ವರುಣನ ಎಚ್ಚರಿಕೆಯ ಗಂಟೆ

7

ವರುಣನ ಎಚ್ಚರಿಕೆಯ ಗಂಟೆ

Published:
Updated:

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಬೀಡಾದ ಮಲೆನಾಡೇ ಈ ಬಾರಿ ವರುಣನ ರೌದ್ರಾವತಾರಕ್ಕೆ ಬೆಚ್ಚಿಬಿದ್ದಿದೆ. ಗುಡ್ಡಗಳು ಕುಸಿದು ರಸ್ತೆಗಳು ಮುಚ್ಚಿಹೋಗುತ್ತಿವೆ. ತುಂಗಾ, ಭದ್ರಾ,ನೇತ್ರಾವತಿ ನದಿಗಳ ನೀರು ಕೆಂಬಣ್ಣಕ್ಕೆ ತಿರುಗಿದೆ. ನದಿ ತೀರದ ನಗರ, ಪಟ್ಟಣ, ಹಳ್ಳಿಗಳ ತ್ಯಾಜ್ಯ ವಸ್ತುಗಳನ್ನೆಲ್ಲಾ ಹೇರಿಕೊಂಡು ನೀರು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿದೆ.

ಈ ಪರಿಸ್ಥಿತಿಯನ್ನು ಬರಿಯ ನೈಸರ್ಗಿಕ ಪ್ರಕೋಪವೆಂದು ತಳ್ಳಿಹಾಕುವುದು ಮೂರ್ಖತನವಾದೀತು. ಅಭಿವೃದ್ಧಿಯ ಹೆಸರಿನಲ್ಲಿ ಮಲೆನಾಡಿನ ಪರಿಸರದ ಮೇಲೆ ಈಚಿನ ವರ್ಷಗಳಲ್ಲಿ ನಡೆಯುತ್ತಿರುವ ದೌರ್ಜನ್ಯವೇ ಇದಕ್ಕೆ ಪ್ರಮುಖ ಕಾರಣ. ಅವೈಜ್ಞಾನಿಕವಾದ ರಸ್ತೆ ನಿರ್ಮಾಣದಿಂದ ಹುಲ್ಲಿನ ಗುಡ್ಡಗಳು ಮತ್ತು ಮರಗಳು ನಾಶವಾಗಿ ಭೂಕುಸಿತಕ್ಕೆ ಎಡೆಮಾಡಿವೆ. ಅಡ್ಡಾದಿಡ್ಡಿಯಾಗಿ ಪಟ್ಟಣಗಳು ಬೆಳೆದಿದ್ದರಿಂದ ನದಿಪಾತ್ರಗಳು ಬದಲಾಗಿವೆ. ತ್ಯಾಜ್ಯಗಳನ್ನೆಲ್ಲಾ ತಂದು ನದಿತೀರದಲ್ಲೇ ಸುರಿಯಲಾಗುತ್ತಿದೆ. ಮಣ್ಣಿನ ಸವಕಳಿಯನ್ನು ಸಹಜವಾಗಿ ತಡೆಯುವ ಜಾಗಗಳು ಕಣ್ಮರೆಯಾಗುತ್ತಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ಮಲೆನಾಡು, ತನ್ನ ಪರಿಸರಸ್ನೇಹಿ ಜೀವನಶೈಲಿ, ವಿಶಿಷ್ಟ ಚಿಂತನೆ, ಸಂಸ್ಕೃತಿಗಳಿಂದ ಇತರರಿಗೆ ಮಾದರಿಯಾಗಿತ್ತು. ಅಭಿವೃದ್ಧಿ ಹೊಂದಿದ ದೇಶಗಳು ಸುಸ್ಥಿರ ಅಭಿವೃದ್ಧಿಯತ್ತ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ, ಮಲೆನಾಡಿಗರಲ್ಲಿ ಪರಿಸರ ಪ್ರೇಮ ನಶಿಸುತ್ತಿರುವುದು ದುಃಖ ತರುವ ಸಂಗತಿ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಭಾರಿ ಬೆಲೆಯನ್ನೇ ತೆರಬೇಕಾದೀತು.

ಲಕ್ಷ್ಮೀನಾರಾಯಣ ಭಟ್ಟ ಕೆ.ಜಿ., ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry