ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಸಲಹೆ

ಗ್ರಾಮ ಸ್ವರಾಜ್ ಅಭಿಯಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸುಬ್ರಮಣಿಯನ್
Last Updated 15 ಜೂನ್ 2018, 13:57 IST
ಅಕ್ಷರ ಗಾತ್ರ

ಯಾದಗಿರಿ: ‘ಕೇಂದ್ರ ಸರ್ಕಾರವು ಆಯ್ಕೆ ಮಾಡಿರುವ ಮಹಾತ್ವಾಕಾಂಕ್ಷೆ (ಆಸ್ಪಿರೇಷನಲ್) ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು’ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ನಿರ್ದೇಶಕ ಕೆ.ಬಿ.ಸುಬ್ರಮಣಿಯನ್ ಸೂಚಿಸಿದರು

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಅಭಿಯಾನದ ಅಡಿ ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ವರದಿ ಪಡೆದು ಅವರು ಮಾತನಾಡಿದರು.

ಈ ಅಭಿಯಾನದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ, ಸೌಭಾಗ್ಯ (ಪ್ರಧಾನಮಂತ್ರಿ ಸಹಜ್ ಬಿಜ್ಲಿ ಹರ್ ಘರ್) ಯೋಜನೆ, ಉಜಾಲ ಯೋಜನೆ, ಪ್ರಧಾನಮಂತ್ರಿ ಜನ್‌ಧನ್ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಮಿಷನ್ ಇಂದ್ರಧನುಷ್, ಪೋಷಣ್ ಅಭಿಯಾನ್ ಯೋಜನೆಗಳನ್ನು ಮುಂಬರುವ ಆಗಸ್ಟ್ 15ರೊಳಗೆ ಅನುಷ್ಠಾನಗೊಳಿಸಬೇಕಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ಜವಾಬ್ದಾರಿ ಯಿಂದ ನಿರ್ವಹಿಸಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಗ್ರಾಮ ಸ್ವರಾಜ್ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಜಿಲ್ಲೆಯ 349 ಹಳ್ಳಿಗಳಿಗೆ ನಾಲ್ವರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಅವರು ಭೇಟಿ ನೀಡಿದಾಗ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಜನರಿಗೆ ಯೋಜನೆಗಳ ಮಾಹಿತಿ ನೀಡಿ:
ಸರ್ಕಾರ ಯೋಜನೆಗಳ ಬಗ್ಗೆ ಅಧಿಕಾರಿಗಳು ಚೆನ್ನಾಗಿ ತಿಳಿದುಕೊಂಡರೆ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸಭೆ, ಬ್ಯಾನರ್, ಪೋಸ್ಟರ್‌ಗಳ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿಗಾವಹಿಸಿ, ಮಾಹಿತಿ ಪಡೆಯಬೇಕು ಎಂದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ 16,549 ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಗ್ಯಾಸ್ ಸಂಪರ್ಕ ಇಲ್ಲದ ಅರ್ಹ ಕುಟುಂಬಗಳು ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಿ ನಿಗದಿತ ದಾಖಲಾತಿಗಳನ್ನು ಸಲ್ಲಿಸಿ, ಹೊಸ ಸಂಪರ್ಕ ಪಡೆಯಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ನಾಗಭೂಷಣ್ ಸಭೆಯ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ್‌ಧನ್ ಯೋಜನೆಯ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಭೆಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಬೇಕು. ಖಾತೆ ತೆರೆಯಲು ಬೇಕಾಗುವ ಅಗತ್ಯ ದಾಖಲಾತಿಗಳ ಬಗ್ಗೆ, ವಿಮಾ ಯೋಜನೆಗಳ ಪ್ರಯೋಜನಗಳ ಬಗ್ಗೆ ವಿವರವುಳ್ಳ ಪೋಸ್ಟರ್ ಅಂಟಿಸಬೇಕು. ಬ್ಯಾನರ್‌ಗಳನ್ನು ಹಾಕಬೇಕು ಎಂದು ಜಿಲ್ಲಾಧಿಕಾರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಟಿ.ಖಾದ್ರಿ ಅವರಿಗೆ ಸೂಚನೆ ನೀಡಿದರು.

ಗ್ರಾಮ ಸ್ವರಾಜ್ ಕಾರ್ಯಕ್ರಮದ ವಿಶೇಷ ಮಿಷನ್ ಅಭಿಯಾನದಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಿದ ಬಗ್ಗೆ ಹಾಗೂ ಲಸಿಕೆ ವಂಚಿತರ ಬಗ್ಗೆ 2–3 ದಿನಗಳಲ್ಲಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಭಗವಂತ ಅನವಾರ ಅವರಿಗೆ ಸೂಚಿಸಿದ ಅವರು, ಆಶಾ, ಅಂಗನವಾಡಿ ಹಾಗೂ ಸಂಬಂಧಪಟ್ಟ ಆಸ್ಪತ್ರೆ ಅಧಿಕಾರಿಗಳಿಂದ ಇಂದ್ರಧನುಷ್ ಮಿಷನ್ ವರದಿ ಪಡೆದು ಯಾವುದೇ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಹೇಳಿದರು.

ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ನಾಲ್ಕು ದಿನಗಳಲ್ಲಿ ವರದಿ ನೀಡಿ, ಸೌಭಾಗ್ಯ (ಪ್ರಧಾನಮಂತ್ರಿ ಸಹಜ್ ಬಿಜ್ಲಿ ಹರ್ ಘರ್) ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಉಜಾಲ ಯೋಜನೆಗಳ ಅಡಿ ರಿಯಾಯಿತಿ ದರದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಬಿಪಿಎಲ್ ಕಾರ್ಡ್ ಇದ್ದರೆ ಸೌಭಾಗ್ಯ ಯೋಜನೆ ಅಡಿ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಇಲ್ಲವಾದರೆ ₹ 500 ಪಾವತಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಜಂಟಿ ಕೃಷಿ ನಿರ್ದೇಶಕು ಆರ್‌.ದೇವಿಕಾ ಮಾತನಾಡಿ, ‘ಕೃಷಿ ಕಲ್ಯಾಣ ಅಭಿಯಾನದಡಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಸೇರಿದಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯ 25 ಗ್ರಾಮಗಳನ್ನು ಆಯ್ಕೆ ಆಗಿವೆ. ಇವುಗಳಲ್ಲಿ ಈಗಾಗಲೇ 18 ಗ್ರಾಮಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಕಾಂತ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT