ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪವಾಸ ಆಚರಣೆ ಆತ್ಮಶುದ್ಧಿಯ ಮಾರ್ಗ’

ರಂಜಾನ್ ಮಾಸಾಚರಣೆ; ನಿತ್ಯ ಕುರಾನ್‌ ಪಠಣ, ಬಡವರಿಗೆ ಸಂಪತ್ತಿನ ದಾನ
Last Updated 15 ಜೂನ್ 2018, 13:37 IST
ಅಕ್ಷರ ಗಾತ್ರ

ರಾಮನಗರ: ದಿನದ ಉಪವಾಸ ಕೈಬಿಡುವ ಸಮಯ ಸಮೀಪಿಸಿದಂತೆಲ್ಲ ಆ ಮನೆಯ ತಾರಸಿಯ ಅಂಗಳದಲ್ಲಿ ಜನರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಅವರೆಲ್ಲ ಮಸೀದಿಯ ಸಂಜೆಯ ಕರೆಗೆ ಕಾಯತೊಡಗಿದ್ದರು. ಅಲ್ಲಿಂದ ಸದ್ದು ಮೊಳಗಿದ್ದೇ ತಡ ಎಲ್ಲರೂ ಭಗವಂತನಲ್ಲಿ ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿದರು. ಕಲ್ಲಂಗಡಿ, ಖರ್ಜೂರ, ನೀರು... ಹೀಗೆ ತಮಗೆ ದಕ್ಕಿದ್ದನ್ನು ಸ್ವೀಕರಿಸುವ ಮೂಲಕ ದಿನದ ಉಪವಾಸ ಮುಗಿಸಿದರು.

ನಗರದ ಕುಮುಂದನ್‌ ಮೊಹಲ್ಲಾದಲ್ಲಿ ಇರುವ ಸಯ್ಯದ್ ಜಿಯಾವುಲ್ಲಾ ಅವರ ಮನೆಯಲ್ಲಿ ಇದು ರಂಜಾನ್ ಮಾಸದಲ್ಲಿ ನಿತ್ಯದ ಚಿತ್ರಣ. ಮನೆಮಂದಿಯಷ್ಟೇ ಅಲ್ಲ, ಸ್ಥಳೀಯರು, ದೂರದೂರಿನಿಂದ ಬಂದ ಪ್ರವಾಸಿಗರೂ ಇಲ್ಲಿ ಸಂಜೆ ಸೇರುತ್ತಾರೆ. ಇಸ್ಲಾಮಿನ ಪದ್ಧತಿಯಂತೆ ಉಪವಾಸ ಆಚರಣೆ ಮಾಡುತ್ತಾರೆ. ದಶಕಗಳಿಂದಲೂ ಹೀಗೆ ಒಟ್ಟಿಗೆ ಆಚರಣೆ ನಡೆಯುತ್ತಾ ಬಂದಿದೆ.
ಉಪವಾಸ ಆಚರಣೆಯ ನಡುವೆಯೇ ಬಿಡುವು ಮಾಡಿಕೊಂಡು ಕಾಂಗ್ರೆಸ್ ಮುಖಂಡರೂ ಆದ ಸಯ್ಯದ್ ಜಿಯಾವುಲ್ಲಾ ರಂಜಾನ್‌ ಮಾಸದ ಆಚರಣೆ ಮತ್ತು ಅದರ ಮಹತ್ವದ ಕುರಿತು ವಿವರಿಸಿದರು.

‘ರಂಜಾನ್‌ ಎಂಬುದು ಇಸ್ಲಾಂ ಧರ್ಮೀಯರಿಗೆ ಪವಿತ್ರವಾದ ಮಾಸ. ಇಲ್ಲಿ ತಿಂಗಳಿಡೀ ಪ್ರತಿಯೊಬ್ಬರೂ ಉಪವಾಸ ಕೈಗೊಳ್ಳುತ್ತಾರೆ. ಅದೊಂದು ಕಠಿಣ ಪದ್ಧತಿ. ಸೂರ್ಯೋದಯಕ್ಕೆ ತುಸು ಸಮಯ ಮುನ್ನವೇ ಆರಂಭವಾಗುವ ಉಪವಾಸವು ಸೂರ್ಯಾಸ್ತದ ನಂತರವೇ ಕೊನೆಗೊಳ್ಳುತ್ತದೆ. ನಡುವೆ ಏನೂ ತಿನ್ನುವಂತಿಲ್ಲ, ಕುಡಿಯುವಂತಿಲ್ಲ’ ಎಂದು ಅವರು ಹೇಳುತ್ತಾ ಹೋದರು.

ಆತ್ಮಶುದ್ಧಿಯ ಮಾರ್ಗ: ಉಪವಾಸಕ್ಕೆ ತನ್ನದೇ ಆದ ಮಹತ್ವವಿದೆ. ಈ ಆಚರಣೆಯು ನಮ್ಮಲ್ಲಿನ ಆತ್ಮಶುದ್ಧಿಯ ಮಾರ್ಗ. ಮನುಷ್ಯ ತನ್ನೊಳಗಿನ ಆಸೆ–ದುರಾಸೆ ಆದಷ್ಟೂ ಕಡಿಮೆ ಮಾಡಿಕೊಂಡು ಶಿಸ್ತುಬದ್ಧ ಬದುಕು ಸಾಗಿಸಲು ಇದರಿಂದ ಅನುವಾಗುತ್ತದೆ ಎನ್ನುವುದು ಅವರ ನುಡಿ.

ಮುಂಜಾನೆ 4.30ರ ವೇಳೆಗೆ ದಿನದ ಉಪವಾಸ ಆರಂಭಗೊಳ್ಳುತ್ತದೆ. ಅಷ್ಟರಲ್ಲಿಯೇ ಊಟ ಮುಗಿದಿರಬೇಕು. ಸೂರ್ಯೋದಯದ ನಂತರ ಏನನ್ನೂ ಮುಟ್ಟುವ ಹಾಗಿಲ್ಲ. ಸಂಜೆ 6.44ರ ವೇಳೆಗೆ ಪ್ರಾರ್ಥನೆಯೊಂದಿಗೆ ಉಪವಾಸ ಅಂತ್ಯಗೊಳಿಸಲಾಗುತ್ತದೆ. ಈ ನಡುವೆ ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

‘ರಂಜಾನ್ ಮಾಸಕ್ಕೆ ಇಸ್ಲಾಂನಲ್ಲಿ ತನ್ನದೇ ಆದ ಮಹತ್ವವಿದೆ. ಈ ದಿನಗಳಲ್ಲಿ ಅಲ್ಲಾಹುವಿನ ಪ್ರಾರ್ಥನೆ ಮಾಡಿದವರಿಗೆ 1ಕ್ಕೆ 70ರಷ್ಟು ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಉಳಿದ ದಿನಗಳಲ್ಲಿ ಪ್ರಾರ್ಥನೆ ಮಾಡದವರೂ ಈ ಮಾಸದಲ್ಲಿ ತಪ್ಪದೇ ಪ್ರಾರ್ಥಿಸಿ ಉಪವಾಸ ಕೈಗೊಳ್ಳುತ್ತಾರೆ’ ಎಂದು ಅವರು ಹೇಳುತ್ತಾರೆ.

ಕುರಾನ್‌ ಪಠಣ: ಉಪವಾಸದ ದಿನಗಳಲ್ಲಿ ಪ್ರತಿಯೊಬ್ಬರು ಕುರಾನ್‌ ಪಠಣ ಮಾಡುವ ಅಭ್ಯಾಸ ಇಸ್ಲಾಂನಲ್ಲಿದೆ. ಈ ದಿನಗಳಂದು ಪ್ರತಿ ಮಸೀದಿಯಲ್ಲಿಯೂ ರಾತ್ರಿ 8.30ರಿಂದ ರಾತ್ರಿ 10ಗಂಟೆಯವರೆಗೆ ಕುರಾನ್ ಅನ್ನು ಓದಲಾಗುತ್ತದೆ. ಮಹಿಳೆಯರು, ಮಕ್ಕಳು ಮನೆಗಳಲ್ಲಿಯೇ ಕುರಾನ್‌ ಪಠಣ ಮಾಡುತ್ತಾರೆ.

ದಾನದ ಮಹತ್ವ: ಪ್ರತಿಯೊಬ್ಬ ಮುಸ್ಲಿಮನು ತನ್ನ ಗಳಿಕೆ ಒಂದು ಭಾಗವನ್ನು ಸಮಾಜದಲ್ಲಿನ ಬಡವರಿಗೆ ದಾನವಾಗಿ ನೀಡಬೇಕು ಎನ್ನುವ ನಿಯಮ ಇಸ್ಲಾಂನಲ್ಲಿದೆ. ಸಾಮಾನ್ಯವಾಗಿ ಹಬ್ಬದ ದಿನದಂದು ಈ ಆಚರಣೆ ನಡೆಯುತ್ತದೆ. ತನ್ನ ಗಳಿಕೆಯಲ್ಲಿನ ಶೇ 2.5 ರಷ್ಟು ಸಂಪತ್ತು ವಿವಿಧ ರೂಪದಲ್ಲಿ ಬಡವರಿಗೆ ದಾನ ಮಾಡುವ ಪದ್ಧತಿ ರೂಢಿಯಲ್ಲಿದೆ ಎನ್ನುತ್ತಾರೆ ಜಿಯಾವುಲ್ಲಾ.’

ರಂಜಾನ್‌ನಲ್ಲಿ ಬಗೆಬಗೆಯ ಖಾದ್ಯ
ರಂಜಾನ್ ಮಾಸದಲ್ಲಿ ಉಪವಾಸ ಆಚರಣೆ ಜೊತೆಗೆ ಬಗೆಬಗೆಯ ಪಾನೀಯ, ಖಾದ್ಯಗಳು ಗಮನ ಸೆಳೆಯುತ್ತವೆ. ಖರ್ಜೂರ, ವಿವಿಧ ಹಣ್ಣುಗಳ ಸೇವನೆ ಮಾಮುಲು. ಇದರೊಟ್ಟಿಗೆ ವಿಶೇಷವಾದ ಪಾನೀಯಗಳು, ತರೇಹೆವಾರಿ ಸಮೋಸಾ, ಸಿಹಿ ತಿನಿಸು, ಬಗೆಬಗೆಯ ಮಾಂಸಾಹಾರಿ ಖಾದ್ಯಗಳನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ರಾತ್ರಿ ಹೊತ್ತು ಕೆಲವು ಹೋಟೆಲ್‌ಗಳಲ್ಲಿಯೂ ವಿಶೇಷ ತಿನಿಸುಗಳು ಲಭ್ಯವಿರುತ್ತವೆ.

ದೂರದ ಪ್ರವಾಸಿಗರಿಗೆ ನೆರವು
ರಾಮನಗರಕ್ಕೆ ಬರುವ ಪ್ರವಾಸಿಗರಿಗೆ ಉಪವಾಸಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿಯೇ ಜಿಯಾವುಲ್ಲಾ ಮತ್ತು ಅವರ ಕುಟುಂಬದವರು ದಶಕಗಳಿಂದಲೂ ಮಾಡುತ್ತಾ ಬಂದಿದ್ದಾರೆ.

‘ವ್ಯಾಪಾರ, ಉದ್ಯೋಗ ಮತ್ತಿತರ ಕಾರಣಗಳಿಂದ ಪರ ಊರು, ದೇಶಗಳಿಂದ ಅನೇಕರು ರಾಮನಗರಕ್ಕೆ ಬರುತ್ತಾರೆ. ಅವರಿಗೆ ತಾವು ಉಳಿದಿರುವ ಕಡೆ ಇಲ್ಲವೇ ಹೋಟೆಲ್‌ಗಳಲ್ಲಿ ಉಪವಾಸ ಆಚರಣೆಗೆ ಅನುಕೂಲ ಇರುವುದಿಲ್ಲ. ಅಂತಹವರಿಗೆ ಊಟೋಪಚಾರದ ವ್ಯವಸ್ಥೆ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ’ ಎನ್ನುತ್ತಾರೆ ಸಯ್ಯದ್ ಜಿಯಾವುಲ್ಲಾ.

‘ಉಪವಾಸದ ದಿನಗಳಲ್ಲಿ ಸಂಜೆ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ಅವರಿಗೆಲ್ಲ ಉಪಾಹಾರದ ವ್ಯವಸ್ಥೆ ಅವರೇ ಮಾಡುತ್ತಿದ್ದಾರೆ’ ಎಂದು ಸ್ಥಳೀಯರಾದ ಸಮದ್‌ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT