ಸಂಪೂರ್ಣ ಆನ್‌ಲೈನ್‌ ನೋಂದಣಿಗೆ ನಿರ್ಧಾರ

7
ಕೆಎಸ್‌ಒಯುಗೆ ಮಾನ್ಯತೆ ಸಿಗಲಿರುವ ಹಿನ್ನೆಲೆಯಲ್ಲಿ ತೀರ್ಮಾನ

ಸಂಪೂರ್ಣ ಆನ್‌ಲೈನ್‌ ನೋಂದಣಿಗೆ ನಿರ್ಧಾರ

Published:
Updated:
ಸಂಪೂರ್ಣ ಆನ್‌ಲೈನ್‌ ನೋಂದಣಿಗೆ ನಿರ್ಧಾರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಸಿಗಲಿರುವ ಕಾರಣ ನೋಂದಣಿಗೆ ಸಿದ್ಧತೆ ಆರಂಭವಾಗಿದೆ. ಇನ್ನು ಮುಂದೆ ಸಂಪೂರ್ಣ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಲು ವಿ.ವಿ ನಿರ್ಣಯ ಕೈಗೊಂಡಿದೆ.

ವಿ.ವಿ ಆಡಳಿತದಲ್ಲಿ ಪಾರದರ್ಶಕತೆ ತರಲು, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸಗಳಾಗಲು ಹಾಗೂ ಗೊಂದಲ ಗಳಿಲ್ಲದೇ ಸಮರ್ಥ ಆಡಳಿತವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮುಕ್ತ ವಿ.ವಿ ಈ ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಇನ್ನುಮುಂದೆ ಆನ್‌ಲೈನ್‌ ಮೂಲಕವೇ ಅರ್ಜಿ ಪಡೆದು, ಅರ್ಜಿ ಸಲ್ಲಿಸಿ, ಹಣವನ್ನೂ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಈ ಕ್ರಮ ಏಕೆ?: ಇದುವರೆಗೂ ವಿ.ವಿ.ಯಲ್ಲಿ ಮುದ್ರಿತ ಅರ್ಜಿಗಳನ್ನು ತುಂಬಿ ವಿ.ವಿ.ಗೆ ನೀಡುವ ಪದ್ಧತಿ ಜಾರಿಯಲ್ಲಿತ್ತು. ಅಲ್ಲದೇ, ನೋಂದಣಿ ಶುಲ್ಕವನ್ನು ಬ್ಯಾಂಕುಗಳಲ್ಲಿ ಜಮಾ ಮಾಡಬೇಕಿತ್ತು. ಇದರಿಂದ ಪ್ರಕ್ರಿಯೆಗೆ ಅತಿ ಹೆಚ್ಚು ಸಮಯ ವ್ಯಯವಾಗುತ್ತಿತ್ತು. ಅಲ್ಲದೇ, ಜಮಾ ಮಾಡುವಾಗ ಹಣದ ದುರ್ಬಳಕೆ ಮಾಡಿಕೊಂಡಿದ್ದ ಕೆಲವು ಪ್ರಕರಣಗಳೂ ಬೆಳಕಿಗೆ ಬಂದಿದ್ದವು. ಈ ತೊಡಕುಗಳನ್ನು ತಡೆಗಟ್ಟಲು ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಅನುಕೂಲಕ್ಕೆ ಬರಲಿದೆ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಎಸ್‌ಒಯುನ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಮೊದಲು ಖಾತೆ ಯೊಂದನ್ನು ತೆರೆಯಬೇಕು. ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಮಾಹಿತಿ ತುಂಬಬೇಕು. ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲೇ ಅರ್ಜಿ ತುಂಬಬಹುದು. ಅಲ್ಲದೇ, ಅಂತರ್ಜಾಲ ಸೌಲಭ್ಯ ಇಲ್ಲದೇ ಇರುವವರಿಗೆ ಕೆಎಸ್‌ಒಯುನ 21 ಪ್ರಾದೇಶಿಕ ಕಚೇರಿಗಳಲ್ಲಿ ಅರ್ಜಿ ತುಂಬಲೆಂದೇ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಕೇಂದ್ರದ ಸಿಬ್ಬಂದಿ ಅರ್ಜಿ ತುಂಬಲು ಸಹಾಯವನ್ನೂ ಮಾಡಲಿದ್ದಾರೆ.

‘ಪಾರದರ್ಶಕತೆ ಕಾಪಾಡಿಕೊಳ್ಳಲು ಇದು ಸಹಾಯ ಮಾಡಲಿದೆ. ಸಲ್ಲಿಕೆ ಯಾದ ಒಟ್ಟು ಅರ್ಜಿಗಳು, ಜಮಾ ಆದ ಮೊತ್ತ, ತಿರಸ್ಕೃತವಾದ ಅರ್ಜಿಗಳು– ಇತ್ಯಾದಿ ಮಾಹಿತಿಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಇದರಿಂದ ಆಡಿಟ್‌ ಪ್ರಕ್ರಿಯೆಯೂ ತ್ವರಿತವಾಗಿ ನಡೆಯಲಿದೆ’ ಎಂದು ಪ್ರೊ.ಶಿವಲಿಂಗಯ್ಯ ಹೇಳಿದರು.

ಪಾರದರ್ಶಕತೆ ಜಾರಿಗೊಳಿಸುವುದು ನಮ್ಮ ಉದ್ದೇಶ. ಅಲ್ಲದೇ, ವಿದ್ಯಾರ್ಥಿಗಳಿಗೆ ನೋಂದಣಿ ಪ್ರಕ್ರಿಯೆ ಸುಲಭವಾಗಿರಬೇಕು. ಅದಕ್ಕಾಗಿ ವಿ.ವಿ ಈ ತೀರ್ಮಾನ ತೆಗೆದುಕೊಂಡಿದೆ

ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ಕೆಎಸ್‌ಒಯು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry