ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಳೆ ರಂಧ್ರತೆ: ನಿಶ್ಯಬ್ಧ ವ್ಯಾಧಿ

Last Updated 15 ಜೂನ್ 2018, 12:48 IST
ಅಕ್ಷರ ಗಾತ್ರ

ಡಾ.ವಿಶ್ವನಾಥ್‌ ಎಲ್‌.ಡಿ.

‘ಬೆನ್ನು ನೋವು ಅನ್ನುತ್ತಿದ್ದ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ದರೆ ಇಲ್ಲಿ ಡಾಕ್ಟರ್ ಅದೇನೋ ಡೆಕ್ಸಾ ಸ್ಕ್ಯಾನಿಂಗ್ ಮಾಡಿಸಿ ಅಂತಿದ್ದಾರೆ. ಅದು ಯಾವ ತರಹದ ಸ್ಕ್ಯಾನಿಂಗ್‌? ಅದೆಲ್ಲಾ ಮಾಡಿಸಬೇಕಾ ಈಗ?’ ದೊಡ್ಡಮ್ಮನ ಮಗ ಸೂರಿ ಗಾಬರಿಯಿಂದ ಫೋನಾಯಿಸಿದ್ದ. ನಾನು, ಆ ಪರೀಕ್ಷೆಯು ಮೂಳೆರಂಧ್ರತೆಯನ್ನು ಪತ್ತೆ ಮಾಡುವುದಕ್ಕಾಗಿ ಎಂದು ಆ ಬಗ್ಗೆ ಪೂರ್ತಿ ವಿವರಿಸಿ ಹೇಳಿದ ಮೇಲೆಯೇ ಆತನಿಗೆ ಸಮಾಧಾನವಾಗಿದ್ದು.

‌ಏನಿದು ಮೂಳೆ ರಂಧ್ರತೆ...?
ಮಾನವನ ಮೂಳೆಗಳು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕೊಲ್ಯಾಜನ್ ಮುಂತಾದ ಅಂಶಗಳಿಂದ ಮಾಡಲ್ಪಟ್ಟಿದೆ. ಮಗುವು ಬೆಳೆದಂತೆಲ್ಲಾ ಮೂಳೆಗಳಲ್ಲಿ ವಿವಿಧ ಅಂಶಗಳು ಸೇರಿ ಅದರ ಸಾಂಧ್ರತೆ ಹೆಚ್ಚುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಹುಟ್ಟಿನಿಂದ ವ್ಯಕ್ತಿಯು ಸುಮಾರು ಇಪ್ಪತ್ತೈದು ವರ್ಷವಾಗುವವರೆಗೂ ಮೂಳೆ ಸಾಂದ್ರತೆಯು ಹೆಚ್ಚುತ್ತಲೇ ಹೋಗುತ್ತದೆ. ಇಪ್ಪತ್ತೈದರಿಂದ ಮೂವತ್ತೈದು ವರ್ಷದವರೆಗೂ ಸಾಂದ್ರತೆಯು ಗರಿಷ್ಠ ಮಟ್ಟ ತಲುಪಿ ಒಂದು ಮಟ್ಟದಲ್ಲಿರುತ್ತದೆ. ಮೂವತ್ತೈದು ವರ್ಷದ ನಂತರ ಮೂಳೆ ಸಾಂದ್ರತೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬರುತ್ತದೆ. ಸಾಮಾನ್ಯವಾಗಿ ಮೂವತ್ತೈದು ವರ್ಷಗಳ ನಂತರ ವ್ಯಕ್ತಿಯ ಮೂಳೆ ಸಾಂದ್ರತೆಯು ಪ್ರತಿ ವರ್ಷಕ್ಕೆ ಶೇ 0.3 ರಿಂದ 0.5 ರಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ಈ ಇಳಿಕೆಯ ಪ್ರಮಾಣವು ಮಹಿಳೆಯರಲ್ಲಿ ಋತುಬಂಧದ ನಂತರ ವರ್ಷಕ್ಕೆ ಶೇ 2 ರಿಂದ 5 ರಷ್ಟು ಇರುತ್ತದೆ. ಮಹಿಳೆಯರಲ್ಲಿ ಋತುಬಂಧದ ನಂತರ ಈಸ್ಟ್ರೊಜನ್ ರಸದೂತದ ಪ್ರಮಾಣವು ಕಡಿಮೆಯಾಗುವುದರಿಂದಲೇ ಪುರುಷರಿಗಿಂತ ಹೆಚ್ಚಿನ ವೇಗಗತಿಯಲ್ಲಿ ಸಾಂದ್ರತೆಯು ಕಡಿಮೆಯಾಗುತ್ತದೆ.

ಮೂಳೆ ಸಾಂದ್ರತೆಯು ಕಡಿಮೆಯಾಗಿ, ಮೂಳೆಗಳು ದುರ್ಬಲವಾಗುವುದನ್ನೇ ಮೂಳೆರಂಧ್ರತೆ ಎನ್ನುತ್ತಾರೆ. ಸಾಂದ್ರತೆಯು ಕಡಿಮೆಯಾದಂತೆಲ್ಲ ಮೂಳೆಗಳು ಟೊಳ್ಳಾಗಿ ಸುಲಭವಾಗಿ ಮುರಿತಕ್ಕೆ ಒಳಪಡುತ್ತವೆ. ಇದು ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಮತ್ತು ನಂತರದ ವರ್ಷಗಳಲ್ಲಿ ಮುಖ್ಯ ಸಮಸ್ಯೆಯಾಗಿ ಕಾಡುತ್ತದೆ.

ಅಪಾಯಕಾರಿ ಅಂಶಗಳಾವುವು?
ಆನುವಂಶೀಯತೆ, ವ್ಯಾಯಾಮದ ಕೊರತೆ, ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆ, ವಿಟಮಿನ್ ಡಿ ಕೊರತೆ, ಧೂಮಪಾನ, ಮದ್ಯಪಾನ, ಸಂಧಿವಾತದಿಂದ ಬಳಲುವಿಕೆ, ಕುಟುಂಬದ ಹಿರಿಯರಲ್ಲಿ ಮೂಳೆ ರಂಧ್ರತೆಯ ಸಮಸ್ಯೆ, ಸಧೃಡವಿಲ್ಲದ ದೇಹ, ಧೀರ್ಘಕಾಲದವರೆಗೆ ಕೆಲವು ಔಷಧಗಳ ಸೇವನೆ( ಸ್ಟಿರಾಯ್ಡ್ ಮುಂತಾದವು), ಮಹಿಳೆಯರಲ್ಲಿ ಋತುಬಂಧ ಮತ್ತು ಅನ್ಯ ಕಾರಣಗಳಿಂದಾಗಿ ಈಸ್ಟ್ರೋಜನ್ ರಸದೂತದ ಮಟ್ಟ ಕ್ಷೀಣಿಸುವುದು, ದೀರ್ಘಕಾಲದವರೆಗೆ ಹಾಸಿಗೆ ಹಿಡಿಯುವುದು, ಸೂರ್ಯನ ಬಿಸಿಲಿಗೆ ಸಾಕಷ್ಟು ಮೈಯೊಡ್ಡದಿರುವುದು – ಮುಂತಾದ ಅಂಶಗಳು ವ್ಯಕ್ತಿಯನ್ನು ಬಹುಬೇಗನೇ ಮೂಳೆರಂಧ್ರತೆಯ ಸಮಸ್ಯೆಗೆ ಗುರಿಪಡಿಸುತ್ತವೆ. ಅಲ್ಲದೆ, ಶರೀರದ ಕೆಲವು ಆರೋಗ್ಯ ಸಮಸ್ಯೆಗಳೂ ಈ ನಿಟ್ಟಿನಲ್ಲಿ ಕಾರಣವಾಗಬಹುದು. ಅವೆಂದರೆ, ಥೈರಾಯ್ಡ್ ಗ್ರಂಥಿಯ ಸಮಸ್ಯೆ, ಪ್ಯಾರಾ ಥೈರಾಯ್ಡ್ ಗ್ರಂಥಿಯ ಸಮಸ್ಯೆ, ಪಿತ್ತಜನಕಾಂಗದ ಸಮಸ್ಯೆ, ಹುಟ್ಟಿನಿಂದ ಬಂದಂತಹ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಮುಂತಾದುವು.

ರೋಗ ಲಕ್ಷಣಗಳೇನು?
ಸಾಮಾನ್ಯವಾಗಿ ಮೂಳೆರಂಧ್ರತೆಯಿಂದ ಬಳಲುವ ವ್ಯಕ್ತಿಯು ದಶಕಗಳವರೆಗೆ ಯಾವುದೇ ಗುಣಲಕ್ಷಣಗಳನ್ನು ಹೊಂದಿರದೇ ಇರಬಹುದು. ಆದ್ಧರಿಂದಲೇ ಇದು ನಿಶ್ಯಬ್ಧ ವ್ಯಾಧಿ. ಆದರೆ, ಯಾವ ಬೀಳುವಿಕೆ ಅಥವಾ ಪೆಟ್ಟು ಇಲ್ಲದೆಯೆ ಮೂಳೆಗಳು ತನ್ನಷ್ಟಕ್ಕೆ ತಾನೆ ಮುರಿತಕ್ಕೆ ಒಳಗಾಗುವುದೇ ಇದರ ಮುಖ್ಯ ಲಕ್ಷಣ. ಈ ರೀತಿ ಮೂಳೆ ಮುರಿತಕ್ಕೆ ಒಳಗಾದ ವ್ಯಕ್ತಿಯ ಮೊದಲ ಸಮಸ್ಯೆ ನೋವು. ಮುರಿತಕ್ಕೆ ಒಳಗಾದ ಮೂಳೆಯ ಭಾಗದಲ್ಲಿ ವಿಪರೀತ ನೋವು ಕಾಣಿಸುವುದೇ ಇದರ ರೋಗಲಕ್ಷಣ. ಬೆನ್ನುಮೂಳೆ, ಸೊಂಟದಮೂಳೆ (ಚಪ್ಪೆ ಮೂಳೆ), ಮುಂಗೈ (ಕಣಕೈ) ಮೂಳೆಗಳು ಮುರಿತಕ್ಕೆ ಒಳಗಾಗುವುದು ಸಾಮಾನ್ಯ. ಮೂಳೆಗಳಲ್ಲಿ ಸಣ್ಣ ಬಿರುಕಾಗಬಹುದು ಅಥವಾ ಬೆನ್ನು ಮೂಳೆಗಳು ಹಾಗೆಯೇ ಟೊಳ್ಳಾಗಿ ಕುಸಿಯಬಹುದು. ಬೆನ್ನುಮೂಳೆಯು ಕುಸಿದಾಗ ರೋಗಿಯು ತೀವ್ರತರವಾದ ದೀರ್ಘಕಾಲಿಕ ಬೆನ್ನು ನೋವೆಂದು ಹೇಳಬಹುದು ಅಥವಾ ಬೆನ್ನುಬಾಗಿ ಹೋಗಬಹುದು. ಮೂಳೆ ಮುರಿತದಿಂದ ವ್ಯಕ್ತಿಯು ತನ್ನ ದೈನಂದಿನ ಬದುಕನ್ನು ಸರಾಗವಾಗಿ ನಡೆಸಲು ತೊಡಕಾಗಬಹುದು. ಮೂಳೆರಂಧ್ರತೆಯಿಂದ ಉಂಟಾಗುವ ಮೂಳೆ ಮುರಿತವು ಒಂದು ಗಂಭೀರವಾದ ತೊಡಕು. ಅದರಲ್ಲಿಯೂ, ಚಪ್ಪೆ ಮೂಳೆ (ಹಿಪ್ ಬೊನ್) ಮುರಿತಕ್ಕೆ ಒಳಗಾದ ಶೇ 15 ರಿಂದ 30 ರೋಗಿಗಳು ಮುರಿತಕ್ಕೆ ಒಳಗಾಗಿ ಒಂದು ವರ್ಷದ ಒಳಗಾಗಿ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಅಲ್ಲದೆ ಶೇ 25 ರಷ್ಟು ರೋಗಿಗಳಿಗೆ ದೀರ್ಘಕಾಲದವರೆಗೆ ಆಸ್ಪತ್ರೆಯಲ್ಲಿ ಶುಶ್ರೂಷೆ ಬೇಕಾಗುತ್ತದೆ.

ಮೂಳೆರಂಧ್ರತೆಯ ಪತ್ತೆ ಹೇಗೆ?
‘ಡೆಕ್ಸಾ ಸ್ಕ್ಯಾನಿಂಗ್’ ಎಂಬ ವಿಶೇಷ ಸ್ಕ್ಯಾನಿಂಗ್ ಪರೀಕ್ಷೆಯಿಂದ ಮೂಳೆರಂಧ್ರತೆಯನ್ನು ಪತ್ತೆ ಮಾಡಬಹುದು. ಸಾಮಾನ್ಯ ಎಕ್ಸ್ ರೇ ಪರೀಕ್ಷೆಯಲ್ಲಿಯೂ ಮೂಳೆಗಳ ಸಾಂದ್ರತೆ ಕಡಿಮೆಯಾಗಿರುವುದನ್ನು ಕಂಡುಹಿಡಿಯಬಹುದಾದರೂ ಅದು ಅಷ್ಟೊಂದು ನಿಖರವಾಗಿರುವುದಿಲ್ಲ. ಅಲ್ಲದೆ, ಪ್ರಾಥಮಿಕ ಹಂತಗಳಲ್ಲಿಯೇ ಮೂಳೆರಂಧ್ರತೆಯನ್ನು ಎಕ್ಸ್ ರೇ ಪರೀಕ್ಷೆಯಿಂದ ಕಂಡು ಹಿಡಿಯಲಾಗುವುದಿಲ್ಲ. ಆದರೆ, ಡೆಕ್ಸಾ ಸ್ಕ್ಯಾನಿಂಗ್ ಪರೀಕ್ಷೆಯು ವ್ಯಕ್ತಿಯ ಮೂಳೆ ಸಾಂದ್ರತೆಯು ಆಯಾ ವಯಸ್ಸು ಮತ್ತು ಲಿಂಗಕ್ಕೆ ಇರಬೇಕಾದಷ್ಟಿದೆಯೇ ಎಂಬುದನ್ನು ಪರೀಕ್ಷಿಸಿ ಸಾಂದ್ರತೆಯ ಪ್ರಮಾಣವನ್ನು ತಿಳಿಸುತ್ತದೆ. ಇದು ಕನಿಷ್ಠ ಪ್ರಮಾಣದ ವಿಕಿರಣಗಳನ್ನು ಬಳಸಿ ಮೂಳೆಗಳ ಸಾಂದ್ರತೆಯನ್ನು ಅಳೆಯುವಲ್ಲಿ ಸಹಕರಿಸುತ್ತದೆ. ಒಂದು ವೇಳೆ ಸಾಂದ್ರತೆಯು ಕಡಿಮೆ ಇದೆಯೆಂದು ಕಂಡು ಬಂದರೆ ವ್ಯಕ್ತಿಯು ಅದಕ್ಕೆ ಸೂಕ್ತಚಿಕಿತ್ಸೆಯನ್ನು ಮೂಳೆ ಮತ್ತು ಕೀಲು ತಜ್ಞರ ಸಲಹೆಯ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ.

ಡೆಕ್ಸಾ ಸ್ಕ್ಯಾನಿಂಗ್ ಪರೀಕ್ಷೆಯನ್ನು ಯಾರು, ಯಾವಾಗ ಮಾಡಿಸಬೇಕು..?
ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಮೂಳೆ ಸಾಂದ್ರತೆಯು ಕಡಿಮೆ ಮಟ್ಟದ್ದಾಗಿರುತ್ತದೆ. ಅಲ್ಲದೆ ಮಹಿಳೆಯರಲ್ಲಿ ದೇಹದಲ್ಲಿರುವ ಈಸ್ಟ್ರೋಜನ್ ರಸದೂತವು ಮೂಳೆ ಸಾಂದ್ರತೆಯನ್ನು ಗರಿಷ್ಠ ಮಟ್ಟದಲ್ಲಿಡಲು ಸಹಕರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮಹಿಳೆಯರಲ್ಲಿ ಋತುಬಂಧದ ನಂತರ ಈಸ್ಟ್ರೋಜನ್ ರಸದೂತವು ಕ್ಷೀಣಿಸುತ್ತಾ ಹೋಗುವುದರಿಂದ ಮೂಳೆ ಸಾಂದ್ರತೆಯ ಕುಸಿಯುವಿಕೆಯೂ ವೇಗಗತಿಯಲ್ಲಿ ಸಾಗುತ್ತದೆ. ಆದ್ದರಿಂದಲೇ ಪುರುಷರಿಗಿಂತಲೂ ಮಹಿಳೆಯರು ಬಹು ಬೇಗನೆ ಮೂಳೆರಂಧ್ರತೆ ಸಮಸ್ಯೆಯಿಂದ ಬಳಲುತ್ತಾರೆ.

⦁ ಋತುಬಂಧದ ನಂತರದ ಎಲ್ಲಾ ಮಹಿಳೆಯರೂ ಕಡ್ಡಾಯವಾಗಿ ಡೆಕ್ಸಾ ಸ್ಕ್ಯಾನಿಂಗ್ ಪರೀಕ್ಷೆಯನ್ನು ಮಾಡಿಸಬೇಕು. ಮೂಳೆರಂಧ್ರತೆಯ ಅಪಾಯಕಾರಿ ಅಂಶಗಳನ್ನು ಹೊಂದಿದ ಮಹಿಳೆಯರು ಅರವತ್ತೈದು ವರ್ಷಗಳ ಮೊದಲೇ ಈ ಪರೀಕ್ಷೆಗೆ ಒಳಗಾಗುವುದು ಒಳಿತು.

⦁ ಅರವತ್ತೈದರ ಮೇಲ್ಪಟ್ಟ ಎಲ್ಲಾ ಮಹಿಳೆಯರೂ ಕಡ್ಡಾಯವಾಗಿ ಈ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಸೂಕ್ತ.

⦁ ಋತುಬಂಧದ ನಂತರ ಮಹಿಳೆಯು ಯಾವುದಾದರೂ ಮೂಳೆ ಮುರಿತಕ್ಕೆ ಒಳಗಾದಾಗಲೂ ಈ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು.

⦁ ಮೂಳೆರಂಧ್ರತೆಗೆ ಕಾರಣವಾಗಬಲ್ಲ ಇತರ ಆರೋಗ್ಯ ಸಮಸ್ಯೆಗಳು ವ್ಯಕ್ತಿಯಲ್ಲಿ ಕಂಡಾಗಲೂ ಡೆಕ್ಸಾ ಸ್ಕ್ಯಾನಿಂಗ್ ಬೇಕಾಗುತ್ತದೆ.

⦁ ದೀರ್ಘಕಾಲಿಕ ಸ್ಟಿರಾಯ್ಡ್, ಹೆಪಾರಿನ್ ಮೊದಲಾದ ಔಷಧಗಳನ್ನು ಸೇವಿಸುವ ವ್ಯಕ್ತಿಗಳೂ ಆಗಾಗ್ಗೆ ಈ ಪರೀಕ್ಷೆಗೆ ಒಳಗಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT