ಕೆರೆ ತುಂಬಿಸುವ ಯೋಜನೆಗೆ ಸಿದ್ದತೆ

7
ಲಕ್ಷ್ಮೀ ಹೆಬ್ಬಾಳಕರ ಸೂಚನೆ

ಕೆರೆ ತುಂಬಿಸುವ ಯೋಜನೆಗೆ ಸಿದ್ದತೆ

Published:
Updated:

ಬೆಳಗಾವಿ: ಗ್ರಾಮೀಣ ವಿಧಾನಸಭೆ ಕ್ಷೇತ್ರದ ಗ್ರಾಮಗಳ 90ಕ್ಕೂ ಅಧಿಕ ಕೆರೆಗಳನ್ನು ತುಂಬಿಸಲು ₹ 500 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಸರ್ಕಾರದ ಮುಂದಿಡಲು ಪ್ರಸ್ತಾವ ಸಿದ್ದಪಡಿಸಬೇಕು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಹಾಗೂ ಇತರ ಅಧಿಕಾರಿಗಳೊಂದಿಗೆ ಶುಕ್ರವಾರ

ಸಿದ್ದನಬಾವಿ ಕೆರೆ ಸುತ್ತಲಿನ ಗ್ರಾಮಗಳ ಕೆರೆಗಳನ್ನು ಪರಿಶೀಲಿಸಿ, ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ, ಸಾಂಬ್ರಾ, ನಿಲಜಿ, ಮುತಗಾ, ಮೋದಗಾ, ಬಾಳೇಕುಂದ್ರಿ, ಮಾರಿಹಾಳ, ಕರಡಿಗುದ್ದಿ ಸೇರಿದಂತೆ ಈ ಭಾಗದ ಎಲ್ಲ ಕೆರೆಗಳನ್ನು ಶಿರೂರ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳಿಂದ ನೀರು ತಂದು ತುಂಬಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಯೋಜನೆ ರೂಪಿಸಿ ಎಂದು ಸೂಚಿಸಿದರು.

ಹಿರೇಬಾಗೇವಾಡಿಯ ಸಿದ್ಧನಬಾವಿ ಕೆರೆ ಹಾಗೂ ಮುತ್ನಾಳ, ಗಜಪತಿ, ಭೇಂಡಿಗೇರಿ ಗ್ರಾಮಗಳ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ನಡೆಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಬಡಾಲ ಅಂಕಲಗಿ, ಬಡಸ, ಕುಕಡೊಳ್ಳಿ, ಬಸ್ಸಾಪೂರ, ಅರಳಿಕಟ್ಟಿ ಹಾಗೂ ಸುತ್ತಲಿನ ಗ್ರಾಮಗಳ ಕೆರೆ ತುಂಬಿಸಲು ತಿಗಡಿ ಹರಿನಾಲಾ ಜಲಾಶಯದಿಂದ ನೀರು ತರುವ ಯೋಜನೆಯನ್ನೂ ರೂಪಿಸಬೇಕು ಎಂದು ಸೂಚಿಸಿದರು.

ಈ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಿ, ಈ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಮಾರ್ಕಂಡೇಯ ನದಿಯಲ್ಲಿ ಚಿಕ್ಕ ಬಾಂದಾರಗಳನ್ನು ನಿರ್ಮಿಸುವ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಈ ಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, ‘ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ನೀರು, ಹಳ್ಳಿ ಹಳ್ಳಿಗೆ ರಸ್ತೆ ಎಂಬ ಭರವಸೆ ನೀಡಿದ್ದೆ. ಅದನ್ನು ಶೇ 100 ರಷ್ಟು ಈಡೇರಿಸಲು ಸಂಕಲ್ಪ ಮಾಡಿದ್ದೇನೆ’ ಎಂದು ಹೇಳಿದರು.

‘ಗ್ರಾಮೀಣ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲು ₹500 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಮುಂದಿನ ವಾರ ನೀರಾವರಿ ನಿಗಮದ ಅಧಿಕಾರಿಗಳು ಯೋಜನೆಯ ಸರ್ವೆ ಕಾರ್ಯ ಆರಂಭಿಸಲಿದ್ದಾರೆ’ ಎಂದು ಹೇಳಿದರು.

ನೀರಾವರಿ ನಿಗಮದ ಧಾರವಾಡ ವಿಭಾಗದ ಮುಖ್ಯ ಎಂಜಿನಿಯರ್‌ ಜಗದೀಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry