ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿಮಟ್ಟಿ ಚಾರಣಕ್ಕೆ ಪ್ರಸ್ತಾವ ಸಲ್ಲಿಕೆ

ಬಯಲು ಸೀಮೆಯ ಊಟಿ ಎಂದೇ ಪ್ರಸಿದ್ಧಿ l ಪ್ರವಾಸಿಗರನ್ನು ಆಕರ್ಷಿಸಲು ಮುಂದಾದ ಅರಣ್ಯ ಇಲಾಖೆ
Last Updated 15 ಜೂನ್ 2018, 11:24 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬಯಲು ಸೀಮೆಯ ಊಟಿ’ ಎಂದೇ ಹೆಸರಾಗಿರುವ ಜೋಗಿಮಟ್ಟಿ ವನ್ಯಜೀವಿ ಧಾಮಕ್ಕೆ ಪ್ರವಾಸಿಗರನ್ನು ಸೆಳೆಯಲು ಮುಂದಾಗಿರುವ ಅರಣ್ಯ ಇಲಾಖೆ, ಚಾರಣಕ್ಕೆ ಅವಕಾಶ ಕಲ್ಪಿಸಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಿದೆ.

ಪ್ರಸ್ತಾವಕ್ಕೆ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದರೆ ಚಾರಣ ಪ್ರಿಯರು ಚಿತ್ರದುರ್ಗಕ್ಕೆ ಬರಲಿದ್ದಾರೆ. ಐತಿಹಾಸಿಕ ಕೋಟೆಯ ಜೊತೆಗೆ ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲಿದ್ದಾರೆ. ಚಾರಣಕ್ಕೆ ಅಗತ್ಯವಿರುವ ಸಿದ್ಧತೆಯಲ್ಲಿ ಅರಣ್ಯ ಇಲಾಖೆ ತೊಡಗಿಕೊಂಡಿದೆ.

ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ 10,049 ಹೆಕ್ಟೇರ್‌ ಅರಣ್ಯದಲ್ಲಿ ಹರಡಿಕೊಂಡಿರುವ ಜೋಗಿಮಟ್ಟಿ ಜಿಲ್ಲೆಯ ಅತಿ ಎತ್ತರದ ಸ್ಥಳ. ಸಮುದ್ರಮಟ್ಟದಿಂದ 3,803 ಅಡಿ ಎತ್ತರದಲ್ಲಿರುವ ಗಿರಿಧಾಮ, ಏಷ್ಯಾದಲ್ಲೇ ಅತಿಹೆಚ್ಚು ಗಾಳಿ ಬೀಸುವ ಎರಡನೇ ತಾಣ ಕೂಡ ಹೌದು.

‘ಒತ್ತಡದಿಂದ ಹೊರಬರಲು ಟೆಕ್ಕಿಗಳು ಚಾರಣ ಆಯ್ಕೆ ಮಾಡಿಕೊಳ್ಳುತ್ತಿ ದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರಿನ ಹಲವರು ಚಾರಣಕ್ಕೆ ಹೋಗುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಅಪಾರ ವನ್ಯಸಂಪತ್ತು ಹೊಂದಿರುವ ಜೋಗಿಮಟ್ಟಿ ಚಾರಣಿಗರಿಗೆ ಇಷ್ಟವಾ ಗುತ್ತದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಇದೊಂದು ಸದವಕಾಶ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಮಂಜುನಾಥ್‌.

ನವಿಲುಗುಡ್ಡ, ಜೋಗಿಗುಡ್ಡ, ಹಿಮವತ್ಕೇದಾರ, ಚೌಡಮ್ಮನ ದೇವಸ್ಥಾನದವರೆಗೆ ಚಾರಣ ಮಾಡಲು ಅವಕಾಶವಿದೆ. ಚಾರಣದ ರೂಪುರೇಷೆ ಇನ್ನೂ ಸ್ಪಷ್ಟತೆ ಪಡೆದುಕೊಂಡಿಲ್ಲ. ನಸುಕಿನಿಂದ ಸಂಜೆಯವರೆಗೆ ಒಂದು ದಿನದ ಚಾರಣಕ್ಕೆ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ.

ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ: ‘ಕೋಟೆ ವೀಕ್ಷಿಸಲು ಬರುವವರು ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಜೋಗಿಮಟ್ಟಿಯ ಕುರಿತು ಗೊತ್ತಿದ್ದವರು ಮಾತ್ರ ಗಿರಿಧಾಮ ಪ್ರವೇಶಿಸುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಚಾರಣಕ್ಕೆ ಅವಕಾಶ ಕಲ್ಪಿಸಿದ್ದೇವೆ. ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಜವಾಬ್ದಾರಿ ನೀಡುವ ಉದ್ದೇಶವಿದೆ. ಚಾರಣ ಪ್ರಿಯರನ್ನು ಕರೆತರುವ, ಮುಂಗಡ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯನ್ನು ಮಂಡಳಿಯೇ ನಿರ್ವಹಿಸಲಿದೆ’ ಎಂದು ಮಂಜುನಾಥ್‌ ವಿವರಿಸಿದರು.

ಚಾರಣಕ್ಕೆ ಕರೆದೊಯ್ಯಲು ಸ್ಥಳೀಯ ಆಸಕ್ತರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಜೋಗಿಮಟ್ಟಿ ಅರಣ್ಯದ ಪರಿಚಯ ಇರುವವರನ್ನು ನೇಮಕ ಮಾಡಿಕೊಳ್ಳಲು ಅರಣ್ಯ ಇಲಾಖೆ ಒಲವು ತೋರಿದೆ. ಚಾರಣಿಗರೊಂದಿಗೆ ನಡೆದುಕೊಳ್ಳುವ ರೀತಿ, ಕರೆದೊಯ್ಯುವ ಬಗೆಯ ಕುರಿತು ತರಬೇತಿ ನೀಡಲು ಚಿಂತನೆ ನಡೆಸಿದೆ.

ಪ್ರವೇಶ ದರ ನಿಗದಿ: ಜೋಗಿಮಟ್ಟಿ ಮೀಸಲು ಅರಣ್ಯವನ್ನು ವನ್ಯಜೀವಿ ಧಾಮವಾಗಿ ಪರಿವರ್ತಿಸಿದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಅರಣ್ಯ ಇಲಾಖೆ ಟಿಕೆಟ್‌ ದರ ನಿಗದಿಪಡಿಸಿದೆ.

2017ರ ಅ.7ರಂದು ಅಧಿಸೂಚನೆ ಹೊರಡಿಸಿದ ಎಪಿಸಿಸಿಎಫ್‌, ವಾಹನಗಳ ಪಾರ್ಕಿಂಗ್‌ಗೂ ದರ ನಿಗದಿ ಮಾಡಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಜೋಗಿಮಟ್ಟಿ ಪ್ರವೇಶ ಮಾಡಬಹುದಾಗಿದೆ. 2015ಕ್ಕೂ ಹಿಂದೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು.

ಜೋಗಿಮಟ್ಟಿಯಲ್ಲಿ 200ಕ್ಕೂ ಹೆಚ್ಚು ವಿವಿಧ ಪಕ್ಷಿಗಳಿವೆ. ಚಿರತೆ, ಕರಡಿ, ಕೊಂಡುಕುರಿ, ಕೃಷ್ಣಮೃಗ, ನವಿಲು, ಕಾಡುಹಂದಿ, ಕಾಡುಬೆಕ್ಕು, ಮುಳ್ಳು ಹಂದಿ, ಮೊಲ, ನರಿ ಸೇರಿದಂತೆ ಉಭಯ ಜೀವಿಗಳಿವೆ. ಅಪರೂಪದ ಗಿಡಮೂಲಿಕೆಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ವನ್ಯಧಾಮಕ್ಕೆ ಪ್ರವೇಶ ದರ ನಿಗದಿಪಡಿಸುವ ನಿಯಮ ಇಲಾಖೆಯಲ್ಲಿದೆ. ಪ್ರವಾಸಿಗರಿಗೆ ಮಾತ್ರ ಟಿಕೆಟ್‌ ಕಡ್ಡಾಯ. ವಾಯು ವಿಹಾರಿಗಳಿಗೆ ಇದು ಅನ್ವಯಿಸುವುದಿಲ್ಲ
– ಮಂಜುನಾಥ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT