ನಿವೇಶನ ಮಾರಾಟ ಅಕ್ರಮ: ನೌಕರರ ಎತ್ತಂಗಡಿ

7
ಬಿಡಿಎ ಆಯುಕ್ತರಿಂದ ದ್ವೇಷದ ಕ್ರಮ: ಆರೋಪ

ನಿವೇಶನ ಮಾರಾಟ ಅಕ್ರಮ: ನೌಕರರ ಎತ್ತಂಗಡಿ

Published:
Updated:
ನಿವೇಶನ ಮಾರಾಟ ಅಕ್ರಮ: ನೌಕರರ ಎತ್ತಂಗಡಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನ ನೋಂದಣಿ ಅಕ್ರಮದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅನುಮಾನದಲ್ಲಿ ನಾಲ್ವರು ನೌಕರರನ್ನು ಎತ್ತಂಗಡಿ ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ‘ಬಿನ್ನಿಪೇಟೆ ನಿವಾಸಿಗಳ ಸೇವಾಸಂಘ’ಕ್ಕೆ 2 ಎಕರೆ 22 ಗುಂಟೆ ಜಮೀನು ಹಾಗೂ 117 ನಿವೇಶನಗಳನ್ನು ಪ್ರಾಧಿಕಾರವು ನೋಂದಣಿ ಮಾಡಿಕೊಟ್ಟಿತ್ತು.

ನೋಂದಣಿಯಲ್ಲಿ ಅಕ್ರಮ ನಡೆದಿದೆ ಎಂದು ಬಿಡಿಎ ನಿವೃತ್ತ ನೌಕರರು ದೂರು ನೀಡಿದ ಬಳಿಕ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಬಿಡಿಎ ಆಯುಕ್ತರು ಪ್ರಾಧಿಕಾರದ ಉಪನೋಂದಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಜೂನ್‌ 6ರಂದು ವರದಿ ಪ್ರಕಟವಾಗಿತ್ತು. ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದರು.

ಸಾಮಾನ್ಯವಾಗಿ ಪ್ರಾಧಿಕಾರದ ಉಪ ಕಾರ್ಯದರ್ಶಿ–1 ಅವರು ಜಮೀನು ಹಾಗೂ ನಿವೇಶನದ ಸಗಟು ಹಂಚಿಕೆಯ ಕಡತವನ್ನು ನಿರ್ವಹಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಉಪ ಕಾರ್ಯದರ್ಶಿ–4 ಅವರ ವಿಭಾಗದಲ್ಲಿ ಅಕ್ರಮವಾಗಿ ಕಡತ ನಿರ್ವಹಣೆ ಮಾಡಲಾಗಿತ್ತು.

‘ಪ್ರಾಧಿಕಾರದ ನೌಕರರಿಗೆ ಹಾಗೂ ನಿವೃತ್ತ ನೌಕರರಿಗಾಗಿ ಮೀಸಲಿಟ್ಟ 2 ಎಕರೆ 22 ಗುಂಟೆಯನ್ನು ಸೇವಾ ಸಂಘಕ್ಕೆ ನೋಂದಣಿ ಮಾಡಿಕೊಟ್ಟಿರುವುದು ಕಾನೂನುಬಾಹಿರ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಪ್ರಾಧಿಕಾರದ ನಿವೃತ್ತ ನೌಕರರು ಒತ್ತಾಯಿಸಿದ್ದರು.

ಉಪ ಕಾರ್ಯದರ್ಶಿ–1 ಕಚೇರಿಯ ನೌಕರರೇ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಗುಮಾನಿಯ ಮೇರೆಗೆ ಕಚೇರಿಯ ಮೇಲ್ವಿಚಾರಕ ಗಂಗಾಧರ್‌ ಎನ್‌. ಅವರನ್ನು ಪೂರ್ವ ವಿಭಾಗದ ಕಂದಾಯ ಅಧಿಕಾರಿ ಕಚೇರಿಗೆ, ಪ್ರಥಮದರ್ಜೆ ಸಹಾಯಕರಾದ ಆರ್‌.ಮಂಜುನಾಥ್‌ ಅವರನ್ನು ಕಾರ್ಯಪಾಲಕ ಎಂಜಿನಿಯರ್‌ (ಪೂರ್ವ) ಕಚೇರಿಗೆ, ಸುರೇಶ್‌ ಅವರನ್ನು ಕಾರ್ಯಪಾಲಕ ಎಂಜಿನಿಯರ್‌ (ಪಶ್ಚಿಮ) ಕಚೇರಿಗೆ, ಬಯ್ಯಾರೆಡ್ಡಿ ಅವರನ್ನು ಕಾರ್ಯಪಾಲಕ ಎಂಜಿನಿಯರ್‌ (ದಕ್ಷಿಣ) ಕಚೇರಿಗೆ ವರ್ಗಾಯಿಸಲಾಗಿದೆ. ಇವರ ಸ್ಥಾನಕ್ಕೆ ಬೇರೆ ನೌಕರರನ್ನು ನಿಯೋಜಿಸಲಾಗಿದೆ.

‘ಪ್ರಾಧಿಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅದರ ವಿರುದ್ಧ ಕೆಲವು ನೌಕರರು ಧ್ವನಿ ಎತ್ತಿದ್ದಾರೆ. ಅವರನ್ನು ವರ್ಗಾಯಿಸಿ ಒತ್ತಡ ಹೇರುವ ತಂತ್ರ ನಡೆಸಲಾಗುತ್ತಿದೆ. ಆಯುಕ್ತರು ದ್ವೇಷ ಸಾಧನೆ ಮಾಡುತ್ತಿದ್ದಾರೆ. ಅವರು ಪ್ರಾಧಿಕಾರವನ್ನು ಮಾರಲು ಹೊರಟಿದ್ದಾರೆ. ಬಿಡಿಎ ಅವ್ಯವಹಾರಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಬೆಳಕು ಚೆಲ್ಲುತ್ತೇನೆ’ ಎಂದು ನಿವೃತ್ತ ನೌಕರ ಚಿಕ್ಕಯ್ಯ ಹೇಳಿದರು.

**

ಇದು ಪ್ರಾಧಿಕಾರದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ. ಯಾರ ಮೇಲೂ ದ್ವೇಷ ಸಾಧನೆ ಮಾಡಿಲ್ಲ.

ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry