ಕಪ್ಪು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು!

7

ಕಪ್ಪು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು!

Published:
Updated:
ಕಪ್ಪು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು!

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರವು ಗುರುವಾರ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು.

ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕಾಳಿ ನದಿ ದಡದ ಸಮೀಪದಲ್ಲಿರುವ ರೈತರು ಬೇಸಿಗೆಯಲ್ಲಿ ತಮ್ಮ ಜಮೀನುಗಳಲ್ಲಿ ಒಣಹುಲ್ಲು, ಕಳೆಗಳನ್ನು ಸುಟ್ಟಿದ್ದರು. ಅದರ ಬೂದಿ, ಮಸಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮಳೆಯಲ್ಲಿ ಸಮುದ್ರ ಸೇರಿ ವುದರಿಂದ ಹೀಗಾಗಿದೆ ಎನ್ನಲಾಗಿದೆ.

‘ಡಿಸೆಂಬರ್‌ ತಿಂಗಳಿನಲ್ಲಿ ಬಂದರು ಪ್ರದೇಶದಲ್ಲಿ ಸುಮಾರು 17 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ತೆಗೆದು, ಅದನ್ನು ಸಮುದ್ರದ 20 ನಾಟಿಕಲ್ ಮೈಲಿ ದೂರದಲ್ಲಿ ಸುರಿಯಲಾಗಿತ್ತು. ಈಚೆಗೆ ಬೀಸಿದ ಚಂಡಮಾರುತದ ಕಾರಣ ಸಮುದ್ರದ ಉಬ್ಬರ–ಇಳಿತ ಹೆಚ್ಚಾಗಿ ಈ ಹೂಳು ದಡಕ್ಕೆ ಬಂದಿದೆ. ಇದರಿಂದಾಗಿಯೇ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಲ್‌.ರಾಠೋಡ ಹೇಳಿದರು.

ಕಾಳಿ ನದಿಯಲ್ಲಿ ಹರಿದು ಬಂದು ಸಮುದ್ರ ಸೇರುವ ಕಲ್ಮಶಗಳ ಕಾರಣದಿಂದಾಗಿಯೂ ನೀರು ಕಪ್ಪಾಗಿರುವ ಸಾಧ್ಯತೆ ಇದೆ. ಇದರಿಂದ ದುಷ್ಪರಿಣಾಮಗಳೇನೂ ಇಲ್ಲ. ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.

ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ, ‘ಇದು ಮಳೆಗಾಲದಲ್ಲಿ ಉಂಟಾಗುವ ಸಾಮಾನ್ಯ ಕ್ರಿಯೆ. ಆದರೆ, ಈ ಕಸಕಡ್ಡಿಗಳಿಂದಾಗಿ ಆಲ್ಗೆಗಳು (ಪಾಚಿ) ಹೆಚ್ಚಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry