‘ಜನಪ್ರತಿನಿಧಿಗಳಿಗೆ ತರಬೇತಿ ಅಗತ್ಯ’

7
ಪಂಚಾಯತ್‌ ರಾಜ್‌ ಕುರಿತು ವಿಶೇಷ ಕಾರ್ಯಾಗಾರ; ಗ್ರಾಮೀಣಾಭಿವೃದ್ಧಿ ಕುರಿತು ಚರ್ಚೆ

‘ಜನಪ್ರತಿನಿಧಿಗಳಿಗೆ ತರಬೇತಿ ಅಗತ್ಯ’

Published:
Updated:

ಗದಗ: ‘ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯ್ತಿಗಳಲ್ಲಿ ಅನೇಕ ಯೋಜನೆಗಳಿದ್ದು ಇವುಗಳ ಸಮರ್ಪಕ ಅನುಷ್ಠಾನದಿಂದ ಮಾತ್ರ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯ’ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.

ಗದಗ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳಿಗಾಗಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಪ್ರತಿನಿಧಿಗಳು ತಮಗೆ ಲಭಿಸಿದ ಅವಕಾಶ ಸದುಪಯೋಗ ಪಡಿಸಿಕೊಂಡು ಸಾರ್ವಜನಿಕರ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಪಣತೊಡಬೇಕು. ಗ್ರಾಮಗಳಲ್ಲಿ ಹಸಿರಿನ ವಾತಾವರಣ ನಿರ್ಮಾಣ ಮಾಡಬೇಕು. ಪರಿಸರ ಸಂರಕ್ಷಣೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಅಧ್ಯಕ್ಷತೆ ವಹಿಸಿದ್ದರು. ಕೇರಳದ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎಮ್.ವಿಜಯಾನಂದ ಅವರು ಗ್ರಾಮಾಭಿವೃದ್ಧಿಯ ಕುರಿತು ಉಪನ್ಯಾಸ ನಿಡಿದರು. ‘ಗ್ರಾಮೀಣ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಗ್ರಾಮಸಭೆಗಳಲ್ಲಿ ಜನರ ಅವಶ್ಯಕತೆಗಳ ಕುರಿತು ಚರ್ಚೆ ಆಗಬೇಕು. ಸ್ಥಳೀಯವಾಗಿ ಸಂಪನ್ಮೂಲವನ್ನು ಹೇಗೆ ಕ್ರೋಡಿಕರಿಸಬೇಕು ಎನ್ನುವುದರ ಕುರಿತೂ ಚರ್ಚೆಗಳು ನಡೆಯಬೇಕು’ ಎಂದರು.

ನವದೆಹಲಿಯ ಸಮಾಜ ವಿಜ್ಞಾನ ಸಂಸ್ಥೆ ಅಧ್ಯಕ್ಷ ಜಾರ್ಜ್‌ ಮ್ಯಾಥ್ಯೂ ಮಾತನಾಡಿ,‘ಗ್ರಾಮಗಳ ಅಭಿವೃದ್ಧಿ, ಜನರ ಜೀವನ ಮಟ್ಟ ಸುಧಾರಿಸಲು ಇರುವಂತಹ ಯೋಜನೆಗಳು ಕೆಳಹಂತದಲ್ಲಿಯೇ ಅಂದರೆ ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿತವಾಗಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಡಾ. ಮೀನಾಕ್ಷಿ ಸುಂದರಂ, ಪಂಚಾಯತ್ ರಾಜ್‌ ಪರಿಷತ್ತಿನ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಇದ್ದರು. ಸಿಇಒ ಮಂಜುನಾಥ ಚವ್ಹಾಣ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry