7
ಇಲಾಖೆಯಿಂದಲೇ ಪ್ರಕ್ರಿಯೆಗೆ ಚಾಲನೆ: ಸಚಿವ ಎಸ್‌. ಆರ್‌. ಶ್ರೀನಿವಾಸ್‌ ಹೇಳಿಕೆ

ಸಣ್ಣ ಕೈಗಾರಿಕೆಗೆ ಭೂಸ್ವಾಧೀನ ಭರವಸೆ

Published:
Updated:

ಬೆಂಗಳೂರು: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸಣ್ಣ ಕೈಗಾರಿಕೆಗಳಿಗೆ ಭೂ ಸ್ವಾಧೀನ ಸಮರ್ಪಕವಾಗಿ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇಲಾಖೆಯಿಂದಲೇ ಭೂಸ್ವಾಧೀನ ನಡೆಸಲು ಚಿಂತನೆ ನಡೆಸಲಾಗಿದೆ’ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೈಗಾರಿಕೆಗಳಿಗೆ ಭೂಸ್ವಾಧೀನದ ವೇಳೆ ಶೇ 20ರಷ್ಟು ಜಾಗವನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲಿಡಬೇಕು. ಆದರೆ, ಅನೇಕ ಕಡೆಗಳಲ್ಲಿ ಈ ರೀತಿ ಭೂಮಿ ಮೀಸಲಿಟ್ಟಿಲ್ಲ. ಇದರಲ್ಲಿ ಇಲಾಖೆಯ ವೈಫಲ್ಯವೂ ಇದೆ’ ಎಂದರು.

‘ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗುತ್ತದೆ ಎಂದು ಈ ಸಲದ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಒತ್ತಡ ಹೇರುತ್ತೇನೆ’ ಎಂದರು.

‘ಐದಾರು ವರ್ಷಗಳಿಂದ ಸಣ್ಣ ಕೈಗಾರಿಕಾ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಅನೇಕ ಕೈಗಾರಿಕೆಗಳು ರೋಗಗ್ರಸ್ತವಾಗಿವೆ. ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದಾಗುತ್ತಿಲ್ಲ. ಬೇಡಿಕೆ ಸಮೀಕ್ಷೆ ನಡೆಸಿ ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸಲು ಯೋಜಿಸಲಾಗಿದೆ’ ಎಂದರು.

ಕೈಗಾರಿಕಾ ಎಸ್ಟೇಟ್‌: ‘ವಸಂತ ನರಸಾ‍ಪುರದಲ್ಲಿ ಕೈಗಾರಿಕಾ ಎಸ್ಟೇಟ್‌ ನಿರ್ಮಾಣಕ್ಕೆ 13,700 ಎಕರೆ ಭೂಸ್ವಾಧೀನ ಮಾಡಲಾಗಿದೆ. ಇಲ್ಲಿ ಸಣ್ಣ ಕೈಗಾರಿಕೆಗಳಿಗೆ 2,780 ಎಕರೆ ಮೀಸಲಿಡಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆಯದ ಕಾರಣ ಏಳು ಹಂತಗಳ ಪೈಕಿ ನಾಲ್ಕು ಹಂತಗಳಷ್ಟೇ ಪೂರ್ಣಗೊಂಡಿವೆ’ ಎಂದರು.

ಶಿರಾದಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ 13 ವರ್ಷಗಳ ಹಿಂದೆ ಬಾಂಬೆ ಕೈಗಾರಿಕೆಗೆ 30 ಎಕರೆ ಮಂಜೂರು ಮಾಡಲಾಗಿತ್ತು. ಇಲ್ಲಿ ಅಷ್ಟು ಜಾಗ ಮಂಜೂರು ಮಾಡಲು ಅವಕಾಶ ಇಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ವಸಂತ ನರಸಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫುಡ್‌ ಪಾರ್ಕ್‌ಗೆ ಚಾಲನೆ ನೀಡಿದ್ದರು. ಪಾರ್ಕ್ ನಿರ್ಮಾಣ ಆಗಿಲ್ಲ. ಇಲ್ಲಿ ಎಕರೆಗೆ ₹40 ಲಕ್ಷ ಬೆಲೆ ಇದೆ. ಆದರೆ, ಈ ಜಾಗವನ್ನು ಗುಜರಾತ್‌ನ ಉದ್ಯಮಿಯೊಬ್ಬರು ₹ 2–3 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ದಂಧೆಯಾಗಿದೆ’ ಎಂದು ಕಿಡಿಕಾರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry