ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಜಾನ್: ಉಪವಾಸದ ಮೂಲಕ ಪ್ರಾರ್ಥನೆ

ಹಾವೇರಿ ನಗರದ ಅತ್ತಾವುಲ್ಲಾ ಚೋಪದಾರ್‌ ಮನೆಯಲ್ಲಿ ರಮ್ಜಾನ್ ಮಾಸದ ಆಚರಣೆಯ ಸಂಭ್ರಮ
Last Updated 15 ಜೂನ್ 2018, 12:28 IST
ಅಕ್ಷರ ಗಾತ್ರ

ಹಾವೇರಿ: ಉದ್ಯೋಗಕ್ಕಾಗಿ ತೆರಳಿದ್ದ ಪುರುಷರು, ಶಾಲೆಗೆ ಹೋಗಿದ್ದ ಮಕ್ಕಳೆಲ್ಲ ಸಂಜೆಯಾಗುತ್ತಲೇ ಮನೆ ಸೇರಿದರು. ಎಂದಿನಂತೆ ಕೈಕಾಲು, ಮುಖ ತೊಳೆದು ‘ರೋಜಾ’ ಬಿಡುವ ಸಂಜೆಯ ಹೊತ್ತಿಗೆ ಸಿದ್ಧತೆಯನ್ನು ಮಾಡಿಕೊಂಡರು. ಮಹಿಳೆಯರು ರೋಜಾ ಬಿಡುವ ಇಫ್ತಾರ್‌ಗೆ ಸಿದ್ಧತೆ ಮಾಡಿಕೊಂಡರು.

ಸಂಜೆ ಸುಮಾರು ಏಳು ಗಂಟೆ ಸಮೀಪಿಸುತ್ತಲೇ ಮನೆಯ ಮುಂದಿನ ವರಾಂಡದಲ್ಲಿ ರಜಾಯಿ (ಚಾದರ) ಹಾಸಿದರು. ಖರ್ಜೂರ, ಮಾವಿನಹಣ್ಣು, ಸೇಬು ವಿವಿಧ ಹಣ್ಣುಗಳು, ಮಂಡಕ್ಕಿ, ಬೂಂದಿ, ಶೀರ್‌ ಕುರ್ಮಾ (ಶ್ಯಾವಿಗೆ ಪಾಯಸ), ಸಮೋಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ತಂದಿರಿಸಿದರು.

ಇದು, ಹಾವೇರಿಯ ಶಿವಲಿಂಗ ನಗರದ ಶಿಕ್ಷಕರ ಕಾಲೊನಿ ನಿವಾಸಿ ಅತ್ತಾವುಲ್ಲಾ ಚೋಪದಾರ್‌ ಮನೆಯಲ್ಲಿ ರಮ್ಜಾನ್ ಮಾಸದ ರೋಜಾ ಬಿಡುವ ಸಮಯದಲ್ಲಿ ಕಂಡುಬಂದ ದೃಶ್ಯ.

ಹಿರಿಯರಾದ ಎ.ವೈ.ಮುಲ್ಲಾ, ಶಕೀಲಾ ಬೇಗಂ, ಎಂ.ಎ.ಅಕ್ಕಿ, ಅತ್ತಾವುಲ್ಲಾ ಚೋಪದಾರ್, ಸಾಜಿದಾ ಬೇಗಂ, ಮಕ್ಕಳಾದ ನಿಧಾ ಕೌಸರ್, ಮಹ್ಮದ್ ತನ್ವೀರ್, ಮಹಮ್ಮದ್ ಫುರಾಖಾನ್ ರೋಜಾ ಬಿಡುವ 7.06 ನಿಮಿಷಕ್ಕೆ ಪರಸ್ಪರ ಖರ್ಜೂರ ಹಂಚಿಕೊಂಡು, ಸೇವಿಸಿದರು.

ಬಳಿಕ ನೀರನ್ನು ಕುಡಿದರು. ಆ ನಂತರ ಹಣ್ಣು ಮತ್ತಿತರ ಲಘು ಆಹಾರವನ್ನು ಸವಿದರು.

ಅ ನಂತರ ಮನೆಯ ಎದುರು ಕೋಣೆಯಲ್ಲಿ ಪುರುಷರು ರಜಾಯಿ ಹಾಸಿಕೊಂಡು ನಮಾಜ್ (ಪ್ರಾರ್ಥನೆ) ಮಾಡಿದರೇ, ಮಹಿಳೆಯರು ಮನೆಯೊಳಗಿನ ಕೊಠಡಿಯಲ್ಲಿ ನಮಾಜ್ ಮಾಡಿದರು.

ಹೀಗೆ ಬೆಳಿಗ್ಗೆಯಿಂದ ಆರಂಭ ಗೊಳಿಸಿದ್ದ ‘ರೋಜಾ’ವನ್ನು ಸಂಜೆಯ ವೇಳೆಗೆ ಪೂರ್ಣಗೊಳಿಸಿದ್ದರು. ಆ ಬಳಿಕ ಚಪಾತಿ, ಜೋಳದ ರೊಟ್ಟಿ, ಅನ್ನ, ಸುರ್‌ಕುಂಬಾ (ಶ್ಯಾವಿಗೆ ಪಾಯಸ) ಮತ್ತಿತರ ವಿಶೇಷ ಖಾದ್ಯದ ಜೊತೆ ರಾತ್ರಿಯ ಊಟ ಸವಿದರು.

‘ರೋಜಾ’ ಆರಂಭ: ‘ಸೂರ್ಯೋದಯಕ್ಕೂ ಪೂರ್ವದಲ್ಲಿ ಫಕೀರ್ ಸಾಹೇಬರು ಕವ್ವಾಲಿ ಹಾಡಿಕೊಂಡು, ತಮಟೆ ಬಾರಿಸಿಕೊಂಡು ಬರುತ್ತಾರೆ. ಮನೆ ಬಳಿಗೆ ಬಂದು ನಮ್ಮನ್ನು ಎಬ್ಬಿಸಿ ಹೋಗುತ್ತಾರೆ. ಇಲ್ಲವೇ, ಅಲರಾಂ ಇಟ್ಟು ಏಳುತ್ತೇವೆ. ದೈನಂದಿನ ಚಟುವಟಿಕೆಗಳನ್ನು ಮುಗಿಸಿಕೊಂಡು, ‘ಬಿಸ್ಮಿಲ್ಲಾ’ ಎಂದು ‘ಅಲ್ಲಾ’ ನೆನೆದು ನೀರು ಕುಡಿದು, ಖರ್ಜೂರ ಸೇವಿಸುತ್ತೇವೆ. ಆ ದಿನ ರೋಜಾ ಆರಂಭಿಸುವ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ’ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಎಂ.ಎ.ಅಕ್ಕಿ ದಿನದ ರೋಜಾ ಆರಂಭಗೊಳ್ಳುವ ಕುರಿತು ‘ಪ್ರಜಾವಾಣಿ’ಗ ವಿವರಿಸಿದರು.

‘ರಮ್ಜಾನ್ ತಿಂಗಳ ಪ್ರತಿ ಬೆಳಿಗ್ಗೆ ಹೀಗೆಯೇ ಆರಂಭಗೊಳ್ಳುತ್ತದೆ. ಈ ತಿಂಗಳು ಪ್ರಾರ್ಥನೆಗೆ ಮೀಸಲಾಗಿದ್ದು, ನಾವು ಮಾಡುವ ದಾನದ ಮೌಲ್ಯವೂ ಹೆಚ್ಚು. ಪುಣ್ಯ ಪಡೆಯುವುದು ಉಪವಾಸದ ಮುಖ್ಯ ಉದ್ದೇಶ. ಅರಿಯದೇ ಮಾಡಿದ ತಪ್ಪಿಗೂ ಪ್ರಾಯಶ್ಚಿತ್ತ ಇದೆ. ಹೀಗಾಗಿ, ನಾವು ಕಷ್ಟದಲ್ಲಿ ಇದ್ದರೂ, ಕೈಯಿಂದ ಸಾಧ್ಯವಾದಷ್ಟು ದಾನ ಮಾಡುತ್ತೇವೆ’ ಎಂದು ರಮ್ಜಾನ್‌ ಮಾಸದ ಮಹತ್ವವನ್ನು ತಿಳಿಸಿದರು.

‘ಬೆಳಿಗ್ಗೆ ಮಹಿಳೆಯರು ಸೇರಿಕೊಂಡು ಅಡುಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇಫ್ತಾರ್‌ ನಂತೆಯೇ ರಜಾಯಿ ಹಾಸಿ, ಅದರ ಮಧ್ಯೆ ಚಪಾತಿ, ಜೋಳದ ರೊಟ್ಟಿ, ಅನ್ನ, ಸುರ್‌ಕುಂಬಾ, ಮಟನ್‌ ಹಾಗೂ ಚಿಕನ್‌ ಮಸಾಲಾ, ತರಕಾರಿ ಸಾಂಬಾರು ಸೇರಿದಂತೆ ಖಾದ್ಯಗಳನ್ನು ತಂದು ಇಡುತ್ತೇವೆ. ಬಳಿಕ ಎಲ್ಲರೂ ರಜಾಯಿ ಸುತ್ತ ಕುಳಿತುಕೊಂಡು ವಿವಿಧ ಭಕ್ಷ್ಯಗಳನ್ನು ಸವಿಯುತ್ತೇವೆ’ ಎಂದು ದಿನದ ರೋಜಾ (ಉಪವಾಸ) ಕುರಿತು ತಿಳಿಸಿದರು.

‘ಎಂಟು ವರ್ಷಕ್ಕಿಂತ ಕೆಳಗಿ ನವರು, ಮಧುಮೇಹ, ರಕ್ತದೊತ್ತಡ, ವೈದ್ಯರ ಸೂಚನೆ ಇದ್ದರೆ ಉಪವಾಸ ಮಾಡುವುದಿಲ್ಲ. ಆದರೆ, ಪ್ರಾರ್ಥನೆ ಮೂಲಕ ರಮ್ಜಾನ್‌ ಆಚರಿಸುತ್ತಾರೆ’ ಎಂದು ಅತ್ತಾವುಲ್ಲಾ ಚೋಪದಾರ್ ಹೇಳಿದರು.
ಉಪಹಾರ ಮಗಿದ ಬಳಿಕ ಕೈ ಸ್ವಚ್ಛಗೊಳಿಸಿ ಎಲ್ಲರೂ ರೋಜಾ ರಖನ್‌ ಕಿ ನಿಯತ್‌ ಅನ್ನು ಹೇಳುತ್ತೇವೆ. ಆಗ ಮಸೀದಿಯಲ್ಲಿ ಅಜಾನ್‌ ಸಮಯ (ಮಸೀದಿಯಲ್ಲಿ)ಕ್ಕೆ ಸಿದ್ಧತೆಗೊಳ್ಳುತ್ತದೆ. ಪುರುಷರೆಲ್ಲ ಅತ್ತ ಹೆಜ್ಜೆ ಹಾಕುತ್ತೇವೆ. ಮನೆಯಲ್ಲಿ ಮಹಿಳೆಯರೆಲ್ಲ ಸೇರಿಕೊಂಡು ಮುಂಜಾನೆಯ ಫಜರ್‌ ನಮಾಜ್‌ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಮಾಜ್‌ ಹಾಗೂ ಕುರಾನ್ ಪಠಣ ಮಾಡುತ್ತಾರೆ. ಅ ನಂತರ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.

ಮಸೀದಿಯಿಂದ ವಾಪಸ್‌ ಆದ ಪುರುಷರು ಉದ್ಯೋಗಕ್ಕೆ ತೆರಳಿದರೆ, ಮಕ್ಕಳು ಶಾಲೆಗೆ ಹೋಗುತ್ತಾರೆ. ಮಹಿಳೆಯರು ಮನೆಯಲ್ಲೇ ಕುರಾನ್ ಪಠಣ ಹಾಗೂ ಇತರ ಕೆಲಸವನ್ನು ಮಾಡುತ್ತಾರೆ. ಆದರೆ, ದಿನವಿಡೀ ಹನಿ ನೀರು ಸೇವಿಸದೇ ಜೋಹರ್‌ ಹಾಗೂ ಅಸರ್‌ ನಮಾಜ್‌ಗಳನ್ನೂ ಮಾಡುತ್ತಾರೆ. ಸಂಜೆ ಮತ್ತೆ ಮನೆ ಸೇರಿದ ಬಳಿಕ, ಮಸೀದಿಗೆ ಹೋಗಿ ಮಗರೀಫ್‌ ನಮಾಜ್‌ ಮಾಡುತ್ತಾರೆ.

ಮಹಿಳೆಯರು ಮನೆಯಲ್ಲಿಯೇ ನಮಾಜ್ ಮಾಡುತ್ತಾರೆ. ಪುರುಷರು ಮನೆಗೆ ವಾಪಸ್ ಆದ ಬಳಿಕ ಸಂಜೆಯ ರೋಜಾ ಖೋಲನೆ ನಿಯತ್‌ ಹೇಳಿ ‘ಬಿಸ್ಮಿಲ್ಲಾ ಮೌಲಾ ಬರ್ಕಿತ್ತಿಲ್ಲಾ’ ಎಂದು ಪ್ರಾರ್ಥಿಸಿ ಬಾಯಿಗೆ ಖರ್ಜೂರ ಹಾಕಿಕೊಂಡು ರೋಜಾ ಪೂರೈಸುತ್ತಾರೆ. ಬಳಿಕ ವಿವಿಧ ಹಣ್ಣು, ಹಂಪಲುಗಳಿಂದ ಕೂಡಿದ ಇಫ್ತಾರ್‌ ಉಪಹಾರವನ್ನು ಮಾಡುತ್ತಾರೆ.

ಮತ್ತೆ ರಾತ್ರಿಯ ಭೋಜನ ಹಾಗೂ ಬಳಿಕ ಈಶ್‌ ನಮಾಜ್‌ ಮುಗಿಸಿ, ದಿನದ ಚಟುವಟಿಕೆ ಮುಕ್ತಾಯ ಹಾಡುತ್ತಾರೆ. ಹೀಗೆ ಒಂದು ತಿಂಗಳ ಕಾಲ ಪವಿತ್ರ ಮಾಸದಲ್ಲಿ ರೋಜಾ ಆಚರಿಸುತ್ತಾರೆ. ಮಾಸಾಂತ್ಯದಲ್ಲಿ ಚಂದ್ರದರ್ಶನದ ಬಳಿಕ ‘ರಮ್ಜಾನ್’ ಆಚರಿಸುತ್ತಾರೆ.

ದಾನ, ಪುಣ್ಯದ ಮಾಸ

ರಮ್ಜಾನ್‌ ಮಾಸದಲ್ಲಿ ‘ಜಕಾತ್’ ಮತ್ತು ‘ಉಶೀರ್’ ದಾನ ಮಾಡುತ್ತಾರೆ. ದವಸ ಧಾನ್ಯ, ನಗ–ನಾಣ್ಯಗಳ ಮೂಲಕವೂ ದಾನ ಮಾಡುತ್ತಾರೆ. ಒಟ್ಟು ಆದಾಯದ ಶೇ 2.5ರಷ್ಟು ಜಕಾತ್ (ದಾನ) ಹಾಗೂ ಇತರ ಉತ್ಪನ್ನಗಳಲ್ಲೂ ‘ಉಶೀರ್’ ತೆಗೆದು ದಾನ ಮಾಡುತ್ತಾರೆ.

ಬಡವರಿಗಾಗಿ ಫಿತ್ರಾ, ಸದ್ಕಾ, ಖೈರಾತ್ ಕೊಡುತ್ತಾರೆ. ಈ ಫಿತ್ರಾವನ್ನು ಆಹಾರ ರೂಪದಲ್ಲಿ ಹಂಚುತ್ತಾರೆ. ಒಟ್ಟಾರೆ ಈ ತಿಂಗಳಲ್ಲಿ ಸಾಧ್ಯವಿದ್ದಷ್ಟು ಆಹಾರ ಪದಾರ್ಥ, ಬಟ್ಟೆ, ಹಣ ದಾನ ಮಾಡುತ್ತಾರೆ. ಮನಸ್ಸು ಶುದ್ಧಿಯಿಂದ ಇರಬೇಕು. ಜಗಳ, ಮೋಸ ಮಾಡದೇ ಪ್ರಾಮಾಣಿಕತೆಯಿಂದ ಇದ್ದರೆ, ಅದಕ್ಕೆ ಹೆಚ್ಚಿನ ಪುಣ್ಯವಿದೆ ಎಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT