ಟೀ ಮಾಡೋದೇ ಅಭಿರುಚಿ!

7

ಟೀ ಮಾಡೋದೇ ಅಭಿರುಚಿ!

Published:
Updated:
ಟೀ ಮಾಡೋದೇ ಅಭಿರುಚಿ!

‘ಟೀ ಮಾಡುವುದು ಒಂದು ಕಲೆ ಕಣ್ರೀ, ಒಂದು ಗುಟುಕು ಟೀ ಕುಡಿದರೆ ಅದು ಬಹುಕಾಲ ನೆನಪಿನಲ್ಲಿ ಉಳಿಯುವಷ್ಟು ಖುಷಿ ಉಳಿಸಬೇಕು’ ಎನ್ನುತ್ತಾರೆ ಸುಷ್ಮಿತಾ.

ಎಂ.ಬಿ.ಎ. ಪದವೀಧರೆಯಾಗಿರುವ ಸುಷ್ಮಿತಾ, ಬಗೆಬಗೆಯ ಟೀ ಮಾಡುವುದರಲ್ಲಿ ಅತ್ಯಾಸಕ್ತಿ ಬೆಳೆಸಿಕೊಂಡು ಅನೇಕ ವರ್ಷಗಳಿಂದ ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ‘ಸರಿಯಾದ ಹದದಲ್ಲಿ ತಯಾರಿಸಿದ ಟೀ ಸೇವನೆ ಆರೋಗ್ಯಕ್ಕೆ ವರದಾನ. ಹಾಗೆ ಟೀ ಮಾಡುವುದು ಒಂದು ಕಲೆ’ ಎನ್ನುತ್ತಾರೆ ಅವರು.

‘ಟೀ ಪುಡಿಯ ಕಷಾಯ ಮಾಡಿಕೊಂಡು ಅದಕ್ಕೆ ಹಾಲು, ಸಕ್ಕರೆ ಬೆರೆಸಿ ಕುಡಿಯುವುದು ಟೀ ಎನಿಸುವುದಿಲ್ಲ. ಟೀ ಮಾಡುವುದು ಮತ್ತು ಸೇವಿಸುವುದು ಸಹ ಒಂದು ಕಲೆ. ಗಟಗಟನೆ ಕುಡಿಯುವುದು ಟೀ ಸೇವನೆಯ ರೀತಿ ಅಲ್ಲ. ಟೀ ಕುಡಿಯುವಾಗ ಪ್ರತಿ ಗುಟುಕನ್ನೂ ಆಸ್ವಾದಿಸಬೇಕು. ಟೀ ಮಾಡುವುದನ್ನು ಬೇರೆಯವರಿಗೆ ಕಲಿಸುವುದು ನನಗೆ ಆತ್ಮತೃಪ್ತಿಯ ಮಾರ್ಗ’ ಎಂದು ಪ್ರೀತಿಯಿಂದ ಹೇಳುತ್ತಾರೆ.

ಯಲಹಂಕದಲ್ಲಿರುವ ಸುಷ್ಮಿತಾ ತಮ್ಮ ಮನೆಯಲ್ಲಿಯೇ ಟೀ ಪ್ರಿಯರಿಗಾಗಿ ಹಲವು ಕಾರ್ಯಾಗಾರಗಳನ್ನು ಮಾಡಿದ್ದಾರೆ. ಅನೇಕ ಹೋಟೆಲ್‌ಗಳಲ್ಲೂ ಕಾರ್ಯಾಗಾರ ನಡೆಸಿಕೊಟ್ಟಿರುವ ಅವರಿಗೆ, ಚೆನ್ನೈ, ಕೋಲ್ಕತ್ತಾದಲ್ಲೂ ಬೇಡಿಕೆಯಿದೆ.

ಟೀ ಮಾಡಲು ಯಂತ್ರಗಳನ್ನು ಬಳಸುವುದು ಸುಷ್ಮಿತಾ ಅವರಿಗೆ ಅಪಥ್ಯ. ಸವಿಯಲು ಸಿದ್ಧವಾಗಿರುವ ಹಬೆಯಾಡುವ ಟೀ ರುಚಿಯನ್ನು ಅದಕ್ಕೆ ಬಳಕೆಯಾದ ಪುಡಿ ಹೇಗೆ ಸಂಸ್ಕರಣೆಯಾಗಿದೆ ಎಂಬುದು ಬಹುಮಟ್ಟಿಗೆ ಅಲಂಬಿಸಿರುತ್ತದೆ. ಬ್ಲಾಕ್‌ ಟೀ, ವೈಟ್‌ ಟೀ, ಚೈನೀಸ್‌ ಟೀ, ಗ್ರೀನ್‌ ಟೀ ಹೀಗೆ ವಿವಿಧ ಶೈಲಿಗಳ ಟೀ ತಯಾರಿ ಸುಷ್ಮಿತಾ ಅವರಿಗೆ ಕರತಲಾಮಲಕ.

ಇತ್ತೀಚಿನ ದಿನದ ಬ್ಯೂಸಿ ಷೆಡ್ಯೂಲ್‌ಗಳಲ್ಲಿ ಟೀಯನ್ನು ಯಂತ್ರಗಳಲ್ಲಿ ವಿವಿಧ ರೀತಿಯಲ್ಲಿ ತಯಾರಿಸುತ್ತಾರೆ. ಆದರೆ ಅದರ ರುಚಿಯನ್ನು ಸುಷ್ಮಿತಾ ಒಪ್ಪುವುದಿಲ್ಲ. ‘ಅವು ಅಷ್ಟೊಂದು ಹಿತವೆನಿಸುವುದಿಲ್ಲ’ ಎನ್ನುತ್ತಾರೆ ಅವರು. ವಿವಿಧೆಡೆ ಹೇಗೆ ಟೀ ಸಿದ್ಧಪಡಿಸುತ್ತಾರೆ ಎಂಬುದನ್ನು ಅರಿಯಲು ಸುಷ್ಮಿತಾ ದೇಶ ಸುತ್ತಿದ್ದಾರೆ.

‘ನಮ್ಮ ದೇಶದಲ್ಲಿ ಟೀ ಸಿದ್ಧಪಡಿವುದು ಒಂದು ಸಂಪ್ರದಾಯವಾಗಿಯೂ ಬೆಳೆದು ಬಂದಿದೆ. ಡಾರ್ಜಲಿಂಗ್‌ನ ಕೆಲವು ಮನೆಗಳಲ್ಲಿ ಟೀ ಕುಡಿದಿದ್ದೇನೆ. ಅವರಲ್ಲಿ ಟೀ ಒಂದು ರೀತಿಯ ವೈನ್ ಥರ ಇರುತ್ತದೆ. ಕೆಲ ಹೈಫೈ ಪಾರ್ಟಿಗಳಲ್ಲಿ ಸುವಾಸನೆ ಭರಿತ ಟೀ ಬಳಕೆಯಾಗುತ್ತದೆ. ಇದೂ ಒಂದು ಥರ ಟೀ ಗಮ್ಮತ್ತು ಅನ್ನಿ. ಟೀ ಜೊತೆಗೆ ಚಾಕಲೇಟ್‌ ತಿನ್ನುವುದು ನನಗೆ ಇಷ್ಟ. ಕೆಲವೊಮ್ಮೆ ಗಿಣ್ಣು ಸವಿಯುತ್ತೇನೆ’ ಎಂದು ತಮ್ಮ ಆಯ್ಕೆಯನ್ನು ಹಂಚಿಕೊಳ್ಳುತ್ತಾರೆ.

‘ಟೀ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ನಾವು ಹಾಲು ಮತ್ತು ಸಕ್ಕರೆ ಮಿಶ್ರಣ ಮಾಡುವುದರಿಂದ ಅವನ್ನು ಕಳೆದುಕೊಳ್ಳುತ್ತಿದ್ದೇವೆ’ ಎನ್ನುವುದು ಅವರ ಮನದ ಮಾತು.

ಟೀ ತಯಾರಿಯನ್ನೇ ಅತ್ಯಾಸಕ್ತಿಯಿಂದ ರೂಢಿಸಿಕೊಂಡ ವಿಶಿಷ್ಟ ಕಲಾವಿದರಿಗಾಗಿ ಪ್ಯಾರೀಸ್‌ನಲ್ಲಿ ಜೂನ್‌ 26ರಂದು ವಿಶ್ವ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಇದರಲ್ಲಿ ಸುಷ್ಮಿತಾ ಸಹ ಪಾಲ್ಗೊಳ್ಳುತ್ತಿದ್ದಾರೆ.

ಸುಷ್ಮಿತಾ ಅವರ ಫೇಸ್‌ಬುಕ್ ಅಕೌಂಟ್– TeaBySusmita

ಟೀ ರಸಗ್ರಹಣ ಕಾರ್ಯಾಗಾರ: ನಡೆಸಿಕೊಡುವವರು–ಸುಷ್ಮಿತಾ ದಾಸ್ ಗುಪ್ತ, ಆಯೋಜನೆ–ಪ್ರಾಜೆಕ್ಟ್ ಈವ್, ಸ್ಥಳ–ಪ್ರಾಜೆಕ್ಟ್‌ ಈವ್, ಜಯನಗರ 4ನೇ ಬ್ಲಾಕ್, ಶನಿವಾರ ಮಧ್ಯಾಹ್ನ 3. ಉಚಿತ ಪ್ರವೇಶ. ಮಾಹಿತಿಗಾಗಿ: 99455 60612

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry