ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ರಾಜಕೀಯ ತೊಳೆದುಕೊಂಡ ‘ಭದ್ರಾ ಮೇಲ್ದಂಡೆ’

ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಬಂದೀತೆಂಬ ನಿರೀಕ್ಷೆಯಲ್ಲಿ ಮಧ್ಯ ಕರ್ನಾಟಕದ ರೈತರು
Last Updated 15 ಜೂನ್ 2018, 11:39 IST
ಅಕ್ಷರ ಗಾತ್ರ

ದಾವಣಗೆರೆ: ನೀರಸೆಲೆಗಳನ್ನು ಉಳ್ಳವರು ಅದನ್ನು ತಮ್ಮದಲ್ಲದ ದೂರದ ಪ್ರದೇಶಗಳಿಗೆ ಮುಟ್ಟಿಸುವ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವುದು ಸಹಜ. ನಾಗರಿಕ ಸಮಾಜದಲ್ಲಿ ಜಲ ವಿವಾದಗಳ ಆತ್ಮವಿರುವುದೇ ಈ ಗುಣದಲ್ಲಿ. ಆದರೆ, ಭದ್ರಾ ಮೇಲ್ದಂಡೆ ಯೋಜನೆ ವಿರೋಧದ ಎಲ್ಲ ಸದ್ದುಗಳನ್ನು ಅಡಗಿಸಿ, ಹೊಸ ಕನಸುಗಳನ್ನು ರೈತರು, ರಾಜಕೀಯ ಮುಖಂಡರೆದೆಯಲ್ಲಿ ಬಿತ್ತಿರುವುದು ವಿಶೇಷ.

ಮೂರು ದಶಕಗಳ ಆಗ್ರಹದ ಪರಿಣಾಮವಾಗಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿದ್ದು 2006ರಲ್ಲಿ. ‘ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ’ ಎಂಬ ನಾಣ್ನುಡಿಯನ್ನು ಕಣ್ಣಿಗೊತ್ತಿಕೊಂಡ ತರೀಕೆರೆ ತಾಲ್ಲೂಕಿನ ಜನರು ಮೊದಲು ಅಸಮಾಧಾನದ ಉಸಿರು ಹೊರಹಾಕಿದರು. ಭದ್ರಾ ಮೇಲ್ಡಂಡೆ ಯೋಜನೆ ವಿರೋಧಿ ಹೋರಾಟ ಸಮಿತಿ ಹುಟ್ಟಿಕೊಂಡಿತು. ಜಿ.ಎಚ್. ಶ್ರೀನಿವಾಸ್ ಆ ಹೋರಾಟದ ಮುಂಚೂಣಿಯಲ್ಲಿದ್ದರು. ಅಜ್ಜಂಪುರದಲ್ಲಿ 6.09 ಕಿ.ಮೀ. ಉದ್ದದ ಸುರಂಗ ನಿರ್ಮಾಣ ಯೋಜನೆಯ ಪ್ರಮುಖ ಭಾಗ. ತಾಲ್ಲೂಕಿನ ಮುಖ್ಯ ಪ್ರದೇಶದಲ್ಲಿ 47 ಕಿ.ಮೀ.ನಷ್ಟು ಕಾಲುವೆ ಹಾದುಹೋಗುತ್ತದೆಂಬ ವಾಸ್ತವವನ್ನು ಸ್ಥಳೀಯರಿಗೆ ಒಪ್ಪಿಕೊಳ್ಳಲು ಆಗಲಿಲ್ಲ. 2009ರ ಹೊತ್ತಿಗೆ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆದವು. ಐದು ಏತ ನೀರಾವರಿ ಯೋಜನೆಗಳ ಕ್ರೋಡೀಕರಣವಾದ ಹೊಸ ಕಾಮಗಾರಿಯಿಂದ ಚಿಕ್ಕಮಗಳೂರಿಗೆ ಎಷ್ಟು ನೀರು ಸಿಕ್ಕೀತು ಎಂಬ ಪ್ರಶ್ನೆ ದೊಡ್ಡದಾಯಿತು. ಇನ್ನೊಂದು ಕಡೆ, ಯೋಜನೆ ಕಾರ್ಯರೂಪಕ್ಕೆ ಬಂದಿತಲ್ಲ ಎಂದು ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರಿನ ರೈತರು ಕಣ್ಣರಳಿಸಿದರು.

ಪ್ರತಿಭಟನೆಯ ದನಿಗಳನ್ನು ಯೋಜನೆಯ ವಿವಿಧ ಹಂತಗಳು ಅಡಗಿಸುತ್ತಾ ಬಂದವು. ಅಜ್ಜಂಪುರ ಸುರಂಗ ಹಾದುಹೋಗುವ ಮೊದಲು ನೀರಿನಲ್ಲಿ 0.639 ಟಿಎಂಸಿ ಅಡಿ ನೀರನ್ನು ಎತ್ತಿ ತರೀಕೆರೆ ತಾಲ್ಲೂಕಿನ 59 ಕೆರೆಗಳನ್ನು ತುಂಬಿಸುವ ಆಶ್ವಾಸನೆ (ಪ್ಯಾಕೇಜ್ 2) ಬಂತು. ಇದರಿಂದ ಮೂಡಿದ್ದು 6,556 ಹೆಕ್ಟೇರ್ ಪ್ರದೇಶದ ಕೃಷಿಗೆ ಅನುಕೂಲ ಕಲ್ಪಿಸುವ ಆಶಾವಾದ. ತುಮಕೂರು ಶಾಖಾ ಕಾಲುವೆ ನಿರ್ಮಾಣದ ‘ಪ್ಯಾಕೇಜ್-2’ರಲ್ಲಿ ಕಡೂರಿನ ಏಳು ಕೆರೆಗಳು ತುಂಬುವ ಸಕಾರಾತ್ಮಕ ಸಾಧ್ಯತೆ ಕಾಣಿಸಿತು. 23 ಹಳ್ಳಿಗಳಿಗೆ ಲಾಭವಾಗುವ ಈ ವಿಷಯ ಕೂಡ ಪ್ರತಿಭಟನೆಯ ಕೆಂಡದ ಮೇಲೆ ಸ್ವಲ್ಪ ನೀರು ಚೆಲ್ಲಿತೆನ್ನಿ.

ಸುರಂಗ ಕಾಲುವೆ ನಿರ್ಗಮನ ಮಾರ್ಗದ ಕಾಲುವೆಯಿಂದ 0.831 ಟಿಎಂಸಿ ನೀರನ್ನು ಎತ್ತಿ ತರೀಕೆರೆ ತಾಲ್ಲೂಕಿನ ಇನ್ನೂ 10 ಕೆರೆಗಳಿಗೆ ನೀರುಣಿಸುವ ಭರವಸೆಯೂ ಸಿಕ್ಕಿತು. ಇದಲ್ಲದೆ 13.5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ಜೀವಜಲ ದಕ್ಕಿಸಿಕೊಡುವ ಆಶ್ವಾಸನೆ. ₹ 930 ಕೋಟಿಗೂ ಹೆಚ್ಚು ಮೊತ್ತ ಬೇಡುವ ಈ ಕನಸುಗಳಿಂದ ವಿರೋಧದ ದನಿ ಕ್ಷೀಣಗೊಂಡಿದ್ದೇನೋ ನಿಜ.

ಹೋರಾಟಗಾರರ ಸಾಲಿನಲ್ಲಿ ದೊಡ್ಡ ದನಿ ಹೊಮ್ಮಿಸುತ್ತಿದ್ದ ಜಿ.ಎಚ್. ಶ್ರೀನಿವಾಸ್ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಕೇವಲ 899 ಮತಗಳ ಅಂತರದಿಂದ ಗೆದ್ದರು. ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರದ್ದೇ ಸಮುದಾಯಕ್ಕೆ ಸೇರಿದ ಶ್ರೀನಿವಾಸ್, ಸ್ಥಳೀಯರ ಭರವಸೆಗಳನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನಗಳನ್ನು ಮಾಡಿದರು.

‘ಶಾಸಕನಾದ ಮೇಲೂ ನಾನು ಸುರಂಗ ನಿರ್ಮಾಣಕ್ಕೆ ಅಡ್ಡ ಹಾಕಿದ್ದೆ. ತರೀಕೆರೆ ಕ್ಷೇತ್ರದ ಅಷ್ಟೂ ಜಾಗಕ್ಕೆ ನೀರು ಕೊಡಬೇಕು ಎಂಬ ನನ್ನ ಮನವಿಗೆ ಸಚಿವರು ಸ್ಪಂದಿಸಿದ ಮೇಲಷ್ಟೆ ಕಾಮಗಾರಿ ಮುಂದುವರಿಸಲು ನಾನು ಒಪ್ಪಿದ್ದು. ನನ್ನ ಕ್ಷೇತ್ರದ 70–80 ಕೆರೆಗಳಿಗೆ ನೀರು ಸಿಗುತ್ತದೆಂಬ ನಂಬಿಕೆಗೆ ಲಿಖಿತ ದಾಖಲೆಯ ರೂಪವನ್ನೂ ನೀಡುವಂತೆ ನಾನು ಒತ್ತಾಯಿಸಿದ್ದೆ. ಸಭಾ ಚರ್ಚೆಗಳ ಪ್ರತಿ ಅಂಶವೂ ದಾಖಲಾಗುವಂತೆ ನೋಡಿಕೊಂಡೆ. ಸ್ಥಳೀಯರಿಗೂ ಯೋಜನೆಯಿಂದ ಲಾಭವಿದೆ ಎನ್ನುವುದು ಸ್ಪಷ್ಟವಾದ ಮೇಲಷ್ಟೇ ಎಲ್ಲರೊಳಗೆ ಒಂದಾದದ್ದು’ ಎಂದು ಶ್ರೀನಿವಾಸ್ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಬಿಜೆಪಿಯ ಡಿ.ಎಸ್. ಸುರೇಶ್ ಅವರಿಗೆ ಉತ್ತಮ ಪೈಪೋಟಿಯನ್ನೇ ನೀಡಿ ಸೋತರು. ಅವರು ಪಡೆದ ಮತಗಳೇ ಭದ್ರಾ ಮೇಲ್ದಂಡೆಯಲ್ಲಿ ಅಂಥ ರಾಜಕೀಯವೇನೂ ನಡೆದಿಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತದೆ.

ಈ ಸಲ ರಾಜ್ಯದ ವಿಧಾನಸಭಾ ಚುನಾವಣೆಗೆ ಒಂದು ವಾರ ಮೊದಲಷ್ಟೆ ಪ್ರಧಾನಿ ನರೇಂದ್ರ ಮೋದಿ ಭದ್ರಾ ಮೇಲ್ದಂಡೆ ಅನುಷ್ಠಾನಕ್ಕೆ ತಾವು ಬದ್ಧ ಎಂಬ ಒಂದು ಸಾಲಿನ ವಾಗ್ದಾನವಿತ್ತರು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ₹ 1.5 ಲಕ್ಷ ಕೋಟಿ ವೆಚ್ಚದಲ್ಲಿ 2023ರೊಳಗೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರೈಸುವುದಾಗಿ ಹೇಳಿತು. ಕಾಂಗ್ರೆಸ್ ಕೂಡ ₹ 1.25 ಲಕ್ಷ ಕೋಟಿ ವೆಚ್ಚದಲ್ಲಿ ಅದೇ ಕೆಲಸ ಮಾಡುವ ಆಶ್ವಾಸನೆಯನ್ನೇ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದು. ಜೆಡಿಎಸ್ ಪ್ರಣಾಳಿಕೆಯೂ ಇದಕ್ಕೆ ಹೊರತಾಗಿಯೇನೂ ಇರಲಿಲ್ಲ. ಆದರೆ, ಭದ್ರಾ ಮೇಲ್ದಂಡೆ ಯೋಜನೆ ಕುರಿತ ಸ್ಪಷ್ಟ ಉಲ್ಲೇಖ ಯಾವ ಪ್ರಣಾಳಿಕೆಯಲ್ಲೂ ಇರಲಿಲ್ಲ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಲ್ಲಿ ಇದೇ ಯೋಜನೆಯ ಕವಲಾದ ‘ಸುವರ್ಣಮುಖಿ’ ಪರಿಣಾಮ ಬೀರಿರಬಹುದು ಎನ್ನುವುದು ಕೆಲವರ ವಾದವಾಗಿತ್ತು. ಅದನ್ನು ಚಿತ್ರದುರ್ಗದ ರೈತ ಮುಖಂಡರಾದ ಜಯಣ್ಣ, ನುಲೇನೂರು ಶಂಕರಪ್ಪ ಒಪ್ಪುವುದಿಲ್ಲ. ಈ ಸಲದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ದುಡ್ಡಿನ ನಡುವೆ ಅಷ್ಟೇ ಪೈಪೋಟಿ ಇತ್ತೆನ್ನುವುದು ಅವರ ಅಭಿಪ್ರಾಯ.

ಭಾಷಣವಿಟ್ಟ ನಾಯಕರ ನುಡಿಗಳಲ್ಲಿ ಭದ್ರಾ ಮೇಲ್ದಂಡೆಯ ಪ್ರಸ್ತಾಪವೇನೋ ಇತ್ತು. ಆದರೆ, ಅದೇ ಮುಖ್ಯ ರಾಜಕೀಯ ದಾಳ ಆಗಲೇ ಇಲ್ಲ ಎನ್ನುತ್ತಾರೆ ಅವರು.

ಹಿಂದೆ ಎಚ್.ಡಿ. ಕುಮಾರಸ್ವಾಮಿ ಅಲ್ಪಾವಧಿಗೆ ಮುಖ್ಯಮಂತ್ರಿ ಆಗಿದ್ದಾಗ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಜಯಣ್ಣ ಅವರಿಗೆ ಇನ್ನುಮುಂದೆಯೂ ಯೋಜನೆ ಕುಂಟುವುದಿಲ್ಲ ಎಂಬ ನಂಬಿಕೆ. ಮಾಜಿ ಶಾಸಕ ಶ್ರೀನಿವಾಸ್ ಕೂಡ ಅವರ ಮಾತನ್ನು ಸಮರ್ಥಿಸುತ್ತಾರೆ. ಅಜ್ಜಂಪುರದಲ್ಲಿ ಸುರಂಗ ತೋಡುವಾಗ ಮಣ್ಣು ಸಿಕ್ಕಿರುವುದರಿಂದ ಕಾಮಗಾರಿ ಸಾವಧಾನದಿಂದ ನಡೆಯುತ್ತಿದೆಯಷ್ಟೆ. ಮುಕ್ಕಾಲು ಭಾಗ ಕಾಮಗಾರಿ ಮುಗಿದಿರುವುದರಿಂದ ಇನ್ನು ವಿಳಂಬದ ಪ್ರಶ್ನೆಯೇ ಇಲ್ಲ ಎನ್ನುವುದು ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್ ಅಭಿಪ್ರಾಯ.

ಈ ಎಲ್ಲ ನುಡಿ–ನುಡಿಗಟ್ಟುಗಳನ್ನು ನೋಡಿದರೆ, ವಾಣಿವಿಲಾಸ ಸಾಗರದ ದೊಡ್ಡ ಬಟ್ಟಲು ಭದ್ರಾ ನೀರು ಹರಿದುಬರಲು ಕಾಯುತ್ತಿರುವಂತೆ ಭಾಸವಾಗುತ್ತಿದೆ. ‘ಮುಂದಿನ ಮಳೆಗಾಲದಲ್ಲಿ ಅದು ಸಾಕಾರಗೊಳ್ಳಲಿದೆ’ ಎಂದು ಹಿಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಕೊಟ್ಟಿದ್ದ ಭರವಸೆ ಈಗಲೂ ಬೆಳ್ಳಿಗೆರೆಯಂತೆ ಕಾಣುತ್ತಿದೆ.

ಹೊಸ ಚಿಂತನೆಗೂ ಬೀಳಲಿಲ್ಲ ಮತ

ಭದ್ರಾವತಿ ಹತ್ತಿರದ ಗೋಂದಿ ಮೂಲಕ ಏತ ನೀರಾವರಿಯಿಂದ ಬೀರೂರಿನ ದೇವನಕೆರೆಗೆ ನೀರು ಹರಿಸುವ ಯೋಚನೆಯನ್ನು ಸುಮಾರು ಎರಡು ವರ್ಷಗಳ ಹಿಂದೆ ಕಡೂರು ಶಾಸಕರಾಗಿದ್ದ ವೈಎಸ್‌ವಿ ದತ್ತ ಮಾಡಿದ್ದರು. ಖಾಸಗಿ ಏಜೆನ್ಸಿ ಮೂಲಕ ಈ ಕುರಿತು ಸರ್ವೇ ಕೂಡ ಮಾಡಿಸಿದ್ದರು. ಇದು ಸಾಕಾರಗೊಂಡರೆ ದೇವನಕೆರೆಯಿಂದ ಮದಗದ ಕೆರೆಗೂ ಮೋಟರ್ ಮೂಲಕವೇ ನೀರು ಹಾಯಿಸಬಹುದು. ಆದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶ ನೋಡಿದರೆ ಇಂಥ ಕೆಲಸಗಳನ್ನು ಮತದಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ನಾಯಕರೊಬ್ಬರು ಪ್ರತಿಕ್ರಿಯಿಸುತ್ತಾರೆ.

ಸೆಪ್ಟೆಂಬರ್ 9, 2017: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು ಭದ್ರಾ ನೀರನ್ನು ಮುಂದಿನ ವರ್ಷದ ಮುಂಗಾರಿನ ವೇಳೆಗೆ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲಾಗುತ್ತದೆ: ಬೃಹತ್ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ್

ಫೆಬ್ರುವರಿ 16, 2018ರ ಬಜೆಟ್‌ನಲ್ಲಿ ಕೇಳಿದ್ದು: ತುಂಗ ಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸುವ ಪರ್ಯಾಯ ಮಾರ್ಗೋಪಾಯವಾಗಿ ಪ್ರವಾಹ ಹರಿವು ನಾಲೆ ಮೂಲಕ ನವಿಲೆ ಹತ್ತಿರ ಸಮತೋಲನ ಜಲಾಶಯ ನಿರ್ಮಾಣ ಯೋಜನೆಯ ಕಾರ್ಯ ಸಾಧ್ಯತೆ ಅಧ್ಯಯನ ಮತ್ತು ಯೋಜನಾ ವರದಿ ತಯಾರಿ. ₹ 250 ಕೋಟಿ ವೆಚ್ಚದಲ್ಲಿ ಜಗಳೂರು ತಾಲ್ಲೂಕಿನ 46 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ. ₹ 250 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ 33 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ. ₹ 135 ಕೋಟಿ ವೆಚ್ಚದಲ್ಲಿ ದಾವಣಗೆರೆ ತಾಲ್ಲೂಕಿನ ಬೇತೂರು, ಮಾಗನಳ್ಳಿ, ರಾಮಪುರ್, ಮೇಗಲಗೇರಿ ಮತ್ತು ಕಾಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ.

ವಾಣಿವಿಲಾಸ ಸಾಗರಕ್ಕೆ ನೀರು ಬಂದರೆ ಇಲ್ಲಿನ ಅಂತರ್ಜಲ ಮಟ್ಟ ಸುಧಾರಿಸಲಿದೆ. ನಾವೆಲ್ಲ ಆ ದಿನಕ್ಕಾಗಿ ಕಾಯುತ್ತಿದ್ದೇವೆ.
-ನುಲೇನೂರು ಶಂಕರಪ್ಪ,ರೈತ ನಾಯಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT