ಸ್ವರ್ಗದ ದಾರಿಯಲ್ಲಿ ಕೃತಜ್ಞತೆಯ ಕಣ್ಣೀರು

7
ರಮ್ಜಾನ್ ಮಾಸದಲ್ಲಿ ಕುರಾನ್ ಪಠಣ, ಪ್ರಾರ್ಥನೆ, ಉಪವಾಸ ಮತ್ತು ದುಡಿಮೆ

ಸ್ವರ್ಗದ ದಾರಿಯಲ್ಲಿ ಕೃತಜ್ಞತೆಯ ಕಣ್ಣೀರು

Published:
Updated:
ಸ್ವರ್ಗದ ದಾರಿಯಲ್ಲಿ ಕೃತಜ್ಞತೆಯ ಕಣ್ಣೀರು

ಬಳ್ಳಾರಿ: ಶ್ರದ್ಧೆ–ಭಕ್ತಿಯ ರಂಜಾನ್‌ ತಿಂಗಳ ವ್ರತನಿಷ್ಠರು ಕೊನೆಯ ರಾತ್ರಿಗಾಗಿ ಕಾಯುತ್ತಿದ್ದಾರೆ. ಮನೆ, ಮನ ಮತ್ತು ಮಸೀದಿಗಳಲ್ಲಿ ನಿರಂತರ ನಡೆದ ಕುರಾನ್‌ ಪಠಣ ಮತ್ತು ಪ್ರಾರ್ಥನೆ, ಇವೆರಡಕ್ಕೂ ಮೀಸಲಿಟ್ಟ ಕಠಿಣ ಉಪವಾಸ, ಅದರೊಂದಿಗೆ ನಿತ್ಯವೂ ನಿಲ್ಲದ ದುಡಿಮೆಯ ಸಂಯಮದ ಜೀವನಶೈಲಿಯ ಹೆಸರೇ ರಂಜಾನ್‌.

ಇದಿಷ್ಟೇ ಅಲ್ಲ. 21, 23ನೇ ರಾತ್ರಿಯ ಜಾಗರಣೆ ಮುಗಿದು, 26ನೇ ರಾತ್ರಿಯ ಜಾಗರಣೆ ‘ಸತ್ತಾವಿ’, 28ನೇ ರಾತ್ರಿಯ ‘ತಾಖ್‌ರಾತ್‌’ ಕೂಡ ಮುಸ್ಲಿಮರ ಒಳಗಿನ ಎಲ್ಲ ಕಲ್ಮಶಗಳನ್ನು ತೊಳೆದಿದೆ. ಏಕೆಂದರೆ ಈ ರಾತ್ರಿಗಳಲ್ಲಿ ಅವರು ಕುರಾನ್‌ ಅನ್ನು ಸಂಪೂರ್ಣ ಪಠಣ ಮಾಡುತ್ತಾರೆ.

ಇನ್ನೇನಿದ್ದರೂ ಚಂದ್ರನನ್ನು ನೋಡಿ ಪುಳಕಗೊಂಡು, ಸ್ವರ್ಗದ ದಾರಿ ನೋಡುತ್ತಾ ಕೃತಜ್ಞತೆಯ ಕಣ್ಣೀರು ಸುರಿಸುವುದಷ್ಟೇ ಬಾಕಿ. ನಂತರದ್ದೆಲ್ಲ ದೇವರನ್ನು ಗೆದ್ದ ಸಂಭ್ರಮ.

ಕಠಿಣ ಹಾದಿ:

ಉಪವಾಸವು ರಂಜಾನ್‌ನ ಅತ್ಯಂತ ಕಠಿಣವಾದ ಭಾಗ. ಸೂರ್ಯಾಸ್ತಕ್ಕೆ ಮುಂಚೆಯೇ ಊಟ ಮಾಡಿದ ಬಳಿಕ ಸೂರ್ಯ ಮುಳುಗುವವರೆಗೂ ಏನನ್ನೂ ಸೇವಿಸುವಂತಿಲ್ಲ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿಗೆ ಮಾತ್ರ ವಿನಾಯಿತಿ. ಉಪವಾಸ ಇರುವವರಲ್ಲಿ ಹೆಚ್ಚು ಮಾತಿಗೆ ಅವಕಾಶವೂ ಇಲ್ಲ. ಕುರಾನ್‌ ಪಠಣವೊಂದೇ ನಾಲಿಗಯ ಮೇಲಿನ ಮಾತು.

ಕಾವಲು:

ಮಸೀದಿಗಳಲ್ಲಿ ದಿನದ ಐದು ಹೊತ್ತು ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಯಾವ ತೊಂದರೆಯೂ ಆಗಬಾರದು ಎಂದು ಕೆಲವರು ಮಸೀದಿ ಹೊರಗೆ ಕಾವಲು ಕಾಯುತ್ತಾರೆ. ಅದೇ ಅವರ ದೇವರಿಗೆ ಅವರು ಸಲ್ಲಿಸುವ ಪ್ರಾರ್ಥನೆ.

ನಗರದ ಕೌಲ್‌ಬಜಾರ್‌ನ ಖೂನಿಟಾನಾ ಮಸೀದಿಗೆ ಗುರುವಾರ ರಾತ್ರಿ ‘ಪ್ರಜಾವಾಣಿ’ ನೀಡಿದ ಸಂದರ್ಭದಲ್ಲಿ ಮಧ್ಯ ವಯಸ್ಕರಾದ ರಫೀಕ್‌, ಸಲೀಂ ಮತ್ತು ಇಮ್ತಿಯಾಜ್‌ ಮಸೀದಿಯ ಎದುರಿನ ಮನೆ ಮುಂದೆ ಚಾಪೆ ಹಾಸಿಕೊಂಡು ಕುಳಿತಿದ್ದರು.

‘ದೇವರನ್ನು ಪ್ರಾರ್ಥಿಸಲು ಬರುವ ನಮ್ಮವರಿಗೆ ಯಾವ ಅಡಚಣೆಯೂ ಆಗಬಾರದು. ಅದಕ್ಕೇ ನಾವು ಮಸೀದಿ ಹೊರಗೆ ಇರುತ್ತೇವೆ. 26ನೇ ರಾತ್ರಿ ಜಾಗರಣೆ ಸಂದರ್ಭದಲ್ಲಿ ಮಸೀದಿ ಒಳಗೆ ಜಾಗ ಸಾಕಾಗದೆ ರಸ್ತೆಯಲ್ಲೂ ಕುಳಿತು ಪ್ರಾರ್ಥನೆ ಮಾಡಬೇಕಾಯಿತು. ಅಂಥ ಸಂದರ್ಭಗಳಲ್ಲಿ ನಮ್ಮ ಕಾವಲು ಇಲ್ಲದಿದ್ದರೆ ಪ್ರಾರ್ಥನೆ ಕಷ್ಟಕರವಾಗುತ್ತದೆ’ ಎಂದರು.

ಹೊಳೆಯುವ ಮಸೀದಿ:

ನಗರದಲ್ಲಿರುವ ಮಸೀದಿಗಳು ದೀಪದ ಬೆಳಕಲ್ಲಿ ಹೊಳೆಯುತ್ತಿವೆ. ಮಸೀದಿ ಸುತ್ತಮುತ್ತ ಟೋಪಿ, ಕೋಟು, ಅತ್ತರು ಸೇರಿ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿದೆ. ಅದರೊಂದಿಗೆ ನಗರದ ಜೈನ್‌ ಮಾರುಕಟ್ಟೆ, ಬೆಂಗಳೂರು ರಸ್ತೆ, ದೊಡ್ಡ ಮಾರುಕಟ್ಟೆಯಲ್ಲೂ ಖರೀದಿ ಸಂಭ್ರಮ ಜೋರಾಗಿದೆ.

ಹೈದರಾಬಾದ್‌ನಿಂದ ಬಂದರು!

ಬಳ್ಳಾರಿ: ಪ್ರತಿ ವರ್ಷವೂ ಹೈದರಾಬಾದಿನಿಂದ ಕುಟುಂಬ ಸಮೇತರಾಗಿ ಬಳ್ಳಾರಿಗೆ ಬಂದು ವಿಶಿಷ್ಟ ಖಾದ್ಯ ಅಲೀಮಾ ತಯಾರಿಸಿ ಮಾರುವ ಮಹ್ಮದ್‌ ನಜೀರ್‌ ಬಿಡುವಿಲ್ಲದೆ ಬೆವರಿಳಿಸುವ ಶ್ರಮದಲ್ಲೂ ಕೋಪ–ತಾಪಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ.

ಅವರ ಮನೆಯ ಹುಡುಗ–ಹುಡುಗಿಯರೂ ಅವರೊಂದಿಗೆ ಸೇರಿಕೊಳ್ಳುವುದು ಸಂಭ್ರಮವನ್ನು ಹೆಚ್ಚಿಸುತ್ತದೆ. ಮೊದಲ ರೈಲು ಗೇಟ್‌ ದಾಟಿ ಕೌಲ್‌ಬಜಾರ್‌ ಮುಖ್ಯ ರಸ್ತೆಯಲ್ಲಿ ಮುನ್ನೂರು ಮೀಟರ್ ನಡೆದರೆ ಎಡಬದಿಯಲ್ಲಿ ದಿವಾನ್‌ ಮಸ್ತಾನ್ ದರ್ಗಾದ ಪಕ್ಕದಲ್ಲೇ ಅವರ ಅಂಗಡಿ ಕಾಣುತ್ತದೆ.

ಮನೆಯ ಎಂಟು ಮಂದಿ ಸದಸ್ಯರು ಹಾಗೂ ಸ್ಥಳೀಯ ಆರು ಮಂದಿ ಕೆಲಸಗಾರರೊಂದಿಗೆ ಅವರು ಇಲ್ಲಿ ದುಡಿಯುತ್ತಲೇ ರಂಜಾನ್‌ ಮಾಸವನ್ನೂ ಆಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry