ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾತ್ಮಕ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ

ಹುರಸಗುಂಡಗಿಯಲ್ಲಿ ಸನ್ನತ್ತಿ ಹಿನ್ನೀರು ಮುಳುಗಡೆ ಸಂತ್ರಸ್ತರೊಂದಿಗೆ ಅಧಿಕಾರಿಗಳ ಸಭೆ
Last Updated 15 ಜೂನ್ 2018, 20:25 IST
ಅಕ್ಷರ ಗಾತ್ರ

ಯಾದಗಿರಿ: ‘ಸನ್ನತ್ತಿ ಕಿರು ಜಲಾಶಯ ಹಿನ್ನೀರು ಮುಳುಗಡೆ ಗ್ರಾಮ ಹುರಸಗುಂಡಗಿಯಲ್ಲಿನ 155 ಹೆಚ್ಚುವರಿ ಕುಟುಂಬಗಳ ಸಂತ್ರಸ್ತರಿಗೆ ದಯಾತ್ಮಕ (ಎಕ್ಸ್ ಗ್ರೇಷಿಯ) ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ಸಹಾಯಕ ಆಯುಕ್ತ ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ ಹೇಳಿದರು.

ಸಮೀಪದ ಹುರಸಗುಂಡಗಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ್ರಸ್ತರ ಸಭೆ ಹಾಗೂ ಅಹವಾಲು ಆಲಿಸಿದ ನಂತರ ಅವರು ಈ ನಿರ್ಧಾರ ಪ್ರಕಟಿಸಿದರು.

‘2004 ರಲ್ಲಿ ಗ್ರಾಮ ಸ್ಥಳಾಂತರ ಸಂದರ್ಭದಲ್ಲಿ ಒಟ್ಟು 967 ಮನೆಗಳನ್ನು ಮುಳುಗಡೆ ಎಂದು ಗುರುತಿಸಿ ಪರಿಹಾರ ಪ್ರಕ್ರಿಯೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಬಾರಿ ಒಪ್ಪಿಗೆ ಐತೀರ್ಪುಗಳನ್ನು ಹೊರಡಿಸಲಾಗಿದೆ. 2009ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, 2005ರಲ್ಲಿ ಮಾಡಿರುವ ಮೇಲುರುಜುವಾದ (ಜೆಎಂಸಿ)ಯ ಆಧಾರದ ಮೇಲೆ ಅಧಿಸೂಚನೆ ಹೊರಡಿಸಿರುವ ಕಾರಣ 155 ಮನೆಗಳು ಪರಿಹಾರಕ್ಕೆ ಒಳಪಟ್ಟಿಲ್ಲ’ ಎಂದರು.

‘2009ರ ನಂತರ ಅಧಿಸೂಚನೆ ಹೊರಡಿಸಿದ ನಂತರ ಈ ಮನೆಗಳು ನಿರ್ಮಾಣಗೊಂಡಿರುವುದಾಗಿ ಕೆಬಿಜೆಎನ್ಎಲ್‌ ಅಧಿಕಾರಿಗಳು ಹೇಳುತ್ತಾರೆ. ಆದರೆ, ಗ್ರಾಮಸ್ಥರು ಹಳೆಯ ಮೇಲುರುಜುವಾದ (ಜೆಎಂಸಿ) ಆಧಾರದ ಮೇಲೆ ಪರಿಹಾರ ನೀಡಿರುವುದರಿಂದ ಉಳಿದ 155 ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಇದರಿಂದ ಸ್ಥಳಾಂತರಕ್ಕೆ ತೊಂದರೆ ಉಂಟಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಅಂತಿಮ ಅಧಿಸೂಚನೆ ಸಂದರ್ಭದಲ್ಲಿ ಮೇಲುರುಜುವಾದ (ಜೆಎಂಸಿ) ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಹಾಗಾಗಿ, ಹೆಚ್ಚುವರಿ 155 ಮನೆಗಳಿಗೆ ದಯಾತ್ಮಕ ಪರಿಹಾರ ನೀಡಬಹುದು ಎಂಬುದಾಗಿ ಸರ್ಕಾರಕ್ಕೆ ಹಾಗೂ ಕೆಬಿಜೆಎನ್‌ಎಲ್‌ಗೆ ವರದಿ ನೀಡಲಾಗುವುದು’ ಎಂದು ತಿಳಿಸಿದರು.

ವಿಶೇಷ ಭೂಸ್ವಾಧೀನ ಅಧಿಕಾರಿ ನವೀನ್‌ ಜೋಸೆಫ್‌ ಮಾತನಾಡಿ, ‘2009ರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಖಾತೆ ಹೊಂದಿರುವ 967 ಮನೆಗಳನ್ನು ಗುರುತಿಸಿ ಮೇಲುರುಜುವಾದ (ಜೆಎಂಸಿ) ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಈ 155 ಮನೆಗಳ ಪರಿಹಾರಕ್ಕೆ ಬೇಡಿಕೆ ಇರಲಿಲ್ಲ. ಅಧಿಸೂಚನೆ ಹೊರಬಿದ್ದ ನಂತರ ಸರ್ಕಾರಕ್ಕೆ ಭೂಸ್ವಾಧೀನ ಆಗಿರುವ ಸ್ಥಳದಲ್ಲಿ ಕಟ್ಟಡ ಕಟ್ಟುವಂತಿಲ್ಲ ಎಂಬ ನಿಯಮ ಇದ್ದರೂ, ಇಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡಗಳು ನಿರ್ಮಾಣಗೊಂಡಿರುವುದು ಕಂಡುಬರುತ್ತದೆ. ಅಂತಹ ಕಟ್ಟಡಗಳಿಗೆ ಪರಿಹಾರ ಸಿಗುವುದು ಕಷ್ಟಸಾಧ್ಯ’ ಎಂದರು.

‘155 ಮನೆಗಳಿಗೆ ದಯಾತ್ಮಕ ಪರಿಹಾರವನ್ನು ಮಾನವೀಯ ದೃಷ್ಟಿಯಿಂದ ನೀಡುವಂತೆ ವರದಿ ನೀಡಬಹುದು. ರೈತರು ಈ ಕುರಿತು ಸಹಕರಿಸಬೇಕು ಮತ್ತು ಪುನರ್ವಸತಿ ಕಲ್ಪಿಸಿರುವ ಸ್ಥಳಕ್ಕೆ ಗ್ರಾಮಸ್ಥರು ಸ್ಥಳಾಂತರ ಗೊಳ್ಳಬೇಕು’ ಎಂದು ಮನವಿ ಮಾಡಿದರು.

ನಂತರ ಸಹಾಯಕ ಆಯುಕ್ತ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಭೀಮರಾಯನಗುಡಿಯ ವಿಶೇಷ ಭೂಸ್ವಾಧೀನ ಅಧಿಕಾರಿ ನವೀನ್‌ ಜೋಸೆಫ್‌ ಗ್ರಾಮದಲ್ಲಿ ಸಂಚರಿಸಿ ಪರಿಹಾರಕ್ಕೆ ಗ್ರಾಮಸ್ಥರು ಬೇಡಿಕೆ ಇಟ್ಟಿರುವ ಮನೆಗಳನ್ನು ವೀಕ್ಷಿಸಿದರು.

ಪುನರ್ವಸತಿ ಸ್ಥಳದಲ್ಲಿ ಸೌಲಭ್ಯ ಕೊರತೆ:

ಮುಳುಗಡೆ ಗ್ರಾಮ ಹುರಸಗುಂಡಗಿಯ ಜನರನ್ನು ಸ್ಥಳಾಂತರ ಮಾಡಲು ಸರ್ಕಾರ ಮಾಡಿರುವ ಪುನರ್ವಸತಿ ಸ್ಥಳದಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ₹163 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಾದ ಪುನರ್ವಸತಿ ಸ್ಥಳದಲ್ಲಿ ಕನಿಷ್ಠ ಚರಂಡಿ, ನೀರು, ಬೆಳಕಿನ ವ್ಯವಸ್ಥೆ ಸರಿ ಇಲ್ಲ ಎಂದು ರೈತ ವೀರಣ್ಣ ಸಭೆಯಲ್ಲಿ ದೂರಿದರು.

‘ಮುಳುಗಡೆ ಸ್ಥಳಾಂತರ ಆಗದಿರುವುದಕ್ಕೆ ಸರ್ಕಾರವೇ ನೇರಹೊಣೆ. ನಿವೇಶನ ಹಂಚಿಕೆ ಮಾಡದೆ ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದೆ. ನಿವೇಶನ ಕೊರತೆಯಿಂದಾಗಿ ಫಲಾನುಭಗಳು ಮನೆಗಳ ಪಕ್ಕದಲ್ಲಿಯೇ ಮತ್ತೊಂದು ಮನೆ ಕಟ್ಟಿಕೊಂಡಿದ್ದಾರೆ. ಜನರು ಹಣ ಕಳೆದುಕೊಂಡ ಮೇಲೆ ಸರ್ಕಾರ ನಿವೇಶನ ಹಂಚಿಕೆ ಮಾಡಿದೆ. ಇದರಿಂದಾಗಿ ಪುನರ್ವಸತಿ ಸ್ಥಳದಲ್ಲಿ ಜನರು ಮನೆಕಟ್ಟಿಕೊಳ್ಳಲು ಆಗಿಲ್ಲ’ ಎಂದು ರೈತರು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

‘ಪುನರ್ವಸತಿ ಸ್ಥಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಬಿಜೆಎನ್ನೆಲ್ ಎಂಜಿನಿಯರ್‌ ರಾಥೋಡ ಮಾತನಾಡಿ, ‘ಪುನರ್ವಸತಿ ಕೇಂದ್ರ ವಾಸಯೋಗ್ಯವಾಗಿದೆ. ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿಗಾಗಿ ನಾಲ್ಕು ಕೊಳವೆ ಬಾವಿಗಳನ್ನು ತೋಡಿಸಲಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಹಾಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಪುನರ್ವಸತಿ ವಿಭಾಗದ ಎಂಜಿನಿಯರ್ ರಾಥೋಡ ಇತರರು ಇದ್ದರು.

ಹೆಚ್ಚುವರಿ ಮನೆಗಳಿಗೆ ಪರಿಹಾರ ಸಿಗುವಂತೆ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಅಲ್ಲಿ ಉನ್ನತಮಟ್ಟದ ಅಧಿಕಾರಿಗಳು ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ.
ಡಾ.ಬಿ.ಎಸ್.ಮಂಜುನಾಥಸ್ವಾಮಿ, ಸಹಾಯಕ ಆಯುಕ್ತ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT