ಪತ್ರಕರ್ತನ ಹತ್ಯೆ : ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕುವುದು ಸಲ್ಲದು

7

ಪತ್ರಕರ್ತನ ಹತ್ಯೆ : ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕುವುದು ಸಲ್ಲದು

Published:
Updated:
ಪತ್ರಕರ್ತನ ಹತ್ಯೆ : ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕುವುದು ಸಲ್ಲದು

ಪತ್ರಕರ್ತರ ಹತ್ಯೆ ಸಮಾಜದ ದನಿಯನ್ನು ಅಡಗಿಸುವುದಕ್ಕೆ ಸಮ. ದನಿ ಇಲ್ಲದವರಿಗೆ ದನಿ ಕೊಡುವಂತಹ ಹೊಣೆಗಾರಿಕೆ ಪತ್ರಕರ್ತರದ್ದು. ಆದರೆ ಈ ಹೊಣೆಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಆತಂಕಕಾರಿ. ಕಾಶ್ಮೀರದಲ್ಲಿ ಶಾಂತಿಯ ಪ್ರತಿಪಾದಕರಾಗಿ ವಿವೇಕಯುತ ದನಿಯಾಗಿದ್ದ ಪತ್ರಕರ್ತ ಶುಜಾತ್ ಬುಖಾರಿ ಅವರ ಹತ್ಯೆ ಕಾಶ್ಮೀರದಲ್ಲಷ್ಟೇ ಅಲ್ಲ ಇಡೀ ರಾಷ್ಟ್ರದ ಪ್ರಜ್ಞೆಯನ್ನು ಕಲಕಿದೆ. ಭಯೋತ್ಪಾದನೆ ನೆರಳಲ್ಲಿ ಬಸವಳಿದಿರುವ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಈ ಹತ್ಯೆ ಕಳವಳವನ್ನು ಹೆಚ್ಚಿಸುವಂತಹದ್ದು. ರಂಜಾನ್ ಸಂದರ್ಭದಲ್ಲಿ ಶಾಂತಿ ಯತ್ನವಾಗಿ ಘೋಷಿಸಲಾಗಿದ್ದ ಕದನ ವಿರಾಮವನ್ನು ವಿಸ್ತರಣೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಈ ಹತ್ಯೆ ನಡೆದಿರುವುದು ವಿಪರ್ಯಾಸ.

ಅಲ್ಲದೆ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಭಾರತವನ್ನು ಟೀಕಿಸುವ ವಿಶ್ವಸಂಸ್ಥೆಯ ವರದಿ ಬಿಡುಗಡೆಯಾದ ದಿನವೇ ಈ ಹತ್ಯೆ ನಡೆದಿದೆ. ಸೈದ್ಧಾಂತಿಕ ಅತಿರೇಕಗಳ ನಡುವೆ ಸಾರ್ವಜನಿಕ ಸಂವಾದಗಳು ನಜ್ಜುಗುಜ್ಜಾಗಿರುವ ಪ್ರಸಕ್ತ ಸಂದರ್ಭದಲ್ಲಿ ಅಪರೂಪದ ವಿವೇಕಯುತವಾದ ದನಿಯಾಗಿದ್ದರು ಬುಖಾರಿ. ಸಾರ್ವಜನಿಕವಾಗಿ ಕದನವಿರಾಮವನ್ನು ಸ್ವಾಗತಿಸಿದ್ದರು. ಸಂವಾದ ಹಾಗೂ ರಾಜಿಸೂತ್ರಗಳ ಶಕ್ತಿಯ ಬಗ್ಗೆ ಆಶಾವಾದಿಯೂ ಆಗಿದ್ದವರು ಬುಖಾರಿ. ಈದ್‌ಗಾಗಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ಹತ್ಯೆ ನಡೆದ ದಿನವೇ ಬುಖಾರಿ ಹತ್ಯೆಯೂ ನಡೆದಿದೆ. ಪವಿತ್ರ ರಂಜಾನ್ ಮಾಸದಲ್ಲಿ ಈ ರಕ್ತಸಿಕ್ತ ಬೆಳವಣಿಗೆಗಳು ವಿಷಾದನೀಯ. ಭದ್ರತಾಪಡೆಗಳು, ಶಾಂತಿ ಪ್ರತಿಪಾದಕರು ಹಾಗೂ ಪತ್ರಕರ್ತರಿಗೂ ಕಾಶ್ಮೀರ ಅಪಾಯಕಾರಿ ವಲಯ ಎಂಬಂತಹ ಸಂದೇಶ ರವಾನೆಯಾಗಿರುವುದು ಖಂಡನೀಯ.

ಭಾರತದಲ್ಲಿ ಪತ್ರಕರ್ತರಾಗಿರುವುದು ಹಿಂದೆಂದಿಗಿಂತ ಈಗ ಅತ್ಯಂತ ಅಪಾಯಕಾರಿ ಎಂಬುದನ್ನು ಧ್ವನಿಸಿದೆ ಈ ಹತ್ಯೆ. ಕಳೆದ ವರ್ಷ 11 ಭಾರತೀಯ ಪತ್ರಕರ್ತರು ಹತ್ಯೆಯಾಗಿದ್ದರು. 46 ಮಂದಿಯ ಮೇಲೆ ಆಕ್ರಮಣ ನಡೆದಿತ್ತು. ಈ ವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನಕ್ಕೆ ಕುಸಿದಿದೆ. ಎಂದರೆ, ಪಾಕಿಸ್ತಾನಕ್ಕಿಂತ ಒಂದು ಶ್ರೇಯಾಂಕ ಮೇಲಿದ್ದೇವೆ ಅಷ್ಟೆ ಎಂಬುದು ಅತ್ಯಂತ ಆತಂಕದ ಸಂಗತಿ. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು. ‘ಕಾಶ್ಮೀರದಲ್ಲಿ ಪತ್ರಿಕೋದ್ಯಮ ಯತ್ನದ ಮೊದಲ ಸವಾಲು ಬದುಕುಳಿಯುವುದು’ ಎಂದು ತಮ್ಮ ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಹತ್ತನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ಬುಖಾರಿ ಅವರು ಮೂರು ತಿಂಗಳ ಹಿಂದಷ್ಟೇ ಬರೆದುಕೊಂಡಿದ್ದರು. ಈ ಹಿಂದೆಯೂ ನಡೆದ ಹತ್ಯೆ ಯತ್ನಗಳಲ್ಲಿ ಬುಖಾರಿ ಪಾರಾಗಿದ್ದರು ಎಂಬುದನ್ನು ಸ್ಮರಿಸಬೇಕು.

ಎಲ್ಲರನ್ನೂ ಸಂತೋಷಪಡಿಸುವುದು ಪತ್ರಕರ್ತರ ಕೆಲಸವಲ್ಲ. ಸತ್ಯವನ್ನು ಸಮಾಜಕ್ಕೆ ತೆರೆದಿಡುವ ಕೆಲಸ ಅವರದ್ದು ಎಂಬುದು ನಮಗೆ ನೆನಪಿರಬೇಕು. ಯಾವುದೇ ಸಿದ್ಧಾಂತದ ಬಣಗಳಿಗೆ ಸೇರದೆ ವಿಷಯದ ಸಂಕೀರ್ಣತೆಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುವ ಪತ್ರಕರ್ತರು ತೊಂದರೆಗಳಿಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆ. ವಾಗ್ವಾದಗಳಿಗೆ ಅವಕಾಶಗಳೇ ನೀಡದೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಪತ್ರಕರ್ತರನ್ನು ಹೀಗಳೆದು ಮಸಿ ಬಳಿಯುವ ಪ್ರವೃತ್ತಿ ಇಂದಿನ ಧ್ರುವೀಕೃತ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಒಪ್ಪಿತವಾಗದ ವಿಚಾರಧಾರೆ ಇರುವವರನ್ನು ರಾಷ್ಟ್ರವಿರೋಧಿ ಎಂದು ಕರೆದು ದ್ವೇಷಭಾವನೆಗಳನ್ನು ಬಿತ್ತುವ ಪ್ರಯತ್ನಗಳೂ ನಡೆಯುತ್ತಿವೆ. ಚಾರಿತ್ರ್ಯಹರಣ, ಸುಳ್ಳು ಸುದ್ದಿಗಳು, ಜೊತೆಗೆ ಅನೇಕ ಬಗೆಯ ಅಪಪ್ರಚಾರಗಳ ಮೂಲಕವೂ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ರಾಷ್ಟ್ರೀಯವಾದದ ಕಥನಕ್ಕೆ ಹೊಂದದಂತಹ ಸ್ವತಂತ್ರ ಅಭಿಪ್ರಾಯ ಹೊಂದಿರುವುದೇ ಇತ್ತೀಚಿನ ದಿನಗಳಲ್ಲಿ ಅಪರಾಧವಾಗುತ್ತಿದೆ. ಅಂತಹ ಅಭಿಪ್ರಾಯಗಳನ್ನು ತೃಣೀಕರಿಸುವ ಯತ್ನಗಳು ಸಂಘಟಿತ ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ. ಅತ್ಯಾಚಾರ ಬೆದರಿಕೆ ಅಥವಾ ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವ ಮೂಲಕ ಪತ್ರಕರ್ತೆಯರಿಗೆ ತೀವ್ರ ರೀತಿಯ ಕಿರುಕುಳಗಳನ್ನು ನೀಡುವುದಂತೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಅನೇಕ ಪತ್ರಕರ್ತೆಯರು ಈ ಬಗ್ಗೆ ಪೊಲೀಸ್ ದೂರುಗಳನ್ನೂ ನೀಡಿದ್ದಾರೆ. ಇಂತಹದೇ ವಿಷಯುಕ್ತ ಪರಿಸರದಿಂದಾಗಿ ಕಳೆದ ವರ್ಷ ಹತ್ಯೆಗೀಡಾದ ಗೌರಿ ಲಂಕೇಶ್ ಪ್ರಕರಣದಲ್ಲಿ ಈಗ ತನಿಖೆ ಚುರುಕುಗೊಂಡಿದೆ ಎಂಬುದಷ್ಟೇ ಸಮಾಧಾನಕರ. ಹಂತಕರಿಗೆ ಶಿಕ್ಷೆಯಾಗಲೇಬೇಕು. ಏನನ್ನಾದರೂ ಮಾಡಿ ಜಯಿಸಿಕೊಳ್ಳಬಹುದು ಎಂಬ ಭಾವನೆ ನಾಗರಿಕ ಸಮಾಜದಲ್ಲಿ ಬಲಗೊಳ್ಳಬಾರದು. ಇಂತಹ ಅಪರಾಧಗಳಿಗೆ ನಾಗರಿಕ ಸಮಾಜದ ಕಾನೂನಿನಲ್ಲಿ ಶಿಕ್ಷೆ ಇದೆ ಎಂಬುದು ಜನರಿಗೆ ಮನದಟ್ಟಾಗಬೇಕು. ಶಿಕ್ಷಾಭಯ ಮೂಡಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕುತ್ತದೆ. ಸ್ವತಂತ್ರ ಅಭಿಪ್ರಾಯಗಳ ವಾಗ್ವಾದಗಳಿಗೆ ಅವಕಾಶ ಇಲ್ಲದಿದ್ದಲ್ಲಿ ಅದು ಪ್ರಜಾಪ್ರಭುತ್ವ ಆಗುವುದು ಸಾಧ್ಯವಿಲ್ಲ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry