ಚರ್ಚ್‌ನ 6 ಹುಂಡಿ ಒಡೆದು ಕಳವು

7
ರೈಲ್ವೆ ಸ್ಟೇಷನ್ ರಸ್ತೆ ಪಕ್ಕದ ಸಂತ ಅಂತೋಣಿ ಚರ್ಚ್ ಬಾಗಿಲು ಒಡೆದು ಒಳ ಪ್ರವೇಶಿಸಿದ ದುಷ್ಕರ್ಮಿಗಳು

ಚರ್ಚ್‌ನ 6 ಹುಂಡಿ ಒಡೆದು ಕಳವು

Published:
Updated:
ಚರ್ಚ್‌ನ 6 ಹುಂಡಿ ಒಡೆದು ಕಳವು

ತುಮಕೂರು: ನಗರದ ರೈಲ್ವೆ ಸ್ಟೇಷನ್ ರಸ್ತೆಯ ಸಂತ ಅಂತೋಣಿ ಚರ್ಚ್‌ನಲ್ಲಿ ಬುಧವಾರ ರಾತ್ರಿ ಒಂದು ದೊಡ್ಡ ಹುಂಡಿ ಹಾಗೂ 5 ಚಿಕ್ಕ ಹುಂಡಿ ಸೇರಿ 6 ಹುಂಡಿಗಳನ್ನು ಒಡೆದು ಹಣ ದೋಚಲಾಗಿದೆ.

ಚರ್ಚ್‌ನ ಮುಖ್ಯ ದ್ವಾರದ ಬೀಗ ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ಕಬ್ಬಿಣದ ಹಾರೆ, ಸಲಾಕೆಗಳಿಂದ ಮೀಟಿ ದೊಡ್ಡ ಹುಂಡಿ ಒಡೆದಿದ್ದಾರೆ. ಚರ್ಚ್‌ನ ಒಳಗಡೆ ಗೋಡೆ ಸುತ್ತಲೂ ಇರುವ 4 ಮತ್ತು ಅಂತಸ್ತಿನ ಮೇಲಿನ ಒಂದು ಹುಂಡಿಗಳನ್ನು ಒಡೆದಿದ್ದಾರೆ.

ಅಲ್ಲದೇ, ಪರಮ ಪ್ರಸಾದ ಪೆಟ್ಟಿಗೆಯನ್ನು (ಗರ್ಭಗುಡಿಯಷ್ಟೇ ಪವಿತ್ರವಾದುದು) ಒಡೆದು ಹಣಕ್ಕಾಗಿ ಹುಡುಕಾಡಿದ್ದಾರೆ. ಚರ್ಚ್ ಒಳಗಡೆಯ ಎರಡು ಕೊಠಡಿಗಳ ಬೀಗ ಮುರಿದಿದ್ದಾರೆ.

ಚರ್ಚ್‌ನಲ್ಲಿ ಯಾರು ಇರಲಿಲ್ಲ: ಚರ್ಚ್‌ನಲ್ಲಿ ಯಾರೂ ಇರಲಿಲ್ಲ. ಬೀಗ ಹಾಕಲಾಗಿತ್ತು. ಬೆಳಿಗ್ಗೆ ಕಸಗೂಡಿಸುವ ಮಹಿಳೆ ಚರ್ಚ್‌ಗೆ ಹೋದಾಗ ಕಳವು ನಡೆದಿರುವುದು ಗೊತ್ತಾಗಿದೆ. ಹೊಸಬಡಾವಣೆ ಠಾಣೆ ಸಬ್ ಇನ್‌ಸ್ಪೆಕ್ಟರ್ ಸುದರ್ಶನ್, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಪರಿಶೀಲನೆ ನಡೆಸಲಾಗಿದ್ದು, ಫಾದರ್ ಇಲ್ಲ. ಪ್ರವಾಸದಲ್ಲಿದ್ದಾರೆ. ಅವರು ಬಂದ ಬಳಿಕ ಹುಂಡಿಯಲ್ಲಿನ ಹಣ, ಕಳವಾದ ವಸ್ತುಗಳ ಬಗ್ಗೆ ವಿವರ ಪಡೆಯಲಾಗುವುದು’ ಎಂದು ಸಬ್ ಇನ್‌ಸ್ಪೆಕ್ಟರ್ ಸುದರ್ಶನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ಇರಲಿಲ್ಲ: ಸ್ಟೇಷನ್ ರಸ್ತೆಗೆ ಹೊಂದಿಕೊಂಡಂತೆ ಚರ್ಚ್ ಇದ್ದರೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಕಾವಲುಗಾರರನ್ನೂ ನೇಮಿಸಿಲ್ಲ. ಈ ಅವಕಾಶವನ್ನು ದುಷ್ಕರ್ಮಿಗಳು ಕಳ್ಳತನಕ್ಕೆ ಬಳಸಿಕೊಂಡಿದ್ದಾರೆ.

ಕೆಲಸ ಮಾಡದ ಹಾಸ್ಟೆಲ್ ಕ್ಯಾಮೆರಾ

ಚರ್ಚ್ ಎದುರುಗಡೆಯೇ ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ವಸತಿ ನಿಲಯ ಇದೆ. ಈ ವಸತಿ ನಿಲಯಕ್ಕೆ ಅಳವಡಿಸಿದ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಚರ್ಚ್‌ನಲ್ಲಿ ಯಾರೇ ಸುಳಿದಾಡಿದರೂ ದೃಶ್ಯಗಳು ಸೆರೆಯಾಗಿರುತ್ತಿದ್ದವು. ಈ ಹಿಂದೆಯೂ ಒಮ್ಮೆ ಚರ್ಚ್ ನಲ್ಲಿ ಕಳವು ಯತ್ನ ನಡೆದಾಗ ಇದೇ ಸಿ.ಸಿ. ಟಿವಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಪೊಲೀಸರು ಮಾಡಿದ್ದರು ಎಂದು ಚರ್ಚ್‌ನ ಭಕ್ತರೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಆದರೆ, ಈಗ ಆ ಸಿ.ಸಿ. ಟಿವಿ ಕ್ಯಾಮರಾ ಕೆಟ್ಟಿದೆ! ಅಲ್ಲಿದ್ದ ಕ್ಯಾಮರಾವನ್ನೂ ತೆಗೆದು ಹಾಕಲಾಗಿದೆ. ಚರ್ಚ್‌ನಲ್ಲಿ ಕಳವು ಆಗಿದೆ ಎಂದಾಗ ಪೊಲೀಸರಿಗೆ ತಕ್ಷಣ ನೆನಪಾಗಿದ್ದು ಸಿ.ಸಿ. ಟಿವಿ ಕ್ಯಾಮರಾ. ಆದರೆ, ಹೋಗಿ ನೋಡಿದಾಗ ಅಲ್ಲಿ ಕ್ಯಾಮರಾ ಇರಲಿಲ್ಲ’ ಎಂದು ತಿಳಿಸಿದರು.

ಪ್ರವಾಸದಿಂದ ಬಂದ ಬಳಿಕ ಪರಿಶೀಲನೆ

‘ನಾನು ನಾಗಾಲ್ಯಾಂಡ್ ಪ್ರವಾಸದಲ್ಲಿದ್ದೇನೆ. ಬುಧವಾರ ರಾತ್ರಿ ಚರ್ಚ್ ನಲ್ಲಿ ಕಳವು ನಡೆದಿರುವ ವಿಷಯ ಗೊತ್ತಾಗಿದೆ. ಹುಂಡಿಗಳನ್ನು ಒಡೆದು ಕಳವು ಮಾಡಲಾಗಿದೆ. ಹುಂಡಿಯಲ್ಲಿ ಎಷ್ಟು ಹಣ ಇತ್ತು ಎಂದು ಹೇಳುವುದು ಕಷ್ಟ. ಭಕ್ತರು ಅವರ ಶಕ್ತ್ಯಾನುಸಾರ ಹಾಕಿರುತ್ತಾರೆ. ಪ್ರವಾಸ ಮುಗಿಸಿ ಶನಿವಾರ ಬಂದ ಬಳಿಕ ಪರಿಶೀಲನೆ ನಡೆಸಲಾಗುವುದು’ ಎಂದು ಲೂರ್ದ್ ಮಾತಾ ಚರ್ಚ್ ಹಾಗೂ ಸಂತ ಅಂತೋಣಿ ಚರ್ಚ್ ಫಾದರ್ ಆರೋಗ್ಯರಾಜ್ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಆ ಚರ್ಚ್‌ನ್ನು ಪ್ರತಿ ಮಂಗಳವಾರಷ್ಟೇ ತೆರೆಯಲಾಗುತ್ತದೆ. ಅಲ್ಲಿ ಯಾರೂ ಇರುವುದಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry