6

ಶಿಕ್ಷಕರ ಮನಸ್ಥಿತಿ ಬದಲಾಗಬೇಕು

Published:
Updated:

ಸಮಗ್ರ ಶಿಕ್ಷಣ ಅಭಿಯಾನದಡಿ ದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲು ಸರ್ಕಾರ ಮುಂದಾಗಿರುವುದು (ಪ್ರ.ವಾ., ಮೇ 29) ಸ್ವಾಗತಾರ್ಹ ಕ್ರಮ.

ತಂತ್ರಜ್ಞಾನ ಆಧರಿತ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಆಧುನೀಕರಣಗೊಳಿಸುವ ಈ ಪ್ರಯತ್ನ ಒಂದು ಮಹತ್ವದ ಹೆಜ್ಜೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳೂ ‘ಸ್ಮಾರ್ಟ್’ ಆಗುವುದು ಖುಷಿಯ ಸಂಗತಿ. ಇಂಗ್ಲಿಷ್‌ ಭಾಷೆ ಕಲಿಸುವ ಮತ್ತು ಕಂಪ್ಯೂಟರ್ ಶಿಕ್ಷಣ ಕೊಡಿಸುವ ಉದ್ದೇಶದಿಂದ ಬಹುಪಾಲು ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಹಣ ತೆತ್ತು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಡಿಜಿಟಲ್ ಬೋರ್ಡ್ ಅಳವಡಿಕೆಯು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಬಹುದು. ಇಂಥ ಬೋರ್ಡ್ ಬಳಕೆಯಿಂದ ಸೌರವ್ಯೂಹ, ನರಮಂಡಲ ವ್ಯವಸ್ಥೆಗಳಂಥ ಅಮೂರ್ತ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಕಲಿಸಬಹುದು. ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಡಿಜಿಟಲ್ ಬೋರ್ಡ್ ಮೂಲಕ ವಿಡಿಯೊ, ಭಾವಚಿತ್ರ, ಭೂಪಟ ಇತ್ಯಾದಿಗಳನ್ನು ಮಕ್ಕಳಿಗೆ ತರಗತಿಯಲ್ಲಿಯೇ ತೋರಿಸಲು ಸಾಧ್ಯವಿದೆ. ದೂರದ ಊರಿನಲ್ಲಿರುವ ತಜ್ಞ, ಅನುಭವಿ ಶಿಕ್ಷಕರ ಪಾಠ ಬೋಧನೆಯನ್ನು ಕುಗ್ರಾಮದಲ್ಲಿರುವ ಶಾಲೆಯ ಮಕ್ಕಳೂ ಕೇಳುವ, ಅವರೊಂದಿಗೆ ಸಂವಾದ ನಡೆಸುವ ಸಾಧ್ಯತೆಯನ್ನು ಡಿಜಿಟಲ್ ಬೋರ್ಡ್ ಒದಗಿಸುತ್ತದೆ. ಕರಿಹಲಗೆಯ ಮೇಲೆ ಚಾಕ್‍ಪೀಸ್‍ನ ಬಳಕೆಯಿಂದಾಗುವ ದೂಳನ್ನು ತಪ್ಪಿಸಿ, ಸ್ಪರ್ಶದ ಮೂಲಕವೇ ಜಾದುವಿನಂತೆ ಬೋಧನೆ
ಯನ್ನು ಆಕರ್ಷಣೀಯಗೊಳಿಸಲು ಅವಕಾಶವಿದೆ.

ತಂತ್ರಜ್ಞಾನ ಆಧರಿತ ಶಿಕ್ಷಣ ಅಳವಡಿಕೆಯ ಈ ಹಿಂದಿನ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ಸಿಹಿಯನ್ನು ನೀಡಿಲ್ಲವೆಂದೇ ಹೇಳಬಹುದು. ಮಾಹಿತಿ
ಸಿಂಧು ಯೋಜನೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕಾರ್ಯಕ್ರಮ ಹಾಗೂ ಸರ್ವ ಶಿಕ್ಷಣ ಅಭಿಯಾನದಡಿ ಕಂಪ್ಯೂಟರ್ ಸಹಾಯದ ಕಲಿಕಾ ಕಾರ್ಯಕ್ರಮಗಳ ಮೂಲಕ ತಂತ್ರಜ್ಞಾನ ಆಧರಿತ ಶಿಕ್ಷಣ ಅನುಷ್ಠಾನದ ಪ್ರಯತ್ನಗಳು ನಡೆದಿವೆ. ಆಸಕ್ತಿ, ಇಚ್ಛಾಶಕ್ತಿಯುಳ್ಳ ಶಿಕ್ಷಕರಿರುವ ಶಾಲೆಗಳಲ್ಲಿ ಈ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಅಂಥಕಡೆಗಳಲ್ಲಿ ಈ ಯೋಜನೆಗಳು ಬಹಳಷ್ಟು ಯಶಸ್ವಿಯಾಗಿವೆ. ಆದರೆ ತಂತ್ರಜ್ಞಾನದ ಕುರಿತ ಭಯ (ಟೆಕ್ನೊ ಫೋಬಿಯ), ತಂತ್ರಜ್ಞಾನ ಬಳಕೆಯಲ್ಲಿ ಆಸಕ್ತಿ ಇಲ್ಲದ ಶಿಕ್ಷಕರಿರುವ ಕಡೆ ಕಂಪ್ಯೂಟರ್‌ಗಳ ನಿರ್ವಹಣೆಯ ತೊಡಕು ಎದುರಾಗಿ ಯೋಜನೆಗಳು ವಿಫಲಗೊಂಡಿವೆ. ಚಿಕ್ಕಪುಟ್ಟ ದುರಸ್ತಿಗಳಿಗಾಗಿಯೂ ಸರ್ಕಾರದ ಕಡೆ ನೋಡುವ ಶಿಕ್ಷಕ ವರ್ಗ ಒಂದೆಡೆ ಇದ್ದರೆ, ಕೆಲವೆಡೆ ಉತ್ಸಾಹಿ ಶಿಕ್ಷಕರು ಸಮುದಾಯದಿಂದ ಸಂಪನ್ಮೂಲ ಕ್ರೋಡೀಕರಿಸಿ, ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತಿಸಿದ ಉದಾಹರಣೆಗಳೂ ಕಾಣಸಿಗುತ್ತವೆ.

ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಶಿಕ್ಷಕರ ಸಕಾರಾತ್ಮಕ ಧೋರಣೆ, ಮಾನಸಿಕ ಸಿದ್ಧತೆಗಳು ಬಹುದೊಡ್ಡ ಪಾತ್ರ ವಹಿಸುತ್ತವೆ. ಆದ್ದರಿಂದ ಡಿಜಿಟಲ್ ಬೋರ್ಡ್ ಅಳವಡಿಕೆಯಂತಹ ಬೃಹತ್ ಯೋಜನೆಯ ಅನುಷ್ಠಾನಕ್ಕೂ ಮುನ್ನ ಶಿಕ್ಷಕರು ಹಾಗೂ ಸ್ಥಳೀಯ ಸಮುದಾಯ ಮಾನಸಿಕವಾಗಿ ಸಿದ್ಧವಾಗಿದೆಯೇ, ಅವರ ಮನೋಧೋರಣೆಗಳು ಬದಲಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅಗತ್ಯ. ‘ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದ ಅಗತ್ಯ ನಮ್ಮ ಶಾಲೆಗೆ ಇದೆ’ ಎಂದು ಭಾವಿಸುವ ಮತ್ತು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಇಚ್ಛಿಸುವ ಶಾಲೆಗಳಿಗೆ ಮೊದಲ ಹಂತದಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ನೀಡುವುದು ಸೂಕ್ತವೆನಿಸಬಹುದು. ಅಗತ್ಯ ಮತ್ತು ಬೇಡಿಕೆಯ ಆಧಾರದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದರೆ ಯೋಜನೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು.

ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದ ಉದ್ದೇಶ ಹಾಗೂ ವ್ಯಾಪ್ತಿಯನ್ನು ಸ್ಪಷ್ಟವಾಗಿ ಗುರುತಿಸಿ ಮುನ್ನಡೆಯುವುದು ಅಗತ್ಯ. ತಂತ್ರಜ್ಞಾನದ ಸಹಾಯದಿಂದ ಬೋಧನೆಯನ್ನು ಪರಿಣಾಮಕಾರಿಯಾಗಿಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುವುದು ಮುಖ್ಯ ಉದ್ದೇಶವಾಗಬೇಕು. ಕಂಪ್ಯೂಟರ್, ಪ್ರೊಜೆಕ್ಟರ್, ಸ್ಮಾರ್ಟ್ ಬೋರ್ಡ್‌ನಂತಹ ಸಾಧನಗಳನ್ನು ಶಿಕ್ಷಕರೇ ಪರಿಣಾಮಕಾರಿಯಾಗಿ ಬಳಸುವಂತೆ ಅವರಿಗೆ ತರಬೇತಿ ನೀಡಬೇಕು. ಇದರ ಜೊತೆ ಚಿಕ್ಕಪುಟ್ಟ ದುರಸ್ತಿ ಹಾಗೂ ನಿರ್ವಹಣೆಗಳನ್ನು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯೇ ಮಾಡಿಕೊಳ್ಳುವಂತಾಗಬೇಕು. ‘ತಂತ್ರಜ್ಞಾನದ ಬಳಕೆಗೆ ಕಂಪ್ಯೂಟರ್ ಆಪರೇಟರ್‌ಗಳೇ ಬೇಕು’ ಎಂಬ ಮನೋಭಾವ ದೂರವಾಗಬೇಕು. ಶಿಕ್ಷಕರೇ ತಂತ್ರಜ್ಞಾನದ ರೂವಾರಿಗಳಾದಲ್ಲಿ ಮಾತ್ರ ಡಿಜಿಟಲ್ ಬೋರ್ಡ್ ಕಾರ್ಯಕ್ರಮ ಯಶ ಸಾಧಿಸಬಲ್ಲದು. ದುಬಾರಿ ಸಾಫ್ಟ್‌ವೇರ್‌ಗಳ ಬದಲು ಉಚಿತ ಹಾಗೂ ಮುಕ್ತವಾಗಿ ದೊರೆಯುವ ಓಪನ್ ಸೋರ್ಸ್ ಸಾಫ್ಟ್‌ವೇರ್‌ಗಳನ್ನು ಬಳಸಬೇಕು.

2015- 16ನೇ ಸಾಲಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 1 ರಿಂದ 12ನೇ ತರಗತಿಯವರೆಗಿನ ಒಟ್ಟು 15.22 ಲಕ್ಷ ಶಾಲೆಗಳಿದ್ದು, ಅವುಗಳಲ್ಲಿ 12.89 ಲಕ್ಷ ಶಾಲೆಗಳು (ಶೇ 85) ಗ್ರಾಮಾಂತರ ಪ್ರದೇಶಗಳಲ್ಲಿವೆ. ಒಟ್ಟು 26.05 ಕೋಟಿ ಮಕ್ಕಳು ಇವುಗಳಲ್ಲಿ ಕಲಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳು 8.24 ಲಕ್ಷದಷ್ಟು (ಶೇ 54) ಇದ್ದು, ಅವುಗಳಲ್ಲಿ 11.42 ಕೋಟಿ (ಶೇ 44) ಮಕ್ಕಳು ಕಲಿಯುತ್ತಾರೆ. ಒಟ್ಟು ಶಾಲೆಗಳ ಪೈಕಿ ಶೇ 63 ರಷ್ಟು ಶಾಲೆಗಳಲ್ಲಿ ವಿದ್ಯುತ್‌ ವ್ಯವಸ್ಥೆ ಇದೆ. ಶೇ 27 ರಷ್ಟು ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್ ಸೌಲಭ್ಯ ಇದೆ. ವಿದ್ಯುತ್‌ ವ್ಯವಸ್ಥೆಯೇ ಇಲ್ಲದ ಶಾಲೆಗಳು ಇನ್ನೂ ಇರುವಾಗ, ಡಿಜಿಟಲ್ ಬೋರ್ಡ್‌ ಅಳವಡಿಕೆಯ ಗುರಿ ಸಾಧಿಸುವುದು ಕಷ್ಟವೇ!

ಬೋಧನೆಯಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ನಿಜ. ಹೀಗಿದ್ದರೂ ಡಿಜಿಟಲ್ ಬೋರ್ಡ್‌ಗಳು ಶಿಕ್ಷಣದ ಗುಣಮಟ್ಟ ವೃದ್ಧಿಯಲ್ಲಿ ದೊಡ್ಡ ಚಮತ್ಕಾರವನ್ನು ಮಾಡಲಾರವು. ಈ ಹಿನ್ನೆಲೆಯಲ್ಲಿ ಬೋಧನೆ, ಕಲಿಕಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬೆಂಬಲಿತ ಕಾರ್ಯಕ್ರಮ ವಹಿಸಬೇಕಾದ ಪಾತ್ರ, ಅದರ ಇತಿಮಿತಿಗಳನ್ನು ಸ್ಪಷ್ಟವಾಗಿ ತಿಳಿದು ಮುಂದುವರೆಯುವುದು ಅಗತ್ಯ. ಯಾವ ತಂತ್ರಜ್ಞಾನವೂ ಶಿಕ್ಷಕರಿಗೆ ಪರ್ಯಾಯವಾಗಲಾರದು. ಶಿಕ್ಷಕರು ಡಿಜಿಟಲ್ ಬೋರ್ಡ್‌ಗಳನ್ನು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಾಧನವನ್ನಾಗಿ ಪರಿಗಣಿಸಿ, ಸಮರ್ಪಕವಾಗಿ ಬಳಸಿಕೊಂಡರೆ ಯೋಜನೆ ಯಶಸ್ವಿಯಾಗಬಲ್ಲದು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry