ಅಧಿಸೂಚನೆ ರದ್ದು ಕೋರಿ ಪಿಐಎಲ್‌

7

ಅಧಿಸೂಚನೆ ರದ್ದು ಕೋರಿ ಪಿಐಎಲ್‌

Published:
Updated:
ಅಧಿಸೂಚನೆ ರದ್ದು ಕೋರಿ ಪಿಐಎಲ್‌

ಬೆಂಗಳೂರು: 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಿವಾಸಿಗಳು ನಾಯಿ ಸಾಕಲು ಪರವಾನಗಿ ಹೊಂದಿರಬೇಕು' ಎಂಬ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಸದಾನಂದನಗರದ ಶಿಕ್ಷಕಿ ಇಂದಿರಾ ಗೋಪಾಲಕೃಷ್ಣ ಸಲ್ಲಿಸಿರುವ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ವಿಚಾರಣೆ ವೇಳೆ ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು, ‘ಯಾವ ಕಾನೂನಿನ ಅಡಿಯಲ್ಲಿ ನಿಮ್ಮ ಹಕ್ಕು ಉಲ್ಲಂಘನೆ ಆಗುತ್ತಿದೆ ಎಂಬುದನ್ನು ಕೋರ್ಟ್‌ಗೆ ಮನದಟ್ಟು ಮಾಡಿಕೊಡಿ’ ಎಂದು ಕೇಳಿತು.

ಅಂತೆಯೇ ಬಿಬಿಎಂಪಿ ಪರ ವಕೀಲರಿಗೂ, ‘ಈ ಕುರಿತಂತೆ ಅಧ್ಯಯನ ಮಾಡಿ, ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡು ಬನ್ನಿ’ ಎಂದೂ ಸೂಚಿಸಿತು.

ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳು:

* ಅಪಾರ್ಟ್‌ಮೆಂಟ್, ಫ್ಲ್ಯಾಟ್ ನಿವಾಸಿಗಳು ಒಂದಕ್ಕಿಂತ ಹೆಚ್ಚು ನಾಯಿ ಸಾಕುವಂತಿಲ್ಲ.

* ಸ್ವತಂತ್ರ (ಇಂಡಿಪೆಂಡೆಂಟ್) ಮನೆಯುಳ್ಳವರು ಮೂರು ನಾಯಿ ಸಾಕಲು ನೂತನ ಕಾಯ್ದೆಯಲ್ಲಿ ಅವಕಾಶ ಇದೆ.

* ಶುಲ್ಕ ಪಾವತಿಸಿ ಪ್ರತಿ ವರ್ಷ ಪರವಾನಗಿ ನವೀಕರಿಸಿಕೊಳ್ಳಬೇಕು.

* ಸಾಕು ನಾಯಿಗೆ ಪರವಾನಗಿ ನೀಡುವಾಗ ಬಿಬಿಎಂಪಿ ಪಶು ವೈದ್ಯ ವಿಭಾಗದ ವೈದ್ಯರು ನಾಯಿಯನ್ನು ಪರೀಕ್ಷೆಗೆ ಒಳಪಡಿಸುವ ಹಕ್ಕು ಹೊಂದಿರುತ್ತಾರೆ.

* ಸಾಕು ನಾಯಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮಾಲೀಕರ ಕರ್ತವ್ಯ.

* ನಾಯಿಗಳು ಸಾರ್ವಜನಿಕ ಸ್ಥಳದಲ್ಲಿ ಮಲ ವಿಸರ್ಜನೆ ಮಾಡದಂತೆ ನಿಗಾವಹಿಸುವ ಜವಾಬ್ದಾರಿಯನ್ನು ಅದರ ಮಾಲೀಕರು ಹೊಂದಿರುತ್ತಾರೆ.

ದಯಾಮರಣ ನೀಡುವ ಅಧಿಕಾರವಿದೆ:

* ಸಾರ್ವಜನಿಕ ಸ್ಥಳಗಳಾದ ಪಾರ್ಕ್, ಬಸ್, ರೈಲ್ವೆ ಹಾಗೂ ವಿಮಾನ ನಿಲ್ದಾಣ, ಕಾರು ಪಾರ್ಕಿಂಗ್‌ ಜಾಗ, ಸಾರ್ವಜನಿಕ ರಸ್ತೆ, ದೇವಸ್ಥಾನ, ಮಾರುಕಟ್ಟೆ, ಕಸಾಯಿಖಾನೆ, ಹೋಟೆಲ್, ಸಿನಿಮಾ ಮಂದಿರ, ಮದ್ಯದ ಅಂಗಡಿ, ಮದುವೆ ಮಂಟಪ, ಕಾರ್ಖಾನೆಗಳು, ಕೈಗಾರಿಕಾ ಪ್ರದೇಶಗಳ ಆವರಣದಲ್ಲಿ ಸಾಕು ನಾಯಿಗಳು ಓಡಾಡಿಕೊಂಡಿದ್ದರೆ ಅವುಗಳನ್ನು ಬಿಬಿಎಂಪಿಯ ನಿಯೋಜಿತ ಸಿಬ್ಬಂದಿ ಬಂಧಿಸಿ ತೆಗೆದುಕೊಂಡು ಹೋಗಬಹುದು.

* ಕಿವಿಗೆ ಮುದ್ರೆ ಇಲ್ಲದ ನಾಯಿ, ಲೈಸನ್ಸ್ ಪಡೆಯದಿರುವ ನಾಯಿಗಳಾದರೆ 72 ಗಂಟೆ ಒಳಗೆ ಮಾಲೀಕರು ಶುಲ್ಕ ಪಾವತಿಸಿ ಬಿಡಿಸಿಕೊಂಡು ಹೋಗಬೇಕಾಗುತ್ತದೆ.

* ಆ ನಂತರವೂ ಮಾಲೀಕರು ನಾಯಿಯನ್ನು ಬಿಡಿಸಿಕೊಂಡು ಹೋಗದೇ ಇದ್ದಲ್ಲಿ ಅಂತಹ ನಾಯಿಗಳನ್ನು ಹರಾಜು ಹಾಕಲಾಗುತ್ತದೆ. ಇಲ್ಲವೆ ಶೆಲ್ಟರ್ ಹೋಂನಲ್ಲಿ ಇರಿಸಲಾಗುತ್ತದೆ.

* ಸಾಕು ನಾಯಿಗಳಿಗೆ ರೇಬೀಸ್ ಇರುವುದು ದೃಢಪಟ್ಟಲ್ಲಿ ಅದಕ್ಕೆ ದಯಾಮರಣ ನೀಡುವ ಅಧಿಕಾರ ಬಿಬಿಎಂಪಿಗಿದೆ.

* ಸಾಕು ನಾಯಿಗೆ ಸಂಬಂಧಿಸಿದ ಕಾಯ್ದೆ ಉಲ್ಲಂಘಿಸಿದಲ್ಲಿ ದಂಡ ವಿಧಿಸುವ ಅಧಿಕಾರವೂ ಬಿಬಿಎಂಪಿಗೆ ಇದೆ.

ಅರ್ಜಿದಾರ ಆಕ್ಷೇಪಣೆ ಏನು?

ಕರ್ನಾಟಕ ಪೌರಾಡಳಿತ ಕಾಯ್ದೆ- 1976ರ ಕಲಂ 423ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಅಧಿಸೂಚನೆ ಕಾನೂನು ಬಾಹಿರವಾಗಿದೆ. ಇದನ್ನು ಪೂರ್ವ ವಿವೇಚನೆ ಇಲ್ಲದೆ ಜಾರಿಗೊಳಿಸಲಾಗಿದೆ. ಇದನ್ನು ಜಾರಿಗೊಳಿಸುವ ಮುನ್ನ ಈ ಕುರಿತಂತೆ ವೃತ್ತಪತ್ರಿಕೆಗಳಲ್ಲಿ ಪ್ರಕಟಣೆ ನೀಡಿಲ್ಲ.

ಸಾಕು ಮತ್ತು ಬೀದಿ ನಾಯಿಗಳಿಗೆ ರಕ್ಷಣೆ ನೀಡುವವರಿಗೆ ಇರುವ ಮಾರ್ಗದರ್ಶಿ ಸೂತ್ರಗಳನ್ನೂ ಪರಿಗಣಿಸಿಲ್ಲ. ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960ರ ಕಲಂ 3ರ ಉಲ್ಲಂಘನೆ ಆಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry