ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಸಂಭ್ರಮ ಹೆಚ್ಚಿಸಿದ ಖಾದ್ಯಗಳು

ಈದ್‌ ಉಲ್‌ ಫಿತ್ರ್‌ಗೆ ಕೆಲವೇ ಗಂಟೆ ಬಾಕಿ; ಭರ್ಜರಿ ವ್ಯಾಪಾರದಲ್ಲಿ ತೊಡಗಿದ ಮುಸ್ಲಿಮರು
Last Updated 15 ಜೂನ್ 2018, 12:43 IST
ಅಕ್ಷರ ಗಾತ್ರ

ಕಲಬುರ್ಗಿ: ದೋಸೌ ದೋಸೌ ದೋಸೌ... ಜಬರ್‌ದಸ್ತ್‌ ಸಾರಿ; ಸಿರ್ಫ್‌ ದೋಸೌ ದೋಸೌ. ಹ್ಞಾಂ... ಆಲೂ ಪಕೋಡೆ, ಪ್ಯಾಜ್‌ ಪಕೋಡೆ; ದಸ್‌ ರುಪಿ ದಸ್‌ ರುಪಿ. ಖಾಲಿ ಖಾಲಿ ಖಾಲಿ... ಓ ಚಾಚಾ ಆವೋಜಿ ಖಟ್ಟಾಮಿಟ್ಟಾ ಖಾಕೆ ದೇಖೋ...

ನಗರದ ಮುಸ್ಲಿಂ ಚೌಕ್‌ ಹತ್ತಿರ ಹೋಗುತ್ತಿದ್ದಂತೆ ಕೇಳುವ ಪದಗಳಿವು. ಕಿರಿದಾದ ರಸ್ತೆ, ಜೇನುಗೂಡಿನಂತೆ ಗಿಜಿಗುಡುವ ಜನಸಂದಣಿ, ರಸ್ತೆಯ ಎಡ– ಬಲ, ಎಲ್ಲೆಂದರಲ್ಲಿ ವ್ಯಾಪಾರಿಗಳ ಕೂಗಾಟ, ಪಾಕವೀರರ ಆರ್ಭಟ. ಸುತ್ತಮುತ್ತ ಜನ ವೋಜನ. ರಂಜಾನ್‌ ಖರೀದಿಯ ಅಬ್ಬರ ನೋಡಬೇಕೆಂದರೆ ಇಲ್ಲಿಗೆ ಬರಬೇಕು.

ಸಂಜೆ ಇಫ್ತಾರ್‌ ನಂತರ ಬಹುತೇಕರು  ಮುಸ್ಲಿಂ ಚೌಕ್‌ಗೆ ದಾಂಗುಡಿ ಇಡುತ್ತಾರೆ. ಥೇಟ್‌ ಕೆರೆ ನೀರು ಕಟ್ಟೆಯೊಡೆದು ನುಗ್ಗುವ ಹಾಗೆ.

ಈ ಪ್ರದೇಶದಲ್ಲಿ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಸಿಗುವುದು ಗ್ರಾಹಕ– ವ್ಯಾಪಾರಿ ಮಾತ್ರ. ಕೇವಲ ₹2 ರಿಂದ ₹100 ರವರೆಗೆ ಇಲ್ಲಿ ವಿವಿಧ ಬಗೆಯ ತಿಂಡಿ– ತಿನಿಸುಗಳು ಲಭ್ಯ. ಸಸ್ಯಾಹಾರ, ಮಾಂಸಾಹಾರ, ಸಿಹಿತಿನಿಸಿ, ಖಾರದ ತಿನಿಸು, ಕರಿದ ಪದಾರ್ಥಗಳು, ಹಣ್ಣು, ಡ್ರೈಫುಡ್ಸ್‌, ಫಾಸ್ಟ್‌ ಫುಡ್ಸ್‌, ಚೈನೀಸ್‌... ಒಂದೇ ಎರಡೇ!... ತಿಂಡಿ ಪ್ರಿಯರಿಗೆ ಹೇಳಿಮಾಡಿಸಿದ ಜಾಗವಿದು.

ರಂಜಾನ್‌ ಸ್ಪೇಷಲ್‌: ಮಾಂಸಾಹಾರ ಪ್ರಿಯರಿಗೆ ಚಿಕನ್‌ ಹಲೀಮ್, ಮಲಾಯಿ ಕುರುಬಾಯಿ, ಚಿಕನ್‌ ಟೊಮೆಟೊ, ಲೆಗ್‌ಪೀಸ್‌, ತಂದೂರಿ ಚಿಕನ್‌, ಚಿಕನ್‌ ಲಾಲಿಪಾಲ್‌, ಚಿಕನ್‌ ಸಮೋಸಾ, ಕುಂಬಾನಿ ಮಿಟ್ಟಾ, ಮಟನ್‌ ಸಮೋಸಾ, ಹಾರೀಸ್‌, ಚಿಕನ್‌ ರೈಸ್‌, ಚಿಕನ್‌ಸ್ಟಿಕ್‌, ಚಿಕನ್‌ ರೋಲ್‌,

ಎಗ್‌ ರೋಲ್‌, ಖದ್ದು ಕಾ ಹಲ್ವಾ, ಏಷಿಯನ್‌ ಖೀರ್‌, ಶೇಂಗಾ ಹೋಳಿಗೆ, ವೈವಿಧ್ಯಮಯ ಬಿರಿಯಾನಿ ಸೇರಿದಂತೆ ಇನ್ನೂ ಹಲವಾರು ಸ್ವಾದಿಷ್ಟ ತಿನಿಸುಗಳ ಅಂಗಡಿಗಳು ಇಲ್ಲಿವೆ.

ತುಂಬ ರುಚಿಕರ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿದ ’ಹೈದರಾಬಾದ್‌ ಹಲೀಮ್‌‘ ಇಲ್ಲಿನ ವಿಶೇಷ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಈ ತಿನಿಸು ಹೆಚ್ಚು ಜನರಿಗೆ ಇಷ್ಟವಾಗುತ್ತದೆ. ಪಕ್ಕಾ ದೇಸಿ ಶೈಲಿಯ ಖಾದ್ಯ ಇದು. ಸ್ಥಳೀಯವಾಗಿ ಕಂಡುಕೊಳ್ಳಲಾದ ಒಂದು ತಿನಿಸಿಗೆ ಆ ಪ್ರದೇಶದ ಹೆಸರನ್ನೇ ಇಡುವ ಮೂಲಕ ದೊಡ್ಡ ಗೌರವ ಸೂಚಿಸಿದ್ದು ಪಾಕಪ್ರವೀಣರ ಬುದ್ಧಿವಂತಿಕೆಗೆ ಸಾಕ್ಷಿ.

ಸಸ್ಯಾಹಾರಿಗಳಿಗಂತೂ ತರಹೇವಾರು ತಿನಿಸುಗಳು ಇಲ್ಲಿವೆ. ಕುಂಬಳಕಾಯಿ ಖೀರ್‌, ಮಲಾಯಿ ಶಾಂಡ್ವಿಚ್‌, ಪಾಲಕ್‌ ಪಕೋಡ, ಈರುಳ್ಳಿ ಪಕೋಡ, ಶಂಕರಪಾಳಿ, ನಮಕ್‌ ಪಾಳಿ, ವೆಜ್‌ ಸಮೋಸಾ, ಮೊಸರು ವಡೆ, ಮಸಾಲೆ ವಡೆ, ಪಾನಿಪೂರಿ, ಜಿಲೇಬಿ, ಪಾಯಸ, ಸಂಡಿಗೆ, ಭಜ್ಜಿ, ಬ್ರೆಡ್‌ಟೋಸ್ಟ್... ವಾರೆವಾಹ್‌..!

ನಾಲ್ಕು ದಶಕಗಳ ಅನುಭವಿ: ಮುಸ್ಲಿಂ ಚೌಕ್‌ನ ಮೂಲೆಯೊಂದರಲ್ಲಿ ಸಣ್ಣ ತಳ್ಳುವ ಗಾಡಿ ಇಟ್ಟುಕೊಂಡಿರುವ ಜಮೀರ್‌ ಅವರದು ನಾಲ್ಕು ದಶಕಗಳ ಅನುಭವ. ಅಚ್ಚರಿಯೆಂದರೆ ಇವರ ತಾತ, ತಂದೆಯ ಕಾಲದಿಂದಲೂ ಇದೇ ರೀತಿ ತಳ್ಳುವ ಗಾಡಿಯನ್ನೇ ನಂಬಿ ಜೀವನ ಸಾಗಿಸಿದ್ದಾರೆ. ಇದೇ ಮುಸ್ಲಿಂ ಚೌಕ್‌ ಇವರ ಮೂರು ತಲೆಮಾರುಗಳ ಹೊಟ್ಟೆ ತುಂಬಿಸಿದೆ.

‘ಅಪ್ಪನ ಕಾಲದಿಂದಲೂ ಇಲ್ಲೇ ವ್ಯಾಪಾರ ಮಾಡಿಕೊಂಡಿದ್ದೇನೆ. ಬಹುಶಃ 40 ವರ್ಷವಾಯಿತು. ಈ ತಳ್ಳುವ ಗಾಡಿಯ ನಾಲ್ಕು ಚಕ್ರಗಳ ಮೇಲೆ ನಮ್ಮ ಬದುಕು ನಿಂತಿದೆ. ಇಲ್ಲಿ ತಿಂಡಿ ತಿನಿಸುಗಳ ವ್ಯಾಪಾರ ಯಾವಾಗಲೂ ಸೊರಗಿಲ್ಲ. ಅದರಲ್ಲೂ ರಂಜಾನ್‌ ಬಂತೆಂದರೆ ಭರ್ಜರಿ ಪೈಸಾ ಮಾಡಿಕೊಳ್ಳುತ್ತೇವೆ. ಎಷ್ಟೋ ಜನ ರಂಜಾನ್‌ ತಿಂಗಳು ನಂಬಿಕೊಂಡೇ ಸಾಲ ಪಡೆಯುತ್ತಾರೆ. ಸಾಲ ಕೊಡುತ್ತಾರೆ. ಮುಂಚೆ ನಾವು ಸಿಹಿ ಪದಾರ್ಥ ಮಾಡುವುದರಲ್ಲಿ ಸಿದ್ಧಹಸ್ತರು. ಹಾಗಾಗಿ, ನನಗೆ ಸ್ವೀಟ್‌ ಜಮೀರ್‌ ಎಂದೇ ಕರೆಯುತ್ತಾರೆ’ ಎಂದು ಅಭಿಮಾನದಿಂದ ಹೇಳಿಕೊಂಡರು ಅವರು.

‘ಮೂರು ತಲೆಮಾರುಗಳಿಂದಲೂ ವ್ಯಾಪಾರ ಮಾಡಿಕೊಂಡ ಕುಟುಂಬದವರು ಇಲ್ಲಿದ್ದಾರೆ. ರಂಜಾನ್‌ ಬಂದರೆ ನಮಗೆಲ್ಲ ಹಿಗ್ಗೋಹಿಗ್ಗು. ಹಿಂದೂ, ಮುಸ್ಲಿಂ ಎಲ್ಲರೂ ಇಲ್ಲಿಗೆ ಬಂದು ತಿಂಡಿ ಖರೀದಿಸುತ್ತಾರೆ. ಏನಿಲ್ಲವೆಂದರೂ ₹20 ಸಾವಿರದಿಂದ ₹80 ಸಾವಿರದವರೆಗೂ ಇದೊಂದೇ ತಿಂಗಳಲ್ಲಿ ಗಳಿಕೆಯಾಗುತ್ತದೆ. ಕೆಲವು ಬಾರಿ ನಷ್ಟ ಅನುಭವಿಸಿದ್ದೂ ಇದೆ. ಸಬ್‌ ಅಲ್ಲಾಹ್‌ ಕೆ ಹಾತ್‌ ಮೇ ಹೈನಾ ಸಾಬ್‌...’ ಎನ್ನುತ್ತಾರೆ ಎಂ.ಎ.ಜಬ್ಬಾರ್‌.

ಸಂಜೆ 6ಕ್ಕೆ ಆರಂಭವಾಗುವ ವ್ಯಾಪಾರ ನಸುಕಿನ 5 ಗಂಟೆಯವರೆಗೂ ನಡೆಯುತ್ತದೆ. ದೂರದಿಂದಲೇ ಗ್ರಾಹಕರನ್ನು ಸೆಳೆಯಲು ಮೈಕಿನಲ್ಲಿ ಕೂಗುವ ವ್ಯಾಪಾರಿಗಳ ಚಾಕಚಕ್ಯತೆ ಯಾವ ಬಿಸಿನೆಸ್‌ ಮ್ಯಾನ್‌ಗೂ ಕಡಿಮೆಯಿಲ್ಲ.

ರಂಜಾನ್‌ ತಿಂಗಳಿಗಾಗಿ ಮಾತ್ರ ವಿಶೇಷ ತಿನಿಸು ತಯಾರಿಸುತ್ತೇವೆ. ಇದು ಮುಗಿದ ಮೇಲೆ ಸಮೋಸ, ವಡೆ, ರೈಸ್‌ ಐಟಂ ಮಾರಾಟ ಇದ್ದೇ ಇರುತ್ತದೆ
–  ಎಂ.ಎ.ಜಬ್ಬಾರ್‌, ವ್ಯಾಪಾರಿ, ಜಿಲೇಬಿಚಾಚಾ ಹೋಟೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT