ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಭೆಗಳು ಹಳ್ಳಿಗಳ ಅಭಿವೃದ್ಧಿಗೆ ಉತ್ತಮ ವೇದಿಕೆ: ಶಾಸಕ ನಿಸರ್ಗ

ನಲ್ಲೂರು ಗ್ರಾಮ ಪಂಚಾಯಿತಿ ವತಿಯಿಂದ ಸಭೆ
Last Updated 9 ಅಕ್ಟೋಬರ್ 2018, 13:50 IST
ಅಕ್ಷರ ಗಾತ್ರ

ವಿಜಯಪುರ: ಗ್ರಾಮ ಸಭೆಗಳು, ಹಳ್ಳಿಗಳ ಅಭಿವೃದ್ಧಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತಹ ಉತ್ತಮವಾದ ವೇದಿಕೆಗಳಾಗಿದ್ದು, ಇವುಗಳಲ್ಲಿ ಭಾಗವಹಿಸುವ ಮೂಲಕ ಜನರು ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ವತಿಯಿಂದ ಎಸ್.ಎಫ್.ಸಿ.ಎಸ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2017–18 ನೇ ಸಾಲಿನ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಳ್ಳಿಗಳ ಅಭಿವೃದ್ಧಿಯಿಂದ ಅಧಿಕಾರವನ್ನು ಗ್ರಾಮ ಪಂಚಾಯಿಗಳಿಗೆ ಕೊಟ್ಟು ಗ್ರಾಮಸಭೆಗಳ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವುದು ಹಾಗೂ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಲ್ಲೆ ನಡೆಯುತ್ತಿದೆ. ಜನರು ಇಂತಹ ಗ್ರಾಮಸಭೆಗಳಲ್ಲಿ ಹೆಚ್ಚು ಭಾಗವಹಿಸಿ ವಿಚಾರ ತಿಳಿದುಕೊಳ್ಳಬೇಕು ಎಂದರು.

ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಅಧಿಕಾರಿಗಳು ಜನರಿಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಜನರು ಉದ್ಯೋಗ ಕಾರ್ಡ್ ಮಾಡಿಸಿಕೊಂಡು ದನದ ಕೊಟ್ಟಿಗೆ ನಿರ್ಮಾಣ, ಜಮೀನುಗಳಲ್ಲಿ ಬದುಗಳ ನಿರ್ಮಾಣ, ಇಂಗು ಗುಂಡಿ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಲು ಅವಕಾಶವಿದೆ ಎಂದರು.

ಸಭೆಗಳಿಗೆ ಜನರು ಬರುವುದರಿಂದ ಪಂಚಾಯಿತಿಗಳಿಗೆ ಎಷ್ಟು ಅನುದಾನ ಬರುತ್ತದೆ. ಜನರಿಗೆ ಇದರಿಂದ ಏನೇನು ಪ್ರಯೋಜನಗಳಿವೆ ಎನ್ನುವ ಕುರಿತು ತಿಳಿದುಕೊಳ್ಳಬಹುದು. ಜತೆಗೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅನುದಾನಗಳಲ್ಲಿ ಏನೇನು ಅಭಿವೃದ್ಧಿ ಕೆಲಸಗಳಾಗಿವೆ ಎನ್ನುವುದನ್ನೂ ತಿಳಿದುಕೊಳ್ಳಬಹುದಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ಉಪಾಧ್ಯಕ್ಷೆ ನಂದಿನಿ ವೆಂಕಟೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಮ್ಮ, ಉಪಾಧ್ಯಕ್ಷ ನವೀನ್, ಸದಸ್ಯರಾದ ಶ್ರೀನಿವಾಸ್, ಅಶ್ವಥಮ್ಮ, ಮಹಾದೇವಿ, ವೀರಭದ್ರಪ್ಪ, ಸೋಮಶೇಖರ್, ಮಹಾಲಕ್ಷ್ಮೀ, ಲಲಿತೇಶ್, ಗಂಗರೆಡ್ಡಿ, ಅನಿತಾ ನರಸಿಂಹಮೂರ್ತಿ, ಮಂಜುಳಾ, ಮಮತಾ, ಆಂಜಿನಮ್ಮ, ಭಾಗ್ಯಮ್ಮ, ಆಂಜಿನಪ್ಪ, ಶ್ರೀನಿವಾಸಮೂರ್ತಿ, ಶ್ರೀರಾಮಣ್ಣ, ಜೊನ್ನಹಳ್ಳಿ ಮುನಿರಾಜು, ಜಯರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT