒಳಹರಿವು ಹೆಚ್ಚಳ

ಮೈಸೂರು: ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟದಿಂದಾಗಿ ಕಬಿನಿ ಜಲಾಶಯಕ್ಕೆ ಒಳಹರಿವು ಸತತವಾಗಿ ಹೆಚ್ಚುತ್ತಿದೆ. ಜಲಾಶಯದಿಂದ ಗುರುವಾರ ಸುಮಾರು 15,000 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಯಿತು. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಂದರ್ಭದಲ್ಲಿ ಮತ್ತಷ್ಟು ನೀರನ್ನು ಕ್ರಸ್ಟ್‌ ಗೇಟ್‌ಗಳ ಮೂಲಕ ಹೊರಬಿಡುವ ಸಾಧ್ಯತೆ ಇದೆ.

ಹೀಗಾಗಿ, ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ಸಿ.ಪಿ.ಜಗದೀಶ್ ಮುನ್ನೆಚ್ಚರಿಕೆ ನೀಡಿದ್ದಾರೆ.

2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,281 ಅಡಿ ನೀರು ಸಂಗ್ರಹವಾಗಿದೆ. 30 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಎರಡು ದಿನಗಳಲ್ಲಿ 10 ಅಡಿ ಏರಿಕೆ ಕಂಡಿದೆ. ಜಲಾಶಯದ ಹಿನ್ನೀರಿನ ಪ್ರದೇಶ ಮತ್ತು ಕೇರಳದ ವೈನಾಡಿನಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 92.30 ಅಡಿ ತಲುಪಿದೆ. ಒಳಹರಿವು ಗಣನೀಯ ಏರಿಕೆ ಕಂಡಿದ್ದು, ಗುರುವಾರ 26,395 ಕ್ಯುಸೆಕ್‌ ಇತ್ತು.

**

ಈಶಾನ್ಯ ಭಾರತ, ಕೇರಳದಲ್ಲಿ ಮುಂಗಾರಿನ ಅಬ್ಬರ

ತಿರುವನಂತಪುರ (ಪಿಟಿಐ): ಕೇರಳದ ಹಲವೆಡೆ ಗುರುವಾರ ಭಾರಿ ಮಳೆಯಾಗಿದೆ. ಕೋಯಿಕ್ಕೋಡ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ಗುಡ್ಡಕುಸಿದು, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಹತ್ತು ಮಂದಿ ಕಾಣೆಯಾಗಿದ್ದಾರೆ. ಕಾಣೆಯಾದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮೇ 29ರಿಂದ ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾದವರ ಸಂಖ್ಯೆ 27ಕ್ಕೆ ಏರಿದೆ. ಕೋಯಿಕ್ಕೋಡ್, ಮಲಪ್ಪುರ, ಕಣ್ಣೂರು, ವಯನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಕಾರಣ ದಿಢೀರ್ ಪ್ರವಾಹ ಉಂಟಾಗಿತ್ತು.

‘ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ. ಯಾವುದೇ ಸಮಯದಲ್ಲಿ ಅವುಗಳಿಂದ ನೀರನ್ನು ಹೊರಕ್ಕೆ ಬಿಡಬಹುದು. ಹೀಗಾಗಿ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಇರುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ’ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಫಾಲಾ ವರದಿ: ಈಶಾನ್ಯ ಭಾರತದ ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ಬುಧವಾರ ತಡರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ನಾಲ್ಕೂ ರಾಜ್ಯಗಳ ಹಲವೆಡೆ ಪ್ರವಾಹ ಸ್ಥಿತಿ ತಲೆದೋರಿದೆ.

ಅಸ್ಸಾಂನಲ್ಲಿ 222 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ರಾಜ್ಯದಲ್ಲಿ ಒಟ್ಟು 1.48 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ತ್ರಿಪುರಾದಲ್ಲಿ 3,500 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

**

ಗರಿಗೆದರಿದ ಮುಂಗಾರು: ವಾಡಿಕೆ ಮೀರಿಸಿದ ಮಳೆ

ಈ ಬಾರಿ ವಾಡಿಕೆಗಿಂತಲು ಮೊದಲೇ ಮಾನ್ಸೂನ್ ಪ್ರವೇಶಿಸಿದೆ. ಜೂನ್ ತಿಂಗ ಮೊದಲ ಎರಡು ವಾರಗಳಲ್ಲಿ ದೇಶದ 19 ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕರ್ನಾಟಕದಲ್ಲೂ ವಾಡಿಕೆಗಿಂತ ಶೇ 96ರಷ್ಟು ಹೆಚ್ಚು ಮಳೆಯಾಗಿದೆ. 12 ರಾಜ್ಯಗಳಲ್ಲಿ ಮಳೆ ಕೊರತೆಯಾಗಿದೆ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry