ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡಕು ತ್ಯಜಿಸಿ ಸನ್ಮಾರ್ಗದತ್ತ ಪಯಣ

ರಂಜಾನ್‌ ಆಚರಣೆ: 22 ಮಸೀದಿಗಳಿಗೆ ಅಲಂಕಾರ
Last Updated 15 ಜೂನ್ 2018, 13:32 IST
ಅಕ್ಷರ ಗಾತ್ರ

ಸಿಂಧನೂರು: ಒಬ್ಬ ಮನುಷ್ಯ ಇತರ ಮನುಷ್ಯರಿಗೆ ಮಾಡುವ ಮೋಸ, ವಂಚನೆ, ಸುಳ್ಳು ಮತ್ತು ವಿವಿಧ ವ್ಯಸನಗಳನ್ನು ತ್ಯಜಿಸಿ ದೇವ ಭಯದಿಂದ ಸನ್ಮಾರ್ಗದತ್ತ ಸಾಗುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಪವಿತ್ರ ರಂಜಾನ್ ಮಾಸ ಸಾರುತ್ತದೆ.

ರಂಜಾನ್ ತಿಂಗಳಲ್ಲಿ ಕುರಾನ್ ಅವತರಿಸಿದ ಹಿನ್ನಲೆಯಲ್ಲಿ ಈ ತಿಂಗಳನ್ನು ಅತ್ಯಂತ ಪವಿತ್ರವೆಂದು ಆಚರಿಸಲಾಗುತ್ತದೆ. ಉಪವಾಸ ವ್ರತ ಮತ್ತು ಪ್ರಾರ್ಥನೆ ರಂಜಾನ್ ತಿಂಗಳ ವಿಶೇಷವಾಗಿದೆ.

‘ಸಿಂಧನೂರಿನಲ್ಲಿ 22 ಮಸೀದಿಗಳಿದ್ದು ಇವುಗಳಲ್ಲಿ ಅತಿ ದೊಡ್ಡ ಮತ್ತು ಸುಂದರವಾದ ನೂರಾನಿ ಮಸೀದಿಯಲ್ಲಿ ಮಹಿಬೂಬ ಕಾಲೋನಿಯ ವ್ಯಾಪ್ತಿಯಲ್ಲಿದೆ. ಮೂರು ವಾರ್ಡ್‌ನ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ನಗರದ ಕೋಟೆ ಬಡಾವಣೆಯಲ್ಲಿರುವ ಕಿಲ್ಲಾ ಮತ್ತು ಬಡಿಬೇಸ್ ಓಣಿಯಲ್ಲಿರುವ ಜಾಮೀಯಾ ಮಸೀದಿಗಳು ಅತ್ಯಂತ ಪುರಾತನವಾಗಿದ್ದು ಬಿಜಾಪುರ ಆದಿಲ್ ಶಾ ಆಡಳಿತದಲ್ಲಿ ನಿರ್ಮಾಣಗೊಂಡಿವೆ’ ಎಂದು ಹೇಳುತ್ತಾರೆ ಮನುಜಮತ ಬಳಗದ ಉಪಾಧ್ಯಕ್ಷ ಖಾದರ್ ಸುಬಾನಿ.

ಖದರಿಯಾ ಕಾಲೊನಿಯಲ್ಲಿರುವ ಮಸೀದಿಯಲ್ಲಿ ನಡೆಯುವ ನಮಾಜ್ ಅತ್ಯಂತ ಬೇಗ ಪ್ರಾರಂಭವಾಗಿ ಬೇಗ ಮುಗಿಯುವುದು ಒಂದು ವಿಶೇಷವಾದರೆ, ಬೇಗ ಪ್ರಾರಂಭವಾಗಿ ತಡವಾಗಿ ಮುಗಿಯುವ ನಮಾಜ್ ಇಲಾಯಿ ಮಸೀದಿಯ ಪದ್ದತಿಯಾಗಿದೆ. ಇಂದಿರಾ ನಗರದಲ್ಲಿರುವ ಮಸೀದಿಯಲ್ಲಿ ಕುರಾನ್ ಒಂದು ಭಾಗವನ್ನು ಪ್ರತಿದಿನ ಓದಿ ಮುಗಿಸಲಾಗುತ್ತದೆ. ಇದರಿಂದ ಪೂರ್ಣಗೊಳ್ಳಲು 30 ದಿನ ಬೇಕು. ಇತರ ಮಸೀದಿಯಲ್ಲಿ 27 ದಿನಕ್ಕೆ ಕುರಾನ್ ಓದು ಪೂರ್ಣಗೊಳ್ಳುತ್ತದೆ.

‘ಉಪವಾಸ ಪ್ರತಿಯೊಬ್ಬ ಮುಸ್ಲಿಮರಿಗೆ ಕಡ್ಡಾಯವಾಗಿದ್ದು ಕಾಯಿಲೆ ಇರುವ ವ್ಯಕ್ತಿಗಳಿಗೆ, ವೃದ್ದರಿಗೆ ವಿನಾಯಿತಿ ನೀಡಲಾಗಿದೆ’ ಎನ್ನುತ್ತಾರೆ ಈದ್ಗಾ ಕಮಿಟಿಯ ಮಾಜಿ ಅಧ್ಯಕ್ಷ ಬಾಬರ್ ಪಾಷಾ ವಕೀಲ.

ರಂಜಾನ್ ತಿಂಗಳಲ್ಲಿ ಆರು ಬಾರಿ ನಮಾಜು ಮಾಡಲಾಗುತ್ತಿದ್ದು ತರಾವಿ ಎನ್ನುವುದು ವಿಶಿಷ್ಟವಾಗಿದೆ. ರಂಜಾನ್ ತಿಂಗಳಲ್ಲಿ ಬೆಳಗಿನ 4.30 ಗಂಟೆಯೊಳಗೆ ಅಡುಗೆ ಊಟ ಮುಗಿಸಿ 5.15 ಕ್ಕೆ ನಮಾಜ್ ಪ್ರಾರಂಭವಾಗುತ್ತದೆ. ಸಂಜೆ 7 ಗಂಟೆಗೆ ಉಪವಾಸ ಕೊನೆಗೊಳ್ಳುತ್ತದೆ. ಪ್ರತಿವರ್ಷ ರೋಜಾ ಆಚರಿಸುತ್ತಾ ಬಂದಿರುವ ತಮಗೆ ಮನಸ್ಸಿನ ನಿಗ್ರಹ, ಏಕಾಗ್ರತೆ, ಉದ್ದೇಶಿತ ಗುರಿಯ ಜೊತೆಗೆ ಇತರ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂಬುದು ಶಿಕ್ಷಕ ಪರಾಪುರ ಮೌಲಸಾಬ ಅವರ ಅಭಿಮತ

ಮಧ್ಯಮ ಮತ್ತು ಶ್ರೀಮಂತ ವರ್ಗದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ರೋಜಾ ಆಚರಿಸುತ್ತಿವೆ. ಕಾರ್ಮಿಕ ವರ್ಗದ ಜನರಿಗೆ ರೋಜಾ ಆಚರಿಸುವ ಮನಸ್ಸಿದ್ದರೂ ದುಡಿಮೆ ಕಾರಣದಿಂದ ಕೆಲವರಿಗೆ ಉಪವಾಸ ಆಚರಣೆ ಮಾಡಲು ಕಷ್ಟವಾಗುತ್ತದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಹನುಮಂತಪ್ಪ.

– ಡಿ.ಎಚ್‌. ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT