ಹೊರಗುತ್ತಿಗೆ ನೇಮಕಾತಿಗೆ ವಿರೋಧ

7

ಹೊರಗುತ್ತಿಗೆ ನೇಮಕಾತಿಗೆ ವಿರೋಧ

Published:
Updated:

ಕಲಬುರ್ಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳುವುದನ್ನು ಕೈಬಿಡಬೇಕು. ಸದ್ಯ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಶುಶ್ರೂಷಕರ ಅಭಿವೃದ್ಧಿ ಸಂಘದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಿದರು.

‘ಜಿಮ್ಸ್‌’ನಲ್ಲಿ ಶುಶ್ರೂಷಕರು ಸ್ಟಾಫ್ ನರ್ಸ್‌/ ಟ್ರೇನಿ/ ಗುತ್ತಿಗೆ/ ಸ್ಟೈಫಂಡರಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರನ್ನು ಸೇವೆಯಿಂದ ಬೇರ್ಪಡಿಸಿ, ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದು ಖಂಡನಾರ್ಹ. ಹಾಲಿ ಕೆಲಸದಲ್ಲಿರುವ ಎಲ್ಲರನ್ನೂ ಯಥಾವತ್ತಾಗಿ ಮುಂದುವರಿಸಬೇಕು. ಗುತ್ತಿಗೆ ಆಧಾರಿತ ನೇಮಕಾತಿಯಲ್ಲಿ ಇವರನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನೂ ಕೈಬಿಡಬೇಕು ಎಂದು ಆಗ್ರಹಿಸಿದರು.

‘ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ‘ಜಿಮ್ಸ್‌’ ನಿರ್ದೇಶಕರು ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಕಾರ್ಮಿಕ ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಇತರ 15 ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿಯ ನೇಮಕಾತಿ ಇಲ್ಲ. ಆದರೆ, ಕಲಬುರ್ಗಿಯಲ್ಲಿ ಮಾತ್ರ ಅನುಸರಿಸುತ್ತಿರುವುದು ಏಕೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ನಟರಾಜ ಎ.ಕಿಣಗಿಕರ್, ಉಪಾಧ್ಯಕ್ಷ ಶರಣಪ್ಪ ಎಸ್.ಹಾವನೂರ, ಪ್ರಧಾನ ಕಾರ್ಯದರ್ಶಿ ಬಸಪ್ಪ ಜಡಿಗಾರ, ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಟಿ.ಮಾಹೂರಕರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಜಿ.ಮೈತ್ರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry