ಸಾಲಮನ್ನಾಗೆ ಆಗ್ರಹಿಸಿ ರೈತರ ಪ್ರತಿಭಟನೆ

4

ಸಾಲಮನ್ನಾಗೆ ಆಗ್ರಹಿಸಿ ರೈತರ ಪ್ರತಿಭಟನೆ

Published:
Updated:

ಶ್ರೀರಂಗಪಟ್ಟಣ: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

‘ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಎಚ್‌.ಡಿ. ಕುಮಾರಸ್ವಾಮಿ ಮಾತಿಗೆ ತಪ್ಪಿದ್ದಾರೆ. ರೈತರ ಬೆಂಬಲ ಪಡೆದು ಅಧಿಕಾರಕ್ಕೆ ಬಂದು ಈಗ ಮಗುಮ್ಮಾಗಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿದ್ದು, ತಕ್ಷಣ ಸಾಲ ಮನ್ನಾ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌. ಮಂಜೇಶ್‌ಗೌಡ ಆಗ್ರಹಿಸಿದರು.

‘2016–17ನೇ ಸಾಲಿನಲ್ಲಿ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಇನ್ನೂ ಬೆಳೆ ಪರಿಹಾರ ನೀಡಿಲ್ಲ. ಬೆಳೆ ನಷ್ಟದ ವರದಿಯನ್ನು ಕಂದಾಯ ಇಲಾಖೆ ಸರ್ಕಾರಕ್ಕೆ ನೀಡಿ 6 ತಿಂಗಳು ಕಳೆದಿದೆ. ಆದರೆ ಯಾವೊಬ್ಬ ರೈತನಿಗೂ ಬೆಳೆ ಪರಿಹಾರದ ಹಣ ಬಂದಿಲ್ಲ. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಕೂಡ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ’ ಎಂದು ಸಂಘದ ಜಿಲ್ಲಾಕಾರ್ಯಾಧ್ಯಕ್ಷ ಸಿ. ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಮಂಡ್ಯ ಹಾಲು ಒಕ್ಕೂಟಕ್ಕೆ ಮಾರಾಟ ಮಾಡುವ ಪ್ರತಿ ಲೀಟರ್‌ ಹಾಲಿನ ದರದಲ್ಲಿ ಸರ್ಕಾರ ₹2 ಕಡಿತ ಮಾಡಿದೆ. ಇದರಿಂದ ಸಹಸ್ರಾರು ಮಂದಿ ಹಾಲು ಉತ್ಪಾದಕರು ನಷ್ಟ ಅನುಭವಿಸುತ್ತಿದ್ದಾರೆ. ಪಶು ಆಹಾರ ಹಾಗೂ ಜಾನುವಾರು ನಿರ್ವಹಣೆ ವೆಚ್ಚ ಹೆಚ್ಚಿರುವುದರಿಂದ ಹಾಲು ಉತ್ಪಾದಕರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಶ್ರೀಕಂಠಯ್ಯ ದೂರಿದರು.

‘ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸರ್ವೆ ಇಲಾಖೆ ಮತ್ತು ಉಪ ನೋಂದಣಾಧಿಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಹಣ ನೀಡದಿದ್ದರೆ ಯಾವ ಕೆಲಸವೂ ನಡೆಯುತ್ತಿಲ್ಲ. ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿ ಇರುವುದಿಲ್ಲ. ಇರುವ ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸಣ್ಣ ಕೆಲಸಕ್ಕೂ ಜನರು ಹತ್ತಾರು ಬಾರಿ ಅಲೆಯುವ ಪರಿಸ್ಥಿತಿ ಬಂದಿದೆ’ ಎಂದು ರೈತ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ. ನಾಗೇಂದ್ರಸ್ವಾಮಿ ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ತಾಲ್ಲೂಕು ಸಂಚಾಲಕ ಬಿ.ಎಸ್‌. ರಮೇಶ್‌, ಗೌರವಾಧ್ಯಕ್ಷ ಸ್ವಾಮಿಗೌಡ, ಡಿ.ಎಸ್‌. ಚಂದ್ರಶೇಖರ್‌, ಜಯರಾಮೇಗೌಡ, ಕೃಷ್ಣೇಗೌಡ, ಸಿದ್ದೇಗೌಡ, ತಮ್ಮಣ್ಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry