ಇನ್ನು ಮಧ್ಯವರ್ತಿಗಳಿಗೆ ಅವಕಾಶವಿಲ್ಲ

7
ಲಂಚ ಕೇಳದೇ ಜನರ ಕೆಲಸ ಮಾಡಿಕೊಡಿ: ಅಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಸೂಚನೆ

ಇನ್ನು ಮಧ್ಯವರ್ತಿಗಳಿಗೆ ಅವಕಾಶವಿಲ್ಲ

Published:
Updated:

ಬಾಗಲಕೋಟೆ: ‘ಹಿಂದಿನ ವ್ಯವಸ್ಥೆ ಹೇಗಿತ್ತೊ ಬೇಕಿಲ್ಲ. ಇನ್ನು ಮುಂದೆ ಕ್ಷೇತ್ರದ ಜನರ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುವಂತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ’ ಎಂದು ಶಾಸಕ ವೀರಣ್ಣ ಚರಂತಿಮಠ ಖಡಕ್ ಆಗಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ (ಕೆಡಿಪಿ) ನಡೆಸಿದ ಅವರು, ‘ಬಾಗಲಕೋಟೆ ತಾಲ್ಲೂಕು ಕಚೇರಿಯಲ್ಲಿ ಉತಾರ ಕೊಡಲು ತಲಾಟಿಗಳು ದುಡ್ಡು ಕೇಳುತ್ತಾರೆ. ಲಂಚದ ಹಾವಳಿ ಮಿತಿಮೀರಿದೆ’ ಎಂದು ಸಾರ್ವಜನಿಕರಿಂದ ಬಂದ ದೂರು ಉಲ್ಲೇಖಿಸಿ ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಮೇಲಿನಂತೆ ಎಚ್ಚರಿಕೆ ನೀಡಿದರು.

‘ಕಚೇರಿಗೆ ಬರುವ ಫಲಾನುಭವಿ ಲಂಚ ಕೊಡದೇ ಕಾನೂನುಬದ್ಧವಾಗಿ ಕೆಲಸ ಮಾಡಿಸಿಕೊಂಡು ಹೋಗಬೇಕು. ನಾವು ಜನರ ಕೆಲಸ ಮಾಡಲು ಇರುವುದು ಎಂಬುದನ್ನು ಅರಿತು ಸಮಸ್ಯೆಗಳಿಗೆ ಸ್ಪಂದಿಸಿ, ಅದನ್ನು ಬಿಟ್ಟು ಏನಾದರೂ ಸಬೂಬು ಹೇಳಿಕೊಂಡು ಅಡ್ಡಾಡಿದರೆ ನನ್ನ ಬಳಿ ನೀಗೊಲ್ಲ. ನಿಮ್ಮ ದಾರಿ ನೀವು ನೋಡಿಕೊಳ್ಳಬಹುದು’ ಎಂದು ಲಘುವಾಗಿ ಚಾಟಿ ಬೀಸಿದರು.

‘ಶೀಘ್ರ ಇಲಾಖೆವಾರು ಪ್ರತ್ಯೇಕ ಸಭೆ ಕರೆದು ಸಮಗ್ರವಾಗಿ ಪರಿಶೀಲನೆ ನಡೆಸುವೆ. ನಂತರ ಅಧಿಕಾರಿಗಳನ್ನು ಕೆಲಸಕ್ಕೆ ಹಚ್ಚುವೆ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ 2,03,460 ಫಲಾನುಭವಿಗಳಿಗೆ 58,332 ಪಡಿತರ ಚೀಟಿ ವಿತರಿಸಲಾಗಿದೆ.ಆನ್‌ಲೈನ್‌ ಮೂಲಕ ಬಂದ ಎಲ್ಲ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಯಾವುದೇ ಫಲಾನುಭವಿಯ ಅರ್ಜಿ ಬಾಕಿ ಉಳಿದಿಲ್ಲ’ ಎಂದು ತಹಶೀಲ್ದಾರ್ ವಿನಯ ಕಲಕರ್ಣಿ ಸಭೆಗೆ ತಿಳಿಸಿದರು. ಈ ವೇಳೆ ಶಿರೂರಿನ ಫಲಾನುಭವಿಗಳಿಗೆ ‘ನಾಲ್ಕು ವರ್ಷದಿಂದ ಪಡಿತರ ಚೀಟಿ ವಿತರಿಸಿಲ್ಲ. ಆರು ತಿಂಗಳ ಹಿಂದೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಚರಂತಿಮಠ, ತಹಶೀಲ್ದಾರ್ ಗಮನಕ್ಕೆ ತಂದರು. ಅಂಚೆ ಇಲಾಖೆಯ ಪಿನ್‌ಕೋಡ್‌ನ ಸಮಸ್ಯೆಯಿಂದ ಆ ರೀತಿ ಆಗಿದೆ. ತಾಂತ್ರಿಕ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು’ ಎಂದು ವಿನಯಕುಲಕರ್ಣಿ ಸಭೆಗೆ ತಿಳಿಸಿದರು.

ವಾಟರ್‌ಮನ್‌ಗಳಿಗೆ ಪಗಾರ ಕೊಡಿ..

ಕ್ಷೇತ್ರದ ಹಲವು ಗ್ರಾಮಗಳ ವಾಟರ್‌ಮನ್‌ಗಳಿಗೆ (ನೀರಗಂಟಿ) ಆರು ತಿಂಗಳಿನಿಂದ ಪಗಾರ ಆಗಿಲ್ಲ ಎಂಬ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಗ್ರಾಮೀಣ ನೀರು ಪೂರೈಕೆ, ನೈರ್ಮಲ್ಯ ವಿಭಾಗದ ಎಂಜಿನಿಯರ್‌ಗೆ ವಿವರಣೆ ಕೇಳಿದರು. ಗುತ್ತಿಗೆದಾರರಿಗೆ ಪಗಾರ ಕೊಡಲು ಹೇಳಿತ್ತು. ಅವರು ಈಗಾಗಲೇ ಕೊಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಚರಂತಿಮಠ,‘ಗುತ್ತಿಗೆದಾರ ಹಣ ಕೊಡುವುದಿಲ್ಲ. ನೀವು ಕೇಳವುದಿಲ್ಲ. ಹಾಗಾದರೆ ದುಡಿದವರು ಎಲ್ಲಿಗೆ ಹೋಗಬೇಕು. ಇನ್ನು ಮುಂದೆ ವಾಟರ್‌ಮನ್‌ ಬ್ಯಾಂಕ್‌ ಖಾತೆಗೆ ನೇರವಾಗಿ ಗೌರವಧನ ಪಾವತಿಸಲು ಕ್ರಮ ಕೈಗೊಳ್ಳಿ’ ಎಂದು ಸೂಚನೆ ನೀಡಿದರು.

ಬೋರ್‌ವೆಲ್‌ಗೆ ಅವಕಾಶವಿಲ್ಲ..

ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಬೋರ್‌ವೆಲ್‌ ಕೊರೆಸಲಾಗವುದು ಎಂದು ಅಧಿಕಾರಿಯ ಹೇಳಿಕೆಯಿಂದ ಆಕ್ರೋಶಗೊಂಡ ಚರಂತಿಮಠ, ‘ಹೊಳೆ ನೀರು ಶುದ್ಧಗೊಳಿಸಿ ಗ್ರಾಮೀಣರಿಗೆ ಕುಡಿಯಲು ಕೊಡುವುದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಎಂವಿಎಸ್‌) ಮುಖ್ಯ ಉದ್ದೇಶ. ಆದರೆ ಆ ಕೆಲಸ ಆಗುತ್ತಿಲ್ಲ. ಈ ಹಿಂದೆ 10 ವರ್ಷ ಶಾಸಕನಾಗಿದ್ದ ವೇಳೆಯೂ ಕ್ಷೇತ್ರದಲ್ಲಿ ಅನಿವಾರ್ಯ ಎನಿಸಿದಾಗ ಮಾತ್ರ 8ರಿಂದ 10 ಬೋರ್‌ವೆಲ್‌ ಮಾತ್ರ ಕೊರೆಸಿರುವೆ. ವಾಸ್ತವವಾಗಿ ಈ ಪ್ರದೇಶದಲ್ಲಿ ಬೋರ್‌ವೆಲ್ ಕೊರೆಸುವಂತಿಲ್ಲ. ಹಾಗಿದ್ದರೂ ನಿಯಮಾವಳಿ ಉಲ್ಲಂಘಿಸಲಾಗುತ್ತಿದೆ. ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನೇ ಬಲಗೊಳಿಸಿ ಎಂದು ತಿಳಿಸಿದರು.

ಐದು ವರ್ಷಗಳಿಂದ ಬಾಗಿವೆ..

ಸಿಮೆಂಟ್ ಫ್ಯಾಕ್ಟರಿಯ ಬಳಿ ವಿದ್ಯುತ್ ಕಂಬಗಳು ಬಾಗಿ ಅಪಾಯದ ಸ್ಥಿತಿಯಲ್ಲಿವೆ. ಐದು ವರ್ಷಗಳ ಹಿಂದೆಯೇ ಆ ಬಗ್ಗೆ ಹೆಸ್ಕಾಂ ಗಮನ ಸೆಳೆಯಲಾಗಿತ್ತು. ಅವು ಈಗಲೂ ಅದೇ ಪರಿಸ್ಥಿತಿಯಲ್ಲಿವೆ ಎಂದು ಮೊಬೈಲ್‌ನಲ್ಲಿ ತೆಗೆದಿದ್ದ ಫೋಟೊಗಳನ್ನು ಸಭೆಯಲ್ಲಿ ಪ್ರದರ್ಶಿಸಿದ ಚರಂತಿಮಠ, ಗ್ರಾಮೀಣ ಪ್ರದೇಶದಲ್ಲಿ ಮಳೆ–ಗಾಳಿಗೆ ಕಂಬ ಬಿದ್ದರೆ ವಾರ–ತಿಂಗಳುಗಟ್ಟಲೇ ಬಿಡುವಂತಿಲ್ಲ. ತುರ್ತಾಗಿ ಸರಿಪಡಿಸಬೇಕು. ಟಿಸಿ ಸುಟ್ಟರೆ ಬೇಗನೇ ಹಾಕಿಕೊಡಬೇಕು. ನಿರಂತರ ಜ್ಯೋತಿ ಯೋಜನೆಯಡಿ ಗ್ರಾಮೀಣರು ಕತ್ತಲಲ್ಲಿ ಊಟ ಮಾಡದ ಪರಿಸ್ಥಿತಿ ನಿರ್ಮಿಸಿ’ ಎಂದು ತಿಳಿಸಿದರು.

‘ಬಿಸಿಯೂಟ ಯೋಜನೆ ಹಾಗೂ ಅಂಗನವಾಡಿಗಳಲ್ಲಿ ಬೆಲ್ಲದ ಪೆಂಟಿ, ಬೇಳೆ, ಹಾಲಿನಪುಡಿ ಮಾರಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿ ಎಲ್ಲಿಯೂ ಪೋಲಾಗದಂತೆ ನೋಡಿಕೊಳ್ಳಿ. ಅದು ಪುಣ್ಯದ ಕೆಲಸ. ಕಳ್ಳರಿದ್ದರೆ ಕೆಲಸದಿಂದ ತೆಗೆದುಹಾಕಿ’ ಎಂದು ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿಗೆ ಹೇಳಿದರು.

‘ನ್ಯಾಯಾಲಯಕ್ಕೆ ಲಿಫ್ಟ್ ವ್ಯವಸ್ಥೆ ಮಾಡಿ’

ಬಾಗಲಕೋಟೆಯ ನ್ಯಾಯಾಲಯ ಸಂಕೀರ್ಣ ಹಾಗೂ ವಕೀಲರ ಭವನಕ್ಕೆ ಲಿಫ್ಟ್ ವ್ಯವಸ್ಥೆ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಚರಂತಿಮಠ ಸೂಚನೆ ನೀಡಿದರು.

‘ಹಿಂದಿನ ಐದು ವರ್ಷ ಪ್ರಥಮ ದರ್ಜೆ ಸಹಾಯಕನಿಗೆ (ಎಫ್‌ಡಿಎ) ನಿಯಮಬಾಹಿರವಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹುದ್ದೆ ನೀಡಿ, ದುರಾಡಳಿತ ನಡೆಸಲಾಗಿದೆ. ನಗರಸಭೆ ಕಮಿಷನರ್‌ ಆಗಿದ್ದವರು ₹ 10 ಸಾವಿರಕ್ಕೆ ಒಂದರಂತೆ ಹಂದಿಗಳನ್ನು ಮಾರಿಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಹೆಸ್ಕಾಂ ಸಿಬ್ಬಂದಿ ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಮೇಲಧಿಕಾರಿಗಳು ಅತ್ತ ಗಮನಹರಿಸಿ ಕ್ರಮಕ್ಕೆ ಮುಂದಾಗಿ.

- ವೀರಣ್ಣ ಚರಂತಿಮಠ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry