7
ವಾರ್ಡ್‌ವಾರು ಮೀಸಲಾತಿ ಬದಲಾವಣೆ, ನಗರದ 31 ವಾರ್ಡ್‌ ಪೈಕಿ 60ರಷ್ಟು ಸದಸ್ಯರಿಗೆ ಮರು ಸ್ಪರ್ಧೆಗೆ ಕಂಟಕ

ಕರಡು ಮೀಸಲಾತಿ, ಬಹುತೇಕರಿಗೆ ಫಜೀತಿ!

Published:
Updated:
ಕರಡು ಮೀಸಲಾತಿ, ಬಹುತೇಕರಿಗೆ ಫಜೀತಿ!

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ನಗರಸಭೆಗೆ ಇತ್ತೀಚೆಗೆ ಪ್ರಕಟವಾಗಿರುವ ವಾರ್ಡ್‌ವಾರು ಮೀಸಲಾತಿ ಕರಡು ಪಟ್ಟಿಗೆ ನಗರಸಭೆಯ ಬಹುತೇಕ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಬದಲಾವಣೆ ಮಾರ್ಗಸೂಚಿ ಪಾಲಿಸದೆ ಅವೈಜ್ಞಾನಿಕವಾಗಿ ಬದಲಾವಣೆ ಮಾಡಲಾಗಿದೆ ಎಂದು ಅನೇಕರು ಆರೋಪ ಮಾಡುತ್ತಿದ್ದಾರೆ.

ಬದಲಾದ ವಾರ್ಡ್‌ವಾರು ಮೀಸಲಾತಿ ಕರಡು ಪಟ್ಟಿಯ ಪ್ರಕಾರ ನಗರಸಭೆಯ ಹಾಲಿ 31 ಸದಸ್ಯರ ಪೈಕಿ ಅಧ್ಯಕ್ಷ ಎಂ.ಮುನಿಕೃಷ್ಣ, ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್ ಸೇರಿದಂತೆ 21 ಸದಸ್ಯರಿಗೆ ಸದ್ಯ ತಾವು ಪ್ರತಿನಿಧಿಸುತ್ತಿರುವ ವಾರ್ಡ್‌ನಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದೆ. ಈ ಬದಲಾವಣೆ ಬಹುತೇಕರನ್ನು ಕೆರಳುವಂತೆ ಮಾಡಿದೆ. ಶೇ 60ರಷ್ಟು ವಾರ್ಡ್‌ಗಳಿಂದ ಆಕ್ಷೇಪಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಕರಡು ಮೀಸಲು ಬಗ್ಗೆ ಲಿಖಿತ ರೂಪ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಗುರುವಾರ (ಜೂ.14) ಕೊನೆಯ ದಿನವಾಗಿದೆ. ಮಂಗಳವಾರದ ಹೊತ್ತಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 40ಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ. ಆಕ್ಷೇಪಣೆಗೆ ಮನ್ನಣೆ ದೊರೆತು ನ್ಯಾಯಯುತವಾಗಿ ಮೀಸಲಾತಿ ನಿಗದಿಯಾಗದಿದ್ದರೆ ಈ ಬದಲಾವಣೆ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧವಾಗಿದ್ದಾರೆ ಎಂದು ತಿಳಿದು ಬಂದಿದೆ.

ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಕರಡು ಪಟ್ಟಿ ಸಿದ್ಧಪಡಿಸುವಾಗ ಜಾತಿವಾರು ಅಂಕಿಅಂಶ ಪರಿಗಣಿಸಿ, ಬದಲಾವಣೆ ಮಾಡಬೇಕಿತ್ತು. ಅದನ್ನು ಇಲ್ಲಿ ಪಾಲಿಸಿಲ್ಲ. ಜತೆಗೆ ಕೆಲ ಪ್ರಭಾವಿ ಸದಸ್ಯರು, ರಾಜಕಾರಣಿಗಳು ತಮ್ಮದೇ ತಂತ್ರಗಾರಿಕೆ ಮಾಡಿದ್ದಾರೆ ಎನ್ನುವ ಆರೋಪಗಳು ನಗರಸಭೆ ಆವರಣದಲ್ಲಿ ಹರಿದಾಡುತ್ತಿವೆ.

‘ಈ ಹಿಂದೆ ನಡೆದ ವಾರ್ಡ್‌ ವಿಂಗಡಣೆಯೇ ಕ್ರಮಬದ್ಧವಾಗಿ ನಡೆದಿಲ್ಲ. ಅದೇ ರೀತಿ ಈ ಮೀಸಲಾತಿ ಬದಲಾವಣೆಯಲ್ಲೂ ಸಾಕಷ್ಟು ನೂನ್ಯತೆಗಳಿವೆ. 11ನೇ ವಾರ್ಡ್‌ನಲ್ಲಿ ಪರಿಶಿಷ್ಟ ಜನಾಂಗದ ಜನಸಂಖ್ಯೆ ಕಡಿಮೆ ಇದೆ. ಆದರೆ ಅಲ್ಲಿ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾತಿ ನಿಗದಿ ಪಡಿಸಿದೆ. ಅಲ್ಲಿ ಮುಸ್ಲಿಮರು, ಹಿಂದುಳಿದ ವರ್ಗದವರು ಹೆಚ್ಚಿದ್ದರೂ ಕಡೆಗಣಿಸಲಾಗಿದೆ. ವಾಸ್ತವವಾಗಿ ಆ ವಾರ್ಡ್‌ ಹಿಂದುಳಿದ ವರ್ಗದವರಿಗೆ ಮೀಸಲಾಗಬೇಕಿತ್ತು’ ಎನ್ನುತ್ತಾರೆ ನಗರಸಭೆ ಮಾಜಿ ಅಧ್ಯಕ್ಷ ಭಾಸ್ಕರ್.

‘18ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗದವರು ಇಲ್ಲದಿದ್ದರೂ ಹಿಂದುಳಿದ ವರ್ಗ ‘ಎ’ ಮೀಸಲಾತಿ ನಿಗದಿ ಮಾಡಲಾಗಿದೆ. ವಾಸ್ತವದಲ್ಲಿ ಅಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅದನ್ನು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿಡಬಹುದಿತ್ತು ಮೀಸಲಾತಿ ಬದಲಾಯಿಸುವವರಿಗೆ ಇವೆಲ್ಲ ಏಕೆ ಹೊಳೆಯುವುದಿಲ್ಲ’ ಎಂದು ಅವರು ಪ್ರಶ್ನಿಸಿದರು.

ನಗರಸಭೆಯಲ್ಲಿ ಸತತ ಗೆಲುವು ಸಾಧಿಸಿಕೊಂಡು ಬರುತ್ತಿರುವ ಹಿರಿಯ ಮತ್ತು ಪ್ರಭಾವಿ ಸದಸ್ಯ ಎಸ್.ಎಂ.ರಫೀಕ್ (17 ನೇ ವಾರ್ಡ್) ಸ್ಪರ್ಧೆಗೆ ಮೀಸಲಾತಿ ಅಡ್ಡಿಯಾಗದೆ ಇರುವುದು ಬಹುತೇಕ ಸದಸ್ಯರ ಅಚ್ಚರಿ ಮೂಡಿಸಿದೆ.

‘ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆ’

‘ಮೀಸಲಾತಿ ಬದಲಾವಣೆಯಲ್ಲಿ ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಮೀಸಲಾತಿ ಬದಲಾವಣೆಯನ್ನು ವೈಜ್ಞಾನಿಕವಾಗಿ ಮಾಡಿಲ್ಲ. ವಾರ್ಡ್‌ 5ರಲ್ಲಿ ಎಸ್‌ಸಿ ಜನರು ಹೆಚ್ಚಿದ್ದಾರೆ. ಆದರೆ ಅಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. 22ನೇ ವಾರ್ಡ್‌ನಲ್ಲಿ ಎಸ್‌ಸಿ ಜನಾಂಗ ತುಂಬಾ ಕಡಿಮೆ ಇದೆ. ಅಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ನೀಡಲಾಗಿದೆ. ಇದಕ್ಕೆ ಏನು ಮಾನದಂಡ ಎಂದು ಅರ್ಥವಾಗುತ್ತಿಲ್ಲ.

ವಾರ್ಡ್ 12 ರಲ್ಲಿ ಶೇ10 ರಷ್ಟು ಹಿಂದುಳಿದವರು, ಶೇ 90 ರಷ್ಟು ಪರಿಶಿಷ್ಟರು, ಮುಸ್ಲಿಮರು ಇದ್ದಾರೆ. ಆದರೆ ಆ ವಾರ್ಡ್‌ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದಾರೆ. ಇದ್ಯಾವ ನ್ಯಾಯ? ಪರಿಶಿಷ್ಟ ಜಾತಿಯವರು ಹೆಚ್ಚಿರುವ ಕಡೆ ಎಸ್‌ಸಿ ಮಹಿಳೆ ಮೀಸಲಾತಿ ನಿಗದಿ ಮಾಡಬೇಕು. ಅದನ್ನು ಪಾಲನೆ ಮಾಡಿಲ್ಲ. ಒಟ್ಟಿನಲ್ಲಿ ಅಧಿಕಾರಿಗಳ ಈ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ’

- ಕಿಸಾನ್ ಕೃಷ್ಣಪ್ಪ, 28ನೇ ವಾರ್ಡ್ ಸದಸ್ಯ

ಬಹಳಷ್ಟು ತಪ್ಪುಗಳಿವೆ

‘ಹಿಂದುಳಿದ ವರ್ಗ, ಮಹಿಳೆ ಮೀಸಲಾತಿಗಳು ಪುನರಾವರ್ತನೆಗಳಾಗಬಾರದು. ಆದರೆ ಈ ಕರಡು ಪಟ್ಟಿಯಲ್ಲಿ ಆ ತೆರನಾದ ಬಹಳಷ್ಟು ತಪ್ಪುಗಳಿವೆ. ಈ ಬದಲಾವಣೆ ಹಿಂದೆ ಕೆಲ ಒತ್ತಡಗಳು ಕೆಲಸ ಮಾಡಿವೆ. ಆಕ್ಷೇಪಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಮತ್ತು ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕರು ಸರ್ಕಾರಕ್ಕೆ ಯಾವ ಶಿಫಾರಸು ಮಾಡುತ್ತಾರೋ ಎಂಬುದನ್ನು ಕಾಯ್ದು ನೋಡುತ್ತಿದ್ದೇವೆ’

- ಪಿ.ಶ್ರೀನಿವಾಸ್, 8ನೇ ವಾರ್ಡ್ ಸದಸ್ಯ

ಜೆಡಿಎಸ್ ಸದಸ್ಯರ ಮೇಲೆ ಕೆಂಗಣ್ಣು?

ನಗರಸಭೆಯಲ್ಲಿದ್ದ ಒಂಬತ್ತು ಜೆಡಿಎಸ್‌ ಸದಸ್ಯರ ಪೈಕಿ ಆರೇಳು ತಿಂಗಳ ಹಿಂದೆ ಆರು ಸದಸ್ಯರು ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಣ ಸೇರಿಕೊಂಡಿದ್ದರು. ಹೀಗಾಗಿ ವಿರೋಧ ಪಕ್ಷದಲ್ಲಿ ಮೂರೇ ಸದಸ್ಯರು ಉಳಿದಿದ್ದರು. ಇದೀಗ ಆ ಮೂರು ಸದಸ್ಯರು ಮೀಸಲಾತಿ ಬದಲಾವಣೆಯಿಂದ ತಮ್ಮ ವಾರ್ಡ್‌ಗಳಲ್ಲಿ ಮತ್ತೆ ಸ್ಪರ್ಧಿಸದಂತೆ ಆಗಿದೆ. ಇದರ ಹಿಂದೆ ರಾಜಕೀಯ ಕೈವಾಡಗಳಿವೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿವೆ.

ಜೆಡಿಎಸ್ ಸದಸ್ಯರಾದ ಬಿ.ಎಲ್.ಕೇಶವಕುಮಾರ್ (ವಾರ್ಡ್‌ 1) ಅವರ ವಾರ್ಡ್ ಸಾಮಾನ್ಯದಿಂದ ಹಿಂದುಳಿದ ವರ್ಗ- ಎ ಮಹಿಳೆ, ಕಿಸಾನ್ ಕೃಷ್ಣಪ್ಪ (ವಾರ್ಡ್‌ 28) ಅವರ ವಾರ್ಡ್‌ ಮೀಸಲಾತಿ ಸಾಮಾನ್ಯದಿಂದ ಸಾಮಾನ್ಯ ಮಹಿಳೆಯಾಗಿ ಮತ್ತು ಸಿ.ಎಂ.ಶ್ರೀನಿವಾಸರೆಡ್ಡಿ (ವಾರ್ಡ್ 25) ಅವರ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯದಿಂದ ಹಿಂದುಳಿದ ವರ್ಗ ಎ ಎಂದು ಬದಲಾವಣೆ ಮಾಡಲಾಗಿದೆ.

‘ಬಹಳಷ್ಟು ಪಕ್ಷಪಾತಿಯಾಗಿ ಮೀಸಲಾತಿ ಮಾಡಲಾಗಿದೆ. ನಗರಸಭೆಯಲ್ಲಿರುವ ಕೆಲ ಪಟ್ಟಭದ್ರ ಹಿತಾಸಕ್ತರು ಇದರ ಹಿಂದೆ ಇರುವ ಶಂಕೆ ಇದೆ. ಈ ಅವೈಜ್ಞಾನಿಕ ಕ್ರಮದ ಬಗ್ಗೆ ನಾನು ಆಕ್ಷೇಪ ಸಲ್ಲಿಸಿರುವೆ’ ಎಂದು ಕಿಸಾನ್ ಕೃಷ್ಣಪ್ಪ ತಿಳಿಸಿದರು.

ಬದಲಾಗದ ಮಹಿಳಾ ಮೀಸಲಾತಿ?

ಮೀಸಲಾತಿ ಬದಲಾವಣೆ ಮಾಗಸೂರ್ಚಿ ಪ್ರಕಾರ ಮಹಿಳಾ ಮೀಸಲಾತಿ ಪುನರಾವ ರ್ತನೆಯಾಗಬಾರದು. ಆದರೆ ಬದಲಾದ ಮೀಸಲಾತಿ ಕರಡು ಪಟ್ಟಿ ಪ್ರಕಾರ 31 ವಾರ್ಡ್‌ಗಳ ಪೈಕಿ 9 ವಾರ್ಡ್‌ ಗಳಲ್ಲಿ (3,11,13,16, 20, 21,26,27, 29) ಮಹಿಳೆ ಮೀಸಲಾತಿ ಪುನರಾವರ್ತ ನೆಯಾಗಿದೆ. ಹೀಗಾಗಿ ಇದೊಂದು ಅವೈಜ್ಞಾನಿಕ ಕ್ರಮ ಎನ್ನುವುದು ಅನೇಕ ಸದಸ್ಯರ ಆರೋಪವಾಗಿದೆ.

ವಾರ್ಡ್‌ವಾರು ಮೀಸಲಾತಿ ವಿವರ

ನಗರಸಭೆಯ 2, 5, 14, 15, 17, 19, 23 ಮತ್ತು 24ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ,  10, 16, 21, 26, 27, 28, 30 ಮತ್ತು 31ನೇ ವಾರ್ಡ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. 4, 8 ಹಾಗೂ 22ನೇ ವಾರ್ಡ್ ಪರಿಶಿಷ್ಟ ಜಾತಿ, 7 ಮತ್ತು 29ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ, 9ನೇ ವಾರ್ಡ್ ಪರಿಶಿಷ್ಟ ಪಂಗಡಗೆ ಮೀಸಲಾಗಿದೆ.

11ನೇ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆಗೆ, 6, 18 ಮತ್ತು 25ನೇ ವಾರ್ಡ್ ಹಿಂದುಳಿದ ವರ್ಗ ಎ ಅಭ್ಯರ್ಥಿಗಳಿಗೆ ಸೀಮಿತವಾಗಿದೆ. 1, 13 ಮತ್ತು 20ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆಗೆ, 12ನೇ ವಾರ್ಡ್ ಹಿಂದುಳಿದ ವರ್ಗ ಬಿ ಅಭ್ಯರ್ಥಿಗಳಿಗೆ ಮತ್ತು 3ನೇ ವಾರ್ಡ್ ಹಿಂದುಳಿದ ವರ್ಗ- ಬಿ ಮಹಿಳೆಗೆ ಮೀಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry