ಪಪ್ಪಾಯ ಬೇಸಾಯದತ್ತ ರೈತರ ಚಿತ್ತ

7

ಪಪ್ಪಾಯ ಬೇಸಾಯದತ್ತ ರೈತರ ಚಿತ್ತ

Published:
Updated:
ಪಪ್ಪಾಯ ಬೇಸಾಯದತ್ತ ರೈತರ ಚಿತ್ತ

ಚಿಂಚೋಳಿ: ‘ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಪಪ್ಪಾಯ ಕೃಷಿಯಲ್ಲಿ ತೊಡಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದೆ’ ಎಂದು ರೈತರು ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೈತರು ನೆರವು ಪಡೆದು ಪಪ್ಪಾಯ ಬೇಸಾಯ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೊಳ್ಳೂರಿನ ರೇವಣಸಿದ್ದಪ್ಪ ಕಟ್ಟೋಳಿ ಅವರು ತೈವಾನ್‌ 786 ತಳಿಯ ಪಪ್ಪಾಯ ಸಸಿಗಳನ್ನು ಮಹಾರಾಷ್ಟ್ರದ ಮುಹೋಳ್‌ನಿಂದ ತಂದು ನೆಟ್ಟು ಬೇಸಾಯದಲ್ಲಿ ತೊಡಗಿದ್ದಾರೆ. ತಮ್ಮ ಸರ್ವೆ ನಂ. 8ರಲ್ಲಿ 3 ಎಕರೆ ಜಮೀನಿನಲ್ಲಿ ‘ಮಲ್ಚಿಂಗ್‌’ ಮೂಲಕ ಬೇಸಾಯ ನಡೆಸಿದ್ದು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.

ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದು, ರಸಗೊಬ್ಬರ, ಕೆಲವು ಸಿಂಪಡಣೆಗಳನ್ನು ಮಾಡಲಾಗಿದೆ. ಅವುಗಳಲ್ಲಿಯೂ ಜೈವಿಕ ಉತ್ಪನ್ನಕ್ಕೆ ಆದ್ಯತೆ ನೀಡಿದ್ದಾಗಿ ರೇವಣಸಿದ್ದಪ್ಪ ತಿಳಿಸಿದ್ದಾರೆ.

6x6 ಅಡಿ ಅಳತೆಯಲ್ಲಿ ಒಟ್ಟು 4 ಸಾವಿರ ಸಸಿಗಳನ್ನು 2017ರ ಡಿಸೆಂಬರ್‌ನಲ್ಲಿ ನೆಡಲಾಗಿದೆ. ಈಗ ಫಲ ಬಿಟ್ಟಿದ್ದು ಕೊಯ್ಲು ಆರಂಭವಾಗಿದೆ ಎಂದರು. ಪಪ್ಪಾಯ ಅತ್ಯಂತ ಸೂಕ್ಷ್ಮ ಬೆಳೆಯಾಗಿದೆ. ಕಾಲ ಕಾಲಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು. ನಾಳೆ ಮಾಡೋಣ ಎಂದರೆ ಬೆಳೆ ರೋಗಕ್ಕೆ ತುತ್ತಾಗುವ ಭೀತಿ ಹೆಚ್ಚು. ಹೀಗಾಗಿ ‘ನಾಳೆ ಮಾಡುವ ಕೆಲಸವನ್ನು ಇಂದೇ ಮಾಡು’ ಎಂಬ ಸೂತ್ರವನ್ನು ಪಪ್ಪಾಯ ಬೇಸಾಯಗಾರರು ರೂಢಿಸಿ ಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ತೋಟಗಾರಿಕಾ ಅಧಿಕಾರಿ ಹರ್ಷವರ್ಧನ.

ರೇವಣಸಿದ್ದಪ್ಪ ಕಟ್ಟೋಳಿ ಅವರು ತೋಟಗಾರಿಕಾ ಬೇಸಾಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಅವರ ಜಮೀನಿನಲ್ಲಿ ಬಾಳೆ ಮತ್ತು ಸೀಬೆಯನ್ನೂ ಕಾಣಬಹುದಾಗಿದೆ. ರೇವಣಸಿದ್ದಪ್ಪ ಕಟ್ಟೋಳಿ ಅವರ ಶ್ರಮ ಮತ್ತು ಆಸಕ್ತಿಯನ್ನು ಯುವ ರೈತ ನೆಲ್ಲಿ ಮಲ್ಲಿಕಾರ್ಜುನ ಶ್ಲಾಘಿಸಿದ್ದಾರೆ.

ಜಗನ್ನಾಥ ಶೇರಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry