ಪರಶುರಾಮ ಪರ ಮುಂದುವರಿದ ‘ಪೋಸ್ಟ್‌’

7
ಮನೆ ಮನೆಗೂ ವಾಘ್ಮೋರೆ ಹುಟ್ಟುತ್ತಾರೆ; ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಚಾಲೇಶ್ವರಿ ತೊನಶ್ಯಾಳ

ಪರಶುರಾಮ ಪರ ಮುಂದುವರಿದ ‘ಪೋಸ್ಟ್‌’

Published:
Updated:

ವಿಜಯಪುರ: ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಬಂಧಿತನಾಗಿರುವ ಶ್ರೀರಾಮಸೇನೆಯ ಸಕ್ರಿಯ ಕಾರ್ಯಕರ್ತ ಪರಶುರಾಮ ವಾಘ್ಮೋರೆ ಪರ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಅಪ್‌ಲೋಡ್‌ ಮಾಡುವುದು ಮುಂದುವರೆದಿದೆ. ಈ ಪೋಸ್ಟ್‌ಗಳು ವೈರಲ್‌ ಆಗಿ ಬಿಸಿ ಬಿಸಿ ಚರ್ಚೆಗೆ ವೇದಿಕೆ ಕಲ್ಪಿಸಿವೆ.

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ, ಮಂಗಳೂರಿನ ಪ್ರಸಾದ್‌ ಅತ್ತಾವರ ಅವರ ರಾಮ ಸೇನಾ ಸಂಘಟನೆಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ವಿಜಯಪುರದ ಮಂಚಾಲೇಶ್ವರಿ ತೊನಶ್ಯಾಳ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪರಶುರಾಮ ಪರ ಪೋಸ್ಟ್‌ವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ. ಇದನ್ನು ರಾಮ್‌ ಸೇನಾ ಕರ್ನಾಟಕ ಸೇರಿದಂತೆ ಒಂಬತ್ತು ಜನರ ಖಾತೆಗಳಿಗೆ ಟ್ಯಾಗ್‌

ಮಾಡಿದ್ದಾರೆ.

‘ಈ ದೇಶದ ತಳಹದಿ ಹಿಂದೂತ್ವ. ಲದ್ದಿ ಜೀವಿಗಳು ಹಿಂದೂ ವಿರೋಧಿ ಚಟುವಟಿಕೆ ಮಾಡಿದರೆ, ಮನೆ ಮನೆಗೂ ಪರಶುರಾಮ ವಾಘ್ಮೋರೆ ಹುಟ್ಟುತ್ತಾರೆ’ ಎಂಬ ಸಂದೇಶವನ್ನು ಬರೆದು ಕೊಂಡಿದ್ದಾರೆ.

ಮಂಚಾಲೇಶ್ವರಿ ಈ ಪೋಸ್ಟ್‌ ಅಪ್‌ಲೋಡ್‌ ಮಾಡಿದ ಕೆಲ ಗಂಟೆಗಳಲ್ಲೇ 225 ಮಂದಿ ಲೈಕ್‌ ಮಾಡಿದ್ದರೆ, 79 ಮಂದಿ ಕಾಮೆಂಟ್‌ ಮಾಡಿದ್ದು, 14 ಮಂದಿ ಹಂಚಿಕೊಂಡಿದ್ದಾರೆ. ಟೀಕೆ– ಪ್ರತಿ ಟೀಕೆಗಳು ವ್ಯಕ್ತವಾಗಿವೆ. ಕೆಲವರು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

‘ಸೈದ್ಧಾಂತಿಕವಾಗಿ ನನ್ನ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವೆ. ಗೌರಿ ಹೇಳಿದಂತೆ ನಾನೂ ಹೇಳಿರುವೆ. ಇದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ. ನಾವು ಮಾಡಿದರೆ ವಿವಾದ. ಅವರು ಮಾಡಿದರೆ ಮಾತ್ರ ಚಿಂತನೆಯಾ? ಬುದ್ಧಿಜೀವಿಗಳು ಕೋಟ್ಯಂತರ ಹಿಂದೂಗಳ ಭಾವನೆ ಕೆಣಕದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಮಂಚಾಲೇಶ್ವರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry