ಶುಕ್ರವಾರ, ಏಪ್ರಿಲ್ 3, 2020
19 °C

ಆಹಾಹಾ... ರುಚಿಕರ ಚಿಕನ್ ಖಾದ್ಯಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾಹಾ... ರುಚಿಕರ ಚಿಕನ್ ಖಾದ್ಯಗಳು...

ಚಿಲ್ಲಿ ಚಿಕನ್‌ 

ಬೇಕಾಗುವ ಸಾಮಗ್ರಿಗಳು: ಕೋಳಿಮಾಂಸ 350 ಗ್ರಾಂ, ಮೊಟ್ಟೆ 1, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಅರ್ಧ ಚಮಚ, ಈರುಳ್ಳಿ 2, ಸೋಯಾ ಸಾಸ್‌, 6 ಹಸಿಮೆಣಸು, ವಿನಿಗರ್‌, ಉಪ್ಪು.

ಮಾಡುವ ವಿಧಾನ: ಕೋಳಿಮಾಂಸ, ಮೊಟ್ಟೆ, ಕಾರ್ನ್‌ ಫ್ಲೋರ್‌, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ ಮತ್ತು ಉಪ್ಪನ್ನು ಬೌಲ್‌ನಲ್ಲಿ ಹಾಕಿ ಕಲಸಿಕೊಳ್ಳಿ. 30 ನಿಮಿಷದ ನೆನೆಯಲು ಬಿಡಿ. ನಂತರ ಎಣ್ಣೆಯನ್ನು ಬಿಸಿ ಮಾಡಿಕೊಂಡು, ಅದರಲ್ಲಿ ಮಸಾಲೆ ಬೆರೆಸಿದ ಕೋಳಿಮಾಂಸದ ತುಂಡುಗಳನ್ನು ಹುರಿದುಕೊಳ್ಳಿ. ಕರಿದ ಕೋಳಿಮಾಂಸವನ್ನು ಎಣ್ಣೆ ಹೀರುವ ಪೇಪರ್‌ ಮೇಲೆ ಇರಿಸಿಕೊಳ್ಳಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಈರುಳ್ಳಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಅದಕ್ಕೆ ಹಸಿಮೆಣಸು, ಸೋಯ ಸಾಸ್‌, ವಿನಿಗರ್‌, ಕರಿದ ಕೋಳಿ ತುಂಡುಗಳನ್ನು ಸೇರಿಸಿ ಹುರಿದರೆ ರುಚಿಕರವಾದ ಚಿಲ್ಲಿ ಚಿಕನ್‌ ಸವಿಯಲು ಸಿದ್ಧ.

*

ಸ್ಪೆಷಲ್‌ ಚಿಕನ್‌ ಕರ್ರಿ

ಬೇಕಾಗುವ ಸಾಮಗ್ರಿಗಳು: ಕೋಳಿಮಾಂಸ ಒಂದು ಕೆ.ಜಿ., ಈರುಳ್ಳಿ 4, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ 2 ಚಮಚ, ಹಸಿಮೆಣಸು 3, ಉಪ್ಪು ರುಚಿಗೆ ತಕ್ಕಷ್ಟು, ಅರಿಸಿನಪುಡಿ 2 ಚಮಚ, ಕೆಂಪು ಮೆಣಸಿನ ಪುಡಿ 1 ಚಮಚ, ಗರಂ ಮಸಾಲ ಪುಡಿ 1 ಚಮಚ, ಸಾಸಿವೆ 1 ಚಮಚ, ಒಣಮೆಣಸು 2 ಕರಿಬೇವಿನ ಎಲೆಗಳು 8, ಎಣ್ಣೆ.

ಮಾಡುವ ವಿಧಾನ: ಕೋಳಿಮಾಂಸವನ್ನು ಚಾಕುವಿನಿಂದ ಚಿಕ್ಕ ಗೆರೆಗಳನ್ನು ಮಾಡಿ. ಹೀಗೆ ಮಾಡುವುದರಿಂದ ಮಾಂಸಕ್ಕೆ ಮಸಾಲೆ ಹತ್ತುತ್ತದೆ. ನಂತರ ಕೋಳಿ ಮಾಂಸಕ್ಕೆ ಉಪ್ಪು, ಅರಿಸಿಣಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ದಪ್ಪತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಕೆಂಪಗಾಗುವವರೆಗೂ ಬಾಡಿಸಿ. ಈಗ ಕೋಳಿಮಾಂಸ ಹಾಕಿ ಐದಾರು ನಿಮಿಷ ತಳ ಹಿಡಿಯದಂತೆ ಕೈಯಾಡಿಸಿ. ಬಳಿಕ ಅರಿಸಿನಪುಡಿ, ಉಪ್ಪು, ಕೆಂಪುಮೆಣಸಿನ ಪುಡಿ, ಹಸಿಮೆಣಸು, ಗರಂ ಮಸಾಲಾ ಪುಡಿ ಹಾಕಿ ನಾಲ್ಕೈದು ನಿಮಿಷ ಬಾಡಿಸಿ. ಚಿಕ್ಕ ಉರಿಯಲ್ಲಿಯೇ ಹದಿನೈದು ನಿಮಿಷ ಕೋಳಿಮಾಂಸವನ್ನು ಬೇಯಿಸಿ. ಇದನ್ನು ಚಪಾತಿ, ಅನ್ನದೊಂದಿಗೆ ತಿನ್ನಬಹುದು.

*

ಮೊಟ್ಟೆಪಲ್ಯ

ಬೇಕಾಗುವ ಸಾಮಗ್ರಿಗಳು:
ಡೊಳ್ಳು ಮೆಣಸಿನಕಾಯಿ 3, ಟೆಮೆಟೊ 1, ಎಣ್ಣೆ, ಅರಿಸಿಣಪುಡಿ, ಜೀರಿಗೆ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೆಂಪು ಮೆಣಸಿನ ಪುಡಿ 1 ಚಮಚ, ಕಸೂರು ಮೇಥಿ 1 ಚಮಚ, ಕಿಚನ್‌ ಕಿಂಗ್‌ ಮಸಾಲ 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಮೊಟ್ಟೆಯನ್ನು ಬೇಯಿಸಿಕೊಳ್ಳಿ. ನಂತರ ತವಾ ಬಿಸಿ ಮಾಡಿ ನಾಲ್ಕು ಚಮಚ ಎಣ್ಣೆಯನ್ನು ಹಾಕಿ. ಇದಕ್ಕೆ ಕತ್ತರಿಸಿಕೊಂಡ ಟೊಮೆಟೊ ಮತ್ತು ಡೊಳ್ಳು ಮೆಣಸಿನಕಾಯಿಯನ್ನು ಹಾಕಿ. ಈಗ ಒಂದು ಚಿಟಿಕೆ ಅರಿಸಿನ ಪುಡಿ ಮತ್ತು ಜೀರಿಗೆಪುಡಿಯನ್ನು ಹಾಕಿ. ಇದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ ಸೇರಿಸಿ. ಮಸಾಲೆಯನ್ನು ಸರಿಯಾಗಿ ಹುರಿಯಿರಿ. ಕಸೂರಿ ಮೇಥಿಯನ್ನು ಅಂಗೈಗೆ ಹಾಕಿ ಹಿಚುಕಿ ಮಸಾಲೆಗೆ ಸೇರಿಸಿ. ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಮಾಡಿ ಮಸಾಲೆಗೆ ಹಾಕಿ. ಹದ ನೋಡಿ ಉಪ್ಪು ಹಾಕಿ. ಕೊನೆಯದಾಗಿ ಒಂದು ಚಮಚ ಕಿಚನ್‌ ಕಿಂಗ್‌ ಮಸಾಲ ಮತ್ತು ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ವಾದಿಷ್ಟಕರ ಮೊಟ್ಟೆಪಲ್ಯ ತಯಾರಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)