ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಶಾಶ್ವತ ನೀರಾವರಿ ಯೋಜನೆ ಇಲ್ಲದೆ ಸಂಕಷ್ಟ

ರೈತರಿಗೆ ತಾತ್ಕಾಲಿಕ ಪರಿಹಾರವಾದ ಕೃಷಿ ಹೊಂಡಗಳು
Last Updated 9 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ದೇವನಹಳ್ಳಿ: ಹಿಂಗಾರು ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೃಷಿ ಹೊಂಡಗಳು ತುಂಬಿದ್ದು, ರೈತರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.

ರಾಜ್ಯ ಸರ್ಕಾರ 2014ರಲ್ಲಿ ಜಾರಿಗೆ ತಂದ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಆರಂಭದಲ್ಲಿ ರೈತರು ಮುಂದಾಗಿರಲಿಲ್ಲ. ಸರ್ಕಾರ ಕೃಷಿ ಹೊಂಡ ನಿರ್ಮಾಣಕ್ಕೆ ರೈತರ ಮನವೊಲಿಸಿ ಹೆಚ್ಚು ಒತ್ತು ನೀಡುವಂತೆ ತಾಲ್ಲೂಕು ಕೃಷಿ ಇಲಾಖೆಗೆ ಸೂಚಿಸಿತ್ತು. ಸರ್ಕಾರ ಅಗತ್ಯ ಪ್ರೋತ್ಸಾಹ ಅನುದಾನ ನೀಡಿದ ಪರಿಣಾಮ ಕಳೆದ ನಾಲ್ಕು ವರ್ಷಗಳಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 1,345, ಜಿಲ್ಲೆಯಲ್ಲಿ 4,615 ಕೃಷಿಹೊಂಡ ನಿರ್ಮಾಣವಾಗಿದೆ ಎಂಬುದು ಕೃಷಿ ಇಲಾಖೆ ಮಾಹಿತಿ.

12ಮೀ. ಉದ್ದ, 12 ಮೀ. ಅಗಲ ಮತ್ತು 3ಮೀ, ಆಳದ ಕೃಷಿ ಹೊಂಡ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವೈಯಕ್ತಿಕ ಕಾಮಗಾರಿಯಲ್ಲಿ 365 ಮಾನವ ದಿನ ಬಳಕೆ ಮಾಡಿದರೆ ₹1.41 ಲಕ್ಷ ರೈತ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. 9ಮೀ. ಉದ್ದ, 9ಮೀ. ಅಗಲ, 3ಮೀ. ಆಳದ ಕೃಷಿ ಹೊಂಡಕ್ಕೆ 222 ಮಾನವ ದಿನಗಳು, ₹66.85 ಸಾವಿರ ಅನುದಾನ, 7ಮೀ.ಉದ್ದ, 7ಮೀ ಅಗಲ, 3ಮೀ ಆಳಕ್ಕೆ 157 ಮಾನವ ದಿನಗಳು ₹ 49,700 ನಿಗದಿ ಮಾಡಲಾಗಿದೆ ಎಂಬುದು ಇಲಾಖೆ ನೀಡಿರುವ ಮಾಹಿತಿ.

ಕೊಳವೆ ಬಾವಿಯಿಂದ ಪೈಪ್ ಮೂಲಕ ಕೃಷಿ ಹೊಂಡದಲ್ಲಿ ನೀರು ಶೇಖರಣೆ ಮಾಡಿ ಅಗತ್ಯಕ್ಕೆ ತಕ್ಕಂತೆ ಡೀಸೆಲ್ ಪಂಪ್‌ನಿಂದ ಹನಿ ನೀರಾವರಿ ಮೂಲಕ ಬಳಕೆ ಮಾಡಿಕೊಳ್ಳವುದು, ಮಳೆ ನೀರು ಕೃಷಿ ಹೊಂಡಗಳಲ್ಲಿ ತುಂಬಿಸಿಕೊಂಡು ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳವುದು ಕೃಷಿ ಹೊಂಡದ ಮತ್ತೊಂದು ಮುಖ್ಯ ಉದ್ದೇಶ. ಕೃಷಿ ಹೊಂಡ ನಿರ್ಮಾಣದ ನಂತರ ಪಾಲಿಥಿನ್ ಹೊದಿಕೆ ಮಾಡುವುದರಿಂದ ಒಂದೆರಡು ಹನಿ ನೀರು ಹಿಂಗುವುದಿಲ್ಲ. ಜಿಲ್ಲೆಯಲ್ಲಿ 2492 ರೈತರು ಡೀಸೆಲ್ ಪಂಪ್ ಸೆಟ್, 154 ತುಂತರು ನೀರಾವರಿ, 452 ಹನಿ ನೀರಾವರಿ, 102 ನೆರಳು ಪರದೆ ಘಟಕವನ್ನು ಬಳಕೆ ಮಾಡಿ ತೋಟಗಾರಿಕಾ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ರೈತರು ರಾಗಿ ಬೆಳೆಗೂ ತುಂತುರು ನೀರಾವರಿ ಮೂಲಕ ಬಳಕೆ ಮಾಡುತ್ತಿದ್ದಾರೆ. ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಬಯಲು ಸೀಮೆ ಪ್ರದೇಶ ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷ ಪೂರ್ಣ ಪ್ರಮಾಣದಲ್ಲಿ ರಾಗಿ ಬೆಳೆ ಕೈಗೆಟುಕದಿದ್ದರೂ ಶೇ80 ರಷ್ಟು ಬೆಳೆ ರೈತರ ಕೈ ಸೇರಿತ್ತು. ಪ್ರಸ್ತುತ ಅಂತಹ ವಾತಾವರಣವಿಲ್ಲ. ಅಂತರ್ಜಲ ಕುಸಿತ, ವಾಡಿಕೆ ಮಳೆ ಬಾರದಿರುವುದು, ಶಾಶ್ವತ ನೀರಾವರಿ ಯೋಜನೆಗಳಲ್ಲಿದಿರುವುದರಿಂದ ರೈತರಿಗೆ ನಿರಂತರ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ ರೈತ ವಿ.ನಾರಾಯಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT