ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಜೆಕ್ಟ್ ವರ್ಕ್ ಎಂಬ ಗುಮ್ಮ

Last Updated 15 ಜೂನ್ 2018, 12:21 IST
ಅಕ್ಷರ ಗಾತ್ರ

ಗೌರಿ ಚಂದ್ರಕೇಸರಿ

ಬೇಸಿಗೆ ರಜೆ ಕಳೆದು ಶಾಲೆಗಳು ಮೈ ಕೊಡವಿಕೊಂಡು ಎದ್ದಿವೆ. ಇದೀಗ ತಾನೇ ನಿದ್ದೆಯಿಂದ ಎದ್ದು ಕಣ್ಣುಗಳನ್ನು ನೀವಿಕೊಳ್ಳುತ್ತ ಬರುವ ಮಕ್ಕಳಂತೆ ಅಮ್ಮಂದಿರೂ ಕೂಡ ನಿಚ್ಚಳಾಗುವ ಸಮಯವಿದು. ಎರಡು ತಿಂಗಳ ಕಾಲ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಅಮ್ಮ-ಮಕ್ಕಳ ಧಾವಂತದ ಜೀವನ ಪುನರಾರಂಭಗೊಂಡಿದೆ. ಬೆನ್ನಿಗೆ ಪುಸ್ತಕದ ಚೀಲವನ್ನು ಸಿಕ್ಕಿಸಿ ಕೈಗೊಂದು ಊಟದ ಚೀಲವನ್ನು ಕೊಟ್ಟು, ಮಕ್ಕಳನ್ನು ಶಾಲಾ ವಾಹನವನ್ನು ಹತ್ತಿಸಿ ಕೈ ಬೀಸಿದರೆ ಅಮ್ಮಂದಿರಿಗೆ ನಿರಮ್ಮಳ ಭಾವ. ನಂತರ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಲೋ, ಚಹಾ ಹೀರುತ್ತಲೋ ಇಲ್ಲ ಬಂಧು-ಮಿತ್ರರಿಗೆ ಫೋನಾಯಿಸಿ ಸುಖ-ದುಃಖ ಹಂಚಿಕೊಳ್ಳುತ್ತಲೋ ಸುಧಾರಿಸಕೊಳ್ಳಬಯಸುತ್ತಾರೆ.

ಸಂಜೆಯಾಗುತ್ತಿದ್ದಂತೆಯೇ ಗುಲ್ಲೆಬ್ಬಿಸುತ್ತ ಒಳ ಅಡಿ ಇಡುವ ಮಕ್ಕಳು ಅಮ್ಮನಿಗೊಂದು ಕೆಲಸವನ್ನು ಹೊತ್ತು ತಂದೇ ಇರುತ್ತಾರೆ. ಇಂದು ಶಾಲೆಗಳಲ್ಲಿ ಹಾಸು ಹೊಕ್ಕಾಗಿರುವ ಪ್ರಾಜೆಕ್ಟ್ ವರ್ಕ್ ಎಂಬ ಚಟುವಟಿಕೆ ಅಮ್ಮಂದಿರನ್ನು ಹೈರಾಣಾಗಿಸುತ್ತದೆ. ಅದರಲ್ಲೂ ಹೊರಗೆ ಹೋಗಿ ದುಡಿದು ಬರುವ ಮಹಿಳೆಯರಿಗಂತೂ ಇದೊಂದು ಸವಾಲು. ‘ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ’ ಎಂದು ಮಗು ಅಮ್ಮನನ್ನು ಕೇಳಿಕೊಂಡರೆ, ಇಂದಿನ ಅಮ್ಮಂದಿರು ‘ಪ್ರಾಜೆಕ್ಟ್ ವರ್ಕ್’ ಎಂಬ ಗುಮ್ಮನನ್ನು ಹೊತ್ತು ತರಬೇಡಿರೆಂದು ಮಕ್ಕಳನ್ನು ಕೇಳಿಕೊಳ್ಳುವಂತಾಗಿದೆ. ಹಲವಾರು ಕೆಲಸಗಳನ್ನು ಒಂದೇ ಸಮಯದಲ್ಲಿ ನಿಭಾಯಿಸುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದರೂ ಪ್ರಾಜೆಕ್ಟ್ ವರ್ಕ್ ಎಂಬುದು ಅಮ್ಮಂದಿರಿಗೆ ನುಂಗಲಾರದ ತುತ್ತು.

ದಿನಕ್ಕೊಂದು ಬಗೆಯ ಪ್ರಾಜೆಕ್ಟ್ ವರ್ಕ್‌ನಲ್ಲಿ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಒಗ್ಗೂಡಿಸುವುದೋ, ವಿಧ ವಿಧದ ಏಕದಳ/ದ್ವಿದಳ ಧಾನ್ಯಗಳನ್ನು ಸಂಗ್ರಹಿಸುವುದೋ ಹಣ್ಣು/ತರಕಾರಿಗಳ ಚಿತ್ರಗಳನ್ನು ಹೆಕ್ಕುವುದೊ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ತಂದು ಪ್ರಾಜೆಕ್ಟ್ ವರ್ಕ್ ಮಾಡುವ ಜವಾಬ್ದಾರಿ ಇಂದಿನ ಅಮ್ಮಂದಿರ ಕೊರಳಿಗೆ ಬಿದ್ದಿದೆ. ಅಂಗಳದಲ್ಲಿ ಸಲೀಸಾಗಿ ರಂಗೋಲಿ ಬಿಡುವ ಕೈಗಳು ಚಿತ್ರವನ್ನು ಬಿಡಿಸುವಲ್ಲಿ ಮೊಂಡಾಟ ಮಾಡುತ್ತವೆ.

ತನ್ನೆಲ್ಲ ಪ್ರೀತಿ-ಮಮತೆಯನ್ನು ಧಾರೆಯೆರೆದು ಇಡೀ ಕುಟುಂಬವನ್ನು ಸಂಬಾಳಿಸುವ ಆಕೆಯ ಕೈಗಳು ರಟ್ಟಿನ ಮನೆಯನ್ನು ಮಾಡುವಲ್ಲಿ ಸೋಲುತ್ತವೆ. ಹಸುವಿನ ಚಿತ್ರ ಬರೆಯ ಹೋದರೆ ಅದು ಇನ್ನಾವುದೋ ಪ್ರಾಣಿಯ ರೂಪವನ್ನು ಪಡೆದು ಅಣಕಿಸುತ್ತದೆ. ಅದೆಷ್ಟೇ ಮುತುವರ್ಜಿವಹಿಸಿ ಪ್ರಾಜೆಕ್ಟ್ ಕೆಲಸವನ್ನು ಸಿಧ್ಧಪಡಿಸಿಕೊಟ್ಟರೂ ಅದು ಮಕ್ಕಳಿಗೆ ತೃಪ್ತಿಯಾಗಲಿಲ್ಲವಾದರೆ, ಪರಿಪೂರ್ಣವಾಗಿಲ್ಲವೆಂತಲೋ ಮಕ್ಕಳು ರಚ್ಚೆ ಹಿಡಿದಾಗ ಅಮ್ಮಂದಿರ ಸಹನೆಯ ಕಟ್ಟೆಯೊಡೆಯುವುದಂತೂ ಸಹಜ.

ಕೆಲವೊಮ್ಮೆ ಶಿಕ್ಷಕರು ಗಡಿಯಾರ, ಮನೆ ಇಲ್ಲವೆ ವಾಹನ ಮುಂತಾದವುಗಳ ಪ್ರತಿರೂಪಗಳನ್ನು ಮಾಡಿಕೊಂಡು ಬರಲು ಹೇಳುವುದುಂಟು. ಇಂಥ ಸಮಯದಲ್ಲಿ ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಹೊಂದಿಸುವುದರಲ್ಲಿಯೇ ಸಮಯ ಕಳೆದುಹೋಗುತ್ತದೆ. ಅದರಲ್ಲೂ ಈಗಿನ ಮಕ್ಕಳಿಗೆ ಮನೆಯಲ್ಲಿ ದೊರಕುವ ವಸ್ತುಗಳು ಬೇಡ. ಒಂದು ಗುಂಡುಸೂಜಿಯಿಂದ ಹಿಡಿದು ಪ್ರಾಜೆಕ್ಟ್‌ಗೆ ತಗಲಬಹುದಾದ ಸಾಮಾಗ್ರಿಗಳೆಲ್ಲವನ್ನೂ ಹೊಸದಾಗಿಯೇ ಖರೀದಿಸಬೇಕೆಂಬ ಮನೋಭಾವದವು. ಕಡಿಮೆ ಸಮಯದಲ್ಲಿ ಮಿತವ್ಯಯದಿಂದ ಪ್ರಾಜೆಕ್ಟ್ ವರ್ಕ್‌ಗಳನ್ನು ತಯಾರಿಸಬಹುದು. ‘ಕಸದಿಂದ ರಸ’ ಎಂಬಂತೆ ಗ್ರೀಟಿಂಗ್ ಕಾರ್ಡ್, ವೆಡ್ಡಿಂಗ್ ಕಾರ್ಡ್‌ಗಳನ್ನು ಎಸೆಯದೆ ಜತನದಿಂದ ಇಟ್ಟುಕೊಳ್ಳಬೇಕು.

ಪ್ಯಾಕಿಂಗ್ ಬಾಕ್ಸ್, ಥರ್ಮೋಕೋಲ್‌ಗಳು ಇಂಥ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತವೆ ಎಂಬುದನ್ನು ಮಕ್ಕಳಿಗೆ ಮನನ ಮಾಡಿಸಬೇಕು. ಕೆಲವೊಮ್ಮೆ ಬಗೆ ಬಗೆಯ ಪಕ್ಷಿಗಳ ಪುಕ್ಕಗಳನ್ನು ಸಂಗ್ರಹಿಸಿ ಅವುಗಳನ್ನು ಹೆಸರಿಸಲು ಹೇಳುವುದುಂಟು. ಪಕ್ಷಿಗಳೇ ಕಂಡು ಬರದ ಇಂದಿನ ದಿನಗಳಲ್ಲಿ ಹತ್ತಾರು ಬಗೆಯ ಪಕ್ಷಿಗಳ ಪುಕ್ಕವನ್ನು ತರುವುದೆಂದರೆ ಸಂಜೀವಿನಿ ಬೆಟ್ಟವನ್ನು ಹೊತ್ತು ತಂದಂತೆ. ಸರ್ವಂ ವ್ಯಾಪಾರಮಯಂ ಎಂಬಂತಾಗಿರುವ ಈ ದಿನಗಳಲ್ಲಿ ಅವೂ ಕೂಡ ಅಂಗಡಿಗಳಲ್ಲಿ ದೊರೆಯುತ್ತವೆ.

ಅವು ನೈಸರ್ಗಿಕವಾದವುಗಳೋ ಇಲ್ಲಾ ಕೃತಕವಾದವುಗಳೋ. ಪ್ರಾಜೆಕ್ಟ್ ಕೆಲಸವೇನೋ ಮುಗಿಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಮತ್ತೊಂದು ಸಂಕಷ್ಟ ಎದುರಾಗಿರುತ್ತದೆ. ಪ್ರಯಾಸ ಪಟ್ಟು ಮಾಡಿದ ಪ್ರಾಜೆಕ್ಟ್‌ನ್ನು ಮಕ್ಕಳ ಶಾಲೆಯವರೆಗೆ ಸುರಕ್ಷಿತವಾಗಿ ಹೇಗೆ ತಲುಪಿಸುವುದು ಎಂದು. ಇಂತಹ ಸಮಯದಲ್ಲಿ ಮನೆಯಲ್ಲಿರುವ ಗಂಡಸರು ಕೈಜೋಡಿಸುವುದು ಅನಿವಾರ್ಯವಾಗುತ್ತದೆ.

ಕೆಲವೊಂದು ಕುಟುಂಬಗಳಲ್ಲಿ ಮಕ್ಕಳ ಶಾಲಾ ವಿಷಯಗಳಿಂದ ಗಂಡಸರು ಹೊರಗೆಯೇ ಉಳಿಯುತ್ತಾರೆ. ಮನೆಗೆಲಸ, ದುಡಿಮೆಯ ಜೊತೆಗೆ ತಾಯಂದಿರಿಗೆ ಮಕ್ಕಳ ಓದು ಬರಹದ ಜವಾಬ್ದಾರಿಯೂ ಹೆಚ್ಚುವರಿಯಾಗಿ ಬೀಳುತ್ತದೆ. ಮಕ್ಕಳಿಗೆ ಹೋಂ ವರ್ಕ್ ಮಾಡಿಸುವುದು, ಅಡುಗೆಕೆಲಸ ಇತ್ಯಾದಿಗಳ ಮಧ್ಯೆ ಪ್ರಾಜೆಕ್ಟ್ ವರ್ಕ್ ಒಂದು ಗುಮ್ಮನಾಗಿ ಕಾಡದೇ ಇರಲಾರದು. ಸಂಪೂರ್ಣ ಕೆಲಸವನ್ನು ತಾಯಂದಿರೇ ತಯಾರಿಸಿ ಕೊಡುವ ಬದಲು ಮಕ್ಕಳಿಗೆ ಕಾರ್ಯವನ್ನು ನಿರ್ದೇಶಿಸಬಹುದು, ಪ್ರೋತ್ಸಾಹಿಸಬಹುದು. ಗಂಡಸರೂ ತಮ್ಮ ಮಕ್ಕಳ ಶಾಲಾ ವಿಷಯಗಳಲ್ಲಿ ಆಸಕ್ತಿವಹಿಸಿದರೆ ಗುಮ್ಮನಂತೆ ಕಾಡುವ ಪ್ರಾಜೆಕ್ಟ್ ವರ್ಕ್ ಮುಗುಮ್ಮಾಗಿ ಮುಗಿದು ಹೋಗಿಬಿಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT